More

  24 ಗಂಟೆಯಲ್ಲಿ ಉದ್ಯೋಗ ಚೀಟಿ ವಿತರಣೆ

  ಲಕ್ಷೆ್ಮೕಶ್ವರ: ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ಮಾ. 15ರಿಂದ ದುಡಿಯೋಣ ಬಾ ಅಭಿಯಾನ ಆರಂಭಿಸಿದ್ದು, ಉದ್ಯೋಗ ಚೀಟಿ ಪಡೆಯಲು ಗ್ರಾಪಂಗೆ ಅಲೆಯುವುದನ್ನು ತಪ್ಪಿಸಲು ‘ದಾಖಲೆ ಕೊಡಿ 24 ಗಂಟೆಯಲ್ಲಿ ಉದ್ಯೋಗ ಚೀಟಿ ಪಡೆಯಿರಿ’ ಕಾರ್ಯಕ್ರಮ ಎಲ್ಲ ಗ್ರಾಪಂಗಳಲ್ಲಿ ಆರಂಭಿಸಲಾಗಿದೆ.

  ಉದ್ಯೋಗ ಅರಸಿ ಗ್ರಾಮೀಣ ಜನರು ವಲಸೆ ಹೋಗುವುದನ್ನು ತಪ್ಪಿಸಿ, ಸ್ಥಳೀಯವಾಗಿ ಕೆಲಸ ಕೊಡಲು ಎಲ್ಲ ಗ್ರಾಪಂಗಳಲ್ಲಿ ನರೇಗಾ ಯೋಜನೆಯಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ. 18 ವರ್ಷ ವಯೋಮಿತಿ ದಾಟಿದವರು ಉದ್ಯೋಗ ಚೀಟಿ ಪಡೆಯಲು ಬಂದರೆ ಅವಶ್ಯಕ ದಾಖಲೆ ಪಡೆದು 24 ಗಂಟೆಯೊಳಗೆ ಉದ್ಯೋಗ ಚೀಟಿ ನೀಡಲಾಗುತ್ತಿದೆ. ಮದುವೆಯಾಗಿ ಬಂದವರು, 18 ವರ್ಷವಾದವರಿಗೆ ಉದ್ಯೋಗ ಚೀಟಿ ಒದಗಿಸಲು ಈ ಯೋಜನೆ ಜಾರಿಗೆ ತರಲಾಗಿದೆ.

  ದುಡಿಯೋಣ ಬಾ ಅಭಿಯಾನದಲ್ಲಿ ಪಾಲ್ಗೊಳ್ಳುವವರು ಆಧಾರ ಕಾರ್ಡ್, ಬ್ಯಾಂಕ್ ಪಾಸ್​ಬುಕ್, ರೇಷನ್ ಕಾರ್ಡ್ ನಕಲು ಪ್ರತಿ ಹಾಗೂ ಎರಡು ಪಾಸ್​ಪೋರ್ಟ್ ಸೈಜ್ ಭಾವಚಿತ್ರ ನೀಡಿದರೆ ಸಾಕು ಅವರಿಗೆ 24 ಗಂಟೆಗಳಲ್ಲಿ ಉದ್ಯೋಗ ಚೀಟಿ ದೊರೆಯುತ್ತದೆ. ಈಗಾಗಲೆ 14 ಗ್ರಾಪಂ ವ್ಯಾಪ್ತಿಯಲ್ಲಿ 16,520 ಜಾಬ್ ಕಾರ್ಡ್​ಗಳಿದ್ದು, 27 ಸಾವಿರಕ್ಕೂ ಹೆಚ್ಚು ಕೆಲಸಗಾರರಿದ್ದಾರೆ.

  ಪ್ರತಿ ಸೋಮವಾರ ಬಹುತೇಕ ಗ್ರಾಪಂಗಳಲ್ಲಿ ಕಾರ್ಯಕ್ರಮ ಕೈಗೊಳ್ಳಲಾಗುತ್ತದೆ. ಈ ವೇಳೆ ಹೊಸ ಜಾಬ್​ಕಾರ್ಡ್ ಜತೆಗೆ ಹೆಸರು ತಿದ್ದುಪಡಿ, ಸೇರ್ಪಡೆ ಮಾಡಲಾಗುತ್ತದೆ. ಸೋಮವಾರ ಗೊಜನೂರ ಗ್ರಾಮದಲ್ಲಿ 50ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿ ಜಾಬ್ ಕಾರ್ಡ್ ವಿತರಿಸಲಾಯಿತು.

  ಏ. 1ರಿಂದ 10 ರೂಪಾಯಿ ಕೂಲಿ ಹೆಚ್ಚಾಗಲಿದೆ. ಇದೀಗ ಕೃಷಿ ಕೆಲಸ ಮುಗಿದಿರುವುದು, ಕರೊನಾ ಭೀತಿಯಿಂದ ಕೆಲಸ ಬಿಟ್ಟು ಸ್ವಗ್ರಾಮದಲ್ಲಿ ನೆಲೆಯೂರಿರುವ ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸಲಾಗುತ್ತಿದೆ.

  ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ದುಡಿಯೋಣ ಬಾ ಅಭಿಯಾನದಡಿ ಬದು ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಉದ್ಯೋಗ ಆಸಕ್ತ ಎಲ್ಲರಿಗೂ ಒಂದೇ ದಿನದಲ್ಲಿ ಜಾಬ್​ಕಾರ್ಡ್ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಜನರಿಗೆ ಕಾರ್ಡ್ ದೊರೆಯುವಂತೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳ ಜನರು ತಮ್ಮ ವ್ಯಾಪ್ತಿಯ ಗ್ರಾಪಂಗಳಲ್ಲಿ ಇದರ ಪ್ರಯೋಜನ ಪಡೆಯಬಹುದು.
  | ಆರ್.ವೈ. ಗುರಿಕಾರ
  ತಾಪಂ ಕಾರ್ಯನಿರ್ವಾಹಕ ಅಧಿಕಾರಿ

  ನಮ್ಮ ಕುಟುಂಬದ ಸದಸ್ಯರು ಮಕ್ಕಳು ಮರಿ ಬಿಟ್ಟು ಬೇರೆ ಊರಿಗೆ ಕಬ್ಬು ಕಡಿಯಲು, ಗಾರೆ ಕೆಲಸಕ್ಕೆ ಹೋಗುತ್ತಿದ್ದೇವು. ಈಗ ನಮ್ಮೂರಲ್ಲಿಯೇ ತಕ್ಷಣವೇ ಜಾಬ್​ಕಾರ್ಡ್ ಕೊಟ್ಟು ಪ್ರತಿ ಕುಟುಂಬಕ್ಕೆ 100 ದಿನ ಕೆಲಸ, 299 ರೂಪಾಯಿ ಕೂಲಿ ಕೊಡುತ್ತಿರುವುದರಿಂದ ಬೇರೆಡೆ ಹೋಗುವುದು ತಪ್ಪಿದೆ.
  | ತಿಪ್ಪವ್ವ ನೀಲಪ್ಪ ಹರಿಜನ ಹೊಸ ಜಾಬ್ ಕಾರ್ಡ್ ಪಡೆದ ಮಹಿಳೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts