

ಬೀದರ್: ಜಿಲ್ಲಾ ಪೊಲೀಸ್ ಇಲಾಖೆಯ ಶ್ವಾನದಳದಲ್ಲಿ ಎಂಟು ವರ್ಷ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ಪೊಲೀಸರ ಹೆಮ್ಮೆಯ ಸಂಗಾತಿ, ಹಿರಿಯ ಶ್ವಾನ ದೀಪಾ ಮಂಗಳವಾರ ಅಗಲಿದೆ.
ದೀಪಾ ತನ್ನ ಸುದೀರ್ಘ ಸೇವಾವಧಿಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸಿದ್ದು, ಅಪರಾಧ ಪ್ರಕರಣಗಳ ಪತ್ತೆ ಹಾಗೂ ಮಾದಕ ವಸ್ತುಗಳ ಶೋಧನಾ ಕಾರ್ಯಗಳಲ್ಲಿ ಅತ್ಯಂತ ಚುರುಕಾಗಿ ಮತ್ತು ಯಶಸ್ವಿಯಾಗಿ ಪಾಲ್ಗೊಂಡಿತ್ತು. ತನ್ನ ಕರ್ತವ್ಯನಿಷ್ಠೆ, ಚುರುಕುತನ ಮತ್ತು ವಿಶೇಷ ಸಾಮರ್ಥ್ಯದಿಂದ ಅನೇಕ ಪೊಲೀಸ್ ಕಾರ್ಯಾಚರಣೆಗಳಲ್ಲಿ ಮಹತ್ವದ ಕೊಡುಗೆ ನೀಡಿತ್ತು. ಅಲ್ಲದೆ, ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟಗಳು ಹಾಗೂ ವಿವಿಧ ಜಿಲ್ಲಾಮಟ್ಟದ ಶ್ವಾನ ಪ್ರದರ್ಶನಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆಲ್ಲುವ ಮೂಲಕ ಬೀದರ್ ಜಿಲ್ಲಾ ಪೊಲೀಸ್ ಇಲಾಖೆಯ ಕೀರ್ತಿಯನ್ನು ಹೆಚ್ಚಿಸಿತ್ತು.
ಮೃತ ಶ್ವಾನದ ಅಂತ್ಯಕ್ರಿಯೆ ಸಕಲ ಗೌರವದೊಂದಿಗೆ ನೆರವೇರಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.