ಕೊಪ್ಪ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಕಟ್ಟಡ ನಿರ್ಮಾಣದಲ್ಲಿ ಲೋಪ

ಕೊಪ್ಪದ ಬಾಳಗಡಿಯಲ್ಲರುವ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ ಮಾತನಾಡಿದರು.
ಕೊಪ್ಪದ ಬಾಳಗಡಿಯಲ್ಲರುವ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ ಮಾತನಾಡಿದರು.
Published on: 

ಕೊಪ್ಪ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸೌಹಾರ್ದ ಒಕ್ಕೂಟದ ಅಭ್ಯರ್ಥಿಗಳನ್ನು ಮತದಾರರು ಬೆಂಬಲಿಸುವ ಮೂಲಕ ಸಹಕಾರಿ ಸಂಸ್ಥೆ ಆಡಳಿತದಲ್ಲಿ ಬದಲಾವಣೆ ತರಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ ಮನವಿ ಮಾಡಿದರು.

ಬಾಳಗಡಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎ ಮತ್ತು ಬಿ ಶ್ರೇಣಿಯ ವಿವಿಧ ಕ್ಷೇತ್ರಗಳಿಂದ ಒಟ್ಟು 14 ಅಭ್ಯರ್ಥಿಗಳು ಸೌಹಾರ್ದ ಒಕ್ಕೂಟದ ಪರವಾಗಿ ಸ್ಪರ್ಧಿಸುತ್ತಿದ್ದಾರೆ. ಎ ಶ್ರೇಣಿಯ ಆರು ಕ್ಷೇತ್ರಗಳಿಗೆ ಎಂ.ಸಿ.ಅಶೋಕ, ಆನಂದ ಜಿ.ಶೆಟ್ಟಿ, ಎಚ್.ಎಂ.ಪ್ರಭಾಕರ, ಎಸ್.ಜೆ.ಫಣಿರಾಜ್, ಎಚ್.ಎನ್. ಶ್ವೇತ ಹಾಗೂ ಎಚ್.ವಿ.ಸಂಪತ್ ಕುಮಾರ್ ಸ್ಪರ್ಧಿಸಿದ್ದಾರೆ. ಬಿ ಶ್ರೇಣಿಯಿಂದ ಎಸ್.ಪಿ.ಅರುಣ್ ಕುಮಾರ್, ಎಚ್.ಸಿ.ಪ್ರದೀಪ್, ಎಚ್.ವಿ. ಸುಕೇಶ್, ಎನ್.ಕೆ.ಮಂಜುನಾಥ, ಕೆ.ಎಸ್.ಪ್ರಭಾಕರ, ಎಸ್.ಸಿ.ಪೂರ್ಣೇಶ್, ರಾಮ ಹಂತುವಾನಿ ಹಾಗೂ ಎಚ್.ಕೆ.ರಾಜೀವಿ ಕಣದಲ್ಲಿದ್ದಾರೆ ಎಂದು ತಿಳಿಸಿದರು.

ಹಿಂದಿನ ಆಡಳಿತ ಮಂಡಳಿ ಕಾರ್ಯವೈಖರಿ ಕುರಿತು ಹಲವು ಆಕ್ಷೇಪಗಳು ಕೇಳಿಬಂದಿವೆ. ಸಹಕಾರಿ ಸಂಸ್ಥೆಯನ್ನು ಪಕ್ಷದ ರಾಜಕೀಯ ಅಜೆಂಡಾಕ್ಕೆ ಬಳಸಿಕೊಳ್ಳಲಾಗುತ್ತಿದೆ. ಅರ್ಹ ಮತದಾರರನ್ನೂ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಆರೋಪಗಳಿವೆ. ಮಹಾಸಭೆ ಹಾಗೂ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯದೆ ಕೆಲವು ನಿಧಿಗಳನ್ನು ಬೇರೆ ನಿಧಿಗಳಿಗೆ ವರ್ಗಾಯಿಸಲಾಗಿದೆ. ಈ ಎಲ್ಲ ವಿಚಾರಗಳ ಕುರಿತು ಸೂಕ್ತ ದಾಖಲೆಗಳೊಂದಿಗೆ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನವೀನ್ ಮಾವಿನಕಟ್ಟೆ, ಪ್ರಕಾಶ್ ಪೂಜಾರಿ, ಮೈತ್ರಾ ಗಣೇಶ್, ನಾರ್ವೆ ನಿಸಾರ್, ಖಾದರ್ ಹಾಗೂ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಾನಂದ ಉಪಸ್ಥಿತರಿದ್ದರು.

ಕಟ್ಟಡ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆ

ಸಂಘದ ನೂತನ ಕಚೇರಿ ಕಟ್ಟಡ ನಿರ್ಮಾಣದಲ್ಲಿ ಹಲವು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಮುಖಂಡ ಜೆ.ಎಂ.ಶ್ರೀಹರ್ಷ ಆರೋಪಿಸಿದರು. ಸಹಕಾರಿ ಇಲಾಖೆಯಿಂದ ಪರವಾನಗಿ ಪಡೆಯದೆ, ಕಟ್ಟಡದ ಯೋಜನೆ ಹಾಗೂ ಕ್ರಿಯಾಯೋಜನೆಗೆ ಸಂಬಂಧಪಟ್ಟ ಇಲಾಖೆ ಅನುಮೋದನೆ ಪಡೆಯದೆ ಕಾಮಗಾರಿ ನಡೆಸಲಾಗಿದೆ ಎಂದು ಆರೋಪಿಸಿದರು. ಕಟ್ಟಡ ನಿರ್ಮಾಣಕ್ಕೆ ಪಪಂನಿಂದ ಅಗತ್ಯ ಅನುಮತಿ ಪಡೆಯದಿರುವುದು, ಕಾರ್ಮಿಕ ಕಲ್ಯಾಣ ನಿಧಿ ಪಾವತಿಸದಿರುವುದು, ಪಾರ್ಕಿಂಗ್ ವ್ಯವಸ್ಥೆ ಹಾಗೂ ಸೆಟ್‌ಬ್ಯಾಕ್ ಇಲ್ಲದ ಅವೈಜ್ಞಾನಿಕವಾಗಿ ಕಟ್ಟಡ ನಿರ್ಮಿಸಿರುವುದು ಸೇರಿದಂತೆ ಹಲವು ಲೋಪಗಳಿವೆ. ಕಟ್ಟಡ ನಿರ್ಮಾಣ ಮತ್ತು ಸಾಮಗ್ರಿಗಳ ಖರೀದಿಯಲ್ಲಿ ಈ-ಟೆಂಡರ್ ಪ್ರಕ್ರಿಯೆ ಅನುಸರಿಸದೆ, ಅರ್ಹತೆ ಇಲ್ಲದವರಿಗೆ ಕಾಮಗಾರಿ ಹಾಗೂ ಖರೀದಿ ಜವಾಬ್ದಾರಿ ನೀಡಲಾಗಿದೆ. ಕೆಲವು ಕಾಮಗಾರಿಗಳನ್ನು ನೋಂದಾಯಿತ ಗುತ್ತಿಗೆದಾರರಲ್ಲದವರಿಂದ ಮಾಡಿಸಲಾಗಿದೆ ಎಂದು ದೂರಿದರು.

ನಿರ್ದೇಶಕರ ಅಭಿಪ್ರಾಯಕ್ಕಿಲ್ಲ ಮನ್ನಣೆ

ಸಂಘದ ಆಡಳಿತದಲ್ಲಿ ಎಲ್ಲ ನಿರ್ದೇಶಕರ ಅಭಿಪ್ರಾಯಗಳಿಗೆ ಸೂಕ್ತ ಮನ್ನಣೆ ದೊರೆಯುತ್ತಿಲ್ಲ. ಒಬ್ಬರ ಅಣತಿಯಂತೆ ಕಾರ್ಯಚಟುವಟಿಕೆಗಳು ನಡೆಯುತ್ತಿವೆ ಎಂಬ ಅಸಮಾಧಾನವೂ ಇದೆ ಎಂದು ಮುಖಂಡ ಜೆ.ಎಂ.ಶ್ರೀಹರ್ಷ ಆರೋಪಿಸಿದರು. ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ಎ ಮತ್ತು ಬಿ ಶ್ರೇಣಿಯ ಸದಸ್ಯರಿಗೆ ಪ್ರತ್ಯೇಕ ಮಾನದಂಡ ಅನುಸರಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಎ ಶ್ರೇಣಿಗೆ ಹೊಸ ಮತದಾರರ ಪಟ್ಟಿ ಹಾಗೂ ಹೊಸ ಡೆಲಿಗೇಷನ್ ಪಡೆದಿದ್ದರೆ. ಬಿ ಶ್ರೇಣಿಗೆ ಹಳೆಯ ಮತದಾರರ ಪಟ್ಟಿಯನ್ನೇ ಮುಂದುವರಿಸಲಾಗಿದೆ. 2024ರಿಂದ ಈಚೆಗೆ ಷೇರು ಹಾಕಿದ ಸದಸ್ಯರಿಗೆ ಮತದಾನದ ಹಕ್ಕು ನೀಡದೆ ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ. ಇದು ಸಹಕಾರಿ ನಿಯಮ 13ಡಿ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.