More

    ಹಾಲವರ್ತಿಯಲ್ಲಿ ಅಸ್ಪೃಶ್ಯತೆ ಆಚರಣೆ, ಗ್ರಾಪಂಗೆ ಮುತ್ತಿಗೆ ಹಾಕಿದ ಯುವಕರು

    ಕೊಪ್ಪಳ:ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ಹೋಟೆಲ್​ ಹಾಗೂ ಕ್ಷೌರದ ಅಂಗಡಿಗಳಲ್ಲಿ ಅಸ್ಪೃಶ್ಯತೆ ಆಚರಣೆ ಮಾಡುತ್ತಿರುವುದನ್ನು ಖಂಡಿಸಿ ದಲಿತ ಯುವಕರು ಬುಧವಾರ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

    ಹೋಟೆಲ್​ಗಳಲ್ಲಿ ತಿಂಡಿ ಪ್ರತ್ಯೇಕವಾಗಿ ನೀಡುತ್ತಾರೆ. ಕಟಿಂಗ್​ ಶಾಪ್​ಗೆ ತೆರಳಿದರೆ ಕ್ಷೌರ ಮಾಡುವುದಿಲ್ಲ. ಅಂಗಡಿಗೆ ಬೀಗ ಹಾಕುತ್ತಾರೆ. ಪ್ರಶ್ನಿಸಿದರೆ ಮಾಡುವುದಿಲ್ಲವೆನ್ನುತ್ತಾರೆ. ಹಿರಿಯರನ್ನು ಕೇಳಿ ಮಾಡುವುದಾಗಿ ಹೇಳುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡುತ್ತಾರೆ. ಸ್ವಾತಂತ್ರ ಬಂದು ಇಷ್ಟು ವರ್ಷವಾದರೂ ನಮಗೆ ಸ್ವಾತಂತ್ರ ಸಿಕ್ಕಿಲ್ಲ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳು, ಜನ ಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಕ್ರಮ ಕೈಗೊಂಡಿಲ್ಲವೆಂದು ಯುವಕರು ಆರೋಪಿಸಿದರು.

    ವಿಷಯ ತಿಳಿದು ಗ್ರಾಮೀಣ ಸಿಪಿಐ ಸುರೇಶ ನೇತೃತ್ವದಲ್ಲಿ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂಗಡಿಕಾರರಿಗೆ ನೋಟಿಸ್​ ನೀಡಿದ್ದು, ಯಾವುದೇ ಅಸ್ಪೃಶ್ಯತೆ ಆಚರಿಸದಂತೆ ಸೂಚಿಸಿದ್ದಾರೆ. ಗುರುವಾರ ಶಾಂತಿ ಸಭೆ ನಡೆಸಿ ಸಮಸ್ಯೆ ಪರಿಹರಿಸಲಿದ್ದು, ಶಾಂತಿ ಕಾಪಾಡುವಂತೆ ಸೂಚನೆ ನೀಡಿದರು.

    ಅಸ್ಪೃಶ್ಯತೆ ಆಚರಣೆ ಸಹಿಸುವುದಿಲ್ಲ: ಹಾಲವರ್ತಿ ಗ್ರಾಮದಲ್ಲಿನ ಅಸ್ಪೃಶ್ಯತೆ ಆಚರಣೆ ಸಹಿಸುವುದಿಲ್ಲ. ಸಂಬಂಧಪಟ್ಟವರ ವಿರುದ್ಧ ಕೂಡಲೇ ಕ್ರಮ ಜರುಗಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು. ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿ, ಘಟನೆ ನನ್ನ ಗಮನಕ್ಕೆ ಬಂದಿದ್ದು, ಡಿಸಿ ಹಾಗೂ ಎಸ್ಪಿಗೆ ಕ್ರಮ ಕೈಗೊಳ್ಳಲು ಸೂಚಿಸಿರುವೆ. ನಾನು ಒಬ್ಬ ದಲಿತ ಮಂತ್ರಿಯಾಗಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಜಾಗೃತಿ ಬಳಿಕವೂ ಅದೇ ರೀತಿ ಮುಂದುವರೆದರೆ ಕಾನೂನು ಕ್ರಮ ಜರುಗಿಸಲಾಗುವುದು. ಕೂಡಲೇ ಗ್ರಾಮಸ್ಥರೊಂದಿಗೆ ಸಭೆ ನಡೆಸುವಂತೆ ಸೂಚಿಸಿರುವೆ. ಈಗಾಗಲೇ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಜಿಲ್ಲೆಯಲ್ಲಿ ಇಂತಹ ಪ್ರಕರಣ ಮತ್ತೊಮ್ಮೆ ಮರುಕಳಿಸಲು ಬಿಡುವುದಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts