ಮುಳ್ಳೇರಿಯ: ಅಧ್ಯಾಪಕರ ಮಾನ್ಯತಾ ಪರೀಕ್ಷೆ ಕೆ-ಟೆಟ್ ವಿಷಯಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಹೊರಡಿಸಿದ ಆದೇಶದಲ್ಲಿ ಭಾರತದ ಲಕ್ಷಗಟ್ಟಲೆ ಅಧ್ಯಾಪಕರಲ್ಲಿ ಉಂಟಾದ ಗೊಂದಲಕ್ಕೆ ಅತಿ ಶೀಘ್ರದಲ್ಲೇ ಪರಿಹಾರ ಉಂಟುಮಾಡುವ ಹಿನ್ನೆಲೆಯಲ್ಲಿ ದೇಶೀಯ ಅಧ್ಯಾಪಕ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿಯು ಪ್ರಧಾನಮಂತ್ರಿಗೆ ಮನವಿ ನೀಡಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿದೆ.
2025 ಸೆಪ್ಟೆಂಬರ್ 1ರಂದು ಸುಪ್ರೀಂಕೋರ್ಟ್ ಹೊರಡಿಸಿದ ಆದೇಶದ ಪ್ರಕಾರ ಪ್ರಸ್ತುತ ಸೇವೆಯಲ್ಲಿರುವ ಎಲ್ಲ ಅಧ್ಯಾಪಕರು ಕೆ-ಟೆಟ್ ಪರೀಕ್ಷೆ ಉತ್ತೀರ್ಣರಾಗಿರಬೇಕು. ಆದರೆ 2009ರ ಆರ್ಟಿಇ ಆಕ್ಟ್ ಪ್ರಕಾರ 2010ರ ಮೊದಲು ಸೇವೆಗೆ ಸೇರಿದವರಿಗೆ ರಿಯಾಯಿತಿ ನೀಡಲಾಗಿತ್ತು. 2010, 2014ರ ಮಧ್ಯೆ ಸೇವೆಗೆ ಸೇರಿದವರಿಗೆ ಕೇರಳದಲ್ಲಿ ಪ್ರತ್ಯೇಕ ರಿಯಾಯಿತಿ ನೀಡಲಾದ ಕಾರಣ ಆ ಸಮಯದಲ್ಲಿ ಸೇವೆಗೆ ಸೇರಿದವರು ಟೆಟ್ ಪರೀಕ್ಷೆ ಬರೆಯಲಿಲ್ಲ. ಈ ಅವಸ್ಥೆ ಗಮನಿಸಬೇಕೆಂದು ಮನವಿಯಲ್ಲಿ ಸೂಚಿಸಲಾಗಿದೆ. ಉನ್ನತ ಯೋಗ್ಯತೆಗಳಾದಂತಹ ನೆಟ್, ಸೆಟ್, ಪಿಎಚ್.ಡಿ ಯೋಗ್ಯತೆಗಳಿರುವವರಿಗೂ ರಿಯಾಯಿತಿ ನೀಡಬೇಕೆಂದು ದೇಶೀಯ ಅಧ್ಯಾಪಕ ಪರಿಷತ್ ಮನವಿ ಮಾಡಿದೆ. ದೇಶದಾದ್ಯಂತ ಎ.ಬಿ.ಆರ್.ಎಸ್.ಎಂ ನೇತೃತ್ವದಲ್ಲಿ ನಡೆಯುವ ಪ್ರಚಾರದ ಅಂಗವಾಗಿ ಎಲ್ಲ ಜಿಲ್ಲಾ ಸಮಿತಿ ಮನವಿ ಪತ್ರ ನೀಡಲಾಯಿತು.
ಕಾಸರಗೋಡು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರನ್ ಅವರಿಗೆ ದೇಶೀಯ ಅಧ್ಯಾಪಕ ಪರಿಷತ್ ಜಿಲ್ಲಾ ಅಧ್ಯಕ್ಷ ಟಿ.ಕೃಷ್ಣನ್ ಮನವಿ ಪತ್ರ ನೀಡಿದರು. ರಾಜ್ಯ ವನಿತಾ ವಿಭಾಗದ ಜತೆ ಕಾರ್ಯದರ್ಶಿ ಎ.ಸುಚಿತಾ, ಜಿಲ್ಲಾ ಸಮಿತಿ ಸದಸ್ಯರಾದ ಚಂದ್ರಿಕಾ ಕೆ.ಆರ್., ದೇವಿಪ್ರಸಾದ್ ಜತೆಗಿದ್ದರು.