

ಎನ್.ಆರ್.ಪುರ: ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಪರಿಷ್ಕರಣೆಗೆ ಎಲ್ಲರ ಸಹಕಾರ ಅಗತ್ಯ ಎಂದು ಸಿಡಿಪಿಒ ವೀರಭದ್ರಪ್ಪ ಮಾಜಿಗೌಡ್ರ ತಿಳಿಸಿದರು.
ತಾಪಂ ಸಾಮರ್ಥ್ಯಸೌಧದಲ್ಲಿ ನಡೆದ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಪರಿಷ್ಕರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈಗಾಗಲೇ ಅಧಿಕಾರಿಗಳಿಗೆ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಪರಿಷ್ಕರಣೆ ಕಾರ್ಯದ ಒಂದು ಹಂತದ ತರಬೇತಿ ನೀಡಲಾಗಿದೆ. ಫಲಾನುಭವಿಗಳ ಮನೆಗೆ ತೆರಳಿ ಈ ಪರಿಷ್ಕರಣೆ ಮಾಡಬೇಕಾಗಿದೆ. ಪೂರ್ವಭಾವಿಯಾಗಿ ಫಲಾನುಭವಿಗಳ ಮನೆಗೆ ತೆರಳಿದಾಗ ಏನೇನು ದಾಖಲಾತಿ ಪಡೆಯಬೇಕು ಯಾವ ರೀತಿಯಲ್ಲಿ ಮಾಡಿದರೆ ಸುಲಭವಾಗುತ್ತದೆ ಎಂಬುವುದರ ಬಗ್ಗೆ ಚರ್ಚಿಸಿ ಪರಿಷ್ಕರಣೆ ವಿಧಾನ ತಿಳಿಸಲಾಗುವುದು ಎಂದರು.
ಈಗಾಗಲೇ ನ್ಯಾಯಬೆಲೆ ಅಂಗಡಿವಾರು ಫಲಾನುಭವಿಗಳ ಪಟ್ಟಿ ತಯಾರಿಸಲಾಗಿದೆ. ಅವುಗಳನ್ನು ಗ್ರಾಪಂಗಳಿಗೂ ನೀಡಲಾಗುವುದು. ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಪರಿಷ್ಕರಣೆ ನಡೆಸಬೇಕಾಗಿದ್ದು, 14ಗ್ರಾಪಂಗಳೂ ಸೇರಿದಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 29 ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯ ಒಟ್ಟು 15,594 ಫಲಾನುಭವಿಗಳ ಪರಿಷ್ಕರಣೆ ಮಾಡಬೇಕಾಗಿದೆ. ಸಿಡಿಪಿಒ ಇಲಾಖೆಯಿಂದ ಪ್ರತಿಯೊಂದು ಗ್ರಾಪಂಗಳಿಗೂ ಭೇಟಿ ನೀಡಲಾಗುವುದು. ನೆಟ್‌ವರ್ಕ್ ಸಮಸ್ಯೆ ಇರುವ ಕಡೆ ಯಾವ ರೀತಿ ಪರಿಷ್ಕರಣೆ ಮಾಡಬೇಕು ಎಂಬುವುದನ್ನು ಮುಂದಿನ ದಿನಗಳಲ್ಲಿ ಚರ್ಚಿಸಲಾಗುವುದು ಎಂದರು.
ಆಹಾರ ಇಲಾಖೆ ಅಧಿಕಾರಿ ಗಣಪತಿ ಮಾತನಾಡಿ, ಫಲಾನುಭವಿಗಳ ಆಧಾರ್ ಕಾರ್ಡ್, ಆಲಿಂಕ್ ಆಗಿರುವ ಮೊಬೈಲ್ ನಂಬರ್, ಜಿಪಿಎಸ್ ಫೋಟೋ, ಮತದಾನದ ಗುರುತಿನ ಚೀಟಿ, ಬ್ಯಾಂಕ್ ಖಾತೆ ಪುಸ್ತಕದ ಪ್ರತಿ ಸಂಗ್ರಹಿಸಬೇಕು. ನಮ್ಮ ರಾಜ್ಯದ ಮತದಾರರಿಗೆ ಮಾತ್ರ ಗೃಹಲಕ್ಷ್ಮೀ ಯೋಜನೆ ತಲುಪಬೇಕು ಎಂಬುವುದು ಈ ಪರಿಷ್ಕರಣೆ ಮುಖ್ಯ ಉದ್ದೇಶ. ಇದರಿಂದ ಪಡಿತರ ಕಾರ್ಡ್ ರದ್ದು ಮಾಡಲಾಗುತ್ತದೆ ಎಂಬ ಗೊಂದಲ ಬೇಡ. ಇದು ಕೇವಲ ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದ ಪರಿಷ್ಕರಣೆಯಾಗಿರುತ್ತದೆ ಎಂದು ತಿಳಿಸಿದರು.
ಸಮಿತಿ ಅಧ್ಯಕ್ಷೆ ಚಂದ್ರಮ್ಮ, ಸದಸ್ಯರಾದ ಇಂದಿರಾನಗರ ರಘು, ನಿತ್ಯಾನಂದ, ಟಿ.ಟಿ.ಇಸ್ಮಾಯಿಲ್, ಹೂವಮ್ಮ, ಅಪೂರ್ವ,ದೇವರಾಜ್, ಜಯರಾಮ್, ಕ್ಷೇತ್ರ ಕುಮಾರ್, ಸಂದೀಪ, ನಾಗರಾಜ್, ಸೈಯದ್‌ಶಫೀರ್‌ಹಮ್ಮದ್, ಯೋಜನಾಧಿಕಾರಿ ಯಾದವರಾಜ್, ಶ್ರೀದೇವಿ ಇದ್ದರು.