

ಬೆಂಗಳೂರು: ಪೊಲೀಸರ ವಶದಲ್ಲಿ ಕಾಂಗೋ ಪ್ರಜೆಯೊಬ್ಬ ಮೃತಪಟ್ಟಿದ್ದು, ಜೆ.ಸಿ. ನಗರ ಪೊಲೀಸ್ ಠಾಣೆ ಬಳಿ ಪರಿಸ್ಥಿತಿ ಪ್ರಕ್ಷ್ಯುಬ್ಧಗೊಂಡಿದೆ.
ಡ್ರಗ್ಸ್ ಕೇಸ್ನಲ್ಲಿ ವಿದೇಶಿ ಪ್ರಜೆ ಜೋಯೆಲ್ ಮಲು ಎಂಬಾತನನ್ನು ಜೆಸಿ ನಗರ ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ಎದೆ ನೋವು, ಶೀತ ಅಂತ ಹೇಳಿದ್ದ ಜೋಯೆಲ್ ಹೇಳಿದ್ದಕ್ಕೆ ಕೂಡಲೇ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಅಷ್ಟರಲ್ಲಿ ಆತ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು. ಈ ವಿಚಾರ ತಿಳಿಯುತ್ತಿದ್ದಂತೆ ಠಾಣೆ ಮುಂದೆ ಜಮಾಯಿಸಿದ ನೈಜಿರಿಯನ್ ಪ್ರಜೆಗಳ ಗುಂಪು, ಪ್ರತಿಭಟನೆ ನಡೆಸಿ ಹೈಡ್ರಾಮ ಮಾಡಿದ್ದಾರೆ. ಅಲ್ಲದೆ, ಪೊಲೀಸರ ವಿರುದ್ಧ ವಾಗ್ವಾದ ಮಾಡಿದ್ದಲ್ಲದೆ, ಹಲ್ಲೆಯನ್ನೂ ನಡೆಸಿದ್ದಾರೆ.
ಮೃತ ಜೋಯೆಲ್ ಮಲು ಕೆ.ಆರ್ ಪುರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. 2015ರ ಜುಲೈ 20ರಂದು ಸ್ಟೂಡೆಂಟ್ ವೀಸಾ ಪಡೆದು ಇಲ್ಲಿಗೆ ಬಂದಿದ್ದ. ಆದರೆ, 2017ರ ಡಿಸೆಂಬರ್ 13ರಂದು ವೀಸಾ ಅವಧಿ ಮುಕ್ತಾಯವಾಗಿದೆ ಎಂದು ಗೊತ್ತಾಗಿದೆ.
ಇನ್ನು ಜೊವಾಲ್ ಮಲುನನ್ನು ಬಿಡುಗಡೆ ಮಾಡಲು ಪೊಲೀಸರು 30 ಸಾವಿರ ಹಣ ಕೇಳಿದ್ದರು ಎಂದು ಆರೋಪಿಸಿರುವ ಮೃತನ ಸ್ನೇಹಿತರು, ಈ ಸಾವಿಗೆ ಪೊಲೀಸರೇ ಕಾರಣ ಎಂದು ಗಲಾಟೆ ಮಾಡುತ್ತಿದ್ದು, ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಜೆಸಿ ನಗರ ಠಾಣೆ ಮುಂದೆ ಕಾರು ನಿಲ್ಲಿಸಿ ಕಾರಿನಲ್ಲಿ ಮ್ಯೂಸಿಕ್ ಹಾಕಿಕೊಂಡು, ಸಿಗರೇಟ್ ಸೇದುತ್ತಾ ನೈಜೀರಿಯನ್, ಆಫ್ರಿಕನ್ ಪ್ರಜೆಗಳು ಪ್ರತಿಭಟಿಸುತ್ತಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಸಂಜೆ 4.20 ಆದರೂ ಪರಿಸ್ಥಿತಿ ತಿಳಿಗೊಂಡಿರಲಿಲ್ಲ. ಆದರೆ, ಮೃತನ ಸ್ನೇಹಿತರು ಮಹಿಳಾ ಪೊಲೀಸ್ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿದ್ದಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಆ ವೇಳೆ ಪೊಲೀಸರು ಲಾಠಿಚಾರ್ಜ್ ನಡೆಸಿದರು.