More

    467 ಜನರಿಗೆ ಕೆಎಫ್​ಡಿ ಲಸಿಕೆ ಗುರಿ

    ಎನ್.ಆರ್.ಪುರ: ಕೊನೋಡಿ ಗ್ರಾಮದ ವ್ಯಾಪ್ತಿಯ 6 ಹಳ್ಳಿಗಳಲ್ಲಿ ಮಂಗನ ಕಾಯಿಲೆ ಬಾರದಂತೆ ಮುಂಜಾಗ್ರತಾ ಕ್ರಮವಾಗಿ 467 ಜನರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸುರೇಶ್ ತಿಳಿಸಿದರು.

    ಶುಕ್ರವಾರ ಸೀತೂರು ಗ್ರಾಪಂ ಕೊನೋಡಿ ಗ್ರಾಮದ ಬೆಮ್ಮನೆಯ ಪಂಚವಟಿ ಗ್ರಾಮ ಅರಣ್ಯ ಸಮಿತಿ ಸಭಾಭವನದಲ್ಲಿ ಏರ್ಪಡಿಸಿದ್ದ ಉಚಿತ ಮಂಗನ ಕಾಯಿಲೆ ಲಸಿಕೆ ಅಭಿಯಾನದಲ್ಲಿ ಮಾತನಾಡಿ, ಈಗ ಲಸಿಕೆ ಪಡೆದವರು ಒಂದು ತಿಂಗಳ ನಂತರ ಎರಡನೇ ಬಾರಿ ಹಾಗೂ ಮತ್ತೆ 6 ತಿಂಗಳ ನಂತರ ಬಲವರ್ಧನ ಲಸಿಕೆ ಪಡೆಯಬೇಕು ಎಂದು ಹೇಳಿದರು.

    ಮಂಗನ ಕಾಯಿಲೆ ಪ್ಲೇವಿ ವೈರಸ್​ನಿಂದ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಈ ರೋಗವು ಉಣ್ಣೆ ಮೂಲಕ ಹರುಡುತ್ತದೆ. ಹಳ್ಳಿ ಜನರು ಕಾಡಿನ ಸಂಪರ್ಕದಲ್ಲಿರುವುದರಿಂದ ಮಂಗನ ಕಾಯಿಲೆ ವೇಗವಾಗಿ ಹರಡುತ್ತದೆ ಎಂದರು.

    ಸೀತೂರು ಗ್ರಾಪಂ ಉಪಾಧ್ಯಕ್ಷ ಎಚ್.ಇ.ದಿವಾಕರ ಮಾತನಾಡಿ, ಸೀತೂರು ಗ್ರಾಪಂನಲ್ಲಿ ಕಂಡುಬಂದಿರುವ ಮಂಗನ ಕಾಯಿಲೆ ನಿಯಂತ್ರಿಸಲು ಗ್ರಾಪಂ ಆರೋಗ್ಯ ಇಲಾಖೆಗೆ ಸಹಕಾರ ನೀಡಲಿದೆ. ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.

    ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ವೀರಪ್ರಸಾದ್ ಮಾತನಾಡಿ, ಗ್ರಾಮಸ್ಥರು ಕಾಡಿಗೆ ಹೋಗುವ ಮುನ್ನ ಆರೋಗ್ಯ ಇಲಾಖೆ ನೀಡುವ ಡಿಎಂಪಿ ಆಯಿಲ್ ಅನ್ನು ಮೈಗೆ ಹಚ್ಚಿಕೊಂಡು ಹೋಗಬೇಕು. ಮನೆಗೆ ಬಂದ ನಂತರ ಬಟ್ಟೆಯನ್ನು ಬಿಸಿ ನೀರಿನಲ್ಲಿ ತೊಳೆಯಬೇಕು. ಬಿಸಿ ನೀರಿನಿಂದ ಸ್ನಾನ ಮಾಡಬೇಕು. ಸಾಕು ಪ್ರಾಣಿಗಳಿಗೆ ಪ್ರತಿ ದಿನ ಬಿಸಿ ನೀರಿನಿಂದ ಸ್ನಾನ ಮಾಡಿಸಬೇಕು ಎಂದು ಸಲಹೆ ನೀಡಿದರು.

    ಗ್ರಾಪಂ ಸದಸ್ಯರಾದ ಎನ್.ಪಿ.ರಮೇಶ್, ವಿಜಯಾ, ದಾಮಿನಿ, ಪಂಚವಟಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಮಂಜುನಾಥ ಗೌಡ,ಹಿರಿಯ ಆರೋಗ್ಯ ನಿರೀಕ್ಷಕ ಪಿ.ಪ್ರಭಾಕರ್, ಕಿರಿಯ ಆರೋಗ್ಯ ನಿರೀಕ್ಷಕ ರತ್ನಮ್ಮ, ಕಿರಿಯ ಆರೋಗ್ಯ ಸಹಾಯಕಿ ಉಷಾ, ಮಧ್ಯಮ ಹಂತದ ಆರೋಗ್ಯ ಪೂರೈಕೆದಾರ ದೇವರಾಜ್, ನಾಗವೇಣಿ, ಆಶಾ ಕಾರ್ಯಕರ್ತೆ ಜೈನಾಬಿ, ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾ, ಆಶಾ, ವಿಶಾಲಾ, ಆರೋಗ್ಯ ಇಲಾಖೆ ಸಿಬ್ಬಂದಿ ಮನೋಜ್, ದೇವಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts