

ಔರಾದ: ಶಾಸಕ, ಮಾಜಿ ಸಚಿವ ಪ್ರಭು ಚವ್ಹಾಣ ಘನತೆ, ಗೌರವಕ್ಕೆ ಪದೇ ಪದೇ ಧಕ್ಕೆ ತರುವುದಕ್ಕಾಗಿ ದುರುದ್ದೇಶದಿಂದ ಅಸತ್ಯ, ಆಧಾರರಹಿತ ಆರೋಪ ಮಾಡುತ್ತಿರುವ ಚಾಂದೋರಿ ಗ್ರಾಪಂ ಮಾಜಿ ಅಧ್ಯಕ್ಷ ದೀಪಕ ಪಾಟೀಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಯುವ ಮುಖಂಡ ಸುಜಿತ ರಾಠೋಡ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೀದರ್ ಹತ್ತಿರದ ಕೊಳಾರ ಗ್ರಾಮದ ಜಮೀನಿಗೆ ಸಂಬAಧಿಸಿದAತೆ ಶಾಸಕರು ಭೂ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ. ಈ ಜಮೀನಿನ ಖರೀದಿ ವ್ಯವಹಾರ 2007ರಲ್ಲಿಯೇ ಆರಂಭವಾಗಿದ್ದು, 2008ರಲ್ಲಿ ಖರೀದಿಸಲಾಗಿದೆ. ಈ ಜಮೀನು 1954ರಿಂದಲೂ ಪಟ್ಟಾ ಜಮೀನಾಗಿದ್ದು, ಈ ಹಿಂದೆ 7-8 ಜನರು ಮಾಲೀಕತ್ವ ಹೊಂದಿದ್ದರು. ನಂತರ ಶಾಸಕರು ಖರೀದಿಸಿದ್ದಾರೆ. ಖರೀದಿ ವ್ಯವಹಾರದ ಸಂದರ್ಭದಲ್ಲಿ ಇವರು ಶಾಸಕರಾಗಿರಲಿಲ್ಲ. ಹೀಗಿರುವಾಗ ಅಧಿಕಾರ ದುರ್ಬಳಕೆಯ ಪ್ರಶ್ನೆಯೇ ಬರುವುದಿಲ್ಲ. ಶಾಸಕರ ಹೆಸರು ಕೆಡಿಸಬೇಕೆಂಬ ಏಕೈಕ ಉದ್ದೇಶದಿಂದ ಭೂ ಕಬಳಿಕೆ ಎಂದು ಬಿಂಬಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಜಿಲ್ಲೆಯಲ್ಲಿ ಜಮೀನುಗಳಿಗೆ ಸಂಬಂಧಿಸಿದಂತೆ ಸಾವಿರಾರು ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿವೆ. ಪಹಣಿ ಹಾಗೂ ಇತರ ಜಮೀನು ದಾಖಲೆಗಳಲ್ಲಿನ ಲೋಪದೋಷಗಳಿಂದ ಅನೇಕ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ದಾಖಲೆ ನಿರ್ವಹಣೆಯಲ್ಲಿ ತಪ್ಪುಗಳಿದ್ದ ಮಾತ್ರಕ್ಕೆ ಜಮೀನು ಮಾಲೀಕರು ಅಪರಾಧಿಗಳಾಗುವುದಿಲ್ಲ. ದಾಖಲಾತಿ ವ್ಯತ್ಯಾಸ ಸಂಬಂಧಿಸಿದಂತೆ ಶಾಸಕರ ವಿರುದ್ಧ ಮಾತ್ರ ಅಪಪ್ರಚಾರ ನಡೆಸುತ್ತ, ಜನರ ದಾರಿ ತಪ್ಪಿಸುವ ಹೇಳಿಕೆ ಕೊಡುವುದು ಸರಿಯಲ್ಲ. ಇದಕ್ಕೆ ಪೂರಕವಾಗಿ 1954-55ರ ಖಾಸ್ರಾ ಪಹಣಿ, ಪಕ್ಕಾ ಪುಸ್ತಕ, ಪ್ರತಿ ಪುಸ್ತಕ, ಹೊಸ ಪಹಣಿಗಳನ್ನು ಸಲ್ಲಿಸಲು ಸಿದ್ಧ. ಜನತೆಗೆ ಎಲ್ಲವೂ ಗೊತ್ತಿದೆ. ಹಾಗಾಗಿ ಇಂತಹ ಪ್ರಯತ್ನಗಳಿಂದ ಏನೂ ಆಗುವುದಿಲ್ಲ ಎಂದಿದ್ದಾರೆ.
ಇದೇ ಜಮೀನಿಗೆ ಸಂಬಂಧಿಸಿದಂತೆ ಈ ಹಿಂದೆ ಅಧಿಕಾರಿಗಳ ಮೇಲೆ ಒತ್ತಡ ತಂದು ಬ್ಲ್ಯಾಕ್ ಮೇಲ್ ಮಾಡಿ ಇಡೀ ಪಹಣಿಯನ್ನೇ ತೆಗೆಸುವ ಪ್ರಯತ್ನ ಮಾಡಿದ್ದರು. ಹೈಕೋರ್ಟ್ ಸರಿಪಡಿಸಲು ನಿರ್ದೇಶನ ನೀಡಿದ ನಂತರ ಸರಿಪಡಿಸಲಾಯಿತು. ಈ ವ್ಯಕ್ತಿ ಶಾಸಕರ ವಿರುದ್ಧ ಹಲವು ದೂರುಗಳನ್ನು ಸಲ್ಲಿಸಿದ್ದಾರೆ. ತಾನು ಸ್ವತ ಕೆಲವು ದೂರು ನೀಡಿದರೆ ತನ್ನ ಗುಂಪಿನವರಿಂದ ಕೆಲವು ದೂರು ಸಲ್ಲಿಸಿದ್ದಾನೆ. 2021 ರಿಂದ 2026ರ ವರೆಗೆ ಸುಮಾರು 13-14 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇವರ ಹಿಂದೆ ಬೀದರ ರಾಜನೇತಾ ಕೈವಾಡವಿದೆ. ಅವರ ಮಾತುಗಳಿಂದ ಪ್ರೇರಿತವಾಗಿ ಈ ರೀತಿಯ ಸತತ ದೂರು ನೀಡಿ, ಶಾಸಕರಿಗೆ ಕಿರುಕುಳ ನೀಡುತ್ತಿದ್ದಾರೆ. ಆದರೆ ಸತ್ಯಮೇವ ಜಯತೆ ಎಂಬAತೆ ಎಲ್ಲ ಪ್ರಕರಣಗಳಲ್ಲಿ ಶಾಸಕರಿಗೆ ಗೆಲುವಾಗಿದೆ. ಸ್ಥಳೀಯ ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್ವರೆಗೆ ಜಯ ಸಿಕ್ಕಿವೆ. ಈ ಬಾರಿಯೂ ಸತ್ಯಕ್ಕೆ ಗೆಲುವು ಸಿಗಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಕೆಲವು ದಿನಗಳ ಹಿಂದೆ ಸಂಬಂಧವಿಲ್ಲದ ರಾಮಮಂದಿರದ ಹಣ ದುರ್ಬಳಕೆ ಮಾಡುಕೊಂಡಿದ್ದಾರೆಂದು ಆಧಾರರಹಿತ ದೂರು ಸಲ್ಲಿಸಿದ್ದರು. ಶಾಸಕರ ಪುತ್ರನ ನಿಶ್ಚಿತಾರ್ಥದ ವಿಷಯದಲ್ಲಿಯೂ ಅನಗತ್ಯವಾಗಿ ತಲೆಹಾಕಿ ವಿವಾದ ಸೃಷ್ಟಿಸುವ ಪ್ರಯತ್ನ ಮಾಡಿದ್ದಾರೆ. ಜಾತಿ ವಿಷಯ ಕೆದಕುವಂತೆ ಕೆಲವರಿಗೆ ಉತ್ತೇಜಿಸಿ ಅನಗತ್ಯ ಗೊಂದಲ ಸೃಷ್ಟಿಸಿದ್ದರು. ಹೀಗೆ ಒಂದಿಲ್ಲೊAದು ವಿಚಾರ ಮುಂದಿಟ್ಟುಕೊಂಡು ಶಾಸಕರ ಹೆಸರಿಗೆ ಕಳಂಕ ತರಲು ನಿರಂತರ ಪ್ರಯತ್ನಿಸುತ್ತಿದ್ದಾರೆ. ಶಾಸಕರು ಕ್ಷೇತ್ರದಲ್ಲಿ ಸಾಕಷ್ಟು ಜನಪ್ರೀಯತೆ ಹೊಂದಿದ್ದಾರೆ. ಅಂತೆಯೇ ಸತತ ನಾಲ್ಕು ಬಾರಿ ಕ್ಷೇತ್ರದ ಜನರು ಆಶೀರ್ವದಿಸಿದ್ದಾರೆ. ಸಮಾಜಪರ, ಧರ್ಮಪರ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯ ತೊಡಗಿಸಿಕೊಂಡಿದ್ದಾರೆ. ಒಂದೇ ಕಪ್ಪು ಚುಕ್ಕೆ ಅವರ ಮೇಲಿಲ್ಲ. ಔರಾದನಲ್ಲಿ ವಿವಿಧ ಸಮಾಜಗಳ ಸಮುದಾಯ ಭವನಗಳ ನಿರ್ಮಾಣಕ್ಕೆ ಶಾಸಕರು ತಮ್ಮ ಸ್ವಂತ ಜಮೀನಿನಲ್ಲಿ 3 ಎಕರೆ ದಾನವಾಗಿ ನೀಡಿದ್ದಾರೆ. ಬಡ ಬಗ್ಗರಿಗೆ ದಾನ ಮಾಡುವ ಉದಾರ ವ್ಯಕ್ತಿತ್ವದವರು. ಅಂತಹದ್ದರಲ್ಲಿ ಭೂಮಿ ಕಬಳಿಸುತ್ತಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿರುವುದನ್ನು ಗಮನಿಸಿದರೆ, ಇಂತಹ ಆರೋಪಗಳ ಹಿಂದಿನ ಉದ್ದೇಶವೇನು ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ದೀಪಕ ಪಾಟೀಲ್ ಅವರ ಇತಿಹಾಸವೇ ಅಕ್ರಮ, ಮೋಸ, ವಂಚನೆಯಿಂದ ಕೂಡಿದೆ. ಎಲ್ಲೆಲ್ಲಿ ಹೋಗಿದ್ದಾರೆ ಅಲ್ಲಲ್ಲಿ ವಿಶ್ವಾಸದ್ರೋಹದ ಕೆಲಸ ಮಾಡಿದ್ದಾರೆ. ಶಾಸಕ ಪ್ರಭು ಚವ್ಹಾಣ್ ಅವರೊಂದಿಗೂ ಗುರುತಿಸಿಕೊಂಡು, ಅವರಿಂದಲೂ ಸಾಕಷ್ಟು ಪ್ರಯೋಜನ ಪಡೆದು ನಂತರ ಅವರ ವಿರುದ್ಧವೇ ಆರೋಪಗಳನ್ನು ಮಾಡುತ್ತಿದ್ದಾರೆ. ಧೋಖಾ ಮಾಡೋದು, ಲೂಟಿ ಮಾಡೋದೇ ಇವರ ಕಾಯಕ ಎಂಬಂತೆ ಕಾಣುತ್ತಿದ್ದು, ಉಂಡ ಎಡೆಯನ್ನೇ ಒದೆಯುವ ಚಾಳಿ ಇವರದ್ದಾಗಿದೆ ಎಂದು ದೂರಿದ್ದಾರೆ.
ಜನಹಿತ ಕಾರ್ಯಗಳಿಗಾಗಿ ದೂರುಗಳನ್ನು ಕೊಡುವುದರಲ್ಲಿ ತಪ್ಪಿಲ್ಲ. ಆದರೆ ಅದರ ಹಿಂದಿನ ಉದ್ದೇಶ ಸಮಾಜಪರ ಕಾಳಜಿಯಿರಬೇಕು. ಆದರೆ ಶಾಸಕರ ವಿಷಯದಲ್ಲಿ ಅವರನ್ನು ತೇಜೋವಧೆ ಮಾಡುವಂತೆ ಕಾಣುತ್ತಿದೆ. ಮೇಲಾಗಿ ಶಾಸಕರು ದಲಿತರೆಂಬ ಕಾರಣದಿಂದ ಅವರನ್ನು ತುಳಿಯುವ ಹುನ್ನಾರಗಳು ನಡೆಯುತ್ತಿವೆ. ಅವರು ಔರಾದ(ಬಿ) ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮಾಡುತ್ತಿರುವ ಕೆಲಸಗಳನ್ನು ಸಹಿಸಲು ಕೆಲವರಿಗೆ ಸಾಧ್ಯವಾಗುತಿಲ್ಲ. ಹಾಗಾಗಿ ಅವರ ವರ್ಚಸ್ಸಿಗೆ ಧಕ್ಕೆ ತರಲು, ಅವರ ತೇಜೋವಧೆ ಮಾಡಲು ಭಿನ್ನ ಭಿನ್ನ ದಾರಿಗಳನ್ನು ಹುಡುಕುತ್ತಿದ್ದಾರೆ. ಶಾಸಕರು ಯಾವುದೇ ತಪ್ಪು ಮಾಡಿಲ್ಲ. ಇಂತಹ ವ್ಯರ್ಥ ಪ್ರಯತ್ನಗಳಿಗೆ ಅವರು ಹೆದರುವುದಿಲ್ಲ ಎಂದಿದ್ದಾರೆ.
ದೀಪಕ ಪಾಟೀಲ್ ಇತ್ತೀಚೆಗೆ ಚಾಂದೋರಿ ಗ್ರಾಮ ಪಂಚಾಯಿತಿಯಲ್ಲಿ ದೊಡ್ಡ ಹಗರಣ ನಡೆಸಿರುವುದು ಬೆಳಕಿಗೆ ಬಂದಿದೆ. ಪೊಲೀಸರಿಂದ ಬಂಧಿತನಾಗಿ ಒಂದು ದಿನ ಜೈಲು ಸಹ ನೋಡಿ ಬಂದಿದ್ದಾರೆ. ಈ ಅಕ್ರಮ ಪ್ರಕರಣದ ತನಿಖೆ ನಡೆಯುತ್ತಿದೆ. ಯಾವುದೇ ಸ್ಪಷ್ಟ ಆದಾಯದ ಮೂಲಗಳಿಲ್ಲದಿದ್ದರೂ ಬೀದರ್ ಹಾಗೂ ಸ್ವಗ್ರಾಮದಲ್ಲಿ ದೊಡ್ಡ ಮನೆಗಳು, ಐಷಾರಾಮಿ ಕಾರುಗಳು ಮತ್ತು ಮಕ್ಕಳನ್ನು ವಿದೇಶದಲ್ಲಿ ಓದಿಸುತ್ತಿರುವುದನ್ನು ನೋಡಿದರೆ ಹಗರಣ ಮಾಡಿರುವುದು ನಿಜವೆಂದು ತೋರುತ್ತಿದೆ. ಇದರಿಂದ ಜನರ ಚಿತ್ತ ಬೇರೆಡೆಗೆ ಗಮನ ಸೆಳೆಯಲು ಇಲ್ಲಸಲ್ಲದ ದೂರುಗಳನ್ನು ಕೊಡುತ್ತಿದ್ದಾರೆ. ರಾಜಕೀಯ ಅಥವಾ ವೈಯಕ್ತಿಕ ದ್ವೇಷದಿಂದ ಆಧಾರರಹಿತ ಆರೋಪಗಳನ್ನು ಮಾಡಿ ಶಾಸಕರ ಘನತೆಗೆ ಧಕ್ಕೆ ತರುವುದನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ. ಶಾಸಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದೇ ಕಾಯಕವಾಗಬಾರದು. ಶಾಸಕರ ಘನತೆ ಮತ್ತು ಪ್ರತಿಷ್ಠೆಗೆ ಧಕ್ಕೆ ತರುವವರ ವಿರುದ್ಧ ಕಾನೂನುಬದ್ಧ ಹೋರಾಟ ನಡೆಸಲಾಗುವುದು. ಮಾನಹಾನಿ ಹಾಗೂ ನಷ್ಟ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.