30 ಕೋಟಿ ರೂ. ಬಹುಮಾನ ಪಡೆದ್ರೂ ಸಿಗದ ಗುರುತು: ಕಲೆಕ್ಷನ್ ಗ್ಯಾಂಗ್‌ಗೆ ಹೆದರಿ ಕಣ್ಮರೆಯಾದ ಓಣಂ ಬಂಪರ್ ಅದೃಷ್ಟಶಾಲಿ! Onam Bumper

ಬಹುಮಾನ ಗೆದ್ದ ವ್ಯಕ್ತಿ ಇಂದು ಲಾಟರಿ ಕಚೇರಿಗೆ ತಮ್ಮ ವಿಜೇತ ಟಿಕೆಟ್ ಅನ್ನು ಸಲ್ಲಿಸಿ ಅಧಿಕೃತವಾಗಿ ಹಣವನ್ನು ಪಡೆದಿದ್ದಾರೆ. ಲಕ್ಷಾಂತರ ಮಂದಿಯ ನಡುವೆ 30 ಕೋಟಿ ರೂ. ಗೆದ್ದ ಆ ಏಕೈಕ ಅದೃಷ್ಟಶಾಲಿಯನ್ನು ನೋಡಲು ಇಡೀ ಕೇರಳ ರಾಜ್ಯದ ಜನತೆ ಎದುರು ನೋಡುತ್ತಿದೆ.
Onam Bumper
ಓಣಂ ಬಂಪರ್
Published on: 

ತಿರುವನಂತಪುರಂ: ಕೇರಳದ ತಿರುವೋಣಂ ಬಂಪರ್ ಲಾಟರಿಯಲ್ಲಿ ( Onam Bumper ) ಬರೋಬ್ಬರಿ 30 ಕೋಟಿ ರೂಪಾಯಿಯ ಭರ್ಜರಿ ಜಾಕ್‌ಪಾಟ್ ಗೆದ್ದ ಅದೃಷ್ಟಶಾಲಿ ಅಂತಿಮವಾಗಿ ತನ್ನ ಲಾಟರಿ ಟಿಕೆಟ್​ ಅನ್ನು ಸಲ್ಲಿಸಿ, ಹಣ ಪಡೆದುಕೊಂಡಿದ್ದಾರೆ. ಆದರೆ, ಆ ಅದೃಷ್ಟಶಾಲಿ ಯಾರೆಂಬ ಕುತೂಹಲ ಮಾತ್ರ ಹಾಗೇ ಜೀವಂತವಾಗಿ ಉಳಿದುಕೊಂಡಿದೆ.

ಬಹುಮಾನ ಗೆದ್ದ ವ್ಯಕ್ತಿ ಇಂದು ಲಾಟರಿ ಕಚೇರಿಗೆ ತಮ್ಮ ವಿಜೇತ ಟಿಕೆಟ್ ಅನ್ನು ಸಲ್ಲಿಸಿ ಅಧಿಕೃತವಾಗಿ ಹಣವನ್ನು ಪಡೆದಿದ್ದಾರೆ. ಲಕ್ಷಾಂತರ ಮಂದಿಯ ನಡುವೆ 30 ಕೋಟಿ ರೂ. ಗೆದ್ದ ಆ ಏಕೈಕ ಅದೃಷ್ಟಶಾಲಿಯನ್ನು ನೋಡಲು ಇಡೀ ಕೇರಳ ರಾಜ್ಯದ ಜನತೆ ಎದುರು ನೋಡುತ್ತಿದೆ. ಆದರೆ, ಆತನ ಹೆಸರಾಗಲಿ ಅಥವಾ ಗುರುತಾಗಲಿ ಈವರೆಗೂ ಬಹಿರಂಗವಾಗಿಲ್ಲ. ಲಾಟರಿ ರಿಸಲ್ಟ್​ ಹೊರಬಿದ್ದು ಹಲವು ದಿನಗಳೇ ಕಳೆದಿವೆ. ಅಲ್ಲದೆ, ಇದೀಗ ಬಹುಮಾನದ ಹಣ ಕೂಡ ಸ್ವೀಕೃತವಾಗಿದೆ. ಆದರೂ ಆ ಅದೃಷ್ಟಶಾಲಿ ಯಾರು ಅನ್ನೋದು ಮಾತ್ರ ಇನ್ನೂ ಯಾರಿಗೂ ಗೊತ್ತಿಲ್ಲ.

Also Read
ಓಣಂ ಬಂಪರ್​ ಲಾಟರಿ ಬಹುಮಾನ ಬರಲಿಲ್ಲ ಅಂತ ಅಂಗಡಿ ಮಾಲಕಿಗೆ ಚಾಕು ಇರಿದ ವ್ಯಕ್ತಿ: 30 ಕೋಟಿ ಒಲಿದಿದ್ದು ಯಾರಿಗೆ? Onam Bumper
Onam Bumper

ಗುರುತು ಬೇಡ ಎಂದ ವಿಜೇತ

30 ಕೋಟಿ ರೂ. ಗೆದ್ದ ವ್ಯಕ್ತಿ ತಮ್ಮ ವೈಯಕ್ತಿಕ ವಿವರಗಳನ್ನು ಅಥವಾ ಗುರುತನ್ನು ಬಹಿರಂಗಪಡಿಸಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಯಾವುದೇ ಕಾರಣಕ್ಕೂ ನನ್ನ ಹೆಸರಾಗಲಿ ಅಥವಾ ವಿಳಾಸವಾಗಲಿ ಯಾರಿಗೂ ತಿಳಿಸಬೇಡಿ ಎಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಈ ಕಾರಣಕ್ಕಾಗಿ ಲಾಟರಿ ಇಲಾಖೆಯು ವಿಜೇತರ ಹೆಸರನ್ನು ಗೌಪ್ಯವಾಗಿರಿಸಿದೆ.

'TL 360615' ಟಿಕೆಟ್‌ಗೆ ಒಲಿದ ಅದೃಷ್ಟ

ಈ ಬಾರಿಯ ತಿರುವೋಣಂ ಬಂಪರ್ ಲಾಟರಿಯಲ್ಲಿ ‘TL 360615’ ಸಂಖ್ಯೆಯ ಲಾಟರಿ ಟಿಕೆಟ್‌ಗೆ ಪ್ರಥಮ ಬಹುಮಾನ ಒಲಿದುಬಂದಿದೆ. ಈ ಅದೃಷ್ಟದ ಟಿಕೆಟ್ ಅನ್ನು ಕೇರಳದ ತಳಿಪರಂಬಾ (Thaliparamba) ಪ್ರದೇಶದಲ್ಲಿ ಮಾರಾಟ ಮಾಡಲಾಗಿತ್ತು. ತಿಂಗಳುಗಳ ಕಾಲ ದೇಶಾದ್ಯಂತ ಸಖತ್ ಸೌಂಡ್ ಮಾಡಿದ್ದ ಈ ಬಂಪರ್ ಲಾಟರಿಯ ಫಲಿತಾಂಶ ಪ್ರಕಟವಾದಾಗಿನಿಂದಲೂ, ಆ 30 ಕೋಟಿ ರೂ. ಗೆದ್ದ ಮಹಾಭಾಗ್ಯಶಾಲಿ ಯಾರು ಎಂಬ ಗುಸುಗುಸು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಗೌಪ್ಯತೆ ಕಾಪಾಡಿಕೊಳ್ಳಲು ಅಸಲಿ ಕಾರಣ

ಕಳೆದ ಕೆಲವು ವರ್ಷಗಳಿಂದ ಭರ್ಜರಿ ಬಂಪರ್ ಬಹುಮಾನ ಗೆದ್ದ ಅದೃಷ್ಟಶಾಲಿಗಳು ಬಹಿರಂಗವಾಗಿ ಮಾಧ್ಯಮಗಳ ಮುಂದೆ ಬರುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಸಾರ್ವಜನಿಕರು ಹಾಗೂ ಸ್ಥಳೀಯರಿಂದ ದೂರ ಉಳಿಯುವುದೇ ಆಗಿದೆ. ಅನಗತ್ಯ ಗಮನ ಸೆಳೆಯುವುದನ್ನು ತಪ್ಪಿಸಲು ಮತ್ತು ಸಹಾಯದ ಹೆಸರಿನಲ್ಲಿ ಹಣ ಕೇಳಿಕೊಂಡು ಬರುವ ಜನರಿಂದ ರಕ್ಷಣೆ ಪಡೆದುಕೊಳ್ಳಲು ವಿಜೇತರು ಮೌನ ವಹಿಸುತ್ತಿದ್ದಾರೆ. ಇದಕ್ಕೆ ಉದಾಹರಣೆಯೆಂಬಂತೆ, ಕೆಲ ವರ್ಷಗಳ ಹಿಂದೆ ತಿರುವನಂತಪುರದ ಅನೂಪ್ ಎಂಬವರು 25 ಕೋಟಿ ಓಣಂ ಬಂಪರ್ ಗೆದ್ದಾಗ ನೇರವಾಗಿ ಮಾಧ್ಯಮಗಳ ಮುಂದೆ ಬಂದು ನಂತರ ತೀವ್ರ ತೊಂದರೆಗಳನ್ನು ಎದುರಿಸಬೇಕಾಗಿ ಬಂದಿತ್ತು.

ವಿಜೇತರ ಕೈ ಸೇರಲಿದೆ 16.47 ಕೋಟಿ ರೂಪಾಯಿ

ಸರ್ಕಾರಿ ನಿಯಮಗಳ ಪ್ರಕಾರ 30 ಕೋಟಿ ರೂ. ಬಂಪರ್ ಮೊತ್ತಕ್ಕೆ ವಿವಿಧ ತೆರಿಗೆಗಳು (Tax), ಸೆಸ್ ಹಾಗೂ ಲಾಟರಿ ಏಜೆಂಟ್ ಕಮಿಷನ್ ಕಡಿತಗೊಳ್ಳಲಿದೆ. ಎಲ್ಲಾ ಕಡಿತಗಳೂ ಹೋಗಿ ಅಂತಿಮವಾಗಿ ಆ ಅದೃಷ್ಟಶಾಲಿ ವಿಜೇತರ ಕೈಗೆ ನಿಖರವಾಗಿ ಸುಮಾರು 16.47 ಕೋಟಿ ರೂಪಾಯಿಗಳು ದೊರೆಯಲಿವೆ.

Also Read
ಅ.17ರಂದು ಶುಕ್ರಾದಿತ್ಯ ರಾಜಯೋಗ ಸೃಷ್ಟಿ: ಈ 4 ರಾಶಿಯವರಿಗೆ ಶುಕ್ರದೆಸೆ ಆರಂಭ, ಹರಿದುಬರಲಿದೆ ಅನಿರೀಕ್ಷಿತ ಆದಾಯ! Astrology
Onam Bumper

ಪ್ರಮುಖ ಬಹುಮಾನಗಳು

ದ್ವಿತೀಯ ಬಹುಮಾನ ತಲಾ 1 ಕೋಟಿ ರೂ., ತೃತೀಯ ಬಹುಮಾನ 25 ಲಕ್ಷ ರೂ., ನಾಲ್ಕನೇ ಬಹುಮಾನ 5 ಲಕ್ಷ ರೂ. ಹಾಗೂ ಐದನೇ ಬಹುಮಾನ 2 ಲಕ್ಷ ರೂ. ನೀಡಲಾಗಿದೆ. ಇದರೊಂದಿಗೆ 5000, 2000, 1000 ಮತ್ತು 500 ರೂ.ಗಳ ಸಮಾಧಾನಕರ ಬಹುಮಾನಗಳೂ ಕೊಡಲಾಗಿದೆ.

ಮೊತ್ತ ಪಡೆಯುವ ವಿಧಾನ

30 ಕೋಟಿ ರೂ.ಗಳ ಪ್ರಥಮ ಬಹುಮಾನಕ್ಕೆ ಅರ್ಹರಾದವರು ಲಾಟರಿ ಇಲಾಖೆಗೆ ಮಾಹಿತಿ ನೀಡಬೇಕು. ಅಗತ್ಯ ದಾಖಲೆಗಳೊಂದಿಗೆ ಟಿಕೆಟ್ ಸಲ್ಲಿಸಿದಾಗ, ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು ಸುಮಾರು 15 ರಿಂದ 20 ದಿನಗಳಲ್ಲಿ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

ಐತಿಹಾಸಿಕ ದಾಖಲೆ

ರಾಜ್ಯ ಲಾಟರಿ ಇತಿಹಾಸದಲ್ಲೇ ಮೊದಲ ಬಾರಿಗೆ ಮುದ್ರಿಸಲಾದ ಎಲ್ಲಾ 90 ಲಕ್ಷ (9 ಮಿಲಿಯನ್) ಟಿಕೆಟ್‌ಗಳು ಸಂಪೂರ್ಣವಾಗಿ ಮಾರಾಟವಾಗಿವೆ. 30 ಕೋಟಿ ರೂ. ಪ್ರಥಮ ಬಹುಮಾನದ ಈ ಬಂಪರ್ ಟಿಕೆಟ್‌ಗಳ ಮಾರಾಟದಲ್ಲಿ ಪಾಲಕ್ಕಾಡ್ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ (20,95,300 ಟಿಕೆಟ್‌ಗಳು). ತ್ರಿಸ್ಸೂರು ಎರಡನೇ ಸ್ಥಾನದಲ್ಲಿದ್ದರೆ (10,62,000), ತಿರುವನಂತಪುರಂ ಮೂರನೇ ಸ್ಥಾನದಲ್ಲಿದೆ (8,64,100).

ಅಂದಹಾಗೆ, ಒಂದೇ ಒಂದು ಲಾಟರಿ ಟಿಕೆಟ್ ಕೇವಲ ಕೆಲವೇ ಕ್ಷಣಗಳಲ್ಲಿ ಸಾಧಾರಣ ವ್ಯಕ್ತಿಯೊಬ್ಬರ ಬದುಕಿನ ಆರ್ಥಿಕ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸಿರುವ ಈ ಅಪರೂಪದ ಘಟನೆ ಈಗ ಕೇರಳ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net