ವಿಶೇಷ ಗ್ರಾಮ ಸಭೆ ಮಾಹಿತಿ ನೀಡಿದ ಆಲ್ದೂರು ಪಿಡಿಒಗೆ ನೋಟಿಸ್

ಆಲ್ದೂರಲ್ಲಿ ಆಯೋಜಿಸಿದ್ದ ಗ್ರಾಮಸಭೆ ಬಗ್ಗೆ ಮಾಹಿತಿ ನೀಡಿದ ಪಿಡಿಒ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಭರತ್, ಶಿವಕುಮಾರ್, ಸುಪ್ರೀತ್ ಮತ್ತಿತರರಿದ್ದರು.
ಆಲ್ದೂರಲ್ಲಿ ಆಯೋಜಿಸಿದ್ದ ಗ್ರಾಮಸಭೆ ಬಗ್ಗೆ ಮಾಹಿತಿ ನೀಡಿದ ಪಿಡಿಒ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಭರತ್, ಶಿವಕುಮಾರ್, ಸುಪ್ರೀತ್ ಮತ್ತಿತರರಿದ್ದರು.
Published on: 

ಆಲ್ದೂರು: ಆಲ್ದೂರು ಗ್ರಾಮ ಪಂಚಾಯತಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದ ಪಿಡಿಒಗೆ ಕಾರಣ ಕೇಳಿ ತಾಪಂ ಇಒ ನೋಟಿಸ್ ನೀಡಿದ್ದಾರೆ.

ಗ್ರಾಪಂ ಸಭಾಂಗಣದಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ಹಮ್ಮಿಕೊಂಡಿರುವ ಬಗ್ಗೆ ಪಿಡಿಒ ಸಾರ್ವಜನಿಕರಿಗೆ ಮಾಹಿತಿ ನೀಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಪಿಡಿಒ ಅವರನ್ನು ಕೆಲಸದಿಂದ ವಜಾಮಾಡಬೇಕು ಎಂದು ಒತ್ತಾಯಿಸಿ ಗ್ರಾಮಸಭೆಯನ್ನು ಮುಂದೂಡಿದರು.

ಗ್ರಾಪಂ ಮಾಜಿ ಅಧ್ಯಕ್ಷ ಭರತ್ ಮಾತನಾಡಿ, ಇಂದು ನಡೆಯುತ್ತಿರುವ ಲೆಕ್ಕ ಪರಿಶೋಧನಾ ಸಭೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇಲ್ಲ. ಕರಪತ್ರ ಹಂಚಿಕೆ ಮಾಡಿಲ್ಲ, ಪ್ರಕಟಣೆ ನೀಡಿಲ್ಲ, ಜನಪ್ರತಿನಿಧಿಗಳಿಗೂ ಮಾಹಿತಿ ನೀಡಿಲ್ಲ. ಗ್ರಾಪಂನಲ್ಲಿ ಅವ್ಯವಹಾರ ನಡೆದಿದೆ. ಈ ಬಗ್ಗೆ ಸಾರ್ವಜನಿಕರಿಗೆ ಇದರ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ಸಾಮಾಜಿಕ ಕಾರ್ಯಕರ್ತ ಅರೆನೂರು ಸುಪ್ರಿತ್ ಮಾತನಾಡಿ, ಗ್ರಾಪಂ ಕಾರ್ಯ ಚಟುವಟಿಕೆ ಹಾಗೂ ಗ್ರಾಮದ ಅಭಿವೃದ್ಧಿಗೆ ಬಳಕೆ ಮಾಡಿರುವ ಅನುದಾನದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಸಭೆಯನ್ನು ಕದ್ದುಮುಚ್ಚಿ ಆಯೋಜನೆ ಮಾಡಿರುವುದು ಅನುಮಾನ ಮೂಡಿದೆ. ಸಾರ್ವಜನಿಕರ ಸಮಸ್ಯೆಗೆ ಪಿಡಿಒ ಸ್ಪಂದಿಸುತ್ತಿಲ್ಲ. ಗ್ರಾಪಂಗೂ ಬರುವುದಿಲ್ಲ. ಹೊರಗಿನವರು ಗ್ರಾಪಂ ಆಡಳಿತವನ್ನು ನಡೆಸುತ್ತಿದ್ದಾರೆ. ಪಿಡಿಒ ಅವರ ತಾಳಕ್ಕೆ ಕುಣಿಯುತ್ತಿದ್ದಾರೆ ಎಂದು ದೂರಿದರು.

ಚಿಕ್ಕಮಾಗರವಳ್ಳಿ ಗ್ರಾಮದ ಮನು ಕುಮಾರ್ ಮಾತನಾಡಿ, ಗ್ರಾಪಂ ಗ್ರಾಮಸ್ಥರಿಗೆ ಸೇರಿದ್ದು. ಮೇಲಾಧಿಕಾರಿಗಳಾಗಿ ಅವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ದರೆ ನಾವೇ ಕಚೇರಿಗೆ ಬೀಗ ಹಾಕುತ್ತೇವೆ ಎಂದು ಎಚ್ಚರಿಸಿದರು.

ಲೆಕ್ಕ ಪರಿಶೋಧನೆಗೆ ಬಂದ ತಾಲೂಕು ಸೋಷಿಯಲ್ ಆಡಿಟರ್ ಕುಮಾರಸ್ವಾಮಿ, ಕಲ್ಯಾಣಾಧಿಕಾರಿ ಸತೀಶ್, ಗ್ರಾಪಂ ಆಡಳಿತಾಧಿಕಾರಿ ರುದ್ರಪ್ಪ ಪಿಡಿಒ ವರ್ತನೆಗೆ ಬೇಸರ ವ್ಯಕ್ತಪಡಿಸಿ ದೂರವಾಣಿ ಮೂಲಕ ಇಒಗೆ ಮಾಹಿತಿ ನೀಡಿದರು.

ಗ್ರಾಪಂಲ್ಲಿ ಅಭಿವೃದ್ಧಿ ಕೆಲಸಗಳು ನಡೆಯದಿದ್ದರೂ ಬಿಲ್‌ಗಳು ಮಾತ್ರ ಆಗುತ್ತಿವೆ. ಗ್ರಾಮದಲ್ಲಿ ಕಸ ಸಂಗ್ರಹವಾಗಿ ಗಬ್ಬು ನಾರುತ್ತಿದೆ. ಕದ್ದು ಮುಚ್ಚಿ ಗ್ರಾಮಸಭೆ ನಡೆಸಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಉಡಾಫೆ ಉತ್ತರ ನೀಡುತ್ತಾರೆ.

ಸಿ.ಡಿ.ಶಿವಕುಮಾರ್ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net