

ಸರ್ವರ್ ಸಮಸ್ಯೆ ಶಾಶ್ವತ ಪರಿಹಾರ ನೀಡಿ
| ಪಡಿತರ ವಿತರಕರ ಸಂಘದಿಂದ ಮನವಿ |
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಪ್ರತಿ ತಿಂಗಳು ಪಡಿತರ ವಿತರಣೆ ವೇಳೆ ಆಹಾರ ಇಲಾಖೆ ಸರ್ವರ್ ಸಮಸ್ಯೆಯಿಂದ ರಾಜ್ಯಾದ್ಯಂತ ಪಡಿತರ ವಿತರಕ ಅಂಗಡಿ ಮಾಲೀಕರಿಗೆ ಪಡಿತರ ವಿತರಣೆಗೆ ತೊಂದರೆಯಾಗುತ್ತಿದ್ದು, ಸರ್ವರ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.
ರಾಜ್ಯದ ೨೨ ಸಾವಿರ ನ್ಯಾಯ ಬೆಲೆ ಅಂಗಡಿ ಮಾಲೀಕರು ಪಡಿತರ ಚೀಟಿದಾರರಿಗೆ ಪಡಿತರ ಧಾನ್ಯ ನೀಡಲು ಸರ್ವರ್ ಸಮಸ್ಯೆಯಾಗುತ್ತಿದೆ. ನಿಗದಿತ ಅವಧಿಯೊಳಗೆ ಪಡಿತರ ನೀಡಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರದ ಜನಪ್ರೀಯ ಯೋಜನೆ ಅನ್ನಭಾಗ್ಯದ ಅಕ್ಕಿ ಜನರಿಗೆ ಸಕಾಲದಲ್ಲಿ ತಲುಪಿಸಲು ಸರ್ವರ್ ಅಡ್ಡಿಯಾಗುತ್ತಿದೆ. ಪಡಿತರ ಅಕ್ಕಿ ಪಡೆಯಲು ನ್ಯಾಯಬೆಲೆ ಅಂಗಡಿ ಮುಂದೆ ಬಡ ಜನತೆ ಅಲೆಯುವಂತಾಗಿದೆ. ಇದರಿಂದ ಪಡಿತರ ವಿತರಕ ಅಂಗಡಿಯವರಿಗೆ ತೊಂದರೆಯಾಗುತ್ತಿದೆ ಎಂದು ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು.
ಪಡಿತರ ಪಡೆಯಲು ಬಡ ಜನತೆ ಕೂಲಿ ಕೆಲಸ ಬಿಟ್ಟು ಪಡಿತರಕ್ಕಾಗಿ ಸರತಿ ಸಾಲಿನಲ್ಲಿ ದಿನವಿಡಿ ನಿಲ್ಲುವಂತ್ತಾಗಿದೆ. ಆದ್ದರಿಂದ ಸರ್ಕಾರ ಆಹಾರ ಇಲಾಖೆಯ ಸರ್ವರ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು, ಜತೆಗೆ ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಡಿ ದರ್ಜೆ ನೌಕರರರೆಂದು ಪರಿಗಣಿಸಬೇಕು, ಈಗಿರುವ ಕಮೀಷನ್ ಹಣ ಕ್ವಿಂಟಾಲ್ಗೆ ೧೫೦ ರೂ, ಬದಲಾಗಿ ೨೫೦ ರೂ.ಹೆಚ್ಚಿಸಬೇಕು ಎಂದು ಮನವಿ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಯಿತು.
ಸಂಘಧ ಜಿಲ್ಲಾಧ್ಯಕ್ಷ ಶಾಂತಿನಾಥ ಬುಡವಿ, ಕಾರ್ಯದರ್ಶಿ ಚಂದ್ರಶೇಖರ ಬಾಗಡೆ, ಬಸವರಾಜ ದೊಡಮನಿ, ಬಾಳು ಪಾಟೀಲ, ಪ್ರಭು ಪಾಟೀಲ, ಉಮಾ ಸೋನವಾಡಕರ್ ಇತರರಿದ್ದರು.
ಕೋಟ್-
ಜಿಲ್ಲೆಯಲ್ಲಿ ಪಡಿತರ ಅಂಗಡಿಗಳಿಗೆ ಪಡಿತರ ಪೂರೈಕೆ ಈ ತಿಂಗಳು ತಡವಾಗಿದೆ. ಜತೆಗೆ ಸರ್ವರ್ ಸಮಸ್ಯೆಯಿಂದ ದಿನವಿಡಿ ಜನರು ಪಡಿತರಕ್ಕಾಗಿ ಕೆಲಸ ಕಾರ್ಯ ಬಿಟ್ಟು ಕಾಯುವಂತ್ತಾಗಿದೆ. ಆಹಾರ ಇಲಾಖೆ ತಾಂತ್ರಿಕ ವಿಭಾಗ ಕೂಡಲೇ ಸಮಸ್ಯೆ ನಿವಾರಿಸಬೇಕು. ಇಲ್ಲವಾದ್ದಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ.
ರಾಜಶೇಖರ ತಳವಾರ
ರಾಜ್ಯ ಉಪಾಧ್ಯಕ್ಷರು, ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ.