

ಬಸವಕಲ್ಯಾಣ: ವಿಶ್ವಸ್ತ್ರೀ ಕುಲದ ಸ್ವಾತಂತ್ರ್ಯ, ಸ್ವಾಭಿಮಾನ, ಸದಾಚಾರ, ಸದ್ಭಕ್ತಿಯಂಥ ಮಹೋನ್ನತ ಮೌಲ್ಯಗಳಿಗೆ ಪ್ರತಿನಿಧಿಯಾಗಿ ವೈರಾಗ್ಯನಿಧಿ ಅಕ್ಕ ಮಹಾದೇವಿ ಕಾಣುತ್ತಾರೆ. ಅಕ್ಕ ಅಸಾಧ್ಯವನ್ನು ಸಾಧ್ಯವಾಗಿ ತೋರಿಸಿದ ಜಗತ್ತಿನ ಪ್ರಪಥಮ ಸ್ತ್ರೀ ವಾದಿ ಚಂತಕಿ, ಪ್ರಗತಿಪರ ವಿಚಾರವಾದಿಯಾಗಿದ್ದಾರೆ. ಅಕ್ಕನ ವ್ಯಕ್ತಿತ್ವ, ವಿಚಾರ ಶರಣರ ದೃಷ್ಟಿಯಲ್ಲಿ ನೋಡಬೇಕು ಎಂದು ಬೆಂಗಳೂರಿನ ಲೋಕಾಯುಕ್ತ ನ್ಯಾಯವಾದಿ ಸಂತೋಷ ನಾಗರಾಳೆ ಹೇಳಿದರು.
ಇಲ್ಲಿಯ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಇಲ್ಲಿನ ಹರಳಯ್ಯನವರ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆಯಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಜಗತ್ತಿನ ಮೊದಲ ಸ್ತ್ರೀ ತತ್ವಜ್ಞಾನಿ ಮಹಾದೇವಿಯಕ್ಕ ಗೋಷ್ಠಿಯಲ್ಲಿ ಅನುಭಾವ ನೀಡಿ, ಅಕ್ಕನ ವ್ಯಕ್ತಿತ್ವ, ಆದರ್ಶ, ಆಶಯಗಳ ಕುರಿತು ವಚನಗಳನ್ನು ಆಧರಿಸಿ ವಿಶ್ಷೇಷಣಾತ್ಮಕ ಅನುಭಾವ ಮಂಡಿಸಿ,ಅಕ್ಕನ ಬಗ್ಗೆ ಬಸವಣ್ಣನವರು, ಚೆನ್ನಬಸವಣ್ಣನವರು, ಅಲ್ಲಮಪ್ರಭುಗಳು ಏನು ಹೇಳಿದ್ದಾರೆ ನೋಡಬೇಕು ಎಂದರು.
ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದನೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು. ನಾನು ನನ್ನದು ಎಂಬುದನ್ನು ಕರಗಿಸಿಕೊಂಡರೆ ಉತ್ತಮ ಮನುಷ್ಯ ಆಗಬಲ್ಲರು. ಅರಿವು ಎಂದರೆ ಆನಂದ, ಜ್ಞಾನ. ನಿರಂಹಾಕಾರ, ಜ್ಞಾನದ ಜ್ಯೋತಿ ಈ ಇರಿತ ಅರಿವು ಮೂಡಬೆಕಾದರೆ ಜ್ಞಾನದ ಕಡೆ ಗಮನ ಕೊಡಿ ಎಂದು ಅಕ್ಕ ಹೇಳಿದ್ದಾರೆ. ಭಗವಂತನನ್ನು ಕಾಣುವ ಮೂಲಗಳನ್ನು ಅಕ್ಕ ತೋರಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬನಲ್ಲಿ ಬೆರೆತುಕೊಂಡಾಗ ಪೂಜೆಯಾಗುತ್ತದೆ. ಅಕ್ಕನನ್ನು ಅರ್ಥಮಾಡಿಕೊಳ್ಳಬೇಕಾದರೆ ನಮ್ಮನ್ನು ನಾವು ಸಮರ್ಪಣೆ ಮಾಡಿಕೊಳ್ಳಬೇಕು ಎಂದರು.
ಉದ್ಘಾಟನೆ ನೆರವೇರಿಸಿದ ಬಸವಕಲ್ಯಾಣದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಯಶ್ವಂತ ತವಾರೆ ಮಾತನಾಡಿ, ಬಸವಣ್ಣನವರು, ಶರಣರು, ದಾರ್ಶನಿಕರು ಒಳ್ಳೆಯ ವಿಚಾರಗಳನ್ನು ಹೇಳಿದ್ದಾರೆ. ಆದರೆ ಅವುಗಳನ್ನು ನಿತ್ಯ ಜೀವನದಲ್ಲಿ ಅನುಷ್ಠಾನಕ್ಕೆ ತರುವ, ಪಾಲಿಸುವ ಕೆಲಸ ಇನ್ನು ಆಗಬೇಕಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಆಶೀರ್ವಚನ ನೀಡಿ, ಅಕ್ಕಮಹಾದೇವಿಯವರ ವಚನಗಳ ಮುಖ್ಯ ಸಂದೇಶವೆಂದರೆ ದೇಹ ಸಂಪತ್ತು ಮತ್ತು ಲೌಕಿಕ ಸುಖಗಳು ಶಾಶ್ವತವಲ್ಲ ಆತ್ಮದ ಅರಿವೇ ಮುಖ್ಯ ಎಂದು ಹೇಳಿದರು.
ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ಹಣಮಂತರಾವ ಕುಲಕರ್ಣಿ, ಬಿಡಿಪಿಸಿ ನಿರ್ದೇಶಕ ಭದ್ರಿನಾಥ ಪಾಟೀಲ, ಬಿಡಿವಿಸಿ ಕೋಶಾಧ್ಯಕ್ಷ ಶಿವರಾಜ ಶಾಶೆಟ್ಟಿ, ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಗುರುನಾಥ ಗಡ್ಡೆ, ನಿವೃತ್ತ ಎಇಇ ಮಲ್ಲಿಕಾರ್ಜುನ ಮೊಳಕೇರಿ, ಯಶಸ್ವಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕಿ ಕಾವೇರಿ ಪಾಟೀಲ. ಉದ್ಯಮಿ ಬಸವರಾಜ ಮುರುಡ, ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಅರ್ಜುನ ಕನಕ, ಉಪನ್ಯಾಸಕ ನರಸಿಂಗರಡ್ಡಿ ಗದಲೇಗಾಂವ, ಜಗನ್ನಾಥ ಕುಶನೂರೆ, ಮಂಗಲಾ ಬಿರಾದಾರ, ಜಗದೀಶ ಮೂಲಗೆ ಇದ್ದರು. ಸಂಗಮೇಶ್ವರ ಭಜನಾ ಮಂಡಳಿಯಿಂದ ವಚನ ಭಜನೆ ನಡೆಯಿತು. ಮಮತಾ ಭೂಸೆ ಸ್ವಾಗತಿಸಿದರು. ಪೂಜಾ ನಾಗೇಶ ಗಂಗು ನಿರೂಪಣೆ ಮಾಡಿದರು. ಆಕಾಶ ಮೊಳಕೇರಿ ವಚನ ಗಾಯನ ಮಾಡಿದರು. ಕನ್ನಡ ಮತ್ತು ಸಂಸತಿ ಇಲಾಖೆ ಬೀದರ್ ಪ್ರಾಯೋಜಕತ್ವದಲ್ಲಿ ನೃತ್ಯಾಂಗನ ನಾಟ್ಯ ಕಲಾ ಕೇಂದ್ರ ಬೀದರ್ ಇವರಿಂದ ಪೂರ್ಣಚಂದ್ರ ಮೈನಾಳೆ ನಿರ್ದೇಶನದಲ್ಲಿ ನಡೆದ ವಚನ ನೃತ್ಯಗಳು ಗಮನ ಸೆಳೆದವು.