More

    ಸರ್ಕಾರದ ಯೋಜನೆಗಳನ್ನು ಸರಿಯಾಗಿ ತಲುಪಿಸಿ; ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ

    ಹಾವೇರಿ: ಪೋಷಣ ಅಭಿಯಾನ, ಬೇಟಿ ಬಚಾವೋ ಬೇಟಿ ಪಡಾವೋ ಅನುಷ್ಠಾನದ ನಂತರ ಜಿಲ್ಲೆಯಲ್ಲಿ ಲಿಂಗಾನುಪಾತ ಸುಧಾರಣೆ, ರಕ್ತ ಹೀನತೆ, ಅಪೌಷ್ಠಿಕತೆ ನಿವಾರಣೆ ಪ್ರಮಾಣದ ನಿಖರ ಅಂಕಿ-ಅಂಶಗಳು ಹಾಗೂ ಪ್ರತಿ ಮಗುವಿನ ಇತಿಹಾಸದ ಜತೆಗೆ ಲೈನ್‌ಲಿಸ್ಟ್ ಸಲ್ಲಿಸಲು ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.
    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಪೋಷಣ ಅಭಿಯಾನ, ಬೇಟಿ ಬಚಾವೋ ಬೇಟಿ ಬಡಾವೋ, ಮಕ್ಕಳ ರಕ್ಷಣಾ ಘಟಕದ ಕಾರ್ಯಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಅಪೌಷ್ಠಿಕ ಮಕ್ಕಳ ಸಂಖ್ಯೆ ಮೊದಲೆಷ್ಟಿತ್ತು, ಈ ಕಾರ್ಯಕ್ರಮಗಳ ಅನುಷ್ಠಾನದ ನಂತರ ಸುಧಾರಣೆ ಎಷ್ಟು ಪ್ರಮಾಣದಲ್ಲಾಗಿದೆ ಎಂಬ ಮಾಹಿತಿ ನೀಡಿ ಎಂದರು.
    ಅಪೌಷ್ಠಿಕತೆಗೆ ಕಾರಣಗಳೇನು, ಕುಟುಂಬದ ಇತಿಹಾಸ, ಮಕ್ಕಳ ಆಹಾರ ಕ್ರಮಗಳೇನು, ನಿಖರವಾದ ಮಾಹಿತಿಯನ್ನು ತಾಲೂಕುವಾರು ಹೊಂದಬೇಕು. ಮುಂದಿನ ಸಭೆಗಳಲ್ಲಿ ಅತ್ಯಂತ ವಾಸ್ತವ ನೆಲೆಯ ವಿಶ್ಲೇಷಣಾತ್ಮಕ ಮಾಹಿತಿ ಸಲ್ಲಿಸಬೇಕು ಎಂದರು.
    6ರಿಂದ 59 ವರ್ಷದ ವಯೋಮಾನದವರು ಹೊಂದಿರುವ ರಕ್ತ ಹೀನತೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಸಮನ್ವಯದಿಂದ ಅಭಿಯಾನದ ಮಾದರಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕಡಿಮೆ ತೂಕದ ಮಕ್ಕಳ ಜನನವನ್ನು ಕಡಿಮೆಗೊಳಿಸಲು ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ತಾಯಂದಿರಿಗೆ ಅರಿವು ಮೂಡಿಸಬೇಕು ಎಂದು ನಿರ್ದೇಶನ ನೀಡಿದರು.
    ಲಿಂಗಾನುಪಾತ ಹೆಚ್ಚಳ…
    ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದ ಅನುಷ್ಠಾನಕ್ಕೆ ಬರುವ ಮುಂಚೆ ಹೆಣ್ಣುಮಗುವಿನ ಲಿಂಗಾನುಪಾತದ ಪ್ರಮಾಣ, ಕಾರ್ಯಕ್ರಮದ ಅನುಷ್ಠಾನದ ನಂತರ ಲಿಂಗಾನುಪಾತದ ಪ್ರಮಾಣ ಕುರಿತಾಗಿ ವರ್ಷವಾರು ನಿಖರವಾದ ಅಂಕಿ-ಸಂಖ್ಯೆಗಳನ್ನು ನೀಡಬೇಕು. ಲಿಂಗಾನುಪಾತ ಸುಧಾರಣೆ ಕುರಿತು ಮಾಹಿತಿ ಸಲ್ಲಿಸುವಂತೆ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಿಗೆ ಸಲಹೆ ನೀಡಿದರು.
    ವಿಲೇ ಚುರುಕುಗೊಳಿಸಿ…
    ಪೋಕ್ಸೋ ಪ್ರಕರಣಗಳ ವಿಲೇವಾರಿ, ದತ್ತು ಕಾರ್ಯಕ್ರಮದ ಪ್ರಗತಿ, ಬಾಲ ನ್ಯಾಯಮಂಡಳಿ ಮುಂದೆ ಪ್ರಕರಣಗಳ ವಿಲೇವಾರಿ, ಮಕ್ಕಳ ಕಲ್ಯಾಣ ಸಮಿತಿಮುಂದೆ ಬಂದ ಪ್ರಕರಣಗಳ ವಿಲೇವಾರಿ ಕುರಿತಂತೆ ಕೂಲಕುಂಷವಾಗಿ ಪರಿಶೀಲನೆ ನಡೆಸಿದ ಅವರು, ಮಕ್ಕಳ ಕಲ್ಯಾಣ ಸಮಿತಿ ಪ್ರಕರಣಗಳ ವಿಲೇವಾರಿ ಪ್ರಗತಿಯನ್ನು ಚುರುಕುಗೊಳಿಸಬೇಕು. ಪ್ರತಿ ಪ್ರಕರಣಗಳ ವಿವರವನ್ನು ಸಲ್ಲಿಸುವಂತೆ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಮಾಜಿ ದೇವದಾಸಿಯರಿಗೆ ಸೌಲಭ್ಯ…
    ನಿವೇಶನ ರಹಿತ ಹಾಗೂ ವಸತಿ ರಹಿತ ಗ್ರಾಮೀಣ ಹಾಗೂ ನಗರ ವಾಸಿ ಮಾಜಿ ದೇವದಾಸಿಯರ ಮಾಹಿತಿಯನ್ನು ಒಂದು ವಾರದಲ್ಲಿ ಸಲ್ಲಿಸಬೇಕು. ಗ್ರಾಮೀಣ ಭಾಗದಲ್ಲಿ ನಿವೇಶನ ಗುರುತಿಸಿ ಹಂಚಿಕೆ ಮಾಡಬೇಕು. ಆಶ್ರಯ ಯೋಜನೆಯಡಿ ಮನೆ ಒದಗಿಸಬೇಕು. ಭೂ ಒಡೆತನ ಯೋಜನೆಂ ಹಾಗೂ ವಿವಿಧ ಸ್ವಾವಲಂಬಿ ಯೋಜನೆಯಡಿ ಸ್ವ ಉದ್ಯೋಗ ಕೈಗೊಳ್ಳಲು ಮಾಜಿ ದೇವದಾಸಿಯರಿಗೆ ನೆರವು ಒದಗಿಸಲು ಕ್ರಮವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಸಮಾಜ ಕಲ್ಯಾಣ ಇಲಾಖೆ ಉಪನಿದೇಶಕಿ ರೇಷ್ಮಾ ಕೌಸರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶಪ್ಪ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಜಯಾನಂದ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ನಿಲೇಶ, ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್. ಮಜೀದ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts