More

    ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಕ್ಕೆ ನಿರುತ್ಸಾಹ!

    ತುಮಕೂರು: ಲಾಕ್‌ಡೌನ್ ಇರುವುದರಿಂದ ರೈತರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರದ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಹೆಚ್ಚಿಸಿದ್ದರೂ ಕಾಮಗಾರಿ ಕೈಕೊಳ್ಳಲು ಗ್ರಾಪಂಗಳೇ ನಿರುತ್ಸಾಹ ತೋರುತ್ತಿವೆ.

    ಜಿಲ್ಲೆಯಲ್ಲಿ ಪ್ರಸ್ತುತ 3.87 ಲಕ್ಷ ಜಾಬ್‌ಕಾರ್ಡ್‌ಗಳಿವೆ. ವರ್ಷದಲ್ಲಿ ಕನಿಷ್ಠ 150 ದಿನ ಉದ್ಯೋಗ ಬಯಸುತ್ತಿದ್ದರೂ ಲಾಕ್‌ಡೌನ್ ಸಮಯದ ಸದು ಪಯೋಗವನ್ನು ಯೋಜನೆ ಮೂಲಕ ಮಾಡಿಕೊಳ್ಳಲು ರೈತರು ಹಾಗೂ ಪಂಚಾಯತ್‌ರಾಜ್ ಇಲಾಖೆ ಅಧಿಕಾರಿಗಳು ವಿಲರಾಗಿದ್ದು, ಕ್ರಿಯಾಯೋಜನೆಗೆ ಅನುಮೋದನೆ ನೀಡುವುದಕ್ಕೆ ಸೀಮಿತವಾಗಿದ್ದಾರೆ. ಆದರೆ ಗ್ರಾಮೀಣರು ಜಮೀನುಗಳಲ್ಲಿಯೇ ನರೇಗಾ ಅಡಿ ವೈಯಕ್ತಿಕ ಕೆಲಸ ಮಾಡಿಕೊಳ್ಳಲು ಅವಕಾಶವಿದೆ. ಪ್ರಸ್ತುತ ಕೇಂದ್ರ ಸರ್ಕಾರ ಹಿಂದಿದ್ದ ದಿನಗೂಲಿಯನ್ನು 249 ರೂ., ನಿಂದ 275 ರೂ.,ಗೆ ಹೆಚ್ಚಿಸಿದೆ.

    420 ಕೋಟಿ ರೂ.ವಿಶೇಷ ಅನುದಾನ: ಲಾಕ್‌ಡೌನ್ ಸಮ್ಢಯದಲ್ಲಿ ಕಾಮಗಾರಿ ಕೈಕೊಳ್ಳಲು ಜಿಲ್ಲೆಯಲ್ಲಿ ವಿಶೇಷ ಅನುದಾನವಾಗಿ 420.30 ಕೋಟಿ ರೂ. ನೀಡಲಾಗಿದೆ, 86 ಲಕ್ಷ ಮಾನವ ದಿನ ಸೃಜಿಸುವ ಗುರಿ ನೀಡಿದ್ದರೂ ಅಧಿಕಾರಿಗಳು ಸ್ಥಳೀಯರಿಗೆ ಸೂಕ್ತ ಮಾಹಿತಿ ನೀಡದಿರುವುದರಿಂದ ಜಿಲ್ಲೆಯಲ್ಲಿ ಯೋಜನೆ ಇನ್ನೂ ಟೇಕಾಫ್ ಆಗದಂತಾಗಿದೆ. ಬೆಂಗಳೂರು ಸೇರಿ ವಿವಿಧೆಡೆಯಿಂದ ಸ್ವಗ್ರಾಮಗಳಿಗೆ ಹಿಂತಿರುಗಿರುವವರು ಜಮೀನುಗಳಲ್ಲಿ ಸ್ವಂತ ಖರ್ಚಿನಲ್ಲಿ ವಿವಿಧ ಕಾಮಗಾರಿ ನಡೆಸಲಾರಂಭಿಸಿದ್ದರೂ ನರೇಗಾ ಯೋಜನೆಯಲ್ಲಿ ಅದನ್ನು ಸೇರಿಸಿಕೊಂಡು ಜನರಿಗೆ ನೆರವಾಗುವ ಕೆಲಸವನ್ನು ಸ್ಥಳೀಯ ಗ್ರಾಪಂಗಳು ಮಾಡುತ್ತಿಲ್ಲ. ಮನರೇಗಾ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದರೂ ಕೆಲಸ ನೀಡಲು ತಡಮಾಡುವುದು, ಸ್ಥಳೀಯ ಅಧಿಕಾರಿಗಳ ಉದಾಸೀನತೆ ಹಾಗೂ ಈ ಹಿಂದಿನ 2 ವರ್ಷಗಳಲ್ಲಿ ಮಾಡಿರುವ ಕೆಲಸಗಳಲ್ಲಿ ಬಿಲ್ ಆಗದಿರುವ ಬಗ್ಗೆ ಸಾಕಷ್ಟು ಬೇಸರಗೊಂಡಿರುವ ರೈತರು ಮನರೇಗಾ ಕಾಮಗಾರಿ ಎಂದರೇ ಮೂಗು ಮುರಿಯುವಂತಾಗಿದೆ. ಹಿಂದಿನ ಎಲ್ಲ ತಪ್ಪುಗಳಿಗೂ ಈಗ ಮಾಡುವ ಕೆಲಸಗಳಿಗೂ ಸಂಬಂಧವಿಲ್ಲ ಎಂದು ಅಧಿಕಾರಿಗಳು ಮನವರಿಕೆ ಮಾಡಿಕೊಡುವ ತುರ್ತು ಅಗತ್ಯವಿದೆ.

    ಯಾವ್ಯಾವ ಕೆಲಸ ಮಾಡಿಕೊಳ್ಳಬಹುದು: ದನಗಳ ಕೊಟ್ಟಿಗೆ, ಬದು ನಿರ್ಮಾಣ, ಕೃಷಿಹೊಂಡ, ಗಿಡ ಹಾಕುವುದು, ಕೊಳವೆಬಾವಿ ರೀಚಾರ್ಜ್, ಪಿಟ್ ಸೇರಿ ವಿವಿಧ ಅಂತರ್ಜಲ ಅಭಿವೃದ್ಧಿ ಕಾರ್ಯಕ್ರಮಕ್ಕೆ ಅವಕಾಶವಿದೆ. ಆಸಕ್ತರು ಸ್ಥಳೀಯ ಗ್ರಾಪಂ ಕಚೇರಿಯಲ್ಲಿ ನಮೂನೆ 6ರಲ್ಲಿ ಅಗತ್ಯ ದಾಖಲೆಗಳ ಜತೆ ಕೆಲಸ ಬಯಸಿ ಅರ್ಜಿ ಸಲ್ಲಿಸಿದರೆ ಮನರೇಗಾ ಯೋಜನೆ ಮಾರ್ಗಸೂಚಿಯಂತೆ ಮಾಡಲು ಸಾಕಷ್ಟು ಕೆಲಸ ಲಭ್ಯವಾಗಲಿದೆ. ರೈತರು ಜಮೀನಿನಲ್ಲಿಯೇ ಕೆಲಸ ಮಾಡಿಕೊಂಡು ಲಾಭ ಪಡೆಯುವ ಅಗತ್ಯವಿದೆ.

    ಬಿಡುವಾಗಿರುವ ಕಾರಣಕ್ಕೆ ಜಮೀನುಗಳಲ್ಲಿ ವಿವಿಧ ಕೆಲಸಗಳನ್ನು ಮಾಡಿಕೊಳ್ಳಲಾರಂಭಿಸಿದ್ದೇವೆ, ಇದಕ್ಕೆ ಮನರೇಗಾ ಯೋಜನೆ ಬಳಸಿಕೊಳ್ಳಿ ಎಂದು ಮೋದಿ ಅವರು ಮಾಡಿದ ಭಾಷಣ ಕೇಳಿ ಸ್ಥಳೀಯ ಗ್ರಾಪಂಗೆ ಹೋದರೆ ಅಲ್ಲಿ ಮಾಹಿತಿ ನೀಡುವವರು ಇಲ್ಲ. ಅಲ್ಲಿ ಅಲೆಯುವ ಬದಲಾಗಿ ನಮ್ಮ ಹಣದಲ್ಲಿಯೇ ಸಣ್ಣದಾಗಿ ಕೆಲಸ ಮಾಡುತ್ತೇವೆ.
    ಎಸ್.ಎಲ್.ಉಮೇಶ್ ರೈತ, ಹಂದನಕೆರೆ

    ರೈತರು ಬಯಸಿದರೆ ಕೆಲಸ ನೀಡಲು ನಾವು ಸಿದ್ಧ. ಸ್ಥಳೀಯ ಗ್ರಾಪಂ ಸಂಪರ್ಕಿಸಿ ಲಾಕ್‌ಡೌನ್ ಸಮಯದಲ್ಲಿ ಜಮೀನಿನಲ್ಲಿಯೇ ಅಗತ್ಯ ಕೆಲಸ ಮಾಡಿಕೊಳ್ಳಬಹುದು. ಕೂಲಿ ಹೆಚ್ಚಿಸಲಾಗಿದ್ದು ಅನುಕೂಲವಾಗಲಿದೆ.
    ಟಿ.ಕೆ.ರಮೇಶ್ ತುಮಕೂರು ಜಿಪಂ ಉಪ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts