

ಬಸವಕಲ್ಯಾಣ: ಮಳೆ ಅಭಾವದಿಂದಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ಹೇಳಿದರು.
ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ನಮ್ಮ ನಡೆ ಹಳ್ಳಿ ಕಡೆ ಅಭಿಯಾನದ ನಿಮಿತ್ತ ಬುಧವಾರ ಅಲಗೂಡ, ಭೋಸ್ಗಾ ಹಾಗೂ ಕೋಹಿನೂರ ಗ್ರಾಪಂಗಳಿಗೆ ಭೇಟಿ ನೀಡಿ, ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಮಳೆಯ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ತೊಂದರೆಗಳನ್ನು ಎದುರಿಸುತ್ತಿರುವುದಾಗಿ ಗ್ರಾಮಸ್ಥರು ಸಿಇಒ ಅವರ ಗಮನಕ್ಕೆ ತಂದರು.
ಮುಂಗಾರು ಮಳೆ ಇಲ್ಲದೆ ಬೆಳೆ ನಷ್ಟವಾಗಿರಬಹುದು, ಆದರೆ ಧೈರ್ಯ ಕಳೆದುಕೊಳ್ಳಬೇಡಿ. ನಿಮ್ಮೊಂದಿಗೆ ನಾವಿದ್ದೇವೆ. ಕುಡಿಯುವ ನೀರಿನ ಸಮಸ್ಯೆ ಎದುರಾದಲ್ಲಿ ಅಗತ್ಯ ಕ್ರಮಕೈಗೊಂಡು ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು. ಅಲ್ಲದೆ, ಸಮಸ್ಯೆ ಇರುವ ಗ್ರಾಮಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಒಂದು ವಾರದೊಳಗೆ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಆಸ್ಪತ್ರೆಯಲ್ಲಿ ಲಭ್ಯವಿರುವ ಔಷಧಗಳು ಹಾಗೂ ಮಾತ್ರೆಗಳ ದಾಸ್ತಾನು ಪರಿಶೀಲಿಸಿ, ಸಾರ್ವಜನಿಕರಿಗೆ ಅಗತ್ಯ ಆರೋಗ್ಯ ಸೇವೆಗಳು ಸಮರ್ಪಕವಾಗಿ ದೊರೆಯುವಂತೆ ನೋಡಿಕೊಳ್ಳಲು ಸಂಬಂಧಪಟ್ಟ ಸಿಬ್ಬಂದಿಗೆ ಸೂಚನೆ ನೀಡಿದರು.
ತಾಪಂ ಇಒ ರಮೇಶ ಸುಲ್ಪಿ, ಎಡಿ ಮಹ್ಮದ್ ಸಲೀಂ, ಎಇಇ ಸಂಜುಕುಮಾರ, ಎಇ ಸುನೀಲಕುಮಾರ, ಪಿಡಿಒ ಸುಲೋಚನಾ ಬಂಡೆ, ಶಿವಾಜಿ ಚವ್ಹಾಣ್, ಮೊಹ್ಮದ್ ಪಾಶಾ, ಟಿಸಿ ಶಿವರಾಜ ಪಾಟೀಲ್, ಐಇಸಿ ಸಂಯೋಜಕ ವೀರಾರಡ್ಡಿ, ಟಿಎಗಳಾದ ಮಲ್ಲಿಕಾರ್ಜುನ ಜಾಧವ್, ರವಿ ಕೊರಾಳೆ, ಜಲೀಲ್ ಅಹ್ಮದ್, ಮಾಣಿಕ, ಸುಭಾಷ, ಸೂರ್ಯಕಾಂತ, ರಾಮ, ಸತೀಶ, ಮಹಾದೇವ, ಶರಣು, ದೇವೇಂದ್ರ, ಮಹಾರುದ್ರ ಇತರರಿದ್ದರು.