More

    ಸಮಗ್ರ ಕೃಷಿ ಪದ್ಧತಿಯಿಂದ ರೈತರ ಏಳಿಗೆ

    ಧಾರವಾಡ: ರೈತರು ಬರಗಾಲ ಪರಿಸ್ಥಿತಿ ಎದುರಿಸಲು ಕೇವಲ ಕೃಷಿ ಬೆಳೆಯನ್ನು ಬೆಳೆಯದೆ ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸಬೇಕು. ಇದರಿಂದ ರೈತರ ಏಳಿಗೆ ಸಾಧ್ಯ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ಹೇಳಿದರು.
    ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಕೃಷಿ ಇಲಾಖೆ, ಕೃಷಿಕ ಸಮಾಜ ಹಾಗೂ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಗರದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ರೈತ- ವಿಜ್ಞಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಸವರಾಜ ಕುಂದಗೋಳ ಮಾತನಾಡಿ, ಕೃಷಿ ಯಾಂತ್ರಿಕರಣವಾಗುತ್ತಿರುವ ಸಂದರ್ಭದಲ್ಲಿ ರೈತರು ಸಮಗ್ರ ಕೃಷಿ ಪದ್ಧತಿ ಅನುಸರಿಸಬೇಕು. ಹೈನುಗಾರಿಕೆ, ಜೇನು ಸಾಕಣೆ, ಕೋಳಿ ಸಾಕಣೆಯಂಥ ಉಪ ಕಸುಬುಗಳನ್ನು ಕೈಗೊಳ್ಳಬೇಕು ಎಂದರು.
    ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ. ಎಸ್.ಎಸ್. ಅಂಗಡಿ ಕೃಷಿಯಲ್ಲಿ ಮಣ್ಣು ಹಾಗೂ ನೀರಿನ ಸದ್ಬಳಕೆ ಮತ್ತು ಅದರ ಮಹತ್ವ' ವಿಷಯ ಕುರಿತು ಉಪನ್ಯಾಸ ನೀಡಿದರು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಜಿಲ್ಲಾ ಪ್ರಬಂಧಕ ಜನಾರ್ದನ ತಿವಾರಿಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ’ ಕುರಿತು ಉಪನ್ಯಾಸ ನೀಡಿದರು.
    ಉಪ ಕೃಷಿ ನಿರ್ದೇಶಕಿ ಜಯಶ್ರೀ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
    ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡದ ಬಸವರಾಜ ಹುಚ್ಯಯ್ಯನವರ (ರೇಷ್ಮೆ), ಹೆಬ್ಬಳ್ಳಿ ಗ್ರಾಮದ ಯಲ್ಲಪ್ಪ ಈಶ್ವರಪ್ಪ ಸಾಲಿ (ಸಮಗ್ರ ಕೃಷಿ ಪದ್ಧತಿ), ನವಲಗುಂದ ತಾಲೂಕು ನಾಗನೂರಿನ ಶೌಕತಲಿ ಲಂಬೂನವರ, ಕಲಘಟಗಿ ತಾಲೂಕು ಬೆಲವಂತರ ಗ್ರಾಮದ ಬಸವಣ್ಣೆಪ್ಪ ಅದರಗುಂಚಿ (ಸಮಗ್ರ ಕೃಷಿ ಪದ್ಧತಿ) ಅವರಿಗೆ ಆತ್ಮ ಯೋಜನೆಯಡಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
    ಧಾರವಾಡ ತಾಲೂಕಿನ ಹಳೇತೇಗೂರ ಗ್ರಾಮದ ಶಿವನಗೌಡ ಪಾಟೀಲ ಹಾಗೂ ಶಿಂಗನಹಳ್ಳಿ ಗ್ರಾಮದ ಪಾರ್ವತಿ ದಂಡಿನ ಅವರಿಗೆ `ಮಿಲಿಯನೇರ್ ರೈತ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
    ಪ್ರಶಸ್ತಿ ಪುರಸ್ಕೃತ ರೈತರು ಕೃಷಿ ಯಶೋಗಾಥೆ ವಿವರಿಸಿದರು. ಸವಿತಾ ತಡಕೋಡ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts