More

    ಜರೂರ್​ ಮಾತು: ದಿಲ್ ಬೇಚಾರಾ, ಅಪೂರ್ಣ ಬದುಕು ಮತ್ತು ಖುಷಿಯ ಕ್ಷಣಗಳು

    ಜರೂರ್​ ಮಾತು: ದಿಲ್ ಬೇಚಾರಾ, ಅಪೂರ್ಣ ಬದುಕು ಮತ್ತು ಖುಷಿಯ ಕ್ಷಣಗಳು

    ಚಟಕ್ ಚಾಂದನಿ (ಸುಡುವ ಬೆಳದಿಂಗಳು)ಯಂತಿದ್ದ ಆ ಹುಡುಗಿಗೆ ಶ್ವಾಸಕೋಶದ ಕ್ಯಾನ್ಸರ್! ಬೆನ್ನಿಗೆ ಸದಾ ಆಕ್ಸಿಜನ್ ಸಿಲಿಂಡರ್ ಕಟ್ಟಿಕೊಂಡೇ ಓಡಾಡಬೇಕು, ಆ ಸಿಲಿಂಡರ್ ಯಾವಾಗಲೂ ಜತೆಯಲ್ಲಿ ಇರುತ್ತಿದ್ದರಿಂದ ಅದಕ್ಕೆ ‘ಪುಷ್ಪಿಂದರ್’ ಎಂಬ ಚೆಂದದ ಹೆಸರು! ಕ್ಯಾನ್ಸರ್ ಕೌನ್ಸೆಲಿಂಗ್ ಸೆಷನ್​ನಲ್ಲಿ ಎಲ್ಲರ ಮಾತು ಕೇಳಿಸಿಕೊಳ್ಳುತ್ತಿದ್ದ ಈಕೆ ಮಾತ್ರ ಒಂದೂ ಮಾತಾಡುತ್ತಿರಲಿಲ್ಲ. ಯಾರಾದರೂ ಅಳುತ್ತಿದ್ದರೆ ಅಥವಾ ನೋವಿನಲ್ಲಿದ್ದರೆ ಗಟ್ಟಿಯಾಗಿ ತಬ್ಬಿಕೊಂಡು ಬಿಡಬೇಕು, ಆಗ ಅವರ, ನಮ್ಮ ಮನಸ್ಸಿನ ಭಾರ ಕಮ್ಮಿಯಾಗುತ್ತದೆ ಎಂದು ಎಷ್ಟೋ ಜನರ ದುಃಖಕ್ಕೆ ಸ್ಪಂದಿಸುತ್ತಿದ್ದಳು, ಸಾಂತ್ವನ ಹೇಳುತ್ತಿದ್ದಳು. ಅದು ಅವಳಿಗೆ ಸ್ವಲ್ಪ ಸಮಾಧಾನ ಕೊಡುತ್ತಿತ್ತು. ಆದರೂ, ದಿನನಿತ್ಯವೂ ‘ಪುಷ್ಟಿಂದರ್’ ಮತ್ತು ಮಾತ್ರೆಗಳ ಸಹವಾಸ ಸಾಕಾಗಿ ಬದುಕು ಸಪ್ಪೆ ಎನಿಸಿತ್ತು.

    ಆಗಲೇ ಒಬ್ಬ ಹುಡುಗ ಈ ಹುಡುಗಿಯ ಬಾಳಲ್ಲಿ ಎಂಟ್ರಿ ಕೊಡುತ್ತಾನೆ. ಸ್ನೇಹ, ಕ್ರಮೇಣ ಪ್ರೀತಿಗೆ ತಿರುಗುತ್ತದೆ. ಆತ ಕೂಡ ಕ್ಯಾನ್ಸರ್​ನಿಂದ ಒಂದು ಕಾಲು ಕಳೆದುಕೊಂಡು ಕೃತಕ ಕಾಲಿನ ಬಲದ ಮೇಲೆ ಜೀವನದ ಓಟ ಓಡುತ್ತಿರುತ್ತಾನೆ. ತೀರಾ ಬೋರಾಗಿದ್ದ ಆಕೆಯ ಬದುಕು, ಕನಸುಗಳು ಅರಳತೊಡಗಿದವು. ಆ ಹುಡುಗನಿಗೂ ನೋವಿತ್ತು, ಕಷ್ಟಗಳಿತ್ತು. ಆದರೆ ಈಕೆಯ ಕೊನೆ ದಿನಗಳಾದರೂ ಖುಷಿಯಿಂದ ಕೂಡಿರಬೇಕು, ಪ್ರತೀ ಕ್ಷಣವೂ ಚೇತೋಹಾರಿಯಾಗಿ ಕಳೆಯಬೇಕು ಎಂದುಕೊಂಡು ಮನಮೆಚ್ಚಿದ ಹುಡುಗಿಯ ಪ್ರತೀ ನೋವಿಗೂ ಸ್ಪಂದಿಸತೊಡಗಿದ, ಆಕೆ ಮುಖದಲ್ಲಿ ನಗು ಚಿಮ್ಮುವಂತೆ ಮಾಡಿದ.

    ಆ ಹುಡುಗಿ ಒಬ್ಬ ಗಾಯಕನ ಬಿಗ್ ಫ್ಯಾನ್. ಆತನ ಹಾಡುಗಳಲ್ಲೇ ತನ್ನ ಕನಸು, ಕನವರಿಕೆ, ಭಾವನೆಗಳಿಗೆ ಬಣ್ಣ ತುಂಬುತ್ತಿದ್ದಳು. ಇವಳು ತುಂಬ ಇಷ್ಟಪಟ್ಟ ಒಂದು ಹಾಡನ್ನು ಗಾಯಕ ಅದ್ಯಾಕೋ ಎಂಡ್ ಮಾಡದೇ, ಅರ್ಧಕ್ಕೆ ಬಿಟ್ಟಿದ್ದ. ಆ ಶಬ್ದಗಳನ್ನು, ಭಾವವನ್ನು ಪೂರ್ಣಗೊಳಿಸದೆ ಹಾಡನ್ನು ನಿಲ್ಲಿಸಿದ್ದೇಕೆ ಎಂಬ ಪ್ರಶ್ನೆ ಇವಳಿಗೆ ಬೆಂಬಿಡದೆ ಕಾಡುತ್ತಿತ್ತು. ಆ ಗಾಯಕ ಸಾಮಾಜಿಕ ಮಾಧ್ಯಮಗಳಿಂದಲೂ ದೂರವಾಗಿದ್ದ. ಇ-ಮೇಲ್ ಮಾಡಿದಾಗ ಒಮ್ಮೆ ಪ್ರತಿಕ್ರಿಯಿಸಿ ‘ನೀವು ಪ್ಯಾರಿಸ್​ನಲ್ಲಿದ್ದರೆ ಭೇಟಿಯಾಗೋಣ’ ಎಂದ. ಆ ಗಾಯಕನನ್ನು ಒಮ್ಮೆ ಭೇಟಿ ಮಾಡಬೇಕು, ಅನುಮಾನಗಳನ್ನು ಪರಿಹರಿಸಿಕೊಳ್ಳಬೇಕು ಎಂಬುದು ಇವಳ ಉತ್ಕಟ ಇಚ್ಛೆ. ಅಷ್ಟರಲ್ಲೇ ಮತ್ತೊಂದು ತಿರುವು. ಉಸಿರಾಟದ ಸಮಸ್ಯೆ ಗಂಭೀರವಾಗಿ ಆಸ್ಪತ್ರೆ ಸೇರಿದಳು, ಪ್ರಾಣವೇನೋ ಉಳಿಯುತ್ತದೆ. ಆದರೆ, ವೈದ್ಯರು ಈಕೆಗೆ ಪ್ರವಾಸ ಮಾಡುವಂತಿಲ್ಲ ಎಂದುಬಿಡುತ್ತಾರೆ. ಸಂದಿಗ್ಧ ಸ್ಥಿತಿ. ಕೊನೆಗೆ, ಈಕೆಯ ಪ್ರೀತಿಯ ಹುಡುಗನೇ ಹುಡುಗಿಯ ಮನೆಯವರಿಗೆ ಒಪ್ಪಿಸಿ, ಪ್ರೇಯಸಿಯನ್ನೂ, ಆಕೆಯ ತಾಯಿಯನ್ನೂ ಪ್ಯಾರಿಸ್​ಗೆ ಕರೆದೊಯ್ಯುತ್ತಾನೆ.

    ಅಲ್ಲಿ ತಲುಪಿ ಭಾರಿ ಕುತೂಹಲದಿಂದ ಆ ಗಾಯಕನನ್ನು ಭೇಟಿ ಮಾಡಿದಾಗ, ಜೀವನೋತ್ಸಾಹವೇ ಇಲ್ಲದ ಆ ವ್ಯಕ್ತಿ- ‘ಈ ಜೀವನವೇ ಅಪೂರ್ಣವಾಗಿದೆ. ಹಾಗಾಗಿ, ನನ್ನ ಹಾಡು ಕೂಡ ಅಪೂರ್ಣವಾಗಿದೆ. ಇಲ್ಲಿ ಯಾವುದೂ ಪೂರ್ಣವಾಗುವುದಿಲ್ಲ. ಕನಸು, ಯೋಜನೆಗಳು, ಆಶಯಗಳು ಎಲ್ಲ ಅಪೂರ್ಣವಾಗಿಯೇ ಉಳಿಯುತ್ತವೆ…’ ಎಂದಾಗ, ಇವರು ನಾವು ಎಂಥ ವ್ಯಕ್ತಿ ಮೇಲೆ ಅಭಿಮಾನ ಇಟ್ಟಿದ್ದೆವು ಎಂದು ಪಶ್ಚಾತ್ತಾಪಪಟ್ಟು, ಅಪೂರ್ಣ ಬದುಕಿನ ಪ್ರತೀ ಕ್ಷಣವನ್ನೂ ಸ್ಮರಣೀಯ, ಚೇತೋಹಾರಿಯಾಗಿಸಬೇಕು ಎಂದುಕೊಂಡು, ಅದರಂತೆ ಸಾಗುತ್ತಾರೆ.

    ಪ್ರತಿಭಾವಂತ ನಟ, ಇತ್ತೀಚೆಗಷ್ಟೇ ನಮ್ಮನ್ನು ಅಗಲಿರುವ ಸುಶಾಂತ್ ಸಿಂಗ್ ರಜಪೂತ್​ರ ಕೊನೆಯ ಸಿನಿಮಾ ‘ದಿಲ್ ಬೇಚಾರಾ’ದ ಕಥೆ ಇದು.

    ಬದುಕು ಪೂರ್ಣವೋ, ಅಪೂರ್ಣವೋ ನಮಗೆ ಗೊತ್ತಿಲ್ಲ. ಆದರೆ, ಎಷ್ಟು ದಿನ ಬದುಕಿರುತ್ತೇವೆಯೋ ಅಷ್ಟು ದಿನ ಝುಕಾಸ್ ಆಗಿ ಬದುಕಬೇಕು, ಸಾವು ಎದುರಿಗಿದ್ದರೂ ಅದೇ ಹೊಟ್ಟೆಕಿಚ್ಚು ಪಟ್ಟುಕೊಳ್ಳುವಂತೆ ಇರುವ ಕ್ಷಣಗಳನ್ನು ಆಸ್ವಾದಿಸಬೇಕು. ಮನುಷ್ಯನಿಗೆ ಭಾವನಾತ್ಮಕ ಬೆಂಬಲದ ಅಗತ್ಯ ಮತ್ತು ಅಂಥ ಕೊಂಚ ಬೆಂಬಲವೂ ನೋವನ್ನು ಹೇಗೆ ಕಡಿಮೆ ಮಾಡುತ್ತದೆ ಎಂಬುದನ್ನು ‘ದಿಲ್ ಬೇಚಾರಾ’ ಕಟ್ಟಿಕೊಟ್ಟಿದೆ. ಅಲ್ಲದೆ, ಲೈಫ್ ಶಾರ್ಟ್ ಆಗಿರಲಿ, ದೀರ್ಘವೇ ಆಗಿರಲಿ ನಮ್ಮೆದುರು ಇರುವ ಕ್ಷಣ, ದಿನಗಳನ್ನು ಚೆನ್ನಾಗಿ ಕಳೆಯುವುದೇ ‘ಹ್ಯಾಪಿ ಲೈಫ್’ನ ರಹಸ್ಯ ಎಂದೂ ಸೂಚ್ಯವಾಗಿ ಹೇಳಿದೆ.

    ಬದುಕಿದ್ದು ಏನು ಮಾಡೋದಿದೆ, ಹೇಗೂ ಸಾವು ಎದುರಿಗಿದೆ ಅಂದುಕೊಂಡ ನಾಯಕಿ ಕಿಜಿ ಬಸು(ಸಂಜನಾ ಸಿಂಘ್ವಿ) ಮ್ಯಾನಿ (ಸುಶಾಂತ್ ಸಿಂಗ್)ಯ ಕಾಳಜಿ, ಪ್ರೀತಿ ಸಿಗುತ್ತಿದ್ದಂತೆ ‘ನಾನು ಇನ್ನಷ್ಟು ಕಾಲ ಬದುಕಬೇಕು, ಚೆನ್ನಾಗಿ ಬದುಕಬೇಕು’ ಎಂದು ಹಪಹಪಿಸುತ್ತಾಳೆ (ನಮ್ಮಲ್ಲಿ ತುಂಬ ಜನ ಬದುಕಿದ್ದಾಗಲೇ ಅರ್ಧ ಸತ್ತುಹೋಗೋದು ಅಥವಾ ಅರ್ಧಸತ್ತ ರೋಗಿಗಳು ಪೂರ್ತಿಯಾಗಿ ಸಾಯುವುದು ಇಂಥ ಕಾಳಜಿ, ಪ್ರೀತಿ, ಭಾವನಾತ್ಮಕ ಬೆಂಬಲ ದೊರೆಯದೇ ಇರುವುದರಿಂದ).

    ಇಬ್ಬರೂ ಸೇರಿ ಸಿನಿಮಾದ ಶೂಟಿಂಗನ್ನೂ ಪೂರ್ಣಗೊಳಿಸುತ್ತಾರೆ. ಅಷ್ಟರಲ್ಲೇ ಚಿತ್ರಣ ಉಲ್ಟಾ ಆಗುತ್ತದೆ-ಮ್ಯಾನಿಯ ಕಾಲಿನ ಕ್ಯಾನ್ಸರ್ ದೇಹಕ್ಕೆಲ್ಲ ಆವರಿಸಿ, ಬದುಕು ಕೆಲ ದಿನಗಳಿಗೆ ಸೀಮಿತವಾಗುತ್ತದೆ. ಆಗ ಮ್ಯಾನಿಗೆ ಕಾಳಜಿ, ಪ್ರೀತಿ ದೊರೆಯುವುದು ಅದೇ ಕಿಜಿ ಬಸುವಿನಿಂದ! ಅಂದರೆ ಜೀವನ ಪೂರ್ಣ ಎನಿಸುವುದು ಇಂಥ ಕ್ಷಣಗಳಿಂದಲೇ (ಲವ್ ಮಾಕ್ಟೆಲ್ ಕನ್ನಡ ಚಿತ್ರ ಕೂಡ ಕೊಂಚ ಇಂಥದ್ದೇ ಕಥಾಹಂದರ ಹೊಂದಿದೆ, ಪತ್ನಿಗೆ ಗರ್ಭಕೋಶದ ಕ್ಯಾನ್ಸರ್ ಎಂದು ಗೊತ್ತಾದಾಗ ಪತಿ ಆಕೆಯನ್ನೇ ಮಗುವಿನಂತೆ ಸಲಹಿ, ಎಲ್ಲ ಖುಷಿ ಕೊಡುತ್ತಾನೆ, ಆಕೆಯೊಂದಿಗೆ ಕಳೆದ ಕ್ಷಣಗಳ ನೆನಪಿನಲ್ಲೇ ಮುಂದಿನ ಬದುಕಿನ ಪಥ ನಿರ್ವಿುಸಿಕೊಳ್ಳುತ್ತಾನೆ).

    ಇನ್ನೇನು ಸಾವು ಅಪ್ಪಿಕೊಳ್ಳುತ್ತಿದೆ ಎಂದರಿವಾಗಿ ತನ್ನ ‘ಶ್ರದ್ಧಾಂಜಲಿ ಸಭೆ’ಯನ್ನು ತಾನೇ ಚರ್ಚ್​ನಲ್ಲಿ ಆಯೋಜಿಸುವ ಮ್ಯಾನಿ ಸ್ನೇಹಿತರ, ಪ್ರಿಯತಮೆಯ ಅಂತಿಮ ಸಂದೇಶ ಆಲಿಸುತ್ತಾನೆ. ‘ನಾನು ಹೋದ ಮೇಲೂ ಇವರೆಲ್ಲ ತನ್ನನ್ನು ಮಿಸ್ ಮಾಡಿಕೊಳ್ತಾರೆ’ ಎಂಬ ಸಂಗತಿಯೇ ಅವನಿಗೆ ಸಮಾಧಾನ ನೀಡಿ, ಎರಡೇ ದಿನದಲ್ಲಿ ಪ್ರಾಣಬಿಡುತ್ತಾನೆ. ಕಿಜಿ ಬಸು ಅವನೊಂದಿಗೆ ಕಳೆದ ಪ್ರತೀ ಕ್ಷಣದ ನೆನಪಿನಲ್ಲೇ ಖುಷಿಯ ಚಿಲುಮೆ ಬತ್ತದಂತೆ ಕಾಯ್ದುಕೊಳ್ಳುತ್ತಾಳೆ. ಅಂದರೆ, ಜೀವನಕ್ಕೆ ಅರ್ಥ ಎಲ್ಲಿದೆ, ಬರೀ ನೋವೇ ಇದೆ ಎಂದು ಚಿಂತಿತರಾಗಿ ಕುಳಿತರೆ ಯಾವುದೇ ದಾರಿ ತೆರೆದುಕೊಳ್ಳುವುದಿಲ್ಲ. ಬದಲಾಗಿ, ಜೀವನಕ್ಕೆ ನಾವೇ ಅರ್ಥ ತುಂಬುತ್ತ ಹೋದರೆ ಕೊನೆಪಕ್ಷ ಸಾಯುವಾಗ ಕೊರಗು ಕಾಡುವುದಿಲ್ಲ, ನಮ್ಮ ಜತೆಗಿದ್ದವರಿಗೂ ‘ಎಷ್ಟು ಚೆನ್ನಾಗಿ ಬದುಕಿದರು’ ಎಂಬ ಸಮಾಧಾನ! ಅಲ್ಲವೇ? ನೋವು, ಕಷ್ಟ ಎಲ್ಲರಿಗೂ ಇವೆ. ಆದರೆ, ಬದುಕಿನ ಅಂಗಳದಲ್ಲಿ ಒಬ್ಬರು ಮತ್ತೊಬ್ಬರಿಗೆ ಆಸರೆಯಾದರೆ ಬೇಚಾರಾ ದಿಲ್ ಕೂಡ ಖುಷಿಯಿಂದ ಚಿಮ್ಮುತ್ತದೆ.

    ***

    ಇದು ಸಿನಿಮಾ ಕಥೆಯಲ್ಲ. ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ನೈಜ ಘಟನೆ. ಕರೊನಾ ಕಾಲಘಟ್ಟದಲ್ಲಿ ಅಮಾನವೀಯ ಘಟನೆಗಳೇ ಕಣ್ಣಿಗೆ ರಾಚುತ್ತಿದ್ದರೆ, ಸಣ್ಣದೊಂದು ಸ್ಪಂದನೆ ಹೇಗೆ ಭಾವಲೋಕವನ್ನು ಬೆಳಗಬಲ್ಲದು ಎಂಬುದಕ್ಕೆ ಈ ಘಟನೆ ಸಾಕ್ಷಿ. ಪುಣೆಯ ಅಪಾರ್ಟ್​ವೆುಂಟ್​ವೊಂದರಲ್ಲಿ ವಾಸಿಸುವ ವೃದ್ಧ ದಂಪತಿಗೆ ಸಣ್ಣ ಜ್ವರ, ತಲೆನೋವು ಕಾಣಿಸಿಕೊಂಡಿತು. ಪರೀಕ್ಷೆ ಮಾಡಿಕೊಂಡಾಗ ಕೋವಿಡ್ ಪಾಸಿಟಿವ್! ಮಕ್ಕಳು ಉದ್ಯೋಗದ ನಿಮಿತ್ತ ವಿದೇಶದಲ್ಲಿ ನೆಲೆಸಿದ್ದರು. ಹೋಮ್ ಕ್ವಾರಂಟೈನ್ ಮಾಡಿ, ಮನೆಯಲ್ಲೇ ಚಿಕಿತ್ಸೆ ನಡೆದಿತ್ತು. ಅಕ್ಕಪಕ್ಕದವರು ಈ ವೃದ್ಧ ದಂಪತಿಯನ್ನು ಅಪರಾಧಿಯಂತೆ ನೋಡತೊಡಗಿದರು. ಹಲವರಂತೂ ಸ್ವಯಂ ಗೃಹಬಂಧನಕ್ಕೊಳಗಾದರು. ಅದೇ ಅಪಾರ್ಟ್​ವೆುಂಟ್​ನಲ್ಲಿ ವಾಸಿಸುತ್ತಿದ್ದ ಒಬ್ಬ ಯುವಕ ತನ್ನ ಅಜ್ಜಿಯ ಫೋಟೋ ಎದುರು ಕುಳಿತುಕೊಂಡು, ಆಕೆ ನೀಡಿದ ಸಂಸ್ಕಾರಗಳನ್ನು ಮೆಲುಕು ಹಾಕುತ್ತಿದ್ದ. ಅದೊಂದು ದಿನ ಆತ ಅಜ್ಜಿಗೆ ‘ವಾರಿ ಎಂದರೇನು?’ ಅಂತ ಪ್ರಶ್ನಿಸಿದ್ದ. ‘ವಾರಿ ಎಂದರೆ ಬರೀ ಪಂಢರಪುರಕ್ಕೆ ಕಾಲ್ನಡಿಗೆಯಲ್ಲಿ ಹೋಗಿ ಪಾಂಡುರಂಗ ವಿಠ್ಠಲನ ದರ್ಶನ ಮಾಡುವುದಷ್ಟೇ ಅಲ್ಲ ಕಣಪ್ಪ. ವಾರಿ ಎಂದರೆ ಮಾನವೀಯತೆಯ ದರ್ಶನ. ಒಬ್ಬರು ಮತ್ತೊಬ್ಬರಿಗೆ ಹೇಗೆ ಆಸರೆ ಆಗಬೇಕು, ಸುಖ-ದುಃಖ ಹಂಚಿಕೊಳ್ಳಬೇಕು, ಮಾನವೀಯ ಸಂಬಂಧಗಳೆಷ್ಟು ಪವಿತ್ರ, ಅಗತ್ಯ ಎಂಬುದನ್ನೆಲ್ಲ ಅದು ತಿಳಿಸಿ ಕೊಡುತ್ತದೆ’ ಎಂದು ವಿವರಿಸಿದ್ದರು. ಈತನಿಗೆ ಥಟ್ಟನೇ ಏನೋ ಹೊಳೆದಂತಾಗಿ, ಹೌದು, ಕ್ವಾರಂಟೈನ್ ಅಜ್ಜ-ಅಜ್ಜಿ ಊಟ, ತಿಂಡಿ ಹೇಗೆ ಮಾಡುತ್ತಿರಬಹುದು, ಮನೆಯಲ್ಲಿ ಬೇರೆ ಯಾರೂ ಇಲ್ಲ ಅಂತ ಯೋಚಿಸಿದ. ಆ ಅಜ್ಜ-ಅಜ್ಜಿಯೂ ಪ್ರತಿ ವರ್ಷ ವಾರಿ ಮಾಡುತ್ತಿದ್ದರು. ಆ ಅಜ್ಜಿ, ‘ಪಾಂಡುರಂಗ ನಮ್ಮಿಂದ ಏನು ತಪ್ಪಾಯಿತು? ನಮಗೇಕೆ ಇಂಥ ಶಿಕ್ಷೆಯಪ್ಪ, ನಮಗ್ಯಾರು ಸಹಾಯ ಮಾಡೋರು?’ ಅಂತ ಗೋಳಾಡುತ್ತಿದ್ದರು.

    ಈ ಯುವಕ ಅಮ್ಮನಿಗೆ ತಿಂಡಿ ಮಾಡಲು ಹೇಳಿ, ತಾನೂ ಸಹಾಯಕ್ಕೆ ನಿಂತ. ತಿಂಡಿಯ ಬಾಕ್ಸ್​ನ್ನು ಆ ವೃದ್ಧ ದಂಪತಿಯ ಮನೆಬಾಗಿಲ ಹೊರಗಡೆ ಇಟ್ಟು, ಫೋನ್ ಮಾಡಿದ. ಆ ದಂಪತಿ ಅಚ್ಚರಿಯಿಂದ ‘ಅಲ್ಲಪ್ಪ, ನಮಗೆ ಕರೊನಾ ಪಾಸಿಟಿವ್ ಅಂತ ಗೊತ್ತಿದ್ದರೂ ಏಕೆ ಬರಲು ಹೋದೆ?’ ಎಂದು ಕಳಕಳಿಯಿಂದ ಪ್ರಶ್ನಿಸಿದರು. ಈತ, ‘ನನಗೆ ಗೊತ್ತು. ಅದಕ್ಕೆ ಬಾಗಿಲಿನ ಹೊರಗೆ ಬಾಕ್ಸ್ ಇಟ್ಟಿದ್ದು, ಒಳಗೆ ತೆಗೆದುಕೊಂಡು ಹೋಗಿ. ನೀವು ಹುಷಾರಾಗುವರೆಗೂ ನಾನೇ ಬೆಳಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟ ತಂದಿಡುತ್ತೇನೆ. ಬೇರೆ ಅಗತ್ಯಗಳಿದ್ದರೂ ಹೇಳಿ’ ಎಂದು ಫೋನಿಟ್ಟಾಗ, ಆ ಅಜ್ಜಿ, ‘ಪಾಂಡುರಂಗ ನಮ್ಮ ಕೋರಿಕೆ ಎಷ್ಟು ಬೇಗ ಕೇಳಿಸಿಕೊಂಡೆ, ಎಷ್ಟು ಕರುಣಾಳು ನೀನು’ ಎಂದು ಖುಷಿಯಿಂದ ಕಣ್ಣೀರಿಟ್ಟಳು. ಯುವಕ ಹೇಳಿದಂತೆ ಪ್ರತಿನಿತ್ಯ ತಿಂಡಿ, ಊಟ ನೀಡತೊಡಗಿದ. ಅಷ್ಟೇ ಅಲ್ಲ, ಫೋನ್ ಮಾಡಿ. ‘ಹೇಗಿದ್ದಿರಾ? ಸಮಯಕ್ಕೆ ಸರಿಯಾಗಿ ಮಾತ್ರೆ ತೆಗೆದುಕೊಳ್ಳಿ. ಬೇಗ ಹುಷಾರಾಗ್ತೀರಿ, ನಿಮಗೇನೂ ಆಗಿಲ್ಲ’ ಅಂತ ಹುರಿದುಂಬಿಸುತ್ತಿದ್ದ.

    ಕೆಲ ದಿನಗಳ ಬಳಿಕ ಮತ್ತೊಮ್ಮೆ ಪರೀಕ್ಷೆ ಮಾಡಿಸಿದಾಗ ಆ ದಂಪತಿಯ ರಿಪೋರ್ಟ್ ನೆಗೆಟಿವ್ ಬಂದಿತ್ತು. ಆ ಸುದ್ದಿಯನ್ನು ದಂಪತಿ ವಿದೇಶದಲ್ಲಿದ್ದ ಮಕ್ಕಳಿಗಿಂತ ಮೊದಲು ಈ ಯುವಕನಿಗೆ ತಿಳಿಸಿ, ‘ನಮ್ಮ ಸಂಕಷ್ಟದ ಸಮಯದಲ್ಲಿ ಪಾಂಡುರಂಗನ ರೂಪದಲ್ಲಿ ಬಂದೆಯಪ್ಪ…’ ಅಂತ ಕೃತಜ್ಞತೆ ವ್ಯಕ್ತಪಡಿಸಿದರು. ಈತ ಅಷ್ಟೇ ಸೌಜನ್ಯದಿಂದ, ‘ನಾನೇನೂ ದೊಡ್ಡ ಸಹಾಯ ಮಾಡಿಲ್ಲ, ನೀವು ಹುಷಾರಾದಿರಲ್ವ ಅಷ್ಟು ಸಾಕು’ ಎಂದು ಮುಗುಳ್ನಕ್ಕ. ಆತನ ತಾಯಿಯೂ ಖುಷಿಯಿಂದ ‘ವೆಲ್​ಡನ್ ಮೈ ಬಾಯ್’ ಎಂದು ಬೆನ್ನು ಚಪ್ಪರಿಸಿದರು!

    ಹೃದಯ ಮಗುವಿನಂತೆ. ಅದಕ್ಕೆ ಸ್ವಲ್ಪ ಪ್ರೀತಿ ಕೊಡೋಣ, ಕಾಳಜಿ ತೋರಿಸೋಣ! ಮಾನವೀಯ ಮೌಲ್ಯಗಳನ್ನು ನಿತ್ಯಾನುಷ್ಠಾನಕ್ಕೆ ತರೋಣ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts