ಯುಎಪಿಎ ಕಾಯ್ದೆಯಡಿ ಪ್ರತಾಪ್‌ಸಿಂಹರನ್ನು ಬಂಧಿಸಿ

ಮಾಜಿ ಸಂಸದ ಪ್ರತಾಪ್ ಸಿಂಹ ಬಂಧನಕ್ಕೆ ಆಗ್ರಹಿಸಿ ಡಿಎಸ್‌ಎಸ್ ಮುಖಂಡರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಶೂದ್ರ ಶ್ರೀನಿವಾಸ್, ಬಿ.ಟಿ.ಚಂದ್ರಶೇಖರ್, ಮಲ್ಲಿಕಾರ್ಜುನ್, ಕೃಷ್ಣಪ್ಪ, ಲಕ್ಷ್ಮಣ್ ಮತ್ತಿತರಿದ್ದರು.
ಮಾಜಿ ಸಂಸದ ಪ್ರತಾಪ್ ಸಿಂಹ ಬಂಧನಕ್ಕೆ ಆಗ್ರಹಿಸಿ ಡಿಎಸ್‌ಎಸ್ ಮುಖಂಡರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಶೂದ್ರ ಶ್ರೀನಿವಾಸ್, ಬಿ.ಟಿ.ಚಂದ್ರಶೇಖರ್, ಮಲ್ಲಿಕಾರ್ಜುನ್, ಕೃಷ್ಣಪ್ಪ, ಲಕ್ಷ್ಮಣ್ ಮತ್ತಿತರಿದ್ದರು.
Published on: 

ಕಡೂರು: ದಲಿತರ ಸಮಾನತೆ ಸಂಕೇತ ನೀಲಿ ಶಾಲು ಮತ್ತು ಡಿಎಸ್‌ಎಸ್ ಸಂಘಟನೆಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಯುಎಪಿಎ ಕಾಯ್ದೆಯಡಿ ಬಂಧಿಸಬೇಕು ಎಂದು ಡಿಎಸ್‌ಎಸ್ ಮುಖಂಡ ಶೂದ್ರ ಶ್ರೀನಿವಾಸ್ ಸರ್ಕಾರಕ್ಕೆ ಆಗ್ರಹಿಸಿದರು.

ಅಂಬೇಡ್ಕರ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಶುಕ್ರವಾರ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರ ಜತೆ ಮಾಲಾರ್ಪಣೆ ಮಾಡಿ ನಂತರ ಪ್ರತಿಭಟನೆಯಲ್ಲಿ ಮಾತನಾಡಿ, ಟಿ.ನರಸಿಪುರದಲ್ಲಿ ಮಾಜಿ ಸಂಸದ ಪ್ರತಾಪ ಸಿಂಹ ಅವರು ದಲಿತ ಸಂಘಟನೆಗಳು ಹಾಗೂ ನೀಲಿ ಶಾಲಿನ ವಿರುದ್ಧ ಅವಿವೇಕಿತನದಿಂದ ಮಾತನಾಡಿದ್ದಾರೆ. ಅವರು ಕೂಡಲೇ ತಮ್ಮ ಮಾತು ಹಿಂಪಡೆದು ಕ್ಷಮೆಯಾಚಿಸಬೇಕು ಎಂದರು.

ದಲಿತ ಸಂಘರ್ಷ ಅಂಬೇಡ್ಕರ್ ವಿಚಾರಧಾರೆ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿದೆ. 70ರ ದಶಕದಲ್ಲಿ ದಲಿತ ಚಳವಳಿ ಕರ್ನಾಟಕ ಇತಿಹಾಸದ ಮಟ್ಟಿಗೆ ಬಹಳ ಮಹತ್ವದ್ದಾಗಿತ್ತು. ಸಮಿತಿ ಇಂದಿಗೂ ಅಸಮಾನತೆ ವಿರುದ್ದ ನಿರಂತರವಾಗಿ ಹೋರಾಡುತ್ತಿದೆ. 21ಕ್ಕೂ ಅಧಿಕ ಎಫ್‌ಐಆರ್ ದಾಖಲಾಗಿರುವ ಪ್ರತಾಪ ಸಿಂಹ ಅವರನ್ನು ಗೂಂಡಾ ಕಾಯ್ದೆಯಡಿ ಸರ್ಕಾರ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಮುಖಂಡ ಬೀರೂರು ಬಿ.ಟಿ.ಚಂದ್ರಶೇಖರ್ ಮಾತನಾಡಿ, ದಲಿತ ಸಂಘರ್ಷ ಸಮಿತಿ ಇತಿಹಾಸದ ಪರಿಚಯ ಇಲ್ಲದ ಪ್ರತಾಪ ಸಿಂಹ ಸಮಿತಿ ಮತ್ತು ದಲಿತರನ್ನು ಹೀಯಾಳಿಸಿ ಮಾತನಾಡಿರುವುದು ಅಕ್ಷಮ್ಯ ಅಪರಾಧ. ಟಿ.ನರಸಿಪುರದಲ್ಲಿ ಶಾಂತಿ ಕೆಡಿಸುವ ಕೆಲಸಕ್ಕೆ ಆರ್‌ಎಸ್‌ಎಸ್ ಕೃಪಾಪೋಷಿತರು ತಯಾರಿ ನಡೆಸಿದ್ದರು. ಅದನ್ನು ವಿರೋಧಿಸಿ ಸಮಿತಿಯಿಂದ ಸೌಹಾರ್ದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದನ್ನು ಪ್ರತಾಪ ಸಿಂಹ ಅವರಿಗೆ ಸಹಿಸಲು ಆಗಿಲ್ಲ ಎಂದರು.

ತಹಸೀಲ್ದಾರ್ ಸಿ.ಎಸ್.ಪೂರ್ಣಿಮಗೆ ಮನವಿ ಸಲ್ಲಿಸಿದರು. ಮಾದಿಗ ಸಮಾಜದ ತಾಲೂಕು ಅಧ್ಯಕ್ಷ ಜಗದೀಶ್, ಸಂಘಟನೆ ಮುಖಂಡರದ ಕೃಷ್ಣಪ್ಪ, ಮಲ್ಲಿಕಾರ್ಜುನ್, ಚಿಕ್ಕಿಂಗಳ ಲಕ್ಷ್ಮಣ್, ಸಿ.ಸುರೇಶ್, ವಾಸು, ದೊಡ್ಡಘಟ್ಟ ಗಂಗರಾಜು, ಹಡಗಲು ಅಂಜನಿ, ಕೇದಿಗೆರೆ ಚಂದ್ರಪ್ಪ, ನಾರಾಯಣಮೂರ್ತಿ, ಪಟ್ಟಣಗೆರೆ ಸಗುನಪ್ಪ, ಸಚಿನ್, ಬಾಣೂರು ಈಶ್ವರಪ್ಪ, ಪ್ರಮೋದ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net