

ಬೆಳಗಾವಿ: ರಮೇಶ್ ಜಾರಕಿಹೊಳಿಗೆ ಬಿಜೆಪಿಯನ್ನು ಸೋಲಿಸುವ ಗುರಿ ಇತ್ತು. ಡಿ- ಕೋಡಿಂಗ್ ರೀತಿ ಪ್ಲ್ಯಾನ್ ಮಾಡಿದ್ರು ಎಂದು ಕೆಪಿಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಭಾರೀ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಬೆಳಗಾವಿ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಯ ಹಟ್ಟಿಹೊಳಿ ಮೊದಲ ಪ್ರಾಶಸ್ತ್ಯದಲ್ಲೇ ಗೆದ್ದು ಬೀಗಿದ್ದಾರೆ. ಎರಡನೇ ಪ್ರಾಶಸ್ತ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವಿನ ನಗೆ ಬೀರಿದ್ದು, ಬಿಜೆಪಿಯ ಮಹಾಂತೇಶ ಕವಟಗಿಮಠ ಸೋಲುಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿಗೆ ಬಿಜೆಪಿಯನ್ನು ಸೋಲಿಸುವ ಗುರಿ ಇತ್ತು. ಹೀಗಾಗಿ ನಮ್ಮ ಹೆಸರು ಹೇಳುತ್ತಿದ್ದರು. ಅವರ ಲೆಕ್ಕಾಚಾರ ಯಾರಿಗೂ ಗೊತ್ತಾಗಲ್ಲ. ಮಿಲ್ಟ್ರಿಯಲ್ಲಿ ಡಿ- ಕೋಡಿಂಗ್ ರೀತಿ ರಮೇಶ ಪ್ಲ್ಯಾನ್ ಇತ್ತು. ಬಿಜೆಪಿ ಅಭ್ಯರ್ಥಿ ಸೋಲಿಸಿ ಪಕ್ಷದಲ್ಲಿ ಅಧಿಪತ್ಯದ ಸಾಧಿಸಲು ಪ್ಲ್ಯಾನ್ ಅವರದ್ದಾಗಿತ್ತು ಎಂದರು.
ನಿರೀಕ್ಷೆಯಂತೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದೆ. ಕಾಂಗ್ರೆಸ್ಗೆ ನಮ್ಮ ನಿರೀಕ್ಷೆಗಿಂತ 300 ಮತಗಳು ಹೆಚ್ಚು ಬಂದಿದೆ. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ವೇಗ ಕಡಿಮೆ ಇರಬಹುದು ಆದರೇ ನಿಲ್ಲಲ್ಲ. 2023ರ ವಿಧಾನ ಸಭೆ ಚುನಾವಣೆಗೆ ಪಕ್ಷ ಸಂಘಟನೆ ಹೆಚ್ಚಾಗಿದೆ ಎಂದು ಸತೀಶ್ ಹೇಳಿದರು.