

ಬೆಳಗಾವಿ: ಪಾತ್ರೆ ತೊಳೆಯಲೆಂದು ನೀರು ತುಂಬಿಟಿದ್ದ ಬಕೆಟ್ನಲ್ಲಿ ಒಂದೂವರೆ ವರ್ಷದ ಮಗು ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.
ತಾಂವಶಿ ಗ್ರಾಮದ ಸನದಿ ತೋಟದಲ್ಲಿ ವಾಸವಿದ್ದ ನಿಂಗಪ್ಪ ಮಸರಗುಪ್ಪಿ ಎಂಬುವರ ಗಂಡುಮಗು ಅಂಗಳದಲ್ಲಿ ಆಟ ಆಡುತ್ತಿತ್ತು. ಈ ವೇಳೆ ಅಲ್ಲಿಯೇ ಪಾತ್ರೆ ತೊಳೆಯಲೆಂದು ನೀರು ತುಂಬಿದ್ದ ಬಕೆಟ್ನಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದೆ. ಮಗುವಿನ ತಂದೆ ಹೊಲಕ್ಕೆ ಕೆಲಸಕ್ಕೆ ಹೋಗಿದ್ದು, ತಾಯಿ ಅಡುಗೆಮನೆ ಕೆಲಸದಲ್ಲಿ ತೊಡಗಿದ್ದಳು. ಮಗು ಎಲ್ಲಿಯೂ ಕಾಣಿಸದಿದ್ದಾಗ ಹುಡುಕಾಟ ನಡೆಸಿದರು. ಈ ವೇಳೆ ನೀರಿನ ಬಕೆಟ್ನೊಳಗೆ ಬಿದ್ದು ಮೃತಪಟ್ಟಿರುವುದು ಕಂಡು ಬಂದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಹಿಂದೆಯೂ ಇಂತಹದ್ದೇ ದುರ್ಘಟನೆ ಮೈಸೂರಲ್ಲಿ ಸಂಭವಿಸಿತ್ತು. ಹುಣಸೂರು ತಾಲೂಕಿನ ತರಿಕಲ್ ಗ್ರಾಮದ ಸುಂದರರಾಜ್ ಎಂಬುವರ ಎರಡು ವರ್ಷ ಮಗು ಸಮರ್ಥ್ ಮನೆಯಲ್ಲಿ ಆಟವಾಡುತ್ತಲೇ ಮನೆಯ ಬಾತ್ ರೂಂನಲ್ಲಿ ನೀರು ತುಂಬಿದ್ದ ಬಕೆಟ್ ಒಳಗೆ ಬಿದ್ದು ಸತ್ತಿತ್ತು.