ತತ್ಕೊಳ ಮೀಸಲು ಅರಣ್ಯದಲ್ಲಿ ಮುಂದುವರಿದ ಕಾಡಾನೆ ಕಾರ್ಯಚರಣೆ

ಮೂಡಿಗೆರೆ ತಾಲೂಕು ಜಿ.ಹೊಸಳ್ಳಿ ಗ್ರಾಮದ ಗಿರೀಶ್ ಮತ್ತು ಸುನಿಲ್ಕುಮಾರ್ ಎಂಬುವವರ ಭತ್ತದ ಗದ್ದೆಯನ್ನು ಕಾಡಾನೆ ತುಳಿದು ಹಾನಿ ಮಾಡಿರುವುದು.
ಮೂಡಿಗೆರೆ ತಾಲೂಕು ಜಿ.ಹೊಸಳ್ಳಿ ಗ್ರಾಮದ ಗಿರೀಶ್ ಮತ್ತು ಸುನಿಲ್ಕುಮಾರ್ ಎಂಬುವವರ ಭತ್ತದ ಗದ್ದೆಯನ್ನು ಕಾಡಾನೆ ತುಳಿದು ಹಾನಿ ಮಾಡಿರುವುದು.
Published on: 

ಮೂಡಿಗೆರೆ: ಶಾಸಕಿ ನಯನಾ ಮೋಟಮ್ಮ ರಾಜೀನಾಮೆ, ಸಾರ್ವಜನಿಕರ ಆಕ್ರೋಶ, ತಾಲೂಕು ಬಂದ್ ಕರೆ ನೀಡುವ ಎಚ್ಚರಿಕೆಯನ್ನೂ ಲೆಕ್ಕಿಸದ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳನ್ನು ತತ್ಕೊಳ ಮೀಸಲು ಅರಣ್ಯಕ್ಕೆ ಓಡಿಸುವ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಭಾನುವಾರ ಗೌತುವಳ್ಳಿ, ಮಾಕೋನಹಳ್ಳಿ ಸಮೀಪದ ಹೊರಟ್ಟಿ ಮತ್ತು ಕಾರಬೈಲಿನಲ್ಲಿ 3ಗುಂಪುಗಳಾಗಿದ್ದ 35 ಕಾಡಾನೆಗಳು ಸೋಮವಾರ ಬಾರದಹಳ್ಳಿ ಮತ್ತು ಮಾಕೋನಹಳ್ಳಿಯ ಕಾಫಿ ತೋಟದಲ್ಲಿ 2 ಗುಂಪುಗಳಾಗಿ ಬೀಡು ಬಿಟ್ಟಿದ್ದವು. ಮಂಗಳವಾರ ಎಲ್ಲ ಕಾಡಾನೆಗಳು ಒಂದೇ ಗುಂಪಾಗಿ ಜಾಗರಮನೆ ಗ್ರಾಮದ ಮನು ಎಂಬುವರ ತೋಟದ ತಗ್ಗು ಪ್ರದೇಶದಲ್ಲಿ ಬೀಡು ಬಿಟ್ಟಿದೆ.

ಪ್ರತಿದಿನ ರಾತ್ರಿ ಅರಣ್ಯ ಇಲಾಖೆಯ 80 ಸಿಬ್ಬಂದಿ ಕಾಡಾನೆಗಳನ್ನು ಒಟ್ಟುಗೂಡಿಸಿ ತತ್ಕೊಳ ಅರಣ್ಯದತ್ತ ಬಲವಂತವಾಗಿ ಓಡಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗುಂಪಿನಿಂದ ಒಂದು ಕಾಡಾನೆಯೂ ತಪ್ಪಿಸಿಕೊಳ್ಳದಂತೆ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ. ಡ್ರೋನ್ ಕ್ಯಾಮರಾಗಳು ಕಾಡಾನೆಗಳ ಚಲನವಲನವನ್ನು ಅಧಿಕಾರಿಗಳಿಗೆ ರವಾನಿಸುತ್ತಿದೆ. ಗುಂಪಿನಲ್ಲಿ ಏಳೆಂಟು ಮರಿಗಳಿರುವ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾಡಾನೆಗಳನ್ನು ನಿಧಾನವಾಗಿ ಅಟ್ಟುತ್ತಿದ್ದಾರೆ. 3 ಗುಂಪುಗಳಾಗಿದ್ದ ಗಜಗಳನ್ನು 2 ದಿನ ರಾತ್ರಿ ಒಟ್ಟಿಗೆ ಸೇರಿಸಲು ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ಈಗ ಆನೆಗಳಿರುವ ಪ್ರದೇಶದಿಂದ ತತ್ಕೊಳ ಅರಣ್ಯ 8 ಕಿಮೀ ದೂರದಲ್ಲಿದೆ. ಜನವಸತಿ ಪ್ರದೇಶದತ್ತ ನುಗ್ಗದಂತೆ ತಡೆದು ಕಾಫಿ ತೋಟದ ಮಾರ್ಗವಾಗಿ ನಿಧಾನಕ್ಕೆ ಆಟ್ಟುತ್ತಿರುವ ಕಾರಣ ಅರಣ್ಯಕ್ಕೆ ತಲುಪಲು ಇನ್ನೂ ನಾಲ್ಕೈದು ದಿನ ಬೇಕಾಗಬಹುದು.

ಮೂಡಿಗೆರೆ ತಾಲೂಕಿನಲ್ಲಿ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿರುವುದರಿಂದ ಕಾಡಾನೆಗಳನ್ನು ಬೇಲೂರು ತಾಲೂಕಿಗೆ ವಾಪಾಸು ಅಟ್ಟಬಹುದೆಂಬ ಮುಂಜಾಗ್ರತೆಯಿಂದ ಹಾಸನದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮೂಡಿಗೆರೆ-ಬೇಲೂರು ಗಡಿ ಪ್ರದೇಶದಲ್ಲಿ ಜಮಾಯಿಸಿದ್ದಾರೆ. ಕಾಡಾನೆಗಳು ವಾಪಸಾಗದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಗಡಿ ಭಾಗದಲ್ಲಿ ಎರಡು ತಾಲೂಕಿನ ಗ್ರಾಮಸ್ಥರ ನಡುವೆ ಹಲವು ಬಾರಿ ವಾಗ್ವಾದ ನಡೆದಿದ್ದರಿಂದ ಪೊಲೀಸರು ಬಿಗ್ಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದಾರೆ. ಮೂಡಿಗೆರೆ ಪಟ್ಟಣ ಸೇರಿದಂತೆ ವಿವಿಧ ಕಡೆ ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.

ಜಿ.ಹೊಸಹಳ್ಳಿ ಗ್ರಾಮಕ್ಕೆ ಬೇಲೂರಿನ ಕಾನಳ್ಳಿ ಮೀಸಲು ಅರಣ್ಯದಿಂದ ಲಗ್ಗೆಯಿಟ್ಟಿರುವ 15 ಕಾಡಾನೆಗಳು ಸೋಮವಾರ ರಾತ್ರಿ ಪೂರ್ಣೇಶ್ ಎಂಬುವರ ಭತ್ತದ ಗದ್ದೆಯಲ್ಲಿ ಸಾಗಿ ಕಟಾವಿಗೆ ಬಂದ ಬೆಳೆಯನ್ನು ಹಾನಿಗೊಳಿಸಿದೆ. ಸೋಮವಾರ ಟಾಟಾ ಎಸ್ಟೇಟ್ನಲ್ಲಿ ಬೀಡು ಬಿಟ್ಟಿದ್ದ ಕಾಡಾನೆ ಗುಂಪು ಮಂಗಳವಾರ ಅದೇ ಪ್ರದೇಶದಲ್ಲಿ ಸ್ಥಳೀಯರಿಗೆ ಕಾಣಿಸಿಕೊಂಡಿದೆ. ಗ್ರಾಮಸ್ಥರು ಅರಣ್ಯಇಲಾಖೆ ಸಿಬ್ಬಂದಿಗೆ ಹಲವಾರು ಬಾರಿ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ.

ನೆಮ್ಮದಿ ಕಳೆದುಕೊಂಡ ಜನತೆ

ತತ್ಕೊಳ ಅರಣ್ಯಕ್ಕೆ ಕಾಡಾನೆಗಳನ್ನು ಅಟ್ಟುವ ಕಾರ್ಯಾಚರಣೆಯಲ್ಲಿರುವ ಸಿಬ್ಬಂದಿ ಜಿ.ಹೊಸಹಳ್ಳಿ ಗ್ರಾಮದತ್ತ ಹೋಗಲು ಸಾಧ್ಯವಾಗಿಲ್ಲ. 35ಗಜಗಳನ್ನು ಅರಣ್ಯದತ್ತ ಅಟ್ಟಿದರೆ ಸಾಕು ಎಂದು ನಿರಂತರ ಪ್ರಯತ್ನದಲ್ಲಿರುವ ಅರಣ್ಯಇಲಾಖೆ ಅಧಿಕಾರಿಗಳು, ಜಿ.ಹೊಸಹಳ್ಳಿ ಗ್ರಾಮದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಅರಣ್ಯದತ್ತ ಅಟ್ಟುವ ಕಾರ್ಯಾಚರಣೆ ನಡೆಸುವ ಬಗ್ಗೆ ಇನ್ನೂ ಚಿಂತಿಸಿಲ್ಲ. ಕಾಡಾನೆಗಳ ಗೂಡಾಗಿರುವ ಮೂಡಿಗೆರೆ ತಾಲೂಕಿನಲ್ಲಿ ಜನ ನೆಮ್ಮದಿ ಕಳೆದು ಕೊಂಡಿದ್ದಾರೆ. ಮನೆಯಿಂದ ಹೊರ ಹೋಗಲು ಭಯಪಡುವ ವಾತಾವರಣ ಸೃಷ್ಟಿಯಾಗಿದೆ.

ನಿಷೇಧಾಜ್ಞೆ ವಾಪಾಸ್

ಕಾಡಾನೆಗಳಿರುವ ಪ್ರದೇಶದಲ್ಲಿ ಜನ ಗುಂಪುಗೂಡದಂತೆ ಹಾಗೂ ಅನಾವಶ್ಯಕವಾಗಿ ತಿರುಗಾಡದಂತೆ ಮೂಡಿಗೆರೆ ತಹಸಿಲ್ದಾರ್ ಎಸ್.ಅಶ್ವಿನಿ ಅವರು ಸೋಮವಾರ ಬೆಳಗ್ಗೆ ಬಿಎನ್‌ಎಸ್ 163 ಕಲಂನಂತೆ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಶಾಸಕರ ರಾಜೀನಾಮೆ ಮತ್ತು ಜನಾಕ್ರೋಶಕ್ಕೆ ಮಣಿದು ಸೋಮವಾರ ಸಂಜೆ ನಿಷೇಧಾಜ್ಞೆಯನ್ನು ತಹಸೀಲ್ದಾರ್ ಅವರು ಹಿಂಪಡೆದಿದ್ದಾರೆ.