ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಭಾರತದ ಗ್ರಾಮೀಣ ಕ್ರೀಡೆ

ಬಾಳೆಹೊನ್ನೂರಿನಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯನ್ನು ಡಾ.ನವೀನ್ ಲಾಯ್ಡ ಮಿಸ್ಕಿತ್ ಉದ್ಘಾಟಿಸಿದರು. ಇಬ್ರಾಹಿಂ ಶಾಫಿ, ಪ್ರದೀಪ್ ಕಿಚ್ಚಬ್ಬಿ, ರಾಜ್, ಜಮೀರ್, ಯೋಗೇಶ್ ಇದ್ದರು.
ಬಾಳೆಹೊನ್ನೂರಿನಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯನ್ನು ಡಾ.ನವೀನ್ ಲಾಯ್ಡ ಮಿಸ್ಕಿತ್ ಉದ್ಘಾಟಿಸಿದರು. ಇಬ್ರಾಹಿಂ ಶಾಫಿ, ಪ್ರದೀಪ್ ಕಿಚ್ಚಬ್ಬಿ, ರಾಜ್, ಜಮೀರ್, ಯೋಗೇಶ್ ಇದ್ದರು.
Published on: 

ಬಾಳೆಹೊನ್ನೂರು: ಕಬಡ್ಡಿ ಭಾರತದ ಸಾಂಪ್ರದಾಯಿಕ ಆಟವಾಗಿದ್ದು, ಇದು ನಮ್ಮ ಗ್ರಾಮೀಣ ಭಾಗದಲ್ಲಿ ಹುಟ್ಟಿ ಇಂದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷ ಇಬ್ರಾಹಿಂ ಶಾಫಿ ಹೇಳಿದರು.

ಕಲಾರಂಗ ಕ್ರೀಡಾಂಗಣದಲ್ಲಿ ಕಡ್ಲೇಮಕ್ಕಿಯ ಸರ್ವ ಧರ್ಮ ಗೆಳೆಯರ ಬಳಗ ಹಾಗೂ ವಿಶ್ವನಾಥ್ ಗದ್ದೆಮನೆ ಬಳಗದ ಪ್ರಾಯೋಜಕತ್ವದಲ್ಲಿ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಮಾತನಾಡಿ, ಕಬಡ್ಡಿ ಕೇವಲ ಒಂದು ಆಟವಲ್ಲ, ಅದು ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಒಂದು ಭಾಗವಾಗಿದೆ. ಮಹಾ ಭಾರತದ ಕಾಲದ ಚಕ್ರವ್ಯೆಹ ಭೇದಿಸುವ ತಂತ್ರದಿಂದ ಈ ಆಟ ಪ್ರೇರಣೆ ಪಡೆದಿದೆ. ದುಬಾರಿ ಕ್ರೀಡಾ ಸಾಮಗ್ರಿಗಳಿಲ್ಲದೆ, ಕೇವಲ ಒಂದು ಸಣ್ಣ ಮೈದಾನ ಮತ್ತು ದೈಹಿಕ ಸಾಮರ್ಥ್ಯವಿದ್ದರೆ ಆಡಬಹುದಾದ ಸರಳ ಹಾಗೂ ಜನಪ್ರಿಯ ಆಟ ಇದಾಗಿದೆ. ಕಬಡ್ಡಿ ಪಂದ್ಯಾವಳಿಗಳು ಕೇವಲ ಮನರಂಜನೆ ನೀಡುವುದಿಲ್ಲ, ಬದಲಿಗೆ ಆಟಗಾರರಲ್ಲಿ ಕ್ರೀಡಾಸೂರ್ತಿ, ಶಿಸ್ತು ಮತ್ತು ಒಗ್ಗಟ್ಟನ್ನು ಬೆಳೆಸುತ್ತವೆ ಎಂದರು.

ಜೇಸಿಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಡಾ. ನವೀನ್‌ಲಾಯ್ಡ ಮಿಸ್ಕಿತ್ ಮಾತಾನಾಡಿ, ರಕ್ಷಣಾತ್ಮಕ ಆಟದಲ್ಲಿ ಒಬ್ಬೊಬ್ಬರಾಗಿ ಆಡುವುದಕ್ಕಿಂತ ಇಡೀ ತಂಡ ಒಂದಾಗಿ ಎದುರಾಳಿಯನ್ನು ಕಟ್ಟಿಹಾಕುವುದು ಮುಖ್ಯವಾಗಿದೆ. ಹಿಂದೆ ಕಬಡ್ಡಿ ಕೇವಲ ಹಳ್ಳಿಗಳ ಹಬ್ಬದ ಆಟವಾಗಿತ್ತು. ಆದರೆ ಇಂದು ಪ್ರೊ ಕಬಡ್ಡಿ ಲೀಗ್ ನಂತಹ ಪಂದ್ಯಾವಳಿಗಳಿಂದಾಗಿ ಈ ಆಟಕ್ಕೆ ಹೊಸ ಕಳೆ ಬಂದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಏಷ್ಯನ್ ಗೇಮ್ಸ್ ಮತ್ತು ವಿಶ್ವಕಪ್‌ಗಳಲ್ಲೂ ಕಬಡ್ಡಿ ಭಾರತಕ್ಕೆ ಅಪಾರ ಕೀರ್ತಿ ತಂದಿದೆ. ನಮ್ಮ ದೇಶದ ಪುರುಷ ಮತ್ತು ಮಹಿಳಾ ತಂಡಗಳು ಜಾಗತಿಕ ಮಟ್ಟದಲ್ಲಿ ಹಲವು ಬಾರಿ ಚಿನ್ನದ ಪದಕಗಳನ್ನು ಗೆದ್ದು ಬೀಗಿವೆ ಎಂದರು.

ಹ್ಯಾಮರ್ ಥ್ರೋನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಸಾಲೀಮ್ ಅವರನ್ನು ಸನ್ಮಾನಿಸಲಾಯಿತು. ಸ್ಪರ್ಧೆಯಲ್ಲಿ ಬೆಳ್ತಂಗಡಿ ತಂಡ ಪ್ರಥಮ, ಟೀಮ್ ಗದ್ದೆಮನೆ ತಂಡ ದ್ವಿತೀಯ ಸ್ಥಾನ ಗಳಿಸಿತು. ಸರ್ವಧರ್ಮ ಗೆಳೆಯರ ಬಳಗದ ರಾಜ್ ಕಡ್ಲೇಮಕ್ಕಿ, ಬಿಜೆಪಿ ಹೋಬಳಿ ಅಧ್ಯಕ್ಷ ಪ್ರದೀಪ್ ಕಿಚ್ಚಬ್ಬಿ, ಕರ್ನಾಟಕ ಮುಸ್ಲಿಂ ಜಮಾತ್ ಜಿಲ್ಲಾಧ್ಯಕ್ಷ ಜಮೀರ್ ಮೂಸಬ್ಬ, ಲಯನ್ಸ್ ಕ್ಲಬ್ ಅಧ್ಯಕ್ಷ ಯೋಗೀಶ್, ಪ್ರಮುಖರಾದ ಶಶಾಂಕ್ ಹೇರೂರು, ಮೊಯಿನುದ್ದಿನ್ ಯೂಸ್ು, ಜಗದೀಶ್ ಅರಳೀಕೊಪ್ಪ, ಶಾಹಿದ್ ಕ್ಲಾಸಿಕ್, ಸೃಜನ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net