More

    ರೈತರಿಗಾಗಿ ಶೀಘ್ರದಲ್ಲೇ ಜಿಲ್ಲಾ ಮಟ್ಟದ ಪ್ರವಾಸ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ

    ಬ್ಯಾಡಗಿ: ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಈ ಕುರಿತು ಸರ್ಕಾರದ ಗಮನ ಸೆಳೆದು ರೈತರಿಗೆ ನ್ಯಾಯ ಒದಗಿಸಲು ಶೀಘ್ರದಲ್ಲೇ ಜಿಲ್ಲಾ ಮಟ್ಟದ ಪ್ರವಾಸ ಹಮ್ಮಿಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

    ತಾಲೂಕಿನ ಚಿಕ್ಕಬಾಸೂರಲ್ಲಿ ನೊಳಂಬ ಸಮಾಜ ವತಿಯಿಂದ ಭಾನುವಾರ ಆಯೋಜಿಸಿದ್ದ ಶ್ರೀ ಗುರು ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಶರಣದಲ್ಲಿ ಕಾಯಕತತ್ವವನ್ನು ಪ್ರತಿಪಾದಿಸಿದ ಶಿವಯೋಗಿ ಸಿದ್ಧರಾಮೇಶ್ವರರು ಸೊಲ್ಲಾಪುರದ ಸುತ್ತಮುತ್ತ ಸೇರಿದಂತೆ ರಾಜ್ಯದ ವಿವಿಧೆಡೆ ಸುಮಾರು 4 ಸಾವಿರ ಕೆರೆಗಳನ್ನು ನಿರ್ವಿುಸಿದ್ದಾರೆ ಎಂದು ತಿಳಿದುಬಂದಿದೆ. ಶರಣರ ಮಾದರಿಯಲ್ಲಿ ಮುಖ್ಯಮಂತ್ರಿಯಿದ್ದಾಗ ಸಾವಿರಾರು ಕೆರೆಗಳ ಅಭಿವೃದ್ಧಿ, ಮಠ ಮಂದಿರಗಳಿಗೆ ಹೆಚ್ಚು ಅನುದಾನ ನೀಡಿದ ತೃಪ್ತಿ ನನಗಿದೆ ಎಂದರು.

    ಜ. 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಕೆಲವರು ಸಲ್ಲದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ, ರಾಜ್ಯದ ಅಂಜನಾದ್ರಿ ಬೆಟ್ಟಿದಲ್ಲಿಯೂ ಶ್ರೀರಾಮನ ಐತಿಹ್ಯವಿದ್ದು, ದೇಶವೇ ಇಂತಹ ಸುವರ್ಣದಿನ ಎದುರು ನೋಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ವಿಶ್ವದಲ್ಲಿ ದೇಶವನ್ನು ಅಭಿವೃದ್ಧಿಯಲ್ಲಿ ಮೂರನೇ ಸ್ಥಾನಕ್ಕೆ ತಂದಿರುವುದು ಹೆಮ್ಮೆಯಾಗಿದೆ ಎಂದರು.

    ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ನೆಲ ನಂಬಿದ ಕಾಯಕ ಜೀವಿಗಳ ಶ್ರಮ ಮರೆಯದೆ ಪ್ರತಿಯೊಬ್ಬರೂ ದುಡಿಮೆಯಲ್ಲಿ ತೊಡಗಬೇಕು. ಸಮಾಜದ ಮಕ್ಕಳಿಗೆ ಶಿಕ್ಷಣ ಕಲ್ಪಿಸಲು ಒತ್ತು ನೀಡಬೇಕು ಎಂದು ಹೇಳಿದರು.

    ರಾಜ್ಯ ನೊಳಂಬ ಸಮಾಜದ ಅಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ನೊಳಂಬ ಸಮಾಜ ಬಾಂಧವರಿಗೆ ಸರ್ಕಾರಗಳು ಸಮರ್ಪಕ ನ್ಯಾಯ ಒದಗಿಸಿಲ್ಲ. ಸಮಾಜ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಂದುವರಿದಿಲ್ಲ. ನಮ್ಮ ಸಮಾಜದ ಇಬ್ಬರಿಗೆ ಲೋಕಸಭೆ ಚುನಾವಣೆ ಟಿಕೆಟ್ ನೀಡುವ ಮೂಲಕ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

    ಬೆಳಗ್ಗೆ 9 ಗಂಟೆಗೆ ಶ್ರೀ ಗುರು ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ನಂದಿಗುಡಿ ಬೃಹನ್ಮಠದ ಸಿದ್ಧರಾಮೇಶ್ವರ ಸ್ವಾಮೀಜಿ ಪೂಜೆ ಸಲ್ಲಿಸಿದರು. ಶಾಸಕ ಬಸವರಾಜ ಶಿವಣ್ಣನವರ ಮೆರವಣಿಗೆಗೆ ಚಾಲನೆ ನೀಡಿದರು.

    ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಸುರೇಶಗೌಡ್ರ ಪಾಟೀಲ, ಶಿವರಾಜ ಸಜ್ಜನ, ಅರುಣಕುಮಾರ ಪೂಜಾರ, ಸ್ವಾಗತ ಸಮಿತಿ ಅಧ್ಯಕ್ಷ ಸೋಮಶೇಖರ ಕಣಗಲಭಾವಿ, ಪುಷ್ಪಗಿರಿ ಮಠದ ಸೋಮಶೇಖರ ಸ್ವಾಮೀಜಿ, ಮಡ್ಲೂರಿನ ಮುರುಘರಾಜೇಂದ್ರ ಶ್ರೀಗಳು, ಹೋತನಹಳ್ಳಿ ಶಂಕರಾನಂದ ಶ್ರೀಗಳು, ಗೊಲ್ಲಹಳ್ಳಿ ವಿಭವ ವಿದ್ಯಾಶಂಕರ ಶ್ರೀಗಳು, ಯಳವಟ್ಟಿ ಸದ್ಗುರು ಯೋಗಾನಂದ ಶ್ರೀಗಳು, ಹೇರೂರಿನ ನಂಜುಂಡೇಶ್ವರ ಶ್ರೀಗಳು, ಕೆರಗೊಡಿಯ ಗುರುಪರದೇಶಿ ಶ್ರೀಗಳು, ಸಮಿತಿಯ ಪದಾಧಿಕಾರಿಗಳಾದ ಕೆ.ಬಿ. ಶಶಿಧರ, ಕೆ.ಬಿ. ರುದ್ರಪ್ಪ, ಬಿ.ಕೆ. ಚಂದ್ರಶೇಖರ, ಎಚ್. ರಾಮಲಿಂಗಪ್ಪ, ಎಸ್.ಆರ್. ನಟರಾಜ, ವೈ.ಎಸ್. ಸಿದ್ದರಾಮ, ಬಿ. ಕುಬೇರಪ್ಪ, ಜಿ.ಎಸ್. ಧನಂಜಯ, ಪ್ರಭುಲಿಂಗ ದೊಡ್ಡಮನಿ, ಶಿವರಾಯಪ್ಪ ಮೂಲೇರ, ಚನ್ನಬಸಪ್ಪ ಅಣಜಿ, ಜಯಪ್ಪ ಮಲ್ಲಿಗಾರ, ವೀರಭದ್ರಪ್ಪ ಗೊಡಚಿ, ಎಂ.ಎನ್. ಕೆಂಪಗೊಂಡ್ರ, ಜಗದೀಶ ಕಣಗಲಬಾವಿ, ರುದ್ರಗೌಡ್ರ ಕಾಡನಗೌಡ್ರ, ಇತರರಿದ್ದರು.

    ಹೀಗೆ ಪ್ರಮಾಣ ಮಾಡಲಿ

    ಜನಪ್ರತಿನಿಧಿಗಳು ಆಯ್ಕೆಗೊಂಡ ಬಳಿಕ ರಾಜ್ಯಪಾಲರ ಸಮ್ಮುಖದಲ್ಲಿ ಪ್ರಮಾಣ ಸ್ವೀಕರಿಸುವ ಬದಲು, ಟಿಕೆಟ್ ಘೊಷಣೆಯಾದ ಬಳಿಕ ಎಲ್ಲ ಪಕ್ಷದ ಅಭ್ಯರ್ಥಿಗಳು ಎಲ್ಲೂ ಭ್ರಷ್ಟಾಚಾರ ಮಾಡುವುದಿಲ್ಲ, ಯಾರನ್ನೂ ನಿಂದಿಸುವ ರಾಜಕಾರಣ ಮಾಡಲ್ಲ, ಸೋಲು-ಗೆಲುವು ಸಮವಾಗಿ ಸ್ವೀಕರಿಸುತ್ತೇವೆ, ಜನರ ಕುಂದು-ಕೊರತೆಗಳನ್ನು ಆಲಿಸುತ್ತೇವೆ, ಯಾವುದೇ ಕಾರಣಕ್ಕೂ ರೆಸಾರ್ಟ್ ರಾಜಕೀಯ ಮಾಡಲ್ಲ, ಜನತಾ ನ್ಯಾಯಾಲಯದ ವಿರುದ್ಧ ನಡೆದುಕೊಳ್ಳುವುದಿಲ್ಲ, ಪ್ರಜಾಪ್ರಭುತ್ವಕ್ಕೆ ಮೋಸ ಮಾಡುವುದಿಲ್ಲ ಎಂದು ಎಲ್ಲ ಪಕ್ಷದ ಅಧ್ಯಕ್ಷರು ಪ್ರಮಾಣ ಮಾಡಿ ರಾಜ್ಯಪಾಲರಿಗೆ ಪತ್ರ ಬರೆಯಬೇಕು ಎಂದು ಸಿರಿಗೇರಿ ಮಠದ ಡಾ. ಶಿವಮೂರ್ತಿ ಶಿವಾಚಾರ್ಯರು ಒತ್ತಾಯಿಸಿದರು.

    ನೊಳಂಬ ಸಮಾಜಕ್ಕೆ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸ್ಥಾನಮಾನಗಳ ಅಗತ್ಯವಿದೆ. ನೆಲ ನಂಬಿ ಬದುಕಿದ ಸಮಾಜ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ. ಕೆಲವರು ನಮ್ಮೊಳಗೆ ರಾಜಕೀಯ ಜಗಳ ಹಚ್ಚಿ ಲಾಭ ಪಡೆಯುವ ಯತ್ನ ನಡೆಸಿದ್ದಾರೆ. ಇಂತಹ ಸಭೆಗಳು ಜಾತ್ರೆ, ಉತ್ಸವವಾಗದೆ ಇಲ್ಲಿ ಚಿಂತನ, ಮಂಥನಗಳು ನಡೆಯಬೇಕು. ಸ್ವಾಭಿಮಾನ ಜೀವನ ನಡೆಸಲು ಮಕ್ಕಳಿಗೆ ಶಿಕ್ಷಣ ಅಗತ್ಯವಾಗಿದೆ.

    | ಜೆ.ಸಿ. ಮಾಧುಸ್ವಾಮಿ, ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts