More

    ಕಾಂಗ್ರೆಸ್​ನಿಂದ ರೈತಪರ ಯೋಜನೆಗಳ ರದ್ದು, ಮಾಜಿ ಶಾಸಕ ಎ.ಎಸ್​.ಪಾಟೀಲ್​ ನಡಹಳ್ಳಿ ಆರೋಪ

    ಕೊಪ್ಪಳ: ಪಿಎಂ ಕಿಸಾನ್​ ಅಡಿ ರಾಜ್ಯನಿಡುತ್ತಿದ್ದ ನಾಲ್ಕು ಸಾವಿರ ರೂ. ನೆರವು, ವಿದ್ಯುತ್​ ಸಬ್ಸಿಡಿ, ಹಾಲಿನ ಪ್ರೋತ್ಸಾಹಧನ ಸೇರಿ ಅನೇಕ ರೈತಪರ ಯೋಜನೆಗಳನ್ನು ಕಾಂಗ್ರೆಸ್​ ಸರ್ಕಾರ ನಿಲ್ಲಿಸಿದ್ದು, ರೈತರಿಗೆ ಅನ್ಯಾಯ ಮಾಡಿದೆ. ಈ ವಿಷಯವನ್ನು ರಾಜ್ಯದ ಜನರ ಮನೆ ಮನೆಗೆ ತಲುಪಿಸಲು ಸಂಕಲ್ಪ ಮಾಡಿದ್ದೇವೆಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ, ಮಾಜಿ ಶಾಸಕ ಎ.ಎಸ್​.ಪಾಟೀಲ್​ ನಡಹಳ್ಳಿ ತಿಳಿಸಿದರು.

    ಕಳೆದ 10 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ರಾಜ್ಯದಲ್ಲಿನ ಕಾಂಗ್ರೆಸ್​ ಸರ್ಕಾರ, ಬಿಜೆಪಿ ಜಾರಿ ಮಾಡಿದ ಅನೇಕ ರೈತಪರ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಪಿಎಂ ಕಿಸಾನ್​ ಅಡಿ ನಾಲ್ಕು ಸಾವಿರ, ರೈತರ ಪಂಪ್​ಸೆಟ್​ಗಳಿಗೆ ನೀಡುತ್ತಿದ್ದ ಸಬ್ಸಿಡಿ, ಹಾಲಿನ ಪ್ರೋತ್ಸಾಹಧನ, ಮಾಜಿ ಸಿಎಂ ಬೊಮ್ಮಾಯಿ ರೈತರ ಮಕ್ಕಳಿಗಾಗಿ ಜಾರಿ ಮಾಡಿದ್ದ ರೈತ ವಿದ್ಯಾನಿಧಿ ಸೇರಿ ಅನೇಕ ಯೋಜನೆಗಳನ್ನು ನಿಲ್ಲಿಸಿದ್ದಾರೆ. ಇದರಿಂದ ರೈತರು, ರೈತರ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಇವರು ರೈತ ವಿರೋಧಿಗಳು. ಎಲ್ಲ ಯೋಜನೆಗಳಡಿ ರೈತ ಕುಟುಂಬವೊಂದಕ್ಕೆ ಕನಿಷ್ಠ 25 ಸಾವಿರ ರೂ. ನೆರವು ಸಿಗುತ್ತಿತ್ತು. ಅದನ್ನು ತಡೆದು ಗ್ಯಾರಂಟಿ ನೀಡಿದ್ದೇವೆಂದು ಬೀಗುತ್ತಿದ್ದಾರೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

    ಕಾಂಗ್ರೆಸ್​ ಅಧಿಕಾರಕ್ಕೆ ಬಂದಾಗೆಲ್ಲ ಬರ ಆವರಿಸುತ್ತದೆ. ಈ ವರ್ಷ ಸಂಪೂರ್ಣ ಬರವಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಪರಿಹಾರ ನೀಡಿಲ್ಲ. ಕೇಂದ್ರಕ್ಕೂ ತಡವಾಗಿ ವರದಿ ಸಲ್ಲಿಸಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ನೆರೆ ಸಂಭವಿಸಿತು. ಆಗ ಕೇಂದ್ರದ ನೆರವಿಗಾಗಿ ಕಾಯಲಿಲ್ಲ. ರಾಜ್ಯ ಸರ್ಕಾರದಿಂದಲೇ ಪರಿಹಾರ ಕಲ್ಪಿಸಿದರು. ನಂತರ ಕೇಂದ್ರದ ಅನುದಾನ ಪಡೆದರು. ಸಿಎಂ ಸಿದ್ದರಾಮಯ್ಯ ಜನರ ಕಣ್ಣೀರು ಒರೆಸುವುದು ಬಿಟ್ಟು ಕೇವಲ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂಡಿಸುತ್ತಿದ್ದಾರೆ. ಮೋದಿ ತಂದ ಆರ್ಥಿಕ ಸುಧಾರಣಾ ಕ್ರಮಗಳಿಂದಲೇ ರಾಜ್ಯದ ಆದಾಯವೂ ಹೆಚ್ಚಿದೆ. ಕರ್ನಾಟಕ ಪ್ರಗತಿಯತ್ತ ಸಾಗಲು ಅನುಕೂಲವಾಗಿದೆ ಎಂದು ಕೇಂದ್ರದ ನಡೆ ಸಮರ್ಥಿಸಿಕೊಂಡರು.

    ರೈತ ಮೋರ್ಚಾ ರಾಜ್ಯ ಉಪಾಧ್ಯೆ ಭಾರತಿ ಮಲ್ಲಿಕಾರ್ಜುನ, ಜಿಲ್ಲಾಧ್ಯಕ್ಷ ಅಶೋಕ ಜಿ.ಎಚ್​., ಬಸವರಾಜ, ಮಹೇಶ ಹಾದಿಮನಿ, ಅಮಿತ್​ ಕಂಪ್ಲಿಕರ್​ ಇತರರಿದ್ದರು.

    ಸಚಿವ ಶಿವರಾಜ ತಂಗಡಗಿ ಮೋದಿ ಎಂದವರ ಕಪಾಳಕ್ಕೆ ಹೊಡೆಯಿರಿ ಎಂದಿದ್ದಾರೆ. ನಾವು ಬಸವನಾಡಿನವರು. ಅವರು ಮಾತನಾಡಿದ್ದು ಸರಿಯಲ್ಲ. ಯುವಕರು ಮೋದಿ ಎಂದು ಕೂಗಿ ನಿಮ್ಮನ್ನು ಮನೆಗೆ ಕಳಿಸಲಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಯಾವ ಸರ್ಕಾರವೂ ರಾಜ್ಯಗಳಿಗೆ ಅನ್ಯಾಯ ಮಾಡಲಾಗದು. ರಾಜ್ಯ ಸರ್ಕಾರ ಸಕಾಲಕ್ಕೆ ವರದಿ ಸಲ್ಲಿಸಿಲ್ಲ. ರಾಜ್ಯಕ್ಕೆ ಜಾಣ ಸಿಎಂ ಬೇಕು. ಅಪ್ಪ ಮಾಡಿದ ಆಸ್ತಿ ಕರಿಗಿಸುವಂತವರಲ್ಲ.

    ಎ.ಎಸ್​.ಪಾಟೀಲ್​ ನಡಹಳ್ಳಿ. ಬಿಜಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts