ಕೆಪಿಎಸ್​ಸಿ ಹಗರಣ: ಇಡಿ ಅಧಿಕಾರಿಗಳಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಹಾಲಿ ಸದಸ್ಯೆ ಬಿ.ವಿ. ಗೀತಾ ಬಂಧನ! KPSC Recruitment Scam

ಇಂದು ಬೆಳಗಿನ ಜಾವವೇ ಬೆಂಗಳೂರಿನ ಸಂಜಯನಗರ ಸಮೀಪದ ಡಾಲರ್ಸ್ ಕಾಲೋನಿಯಲ್ಲಿರುವ ಶಿವಶಂಕರಪ್ಪ ಸಾಹುಕಾರ್ ಅವರ ಅಪಾರ್ಟ್‌ಮೆಂಟ್‌ಗೆ ಅನಿರೀಕ್ಷಿತವಾಗಿ ನುಗ್ಗಿದ ಇಡಿ ಅಧಿಕಾರಿಗಳ ತಂಡವು ದಾಖಲೆಗಳ ಮಹಾಪೂರವನ್ನೇ ಪರಿಶೀಲಿಸಿತು.
KPSC Recruitment Scam
ಕೆಪಿಎಸ್​ಸಿ ಹಗರಣ: ಇಡಿ ಅಧಿಕಾರಿಗಳಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಹಾಲಿ ಸದಸ್ಯೆ ಬಿ.ವಿ. ಗೀತಾ ಬಂಧನ
Published on: 

ಬೆಂಗಳೂರು: ಪಶು ವೈದ್ಯಾಧಿಕಾರಿಗಳ ಹುದ್ದೆಗಳ ( KPSC Recruitment Scam ) ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಮತ್ತು ಕೋಟ್ಯಂತರ ರೂಪಾಯಿಗಳ ಲಂಚದ ಹಗರಣದ ತನಿಖೆಯನ್ನು ತೀವ್ರಗೊಳಿಸಿರುವ ಇಡಿ ಅಧಿಕಾರಿಗಳು, ಕೆಪಿಎಸ್​ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಆಯೋಗದ ಹಾಲಿ ಸದಸ್ಯೆ ಬಿ.ವಿ. ಗೀತಾ ಅವರನ್ನು ಬಂಧಿಸಿದೆ.

ಇಂದು ಬೆಳಗಿನ ಜಾವವೇ ಬೆಂಗಳೂರಿನ ಸಂಜಯನಗರ ಸಮೀಪದ ಡಾಲರ್ಸ್ ಕಾಲೋನಿಯಲ್ಲಿರುವ ಶಿವಶಂಕರಪ್ಪ ಸಾಹುಕಾರ್ ಅವರ ಅಪಾರ್ಟ್‌ಮೆಂಟ್‌ಗೆ ಅನಿರೀಕ್ಷಿತವಾಗಿ ನುಗ್ಗಿದ ಇಡಿ ಅಧಿಕಾರಿಗಳ ತಂಡವು ದಾಖಲೆಗಳನ್ನು ಪರಿಶೀಲಿಸಿತು. ನೇಮಕಾತಿಗೆ ಸಂಬಂಧಿಸಿದ ರಹಸ್ಯ ಕಡತಗಳು, ಬ್ಯಾಂಕ್ ಖಾತೆಗಳ ಎಂಟ್ರಿಗಳು ಹಾಗೂ ಅಕ್ರಮವಾಗಿ ಸಂಪಾದಿಸಿರುವ ಸ್ಥಿರ-ಚರಾಸ್ತಿಗಳ ವಿವರಗಳನ್ನು ಕಲೆಹಾಕಿದ ಅಧಿಕಾರಿಗಳು, ಗಂಟೆಗಟ್ಟಲೆ ಸುದೀರ್ಘ ವಿಚಾರಣೆ ನಡೆಸಿ ಕೊನೆಗೆ ಸಾಹುಕಾರ್ ಅವರನ್ನು ಬಂಧಿಸಿದೆ.

ಈ ತನಿಖೆಯ ಬಿಸಿ ಕೇವಲ ಮಾಜಿ ಅಧ್ಯಕ್ಷರಿಗೆ ಮಾತ್ರವಲ್ಲದೆ, ಹಾಲಿ ಆಡಳಿತ ಮಂಡಳಿಗೂ ತೀವ್ರವಾಗಿ ತಟ್ಟಿದೆ. ತನಿಖೆಯ ದಿಕ್ಕನ್ನು ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಐಎಎಸ್ ಅಧಿಕಾರಿ ಜ್ಞಾನೇಶ್ ಕುಮಾರ್ ಅವರು ನೀಡಿದ ರಹಸ್ಯ ಸುಳಿವುಗಳು ಹಾಗೂ ಮಹತ್ವದ ಮಾಹಿತಿಗಳನ್ನು ಆಧರಿಸಿ ಇಡಿ ಅಧಿಕಾರಿಗಳು ಅತ್ಯಂತ ಚಾಕಚಕ್ಯತೆಯಿಂದ ಕಾರ್ಯಾಚರಣೆ ನಡೆಸಿದ್ದಾರೆ. ಈ ಸುಳಿವಿನ ಜಾಡು ಹಿಡಿದು ಹೊರಟ ತನಿಖಾ ತಂಡವು, ಕೆಪಿಎಸ್‌ಸಿ ಹಾಲಿ ಸದಸ್ಯೆ ಬಿ.ವಿ. ಗೀತಾ ಅವರ ಮನೆಗೂ ದಾಳಿ ನಡೆಸಿ, ಅವರ ಬಳಿ ಇದ್ದ ಆಪಾದಿತ ದಾಖಲೆಗಳನ್ನು ಜಪ್ತಿ ಮಾಡಿ ವಶಕ್ಕೆ ಪಡೆದಿದೆ.

Also Read
5 ಪ್ರತ್ಯೇಕ ಕಮಿಷನರೇಟ್‌ಗಳ ಸ್ಥಾಪನೆ! 1,022 ಹೊಸ ಹುದ್ದೆಗಳ ಸೃಜನೆ: ಗೃಹ ಸಚಿವ ಪ್ರಿಯಾಂಕ್‌ ಖರ್ಗೆ
KPSC Recruitment Scam

ಆಯ್ಕೆ ಪಟ್ಟಿಗಳ ತಯಾರಿಕೆಯಲ್ಲಿ ಯಾವ ರೀತಿಯ ಮ್ಯಾನೇಜ್‌ಮೆಂಟ್ ನಡೆದಿತ್ತು ಮತ್ತು ಉದ್ಯೋಗಾಕಾಂಕ್ಷಿಗಳಿಂದ ಕೋಟ್ಯಂತರ ಹಣವನ್ನು ಯಾವ ಮಾರ್ಗದ ಮೂಲಕ ಲಪಟಾಯಿಸಲಾಗಿದೆ ಎಂಬ ಗಂಭೀರ ಪ್ರಶ್ನೆಗಳಿಗೆ ಈಗ ಇಡಿ ಅಧಿಕಾರಿಗಳು ಉತ್ತರನ್ನು ಹುಡುಕುತ್ತಿದ್ದಾರೆ. ಹುದ್ದೆಗಳ ಮಾರಾಟ ಮತ್ತು ಹಣದ ಹೊಳೆಯಲ್ಲಿ ತೇಲಾಡಿದವರ ಕರಾಳ ಮುಖಗಳು ಒಂದೊಂದಾಗಿ ಹೊರಬರುತ್ತಿದ್ದು, ವಶಕ್ಕೆ ಪಡೆದ ಅಧಿಕಾರಿಗಳನ್ನು ಮುಖಾಮುಖಿ ಹಾಗೂ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಗಿದೆ.

ಒಂದೇ ದಿನದಲ್ಲಿ KPSC ಯ ಮಾಜಿ ಮುಖ್ಯಸ್ಥರು ಹಾಗೂ ಹಾಲಿ ಸದಸ್ಯೆ ಕೇಂದ್ರ ತನಿಖಾ ಸಂಸ್ಥೆಯ ಬಲೆಗೆ ಬಿದ್ದಿರುವುದು ಕರ್ನಾಟಕದ ರಾಜಕೀಯ ಮತ್ತು ಅಧಿಕಾರಶಾಹಿ ವಲಯದಲ್ಲಿ ತೀವ್ರ ಕಂಪನ ಸೃಷ್ಟಿಸಿದೆ. ಈ ಹಗರಣವು ಇನ್ನು ಯಾರ್ಯಾರ ಕದ ತಟ್ಟಲಿದೆಯೋ ಎಂಬ ಆತಂಕ ಆಡಳಿತ ವಲಯದಲ್ಲಿ ಗೂಡುಬಿಟ್ಟಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಚ್ಚರಿಯ ಸ್ಫೋಟಕ ಸತ್ಯಗಳು ಹೊರಬರುವ ಸಾಧ್ಯತೆ ದಟ್ಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net