

ಬೆಂಗಳೂರು: ದ್ವಿಚಕ್ರ ವಾಹನ ಸವಾರರ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಸಾರಿಗೆ ಇಲಾಖೆಯು, ರಾಜ್ಯದಲ್ಲಿ ಎಲ್ಲಾ ರೀತಿಯ ಹಾಫ್ ಹೆಲ್ಮೆಟ್‌ಗಳ ( Half Helmets ) ಬಳಕೆ ಮೇಲೆ ಸಂಪೂರ್ಣ ನಿಷೇಧ ಹೇರಿದೆ. ಕೇವಲ ಪೊಲೀಸ್ ತಪಾಸಣೆಯಿಂದ ತಪ್ಪಿಸಿಕೊಳ್ಳಲು ನಾಮಕಾವಸ್ಥೆಗೆ ತಲೆಗೆ ಹಾಕಿಕೊಳ್ಳುತ್ತಿದ್ದ ಸಣ್ಣ ಹೆಲ್ಮೆಟ್‌ಗಳಿಗೆ ಸಾರಿಗೆ ಇಲಾಖೆ ಬ್ರೇಕ್ ಹಾಕಿದೆ. ಇನ್ಮುಂದೆ ರಸ್ತೆಗೆ ಇಳಿಯುವ ಮುನ್ನ ನಿಮ್ಮ ಹೆಲ್ಮೆಟ್ ಗುಣಮಟ್ಟದ್ದಾಗಿದೆಯೇ ಎಂಬುದನ್ನು ಒಮ್ಮೆ ಖಚಿತಪಡಿಸಿಕೊಳ್ಳಬೇಕಿದೆ.
ಹಾಫ್ ಹೆಲ್ಮೆಟ್ ಧರಿಸಿ ಬೈಕ್ ಓಡಿಸಿದರೆ ಇನ್ಮುಂದೆ ಜೇಬಿಗೆ ಕತ್ತರಿ ಬೀಳುವುದು ಖಚಿತ. ಸಾರಿಗೆ ಇಲಾಖೆಯ ಹೊಸ ಆದೇಶದ ಪ್ರಕಾರ, ಐಎಸ್‌ಐ (ISI) ಅಥವಾ ಬಿಐಎಸ್ (BIS) ಗುಣಮಟ್ಟದ ಮಾನದಂಡಗಳಿಲ್ಲದ ಹಾಫ್ ಹೆಲ್ಮೆಟ್‌ಗಳನ್ನು ಧರಿಸಿದರೆ ನೇರವಾಗಿ 500 ರೂ. ದಂಡ ವಿಧಿಸಲಾಗುತ್ತದೆ. ಈ ಕಠಿಣ ನಿಯಮವು ಬೈಕ್ ಚಾಲಕರಿಗೆ ಮಾತ್ರವಲ್ಲದೆ, ಹಿಂಬದಿಯಲ್ಲಿ ಕುಳಿತುಕೊಳ್ಳುವವರಿಗೂ ಸಮಾನವಾಗಿ ಅನ್ವಯಿಸಲಿದ್ದು, ನಿಯಮ ಮೀರಿದರೆ ಇಬ್ಬರಿಗೂ ದಂಡದ ಬಿಸಿ ತಟ್ಟಲಿದೆ.
ಕೇವಲ ಸವಾರರನ್ನು ಮಾತ್ರ ಗುರಿಯಾಗಿಸದೆ, ಮಾರುಕಟ್ಟೆಯಲ್ಲಿ ಕಳಪೆ ಮಟ್ಟದ ಹಾಫ್ ಹೆಲ್ಮೆಟ್‌ಗಳನ್ನು ತಯಾರಿಸುವ ಉತ್ಪಾದಕರು ಹಾಗೂ ಅವುಗಳನ್ನು ಮಾರಾಟ ಮಾಡುವ ಅಂಗಡಿ ಮಾಲೀಕರ ಮೇಲೂ ಕಠಿಣ ಕಾನೂನು ಕ್ರಮ ಪ್ರಯೋಗಿಸಲು ಇಲಾಖೆ ಸಜ್ಜಾಗಿದೆ. ಒಂದು ಬಾರಿ ತಪ್ಪು ಮಾಡಿದರೆ 500 ರೂ. ದಂಡ ವಿಧಿಸಲಾಗುವುದು. ಒಂದು ವೇಳೆ ನಿರಂತರವಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಾ ಸಾಗಿದರೆ, ದಂಡದ ಮೊತ್ತವು ದುಪ್ಪಟ್ಟಾಗಿ 1,000 ರೂ.ಗೆ ಏರಿಕೆಯಾಗುವುದರ ಜೊತೆಗೆ ಮುಂದಿನ ಮೂರು ತಿಂಗಳ ಕಾಲ ನಿಮ್ಮ ಚಾಲನಾ ಪರವಾನಗಿ (DL) ಅಮಾನತುಗೊಳ್ಳುವ ಅಪಾಯವೂ ಎದುರಾಗಲಿದೆ.
ಬೈಕ್ ಹೆಲ್ಮೆಟ್ ವಿಚಾರ ಮಾತ್ರವಲ್ಲದೆ, ಇತರೆ ಸಂಚಾರ ನಿಯಮಗಳ ಉಲ್ಲಂಘನೆಗೂ ಸಾರಿಗೆ ಇಲಾಖೆ ಭಾರೀ ದಂಡದ ಅಸ್ತ್ರ ಪ್ರಯೋಗಿಸಿದೆ. ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಿದರೆ 1,500 ರಿಂದ 5,000 ರೂ.ವರೆಗೆ, ಕಾರುಗಳಲ್ಲಿ ಸೀಟ್ ಬೆಲ್ಟ್ ಧರಿಸದೆ ನಿರ್ಲಕ್ಷ್ಯ ತೋರಿದರೆ 500 ರಿಂದ 1,000 ರೂ.ವರೆಗೆ ದಂಡ ಕಟ್ಟಬೇಕಾಗುತ್ತದೆ. ಇನ್ನು ಸಿಗ್ನಲ್ ಜಂಪ್ ಮಾಡುವವರಿಗೆ ಹಾಗೂ ತ್ರಿಪಲ್ ರೈಡಿಂಗ್ ಮಾಡುವವರಿಗೂ ಕೂಡ ಕನಿಷ್ಠ 500 ರೂ.ಗಳಿಂದ ಆರಂಭವಾಗಿ ಸಾವಿರಾರು ರೂಪಾಯಿಗಳ ದಂಡದ ವಸೂಲಾತಿಗೆ ಪೊಲೀಸರು ಟೊಂಕಕಟ್ಟಿ ನಿಂತಿದ್ದಾರೆ.
ರಸ್ತೆಗಳಲ್ಲಿ ಅತಿವೇಗವಾಗಿ ವಾಹನ ಚಲಾಯಿಸುವವರು ಹಾಗೂ ಮಾನ್ಯತೆಯುಳ್ಳ ವಿಮೆ (Insurance) ಇಲ್ಲದೆ ಸಂಚರಿಸುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಇವರಿಗೆ 1,000 ರೂ.ಗಳಿಂದ 2,000 ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಇನ್ನು ಕುಡಿದು ವಾಹನ ಚಾಲನೆ ಮಾಡುವ 'ಡ್ರಿಂಕ್ ಅಂಡ್ ಡ್ರೈವ್' ಮಹಾಪರಾಧಕ್ಕೆ ಮೊದಲ ಬಾರಿಗೆ ಬಿದ್ದರೆ ಬರೋಬ್ಬರಿ 10,000 ರೂ. ದಂಡ ಅಥವಾ ಆರು ತಿಂಗಳ ತನಕ ಜೈಲು ವಾಸದ ಗಂಭೀರ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.
ಅತ್ಯಂತ ಗಂಭೀರ ವಿಚಾರವೆಂದರೆ, ಮನೆಯ ಅಪ್ರಾಪ್ತ ವಯಸ್ಕ ಮಕ್ಕಳಿಗೆ ದ್ವಿಚಕ್ರ ಅಥವಾ ನಾಲ್ಕು ಚಕ್ರ ವಾಹನಗಳನ್ನು ಚಲಾಯಿಸಲು ನೀಡುವ ಪೋಷಕರೇ ಇನ್ಮುಂದೆ ಎಚ್ಚೆತ್ತುಕೊಳ್ಳಬೇಕು. ಅಪ್ರಾಪ್ತರು ವಾಹನ ಚಾಲನೆ ಮಾಡುವಾಗ ಸಿಕ್ಕಿಬಿದ್ದರೆ, ನೇರವಾಗಿ ಪೋಷಕರ ಮೇಲೆಯೇ ಭಾರೀ ಹೊರೆ ಬೀಳಲಿದ್ದು, ಬರೋಬ್ಬರಿ 25,000 ರೂ. ದಂಡದೊಂದಿಗೆ ಗಂಭೀರ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ದಂಡದ ಭಯದಿಂದ ತಪ್ಪಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ರಸ್ತೆಯಲ್ಲಿ ನಿಮ್ಮ ಮತ್ತು ಇತರರ ಪ್ರಾಣ ರಕ್ಷಣೆಯೇ ಮುಖ್ಯ ಎಂಬ ಎಚ್ಚರಿಕೆಯನ್ನು ಸಾರಿಗೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಜಾಗೃತಿ ಮೂಡಿಸುತ್ತಿವೆ.