ಹಾಸನದಲ್ಲಿ 800 ಕೋಟಿ ರೂ.ವೆಚ್ಚದ ಮೆಗಾ ಡೈರಿ ಸ್ಥಾಪನೆ Mega Dairy

ಕೆ ಬಿದರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ  ಸದಸ್ಯರಿಗೆ ಎಲೆಕ್ಟ್ರಾನಿಕ್ ಒಲೆ ವಿತರಿಸಲಾಯಿತು.
ಕೆ ಬಿದರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಸದಸ್ಯರಿಗೆ ಎಲೆಕ್ಟ್ರಾನಿಕ್ ಒಲೆ ವಿತರಿಸಲಾಯಿತು.
Published on

ಪಂಚನಹಳ್ಳಿ: ಆಡಳಿತ ಮಂಡಳಿ, ಹಾಲು ಉತ್ಪಾದಕರು ಮತ್ತು ಒಕ್ಕೂಟಗಳ ನಡುವಿನ ಉತ್ತಮ ಬಾಂಧವ್ಯದಿಂದ ಸಂಘದ ಬೆಳವಣಿಗೆ ಸಾಧ್ಯ ಎಂದು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಟಿ.ಕೆ.ಜಗದೀಶ್ ತಿಳಿಸಿದರು.

ಕೆ.ಬಿದರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2025 -26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಉತ್ತಮ ಲಾಭಾಂಶ ಪಡೆದು ದೊಡ್ಡ ಮಟ್ಟದಲ್ಲಿ ಬೆಳವಣಿಗೆಯಾಗಲು ಹಾಲು ಉತ್ಪಾದಕ ರೈತರೇ ಮುಖ್ಯ ಕಾರಣ ಎಂದರು.

ಪ್ರಸ್ತುತ ಹಾಸನದಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ 800 ಕೋಟಿ ರೂ.ವೆಚ್ಚದ ಮೆಗಾ ಡೈರಿ ಉದ್ಘಾಟನಾ ಹಂತದಲ್ಲಿದ್ದು, ಇದರ ಬೆಳವಣಿಗೆ ಹಿಂದೆ ಸಾವಿರಾರು ಹಾಲು ಉತ್ಪಾದಕರ ಪರಿಶ್ರಮ ಅಡಗಿದೆ. ಮೆಗಾ ಡೈರಿ ಪ್ರಾರಂಭದಿಂದ ಹಾಲಿನ ದರ ಹೆಚ್ಚು ರೈತರಿಗೆ ಸಿಗಲಿದ್ದು ಹಾಲು ಉತ್ಪಾದಕರಿಗೆ ಹೆಚ್ಚು ಪ್ರಯೋಜನವಾಗಲಿದೆ. ಪ್ರಸ್ತುತ ದಿನಗಳಲ್ಲಿ ಬರಗಾಲದಿಂದ ಜಾನುವಾರುಗಳ ನಿರ್ವಹಣೆ ಸಮಸ್ಯೆ ಎದುರಾಗಿದ್ದು ಮೇವು ಬ್ಯಾಂಕ್, ಗೋಶಾಲೆಯನ್ನು ಬೇಗ ತೆರೆಯುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಹಾಸನ ಹಾಲು ಒಕ್ಕೂಟದ ಚಿಕ್ಕಮಗಳೂರು ಭಾಗದ ಉಪ ವ್ಯವಸ್ಥಾಪಕ ಸುರೇಶ್ ಮಾತನಾಡಿ, ಚಿಕ್ಕಮಂಗಳೂರು ಜಿಲ್ಲೆಯಲ್ಲಿಯೇ ಇಂದು 300ಕ್ಕೂ ಹೆಚ್ಚು ಹಾಲು ಉತ್ಪಾದಕ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಸಂಘಗಳು ಆರ್ಥಿಕ ಸಬಲೀಕರಣಗೊಂಡು ಕಾರ್ಯ ನಿರ್ವಹಿಸುತ್ತಿದೆ. ಇದಕ್ಕೆ ಹಾಲು ಉತ್ಪಾದಕರ ಶ್ರಮ ಮುಖ್ಯ ಕಾರಣ. ರೈತರು ಗುಣಮಟ್ಟದ ಹಾಲು ಪೂರೈಸುವ ಕಡೆ ಹೆಚ್ಚು ಗಮನವರಿಸಿದಾಗ ಮಾತ್ರ ಅಧಿಕ ಲಾಭಗಳಿಸುವ ಜತೆಗೆ ಸಂಘವು ಸದೃಢಗೊಳ್ಳಲು ಸಾಧ್ಯ ಎಂದು ತಿಳಿಸಿದರು.

ವಿಸ್ತಾರಣಾಧಿಕಾರಿ ಅಕ್ಕನಾಗಮ್ಮ ಮಾತನಾಡಿ ರೈತರು, ಹಸುಗಳ ನಿರ್ವಹಣೆ ಕ್ರಮಬದ್ಧವಾಗಿದ್ದರೆ ಗುಣಮಟ್ಟದ ಹಾಲನ್ನು ಪಡೆಯಬಹುದು. ನಂದಿನಿ ಉತ್ಪನ್ನಗಳಾದ ಪಶು ಆಹಾರ, ಖನಿಜ ಮಿಶ್ರಣ, ಗೋದಾರ ಶಕ್ತಿ, ಅಂತಹ ಪಶು ಆಹಾರವನ್ನು ಸಮತೋಲನವಾಗಿ ನೀಡುತ್ತಾ ಬಂದಲ್ಲಿ ರಾಸುಗಳ ಆರೋಗ್ಯ ಸುಧಾರಿಸಿ ಗುಣಮಟ್ಟದ ಹಾಲು ಮತ್ತು ರಾಸುಗಳ ಆರೋಗ್ಯ ಹೆಚ್ಚುತ್ತದೆ ಎಂದು ತಿಳಿಸಿದರು.

ವಿಸ್ತರಣಾಧಿಕಾರಿ ಭರತ್ ಮಾತನಾಡಿ, ಸಂಘ ಪ್ರಸಕ್ತ ಸಾಲಿನಲ್ಲಿ 1.37 ಲಕ್ಷ ಲಾಭಗಳಿಸಿದೆ ಎಂದರು. ವಿಸ್ತರಣಾಧಿಕಾರಿಗಳಾದ ಯದುರಾಜ್, ಅಶ್ವಥ್, ಪಶು ವೈದ್ಯಾಧಿಕಾರಿ ರಘು, ಸಂಘದ ಉಪಾಧ್ಯಕ್ಷ ಬಿ.ಜಿ.ರಾಜಣ್ಣ ನಿರ್ದೇಶಕರಾದ ಗಿರೀಶ್, ಪ್ರಭುಕುಮಾರ್, ಪರಮೇಶ್ವರಪ್ಪ, ಮಹೇಶ್ವರಪ್ಪ, ಚಂದ್ರಪ್ಪ, ನಂದೀಶ್, ನಿರಂಜನಮೂರ್ತಿ, ನಾಗರತ್ನ, ಮಹದೇವಮ್ಮ, ಭಾಗ್ಯಮ್ಮ, ಸಂಘದ ಕಾರ್ಯದರ್ಶಿ ಲೋಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net