More

    ಬರ ಪರಿಹಾರ ಪಾವತಿಗೆ ವಿಘ್ನ: ಪ್ರಾಯೋಗಿಕ ಜಾರಿಯಿಂದ ಪತ್ತೆಯಾದ ತಾಂತ್ರಿಕ ಸಮಸ್ಯೆ

    ಬೆಂಗಳೂರು: ಬರಗಾಲ ಬಾಧಿತ ಪ್ರದೇಶದ ರೈತರಿಗೆ ಮೊದಲ ಕಂತಿನಲ್ಲಿ ತಲಾ ಎರಡು ಸಾವಿರ ರೂ. ಪರಿಹಾರ ವಿತರಣೆಗೆ ತಾಂತ್ರಿಕ ವಿಘ್ನ ಎದುರಾಗಿದ್ದು, ರಾಜ್ಯ ಸರ್ಕಾರ ಸಂದಿಗ್ಧಕ್ಕೆ ಸಿಲುಕಿದೆ. ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಹರಿಹಾಯುತ್ತಿವೆ, ಪರಿಹಾರಕ್ಕೆ ರೈತ ಸಂಘಟನೆಗಳು ಒತ್ತಡ ಹೇರಿದ್ದು, ಹಲವೆಡೆ ನೊಂದ ರೈತರು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರದ ನೆರವಿಗೆ ಕಾಯದೆ ರಾಜ್ಯದ ಬೊಕ್ಕಸದಿಂದಲೇ ಸಂತ್ರಸ್ತರಿಗೆ ನೆರವಾಗುತ್ತೇವೆ ಎಂಬ ಸಿಎಂ ಸಿದ್ದರಾಮಯ್ಯ ಘೋಷಣೆ ಕಣ್ಣೊರೆಸುವ ತಂತ್ರವೆಂದು ಪ್ರತಿಪಕ್ಷಗಳು ಶಂಕಿಸಿದ್ದವು. ತ್ವರಿತವಾಗಿ ಪರಿಹಾರ ವಿತರಿಸುವ ಮೂಲಕ ಪ್ರತಿಪಕ್ಷಗಳಿಗೆ ಪ್ರತ್ಯುತ್ತರಿಸಬೇಕೆಂಬ ಸರ್ಕಾರದ ಉತ್ಸಾಹಕ್ಕೆ ತಾಂತ್ರಿಕ ಅಡಚಣೆ ತಣ್ಣೀರೆರಚಿದೆ.

    ಏನಿದು ಸಮಸ್ಯೆ?: ಸರ್ಕಾರದ ಸೂಚನೆಯಂತೆ ‘ಫ್ರೂಟ್ಸ್ ಆಪ್’ನಲ್ಲಿ ರೈತರು ನೋಂದಣಿ ಮಾಡಿಕೊಂಡಿದ್ದು, ಒಂದೇ ಸರ್ವೆ ನಂಬರ್, ಒಂದೇ ಪಹಣಿ ಪತ್ರದಲ್ಲಿ (ಆರ್​ಟಿಸಿ) ಬಹು ರೈತರ ಹೆಸರುಗಳಿವೆ. ಅಗತ್ಯವಾದ ಆಧಾರ್, ಬ್ಯಾಂಕ್ ಖಾತೆ ಸಂಖ್ಯೆ ಜೋಡಿಸಿದ್ದರೂ, ಒಂದೇ ಕುಟುಂಬದ ಸದಸ್ಯರು ಬೇರೆ ಬೇರೆಯಾದ ನಂತರ ಆಯಾ ಹೆಸರಿಗೆ ನಿರ್ದಿಷ್ಟ ಜಮೀನಿನ ಮಾಲೀಕತ್ವ ವಿಂಗಡಣೆಯಾಗಿಲ್ಲ. ಕೆಲವೆಡೆ ತೀರಿಹೋದ ಮನೆ ಯಜಮಾನನ ಹೆಸರು ಆರ್​ಟಿಸಿಯಲ್ಲಿದೆ. ಆದರೆ ಆ ಕುಟುಂಬದ ಅಣ್ಣ, ತಮ್ಮಂದಿರು ಜಮೀನು ಹಂಚಿಕೊಂಡು ಸಾಗುವಳಿ ಮಾಡುತ್ತಿದ್ದು, ಎಲ್ಲರೂ ಹೆಸರು ನೋಂದಾಯಿಸಿದ್ದಾರೆ. ಒಂದು ಸರ್ವೆ ನಂಬರ್​ನ ಆರ್​ಟಿಸಿಯ ಒಬ್ಬರ ಹೆಸರಿಗೆ ಪರಿಹಾರ ಧನ ಜಮೆಯಾದರೆ ಉಳಿದವರ ಹೆಸರು ಸ್ವಯಂಚಾಲಿತವಾಗಿ ಡಿಲಿಟ್ ಆಗುತ್ತವೆ. ದಾಖಲೆ ಪ್ರಕಾರ ಅಲ್ಲದಿದ್ದರೂ ಉಳಿದ ರೈತರೂ ಬರಗಾಲದಿಂದ ಬಾಧಿತರಾಗಿದ್ದಾರೆ.

    ಎಲ್ಲಿ ಪತ್ತೆ?
    ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ರೈತರ ಬ್ಯಾಂಕ್ ಖಾತೆಗೆ ತಲಾ ಎರಡು ಸಾವಿರ ರೂ.ಗಳನ್ನು ಪ್ರಾಯೋಗಿಕವಾಗಿ ಜಮಾ ಮಾಡಿದ ವೇಳೆ ತಾಂತ್ರಿಕ ಸಮಸ್ಯೆ ಪತ್ತೆಯಾಗಿದೆ. ಸಾವಿರಾರು ರೈತರು ಮೊದಲ ಕಂತಿನ ಪರಿಹಾರದಿಂದ ವಂಚಿತರಾಗಿದ್ದಾರೆ. ನೋಂದಣಿಯಾದ ಎಲ್ಲ ರೈತರಿಗೆ ಪರಿಹಾರ ಜಮೆ ಸವಾಲಾಗಿದೆ.

    ಪರ್ಯಾಯ ಮಾಗೋಪಾಯ
    ತಾಂತ್ರಿಕ ಸಮಸ್ಯೆ ಬಗೆಹರಿಸುವ ಜತೆಗೆ ತ್ವರಿತವಾಗಿ ಪರಿಹಾರ ವಿತರಿಸಲು ಸಾಧ್ಯವಿರುವ ಪರ್ಯಾಯ ಮಾಗೋಪಾಯಗಳ ಬಗ್ಗೆ ಗಂಭೀರ ಪ್ರಯತ್ನ ನಡೆದಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ. ರಾಜ್ಯದ 236ರಲ್ಲಿ 223 ತಾಲೂಕುಗಳನ್ನು ತೀವ್ರ ಬರಪೀಡಿತವೆಂದು ಘೋಷಿಸಿದ್ದು, 45 ಲಕ್ಷ ರೈತರು ಸಂತ್ರಸ್ತರಾಗಿದ್ದಾರೆ ಎನ್ನುವುದು ಸದ್ಯದ ಅಂದಾಜು. ಫ್ರೂಟ್ಸ್​ನಲ್ಲಿ ನೋಂದಣಿಯಾದ ಹೆಸರುಗಳ ಜಾಡುಹಿಡಿದು ಭೌತಿಕವಾಗಿ ಪರಿಶೀಲನೆ, ಅರ್ಹ ಮತ್ತು ಅನರ್ಹರನ್ನು ಪ್ರತ್ಯೇಕಿಸಲು ಸಾಕಷ್ಟು ಕಾಲಾವಕಾಶ ಹಿಡಿಯಲಿದೆ ಎನ್ನಲಾಗುತ್ತಿದೆ. ತಂತ್ರಾಂಶವನ್ನೇ ಪರಿಷ್ಕರಿಸಿ ತಾಂತ್ರಿಕ ತೊಡಕು ನಿವಾರಿಸಲು ಸಾಧ್ಯವೇ? ಎಂದು ಇಲಾಖೆ ಚಿಂತಿಸಿದ್ದು, ಅರ್ಹ ರೈತರ ನಿಖರ ದತ್ತಾಂಶಗಳನ್ನು ಸಂಗ್ರಹಿಸುವ ಅನಿವಾರ್ಯತೆಗೆ ಸಿಲುಕಿದೆ.

    ಸರ್ಕಾರ ಪ್ರಕಟಿಸಿದ ಮೊದಲ ಕಂತಿನ ಪರಿಹಾರ ಮೊತ್ತವು ಬೀಜ ಖರೀದಿಗೂ ಆಗುವುದಿಲ್ಲ. ಆದರೂ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ವಿಳಂಬ ಸರಿಯಲ್ಲ. ತಾಂತ್ರಿಕ ತೊಂದರೆಗಳಿದ್ದರೆ ಸಾಫ್ಟ್​ವೇರ್ ಪರಿಷ್ಕರಣೆಗೆ ಅವಕಾಶಗಳಿವೆ.

    | ಹನುಮನಗೌಡ ಬೆಳಗುರ್ಕಿ, ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ

    ಸರ್ಕಾರಕ್ಕೆ ಪೇಚು
    ಎನ್​ಡಿಆರ್​ಎಫ್ ನಿಯಮಾವಳಿ ಪ್ರಕಾರ ಬೆಳೆ ನಷ್ಟಕ್ಕೆ ಇನ್ಪುಟ್ ಸಬ್ಸಿಡಿ ವಿತರಿಸಲು 18,171 ಕೋಟಿ ರೂ. ನೆರವು ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮೊರೆಯಿಟ್ಟಿದೆ. ಹಲವು ಪತ್ರ ಬರೆದು ಬಳಿಕ ಸಿಎಂ ಸಿದ್ದರಾಮಯ್ಯ, ಸಚಿವರ ನಿಯೋಗವು ಪ್ರಧಾನಿ, ಗೃಹ, ಕೃಷಿ ಸಚಿವರನ್ನೂ ಭೇಟಿಯಾಗಿ ಮನವಿ ಸಲ್ಲಿಸಿದೆ. ಜತೆಗೆ, ಕೇಂದ್ರ ಸರ್ಕಾರದ ವಿಳಂಬ ಧೋರಣೆ ವಿರುದ್ಧ ಹರಿಹಾಯ್ದಿದೆ. ರೈತರು ದೊಡ್ಡ ಪ್ರಮಾಣದಲ್ಲಿ ಬೆಳೆ ನಷ್ಟ ಅನುಭವಿಸಿದ್ದಾರೆ. ತಾತ್ಪೂರ್ತಿಕ ಪರಿಹಾರ ಯಾವುದಕ್ಕೂ ಸಾಲದು, ಘೋಷಿಸಿದಂತೆ ನಡೆದುಕೊಂಡಿಲ್ಲವೆಂದು ಪ್ರತಿಪಕ್ಷಗಳು ವಾಗ್ದಾಳಿ ಮಾಡುತ್ತಿದ್ದರೆ, ನೊಂದ ರೈತರ ಅಸಹನೆಯೂ ಹೆಚ್ಚುತ್ತಿದೆ.

    ಖ್ಯಾತ ನಟರ ಜತೆ ಅಫೇರ್! ಶ್ರೀರಾಮಚಂದ್ರನ ಬೆಡಗಿ ಮೋಹಿನಿ ಬಿಚ್ಚಿಟ್ಟ ಅಸಲಿ ಸಂಗತಿ​ ಇದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts