2024ನೇ BBMP ಎರಡನೇ ತಿದ್ದುಪಡಿ ವಿಧೇಯಕ ಅಂಗೀಕಾರ

dk (8)
Published on

ಬೆಳಗಾವಿ: ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ಸೋಮವಾರ ಡಿಕೆ ಶಿವಕುಮಾರ್​ ಮಂಡಿಸಿದ 2024ನೇ ಸಾಲಿನ ಬೃಹತ್ ಬೆಂಗಳೂರು ನಗರ ಪಾಲಿಕೆ(BBMP) ಎರಡನೇ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಲಾಯಿತು.

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸದವರಿಗೆ ಒಟಿಎಸ್ ಮೂಲಕ ತೆರಿಗೆ ಬಾಕಿ ಪಾವತಿಸಲು ನ.30ವರೆಗೂ ಕಾಲಾವಕಾಶ ನೀಡಲಾಗಿತ್ತು. ಈ ಮೂಲಕ ಪಾಲಿಕೆಗೆ 700 ಕೋಟಿ ರೂ. ಹೆಚ್ಚುವರಿಯಾಗಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. 3 ಲಕ್ಷ ಆಸ್ತಿಗಳಿಂದ 1200 ಕೋಟಿ ರೂ. ಬಾಕಿ ವಸೂಲಿ ಮಾಡಲಾಗಿದೆ. ಇನ್ನೂ 2.26 ಲಕ್ಷ ರೂ. ಆಸ್ತಿಗಳು ಬಾಕಿ ಇವೆ ಎಂದು ಡಿಕೆಶಿ ಸಭೆಗೆ ಮಾಹಿತಿ ನೀಡಿದರು.

2024ರ ನವೆಂಬರ್ 30ರವರೆಗೆ ಒಟ್ಟು 4,284 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ. ಈ ಸಂಬಂಧ ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಿದ್ದು, ಈಗ 2024ನೇ ಸಾಲಿನ ಬೃಹತ್ ಬೆಂಗಳೂರು ನಗರ ಪಾಲಿಕೆ ಎರಡನೇ ತಿದ್ದುಪಡಿ ವಿಧೇಯಕವನ್ನು ಅಂಗೀಕಾರ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಮಾಜಿ ಸಚಿವ ಅಶ್ವತ್ಥ್ ನಾರಾಯಣ, “ಉಪ ಮುಖ್ಯಮಂತ್ರಿಗಳು ಉತ್ತಮ ತಿದ್ದುಪಡಿ ವಿಧೇಯಕ ಮಂಡಿಸಿದ್ದು, ಆಸ್ತಿ ತೆರಿಗೆ ಸಂಗ್ರಹವನ್ನು ಹೆಚ್ಚಿಸಿದ್ದಾರೆ. ಇದುವರೆಗೂ ತೆರಿಗೆ ಪಾವತಿಸದವರು ಕೂಡ ತೆರಿಗೆ ಪಾವತಿಸುವಂತೆ ಮಾಡಲಾಗಿದೆ. ತೆರಿಗೆ ವಂಚನೆ ಮಾಡುವವರು, ಕಡಿಮೆ ಆಸ್ತಿ ಮೌಲ್ಯ ಘೋಷಣೆ ಮಾಡಿಕೊಳ್ಳುವವರನ್ನು ತೆರಿಗೆ ವ್ಯಾಪ್ತಿಗೆ ತಂದಿರುವುದು ಒಳ್ಳೆಯ ಬೆಳವಣಿಗೆ. ಮುಂದಿನ ದಿನಗಳಲ್ಲಿ ಆಸ್ತಿ ತೆರಿಗೆ ಹೆಚ್ಚಿಸಬೇಡಿ. ಆಸ್ತಿ ತೆರಿಗೆದಾರರ ಮೇಲೆ ಹೆಚ್ಚಿನ ಭಾರ ಹೊರಿಸಬೇಡಿ. ಪಾಲಿಕೆಯನ್ನು ಆಸ್ತಿ ತೆರಿಗೆ ಹಣದಲ್ಲೇ ನಡೆಸಲು ಮುಂದಾಗಬೇಡಿ. ರಾಜ್ಯದಲ್ಲಿ 65% ತೆರಿಗೆ ಸಂಗ್ರಹವಾಗುತ್ತಿದ್ದು, ಈ ನಗರಕ್ಕೆ ಬೇರೆ ಇಲಾಖೆಗಳಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ರಾಜ್ಯ ಸರ್ಕಾರದಿಂದ ಬರುವ ಅನುದಾನ ಹೆಚ್ಚಾಗಬೇಕು ಎಂದು ಮನವಿ ಮಾಡುತ್ತೇನೆ. ಎಲ್ಲರನ್ನು ತೆರಿಗೆ ವ್ಯಾಪ್ತಿಗೆ ತರುವ ನಿಮ್ಮ ಪ್ರಯತ್ನಕ್ಕೆ ಶುಭಾಶಯ ತಿಳಿಸುತ್ತೇನೆ ಎಂದು ತಿಳಿಸಿದರು.

ಬಳಿಕ ಸಭಾಧ್ಯಕ್ಷ ಯು.ಟಿ ಖಾದರ್ ಅವರು ವಿಧೇಯಕವನ್ನು ಧ್ವನಿ ಮತಕ್ಕೆ ಹಾಕಿದರು. ಸದನದಲ್ಲಿ ಸರ್ವಾನುಮತದಿಂದ ವಿಧೇಯಕಕ್ಕೆ ಅನುಮೋದನೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net