ವೈಭವದ ನವರಾತ್ರಿ ಸಂಭ್ರಮಕ್ಕೆ ಸಿದ್ದವಾಗಿದೆ ಬಾಳೆಹೊನ್ನೂರು

ಬಾಳೆಹೊನ್ನೂರಿನ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುವ ದುರ್ಗಾದೇವಿ ನವರಾತ್ರಿ ಮಹೋತ್ಸವಕ್ಕೆ ಸಿದ್ದಗೊಂಡಿರುವ ಬೃಹತ್ ದುರ್ಗಾಮಂಟಪ.
ಬಾಳೆಹೊನ್ನೂರಿನ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುವ ದುರ್ಗಾದೇವಿ ನವರಾತ್ರಿ ಮಹೋತ್ಸವಕ್ಕೆ ಸಿದ್ದಗೊಂಡಿರುವ ಬೃಹತ್ ದುರ್ಗಾಮಂಟಪ.
Published on: 

ಬಾಳೆಹೊನ್ನೂರು: ಬಾಳೆಹೊನ್ನೂರಿನಲ್ಲಿ 16 ವರ್ಷಗಳ ಹಿಂದೆ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ಮೃತ್ಯಂಬಿಕಾ ಅಮ್ಮನವರ ಸನ್ನಿಧಿಯಲ್ಲಿ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ 2010ರಲ್ಲಿ ಧಾರ್ಮಿಕ ನೆಲೆಗಟ್ಟಿನಲ್ಲಿ ಆರಂಭಿಸಿದ ದುರ್ಗಾದೇವಿ ಶರನ್ನವರಾತ್ರಿ ಮಹೋತ್ಸವ ಧರ್ಮಾವಲಂಬಿತ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಿ ಭಕ್ತರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಆಧುನಿಕ ದಿನಗಳಲ್ಲಿ ಯುವ ಜನತೆಯಿಂದ ದೂರವಾಗುತ್ತಿರುವ ದೇಶದ ಸಂಸ್ಕೃತಿ, ಸಂಪ್ರದಾಯಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೂ ನೀಡುವ ಉದ್ದೇಶದಿಂದ ಆರಂಭವಾದ ಉತ್ಸವ ಇಂದಿಗೂ ಸಂಸ್ಕೃತಿ, ಸಂಪ್ರದಾಯ ರಕ್ಷಿಸುವ ಜತೆಗೆ ಹಲವರ ಮನ ಪರಿವರ್ತನೆಗೂ ಸಾಕ್ಷಿಯಾಗಿದೆ.

ಸಮಾನಮನಸ್ಕ ಹಾಗೂ ಯುವಪಡೆಯನ್ನು ಹೊಂದಿರುವ ನವರಾತ್ರಿ ಪೂಜಾ ಸಮಿತಿ ಸಂಪ್ರದಾಯಬದ್ಧವಾಗಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುತ್ತಿದೆ. ಸಮಿತಿ ಪದಾಧಿಕಾರಿಗಳು ನವರಾತ್ರಿ ವೇಳೆ ಸಂಪ್ರದಾಯಬದ್ಧವಾಗಿದ್ದು, ಬ್ರಹ್ಮಚರ್ಯ, ಸಾತ್ವಿಕ ಆಹಾರ, ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ತೊಡುವುದು ವಿಶೇಷವಾಗಿದೆ.

ಉತ್ಸವದಲ್ಲಿ ಲೋಕಕಲ್ಯಾಣಾರ್ಥ ಪ್ರತಿನಿತ್ಯ ಸಪ್ತಶತೀ ಪಾರಾಯಾಣಾದಿ, ದುರ್ಗಾಹೋಮ, ಹೂವಿನ ಪೂಜೆ ನಡೆಸುತ್ತಿದ್ದು, ನಿತ್ಯ ಮಧ್ಯಾಹ್ನ 2500-3000 ಭಕ್ತರಿಗೆ ಅನ್ನಸಂತರ್ಪಣೆ, ವಿಜಯದಶಮಿ ದಿನ 15,000ಕ್ಕೂ ಅಧಿಕ ಭಕ್ತರಿಗೆ ಅನ್ನ ಸಂತರ್ಪಣೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾರತೀಯ ಪುರಾತನ ಕಲೆ, ಸಂಸ್ಕೃತಿ, ಸಾಹಿತ್ಯ, ಧರ್ಮ, ದೇಶಾಭಿಮಾನದ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ ಅಚ್ಚುಕಟ್ಟಾಗಿ ನಡೆಸುತ್ತಿದೆ.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಆಯುಧ ಪೂಜೆದಿನ ನಾಡಿನ ವಿವಿಧ ಭಾಗಗಳ ಮಠಾಧೀಶರಿಂದ ಆಶೀರ್ವಚನ, ಉಪನ್ಯಾಸಕರಿಂದ ಉಪನ್ಯಾಸ ಸಹ ನೀಡಿಸಲಾಗುತ್ತಿದೆ. ಪ್ರತಿ ವರ್ಷ ಸಾಧಕ ಪ್ರತಿನಿಧಿಗಳಿಗೆ ದುರ್ಗಾ ರಕ್ಷೆ ನೀಡಿ ಸನ್ಮಾನ, ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಅಂತಿಮ ದಿನ ದುರ್ಗಾದೇವಿ ಜಲಸ್ತಂಭನಾ ಶೋಭಾಯಾತ್ರೆಯಲ್ಲಿ ದೇಶದ 20ಕ್ಕೂ ಅಧಿಕ ವಿವಿಧ ಕಲಾ ಪ್ರಾಕಾರಗಳನ್ನು ಕರೆಯಿಸಿ ಸ್ಥಳೀಯರಿಗೆ ಪರಿಚಯಿಸಲಾಗುತ್ತಿದೆ. ಕಳೆದ ಎರಡು ವರ್ಷದಿಂದ ದುರ್ಗಾ ವಿಗ್ರಹದ ಜಲಸ್ತಂಭನಕ್ಕೂ ಮುನ್ನ ಭದ್ರಾ ನದಿಯಲ್ಲಿ ಗಂಗಾರತಿ ಮಾದರಿಯಲ್ಲಿ ಭದ್ರಾ ಆರತಿ ಎಂಬ ವಿಶೇಷ ಕಾರ್ಯಕ್ರಮ ಆರಂಭಿಸಿದೆ.

ಧರ್ಮ, ಸಂಸ್ಕೃತಿ ರಕ್ಷಣೆ ಧ್ಯೇಯ

ಧರ್ಮ, ಸಂಸ್ಕೃತಿ, ಸಂಪ್ರದಾಯ ರಕ್ಷಣೆ ಧ್ಯೇಯದೊಂದಿಗೆ ಆರಂಭಗೊಂಡ ಶರನ್ನವರಾತ್ರಿ ಮಹೋತ್ಸವ ಗ್ರಾಮೀಣ ಪ್ರದೇಶದ ಭಕ್ತರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಬಾರಿ17ನೇ ವರ್ಷದ ಉತ್ಸವಕ್ಕೆ ಸಮಿತಿ ಸಿದ್ಧಗೊಂಡಿದ್ದು, ಸಿದ್ದತಾ ಕಾರ್ಯಗಳು ಭರದಿಂದ ಸಾಗಿವೆ. ಅ.11 ರಂದು ಪಟ್ಟಣದಲ್ಲಿ ನವರಾತ್ರಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದ್ದು, ಇದಕ್ಕಾಗಿ ಬೃಹತ್ ದುರ್ಗಾಮಂಟಪ ನಿರ್ಮಾಣವಾಗಿದೆ. ಪಟ್ಟಣದ ಮುಖ್ಯರಸ್ತೆ ಹಾಗೂ ಮಾರ್ಕಾಂಡೇಶ್ವರ ದೇಗುಲದ ಆವರಣವನ್ನು ವಿವಿಧ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ಸ್ಥಳ ವಿಶೇಷ

ಬಾಳೆಹೊನ್ನೂರಿನ ಪ್ರಮುಖ ದೇವಾಲಯಗಳಲ್ಲೊಂದಾದ ಮಾರ್ಕಾಂಡೇಶ್ವರ ದೇವಾಲಯದ ಆವರಣದಲ್ಲಿ ಅಧಿದೇವತೆ ಮೃತ್ಯಂಬಿಕಾ ಅಮ್ಮನವರ ದೇವಾಲಯದಲ್ಲಿ ಪ್ರತೀ ಮಂಗಳವಾರ, ಶುಕ್ರವಾರ ವಿಶೇಷ ಪೂಜೆ ನಡೆಯಲಿದೆ. ಪಕ್ಕದಲ್ಲೇ ಮಾರಿಯಮ್ಮನ ಗುಡಿಯಿದ್ದು ಇಲ್ಲೂ ಸಹ ವಿಶೇಷ ಪೂಜೆ ನಡೆದು, ಆರೋಗ್ಯ ಮತ್ತಿತರ ಸಮಸ್ಯೆಗಳಿಗೆ ಹರಕೆ ಸೇವೆ ನಡೆಯುತ್ತದೆ. ಮಾರ್ಕಾಂಡೇಶ್ವರ ದೇವಾಲಯದ ಸನಿಹದಲ್ಲಿ ನವಗ್ರಹ ಗುಡಿ, ನಾಗಬನಗಳಿದ್ದು ಪ್ರತೀ ಶನಿವಾರ ವಿಶೇಷ ಪೂಜೆ ನಡೆಯುತ್ತದೆ. ಒಟ್ಟಾರೆಯಾಗಿ ಮಾರ್ಕಾಂಡೇಶ್ವರ ದೇವಸ್ಥಾನ ಪವಿತ್ರ ಧಾರ್ಮಿಕ ಸ್ಥಳವಾಗಿದ್ದು, ನವರಾತ್ರಿ ಉತ್ಸವ ಆಚರಣೆ ಮೂಲಕ ಇನ್ನಷ್ಟು ಕಳೆಗಟ್ಟಿ ನಿಂತಿದೆ.

16 ವರ್ಷಗಳಿಗಿಂತ ಈ ವರ್ಷದ ಉತ್ಸವವನ್ನು ಯಶಸ್ವಿಯಾಗಿ ನಡೆಸಬೇಕು ಎಂಬ ಉದ್ದೇಶದಿಂದ ಸಮಿತಿ ಹಲವು ವಿಶೇಷತೆಯೊಂದಿಗೆ ಕಾರ್ಯಕ್ರಮ ರೂಪುಗೊಳಿಸಿದೆ. ಅ.11ರಂದು ಹೊರನಾಡು ದೇಗುಲದಿಂದ ಬಾಗಿನ ಸಮರ್ಪಿಸಿ ಪೂಜೆ ಸಲ್ಲಿಸುವ ಮೂಲಕ ವಿದ್ಯುಕ್ತವಾಗಿ ಉತ್ಸವಕ್ಕೆ ಚಾಲನೆ ದೊರೆಯಲಿದೆ.

ಆರ್.ಡಿ.ಮಹೇಂದ್ರ ಪ್ರಧಾನ ಕಾರ್ಯದರ್ಶಿ, ನವರಾತ್ರಿ ಸಮಿತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net