

ಕಡೂರು: ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಹಾಗೂ ಸಾಮಾಜಿಕ ಅಸಮಾನತೆಗಳ ವಿರುದ್ಧ 16ನೇ ಶತಮಾನದಲ್ಲಿಯೇ ತಮ್ಮ ಸಾಹಿತ್ಯ ಮತ್ತು ಕೀರ್ತನೆಗಳ ಮೂಲಕ ಕ್ರಾಂತಿಕಾರಿ ಧ್ವನಿ ಎತ್ತಿದ ಕನಕದಾಸರು ಕೇವಲ ದಾಸ ಶ್ರೇಷ್ಠರಲ್ಲ, ಸಮ ಸಮಾಜದ ಕನಸು ಕಂಡ ಮಹಾನ್ ಸಮಾಜ ಸುಧಾರಕರು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ತಾಪಂ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ 539ನೇ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಬೇರೂರಿದ್ದ ಜಾತಿ, ತಾರತಮ್ಯ ಮತ್ತು ಅಸ್ಪೃಶ್ಯತೆ ವಿರುದ್ಧ ಕನಕದಾಸರು ನಡೆಸಿದ ಹೋರಾಟ ಐತಿಹಾಸಿಕ. ಅವರ ಸಾಮಾಜಿಕ ಚಿಂತನೆಗಳು ಬಸವಣ್ಣ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳಿಗೆ ಪೂರಕವಾಗಿದ್ದು, ಇಂತಹ ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ಕನಕದಾಸರು ನಿಲ್ಲುತ್ತಾರೆ. ಅವರ ತತ್ವಾದರ್ಶಗಳನ್ನು ಕೇವಲ ಜಯಂತಿ ಆಚರಣೆಗೆ ಸೀಮಿತಗೊಳಿಸದೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಡೂರು ಸಮೀಪದ ಕನಕರಾಯನ ಗುಡ್ಡಕ್ಕೂ ಕನಕದಾಸರಿಗೂ ಐತಿಹಾಸಿಕ ನಂಟಿದೆ. ಕನಕದಾಸರು ಉಡುಪಿಗೆ ತೆರಳುವಾಗ ಈ ಪ್ರದೇಶದಲ್ಲಿ ತಂಗಿದ್ದರೆ ಎಂಬ ಪ್ರತೀತಿ ಹಿನ್ನೆಲೆಯಲ್ಲಿ ಅವರ ಸ್ಮರಣಾರ್ಥ ದೇವಸ್ಥಾನ ನಿರ್ಮಿಸಲಾಗಿದೆ. ಈಗಾಗಲೇ ಕುಡಿಯುವ ನೀರು, ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ. ಗುಡ್ಡದಲ್ಲಿ ಕನಕದಾಸರ ಹೆಸರಿನಲ್ಲಿ ಸಮುದಾಯ ಭವನ ನಿರ್ಮಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗಿದ್ದು, ಇದಕ್ಕಾಗಿ ಸದ್ಯ ಎರಡು ಕೋಟಿ ರೂ. ಅನುದಾನ ಒದಗಿಸಲಾಗಿದೆ. ಮೂರು ಎಕರೆ ಜಾಗವನ್ನು ತಾಲೂಕು ಕುರುಬರ ಸಂಘಕ್ಕೆ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಕನಕದಾಸರ ಕೀರ್ತನೆಗಳು, ಅವರ ಕೃತಿಗಳನ್ನು ಅರ್ಥೈಸಿಕೊಂಡರೆ ಜೀವನ ಸರಿ ದಾರಿಯಲ್ಲಿ ನಡೆಯುತ್ತದೆ. ಜೀವನಾನುಭವವನ್ನು ತಮ್ಮ ಕೀರ್ತನೆಗಳ ಮೂಲಕ ಜನರಿಗೆ ಸರಳವಾಗಿ ತಿಳಿಸುವ ಮೂಲಕ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದವರು ಕನಕದಾಸರು ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ.ಲಕ್ಷ್ಮೀಕಾಂತ್ ಪ್ರಧಾನ ಉಪನ್ಯಾಸ ನೀಡಿದರು. ಕುರುಬರ ಸಂಘದ ತಾಲೂಕು ಅಧ್ಯಕ್ಷ ಹೋಚಿಹಳ್ಳಿ ಭೋಗಪ್ಪ, ಪುರಸಭೆ ಮಾಜಿ ಸದಸ್ಯ ತೋಟದ ಮನೆ ಮೋಹನ್ಕುಮಾರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್, ಕೆಡಿಪಿ ಸದಸ್ಯ ಅಶೋಕ್, ಕರಿಬಡ್ಡೆ ಶ್ರೀನಿವಾಸ್, ಕೆ.ಜಿ.ಶ್ರೀನಿವಾಸಮೂರ್ತಿ, ದೊಣ್ಣೆಕೋರನಹಳ್ಳಿ ಉಮೇಶ್, ಯಗಟಿ ಗೋವಿಂದಪ್ಪ, ಬೀರೂರು ವಿನಾಯಕ್, ಯರದಕೆರೆ ರಾಜಪ್ಪ, ದೇವರಾಜ್ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಕನಕದಾಸರು ಅಸಮಾನತೆ, ಮೂಢನಂಬಿಕೆ ಹಾಗೂ ಅಹಂಕಾರದ ವಿರುದ್ಧ ಸಾಹಿತ್ಯದ ಮೂಲಕ ಜಾಗೃತಿ ಮೂಡಿಸಿದ ಮಹಾನ್ ಚಿಂತಕರು. ವ್ಯಕ್ತಿಯ ಶ್ರೇಷ್ಠತೆ ಹುಟ್ಟಿನಿಂದ ನಿರ್ಧಾರವಾಗದೆ ಆತನ ನಡೆ, ನುಡಿ ಮತ್ತು ಮಾನವೀಯ ಗುಣಗಳಿಂದ ನಿರ್ಧಾರವಾಗುತ್ತದೆ ಎಂಬ ಸಂದೇಶವನ್ನು ಕನಕದಾಸರು ಸಾರಿದ್ದಾರೆ.
ಸಿ.ಎಸ್.ಪೂರ್ಣಿಮ ತಹಸೀಲ್ದಾರ್