More

    ಕಲ್ಲನ್ನು ಸರಿಸಿದ ರೈತ, ಹಗ್ಗದಲ್ಲಿ ಬಂದಿಯಾದ ಆನೆ…

    ಕರೊನಾದಿಂದಾಗಿ ಬಹುತೇಕ ಎಲ್ಲ ದೇಶಗಳ ಜಿಡಿಪಿ ಮೈನಸ್ ಆಗಿದೆ. ಕೋಟ್ಯಂತರ ಉದ್ಯೋಗನಷ್ಟವಾಗಿದೆ. ಈ ಬಿಕ್ಕಟ್ಟು ಹೊಸ ಹೊಸ ಅವಕಾಶಗಳನ್ನೂ ಸೃಷ್ಟಿಸಿದ್ದು, ಅನ್ವೇಷಣಾಪ್ರವೃತ್ತಿಯ ಯುವಜನರು ಈ ವೇದಿಕೆಯನ್ನು ಬಳಸಿಕೊಂಡಲ್ಲಿ ದೇಶವನ್ನು ಮೆರೆಸಬಹುದು.

    ಒಂದಾನೊಂದು ಕಾಲದಲ್ಲಿ…

    ಒಬ್ಬ ರಾಜ ತನ್ನ ಪ್ರಜೆಗಳ ಮನೋಧರ್ಮವನ್ನು ಪರೀಕ್ಷಿಸುವ ಉದ್ದೇಶದಿಂದ ರಸ್ತೆಯಲ್ಲಿ ಒಂದು ಬಂಡೆಯನ್ನು ಇರಿಸಿದ. ನಂತರ ಅಲ್ಲೆ ಬದಿಯಲ್ಲಿ ಪೊದೆಯಲ್ಲಿ ಅಡಗಿ ಕುಳಿತು ಏನಾಗುವುದೆಂದು ನೋಡತೊಡಗಿದ. ರಾಜನ ಆಸ್ಥಾನಿಕರನೇಕರು ಆ ದಾರಿಯಲ್ಲಿ ಬಂದರು. ಯಾರೂ ಆ ಕಲ್ಲನ್ನು ಪಕ್ಕಕ್ಕೆ ಸರಿಸುವ ಕುರಿತು ಯೋಚಿಸದೆ ಹಾಗೇ ತೆರಳಿದರು. ಹಲವು ವ್ಯಾಪಾರಿಗಳು ಆ ಮಾರ್ಗದಲ್ಲಿ ಬಂದರು. ಅವರೂ ಇತ್ತ ಗಮನಿಸದೆ ಸಾಗಿದರು. ಇನ್ನು ಕೆಲವು ಜನರಂತೂ, ರಾಜ್ಯದಲ್ಲಿ ರಸ್ತೆಯನ್ನೂ ಸರಿಯಾಗಿ ನಿರ್ವಹಣೆ ಮಾಡುವುದಿಲ್ಲ ಎಂದು ರಾಜನನ್ನು ಬೈದರು. ಒಬ್ಬ ರೈತ ತರಕಾರಿ ಮೂಟೆ ಹೊತ್ತುಕೊಂಡು ಬಂದ. ದಾರಿಯಲ್ಲಿ ಬಂಡೆ ಇದ್ದುದನ್ನು ಕಂಡು ಮೂಟೆ ಕೆಳಗಿಳಿಸಿ ಅದನ್ನು ಬದಿಗೆ ಸರಿಸಲು ಯತ್ನಿಸಿದ. ಸುಲಭದಲ್ಲಿ ಆಗಲಿಲ್ಲ. ಶಕ್ತಿಮೀರಿ ಪ್ರಯತ್ನಿಸಿ ಅಂತೂ ಕಲ್ಲನ್ನು ಪಕ್ಕಕ್ಕೆ ದಾಟಿಸಿದ. ಬಳಿಕ ತನ್ನ ಮೂಟೆ ತೆಗೆದುಕೊಳ್ಳಲು ಬಂದಾಗ, ಮೊದಲು ಕಲ್ಲು ಇದ್ದ ಜಾಗದಲ್ಲಿ ಒಂದು ಪರ್ಸ್ ಬಿದ್ದಿದ್ದು ಕಂಡ. ಅದನ್ನು ತೆರೆದಾಗ ಅದರಲ್ಲಿ ಹಲವು ಚಿನ್ನದ ನಾಣ್ಯಗಳು ಇದ್ದವು. ಹಾಗೇ, ‘ರಸ್ತೆಯಲ್ಲಿನ ಕಲ್ಲನ್ನು ಯಾರು ಬದಿಗೆ ಸರಿಸುತ್ತಾರೋ ಅವರಿಗೆ ಈ ಚಿನ್ನದ ನಾಣ್ಯಗಳು ಸಲ್ಲುತ್ತವೆ’ ಎಂದು ರಾಜ ಬರೆದ ಪತ್ರ ಅದರಲ್ಲಿತ್ತು.

    ಕಾಲಪುರುಷ ಈಗ ಕರೊನಾ ಎಂಬ ಕಂಟಕವನ್ನು ಜಾಗತಿಕ ಹೆದ್ದಾರಿಯಲ್ಲಿ ಇರಿಸಿರಬೇಕು. ಹಾಗಂತ ಈ ‘ಮಹಾಬಂಡೆ’ಯನ್ನು ದಾಟಿ ಆರೋಗ್ಯವೆಂಬ ನಿಧಿಯನ್ನು ಗಳಿಸುವುದು ಸುಲಭವೇ? ಉಹುಂ. ಅನೇಕ ದೇಶಗಳು ಈ ಯತ್ನದಲ್ಲಿ ಸೋತು ಸೊರಗಿದವು. ಅಮೆರಿಕದಂತಹ ಅಮೆರಿಕವೇ ಬೆಚ್ಚಿ ಕಂಗಾಲಾಯಿತು. ಚೀನಾವಂತೂ ಈ ‘ಬಂಡೆ’ಯ ಬಗ್ಗೆ ಮಾಹಿತಿಯನ್ನೇ ಕೊಡದೆ ಉಳಿದ ದೇಶಗಳನ್ನು ಯಾಮಾರಿಸಿತು. ಹೀಗಾಗಿಯೇ ಅಲ್ಲವೆ, ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಹೆಸರೆತ್ತಿದರೆ ಉರಿದುಬೀಳುವುದು! ಬ್ರಿಟನ್ ಬಸವಳಿಯಿತು. ಬ್ರೆಝಿಲ್ ಬೆವರುಹರಿಸಿತು. ಪಾಕಿಸ್ತಾನ ತನ್ನಲ್ಲಿ ಕರೊನಾ ಕಡಿಮೆ ಎಂದು ಹೇಳಿಕೊಂಡರೂ ಅದರ ಮಾತನ್ನು ನಂಬುವವರು ಕಡಿಮೆ! ಹಾಗೆನೋಡಿದರೆ ಭಾರತ ಈ ‘ಕಲ್ಲನ್ನು’ ಬದಿಗೆ ಸರಿಸುವ ಯತ್ನದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಅದಿಲ್ಲವಾದಲ್ಲಿ 130 ಕೋಟಿ ಜನಸಂಖ್ಯೆಯ ದೇಶದಲ್ಲಿ ಇನ್ನೂ ಎಷ್ಟು ಸಾವುನೋವು ಸಂಭವಿಸಬೇಕಿತ್ತೊ? ಇಲ್ಲಿನ ಸಾಂಪ್ರದಾಯಿಕ ಜೀವನಶೈಲಿ ಮತ್ತು ಆಹಾರ ಪದ್ಧತಿ ಕೂಡ ಕರೊನಾ ಹಬ್ಬುವುದನ್ನು ತಡೆಯುವುದಕ್ಕೆ ಸಹಾಯಕವಾಯಿತು ಎಂದು ತಜ್ಞರೇ ಗುರುತಿಸಿದ್ದಾರೆ. ಹಾಗಂತ ಭಾರತ ಕರೊನಾದಿಂದ ಬಚಾವಾಗಿಬಿಟ್ಟಿದೆ ಎಂದಲ್ಲ. ಈಗಲೂ ದೇಶದಲ್ಲಿ ನಿತ್ಯ 15-16 ಸಾವಿರ ಕರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ. ಈ ನಡುವೆಯೇ, ಲಸಿಕೆ ಅಭಿಯಾನಕ್ಕೆ ದೇಶ ಸಜ್ಜಾಗಿದೆ. ಶನಿವಾರ, ಜನವರಿ 16ರಿಂದ ಎಲ್ಲ ರಾಜ್ಯಗಳಲ್ಲಿ ಕರೊನಾ ವಿರುದ್ಧದ ಹೋರಾಟದ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವುದಕ್ಕೆ ಚಾಲನೆ ಸಿಗುತ್ತಿದೆ. ಈಗ ಸದ್ಯಕ್ಕೆ ಎರಡು ಲಸಿಕೆಗಳನ್ನು ಬಳಸಲಾಗುತ್ತದೆ. ಒಂದು-ಬ್ರಿಟನ್​ನ ಆಕ್ಸ್​ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನೆಕಾ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೋವಿಶೀಲ್ಡ್ ಲಸಿಕೆ. ಇದನ್ನು ಪುಣೆಯಲ್ಲಿನ ಸೆರಂ ಇನ್​ಸ್ಟಿಟ್ಯೂಟ್ ಉತ್ಪಾದಿಸುವುದು ವಿಶೇಷ. ಇನ್ನೊಂದು ಲಸಿಕೆ ಕೊವ್ಯಾಕ್ಸಿನ್. ಇದು ಸ್ವದೇಶಿ ಲಸಿಕೆ. ಹೈದರಾಬಾದಿನ ಭಾರತ್ ಬಯೋಟೆಕ್ ಇದನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಯೋಗವಿದೆ. ಇದರೊಂದಿಗೆ, ಕರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಮಹತ್ವದ ಘಟ್ಟವನ್ನು ಪ್ರವೇಶಿಸಿದಂತಾಗಿದೆ. ಇನ್ನೂ ನಾಲ್ಕು ಲಸಿಕೆಗಳು ಶೀಘ್ರ ಬರುವ ನಿರೀಕ್ಷೆ ಇದೆ. ಲಸಿಕೆಗಳು ಪರಿಣಾಮಕಾರಿಯಾಗಲಿ, ಕರೊನಾ ಆದಷ್ಟು ಬೇಗ ತೊಲಗಲಿ…

    ****************

    ಒಂದು ಹಕ್ಕಿ ಮೊಟ್ಟೆಗಳನ್ನು ಇಡಲು ಮತ್ತು ಮಳೆಗಾಲದಲ್ಲಿ ರಕ್ಷಣೆ ಉದ್ದೇಶದಿಂದ ಗೂಡು ಕಟ್ಟಿಕೊಳ್ಳಲು ಮರವನ್ನು ಹುಡುಕುತ್ತಿತ್ತು. ಎರಡು ಮರಗಳು ಕಣ್ಣಿಗೆ ಬಿದ್ದವು. ಒಂದು ಮರದ ಬಳಿಹೋಗಿ ಆಸರೆಗೆ ನಿವೇದಿಸಿಕೊಂಡಾಗ ಅದು ನಿರಾಕರಿಸಿತು. ಆಗ ಮತ್ತೊಂದು ಮರದ ಹತ್ತಿರ ಹೋದಾಗ ಅದು ಆಶ್ರಯ ನೀಡಲು ಸಮ್ಮತಿಸಿತು. ಆ ಹಕ್ಕಿ ಆ ಮರದಲ್ಲಿ ಮೊಟ್ಟೆಯಿಟ್ಟಿತು ಮತ್ತು ಗೂಡು ಕಟ್ಟಿಕೊಂಡಿತು. ಒಮ್ಮೆ ಎಷ್ಟು ಮಳೆಯಾಯಿತೆಂದರೆ, ಆ ಹೊಡೆತ ತಾಳಲಾರದೆ ಒಂದನೆಯ ಮರ ನೆಲಕ್ಕುರುಳಿ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗತೊಡಗಿತು. ಹಕ್ಕಿ ಈ ದೃಶ್ಯ ಕಂಡು- ‘ನಾನು ನಿನ್ನಲ್ಲಿ ಎಷ್ಟು ಬೇಡಿಕೊಂಡೆ, ಆಶ್ರಯ ಕೊಡು ಅಂತ. ಆದರೆ ನಿನ್ನಲ್ಲಿ ಅಹಂಕಾರ ತುಂಬಿಕೊಂಡಿತ್ತು. ಈಗ ನೋಡು ನಿನ್ನ ತಪ್ಪಿಗೆ ದೇವರೇ ಶಿಕ್ಷೆ ಕೊಟ್ಟಿದ್ದಾನೆ’ ಎಂದು ಹೀಗಳೆಯುವ ದನಿಯಲ್ಲಿ ಹೇಳಿತು. ಮರ ಆ ನೋವಿನಲ್ಲೂ ನಗು ತಂದುಕೊಂಡು ಹೇಳಿತು: ‘ಈ ಮಳೆಗಾಲದಲ್ಲಿ ನಾನು ಉಳಿಯುವುದಿಲ್ಲ ಎಂದು ನನಗೆ ಖಚಿತವಿತ್ತು. ಹಾಗಾಗೇ ನಿನಗೆ ಆಸರೆ ಕೊಡಲಿಲ್ಲ. ನಾನೇನಾದರೂ ನಿನಗೆ ಆಶ್ರಯ ನೀಡಿದ್ದರೆ ನೀನು ಮತ್ತು ನಿನ್ನ ಮರಿಗಳನ್ನು ವೃಥಾ ಅಪಾಯಕ್ಕೆ ದೂಡಿದಂತಾಗುತ್ತಿತ್ತು’. ‘ಛೆ, ಈ ಮರವನ್ನು ಅಪಾರ್ಥ ಮಾಡಿಕೊಂಡು ಏನೇನೋ ಹೇಳಿಬಿಟ್ಟೆನಲ್ಲ’ ಎಂದು ಹಕ್ಕಿಯ ಕಣ್ಣಲ್ಲಿ ನೀರು ಜಿನುಗಿತು.

    ನಮಗೆ ಬೇರೆಯವರಿಂದ ಎಷ್ಟೋ ನಿರೀಕ್ಷೆ ಇರುತ್ತದೆ. ಅದು ಈಡೇರದಿದ್ದಾಗ ಅವರ ಬಗ್ಗೆ ಇಲ್ಲಸಲ್ಲದ್ದನ್ನು ಭಾವಿಸುತ್ತೇವೆ, ಟೀಕಿಸುತ್ತೇವೆ. ಅವರು ನಮ್ಮ ನಿರೀಕ್ಷೆ ಈಡೇರಿಸಲು ಸಮರ್ಥರಾ? ಅಥವಾ ನಮ್ಮ ನಿರೀಕ್ಷೆ ಸಮರ್ಥನೀಯವಾ ಎಂದು ನಾವು ಯೋಚಿಸುವುದೇ ಇಲ್ಲ. ಈಗ ಕರೊನಾ ಕಾಲದಲ್ಲಿ ಅನೇಕರಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಕುಟುಂಬದ ಯಜಮಾನನ ಮುಖದಲ್ಲಿ ನಾಳೆಯ ಚಿಂತೆ ಆವರಿಸಿದೆ. ಗೃಹಿಣಿ ಎಷ್ಟು ಕೈಬಿಗಿಹಿಡಿದು ಸಂಸಾರ ನಡೆಸಿದರೂ ತಾಪತ್ರಯ ಮುಗಿಯುತ್ತಿಲ್ಲ. ಮಕ್ಕಳ ಪುಸ್ತಕಗಳು ಹೊಳಪು ಕಳೆದುಕೊಂಡು ಮಸುಕಾಗಿವೆ. ಹೀಗಾಗಿ ನಮ್ಮ ನಿರೀಕ್ಷೆಗೆ ಅಕಸ್ಮಾತ್ ಏನಾದರೂ ನಕಾರಾತ್ಮಕ ಉತ್ತರ ಬಂದಲ್ಲಿ, ವಾಸ್ತವ ಏನೆಂಬುದನ್ನು ಪರಾಂಬರಿಸುವ ವಿವೇಚನೆ ತೋರಿದಲ್ಲಿ ಈ ಮೇಲಿನ ಕತೆಯ ಹಕ್ಕಿಗುಂಟಾದ ವಿಷಾದಭಾವ ನಮಗಾಗಲಾರದು. ‘ಎದುರಿನವರು ಏನು ಹೇಳುತ್ತಾರೆಂಬುದನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ. ಬಹಳ ಜನರು ಇತರರ ಮಾತನ್ನು ಸರಿಯಾಗಿ ಆಲಿಸುವುದಿಲ್ಲ’ ಎನ್ನುತ್ತಾನೆ, ಅಮೆರಿಕನ್ ಸಾಹಿತಿ, ಪತ್ರಕರ್ತ ಅರ್ನೆಸ್ಟ್ ಹೆಮಿಂಗ್ವೆ. ‘ಯಾರು ಇತರರ ಬಗ್ಗೆ ತಿಳಿದಿರುತ್ತಾನೋ ಅವನು ವಿವೇಕಿ. ಯಾರು ತನ್ನನ್ನು ತಾನು ಅರಿತಿರುತ್ತಾನೋ ಅವನು ಜ್ಞಾನಿ’ ಎನ್ನುತ್ತಾನೆ ಚೀನೀ ತತ್ತ್ವಜ್ಞಾನಿ ಲಾವೋ ತ್ಸೆ. ಹಾಗಂತ ಮೇಲಿನ ದೃಷ್ಟಾಂತದ ಹಕ್ಕಿಯ ಬಯಕೆ ತಪು್ಪ ಎಂತಲೂ ಅಲ್ಲ. ಕಷ್ಟದಲ್ಲಿ ಇರುವವರಿಗೆ ನೆರವನ್ನೀಯುವ ಮನೋಭಾವಕ್ಕೆ ಕರೊನಾ ಲಾಕ್​ಡೌನ್ ಅವಧಿ ಧಾರಾಳ ನಿದರ್ಶನಗಳನ್ನು ಒದಗಿಸಿತು. ಅಗತ್ಯವಿರುವವರಿಗೆ ಊಟೋಪಚಾರ, ದವಸಧಾನ್ಯಗಳ ನೀಡಿಕೆ, ಹಣಕಾಸಿನ ಸಹಾಯ ಹೀಗೆ ವಿವಿಧ ಬಗೆಗಳಲ್ಲಿ ಮಾನವೀಯತೆ ಪ್ರದರ್ಶನಗೊಂಡಿತು. ಈ ಗುಣ ಸದಾಕಾಲ ಜಾರಿಯಲ್ಲಿರಲಿ ಎಂದು ಆಶಿಸೋಣ.

    ****************

    ಆದೊಂದು ಆನೆ ಶಿಬಿರ. ಹತ್ತಾರು ಆನೆಗಳು ಅಲ್ಲಲ್ಲಿ ತಿರುಗಾಡಿಕೊಂಡಿವೆ. ಒಬ್ಬ ಪ್ರವಾಸಿಗ ಅಲ್ಲಿಗೆ ಬಂದಿದ್ದ. ಆನೆಗಳಿಗೆ ದೊಡ್ಡ ಲಗಾಮೇನೂ ಇರಲಿಲ್ಲ. ಸಣ್ಣ ಹಗ್ಗದಿಂದ ಅವುಗಳ ಕಾಲನ್ನು ಕಟ್ಟಲಾಗಿತ್ತು ಅಷ್ಟೆ. ಅದೇ ನಿಯಂತ್ರಣ ಸೂತ್ರ. ಈ ಪ್ರವಾಸಿಗನಿಗೆ ಅಚ್ಚರಿ. ಅರೆ! ಅಷ್ಟು ದೈತ್ಯ ಆನೆಗಳನ್ನು ಇಷ್ಟು ಚಿಕ್ಕ ಹಗ್ಗದಿಂದ ಕಂಟ್ರೋಲ್ ಮಾಡುತ್ತಿದ್ದಾರಲ್ಲ ಎಂದು. ಆನೆಗಳು ಸುಲಭದಲ್ಲಿ ತಪ್ಪಿಸಿಕೊಂಡು ಹೋಗಬಹುದಲ್ಲ ಎಂಬುದು ಅವನ ಭಾವನೆ. ಅಲ್ಲಿದ್ದ ಮಾವುತನನ್ನು ಕುತೂಹಲದಿಂದ ಪ್ರಶ್ನಿಸಿದ. ಮಾವುತ ಉತ್ತರಿಸಿದ: ‘ಓ, ಅವೇನು ಓಡಿಹೋಗಲು ಯತ್ನ ಮಾಡುವುದಿಲ್ಲ ಬಿಡಿ. ಏಕೆಂದರೆ ಚಿಕ್ಕಂದಿನಿಂದಲೂ ಅವನ್ನು ಇಂಥ ಚಿಕ್ಕ ಹಗ್ಗದಿಂದಲೇ ಕಟ್ಟಲಾಗುತ್ತಿದೆ. ಹೀಗಾಗಿ ಅವುಗಳ ಮನಸ್ಸಿನಲ್ಲಿ ಬೇರೂರಿಬಿಟ್ಟಿದೆ. ಈ ಹಗ್ಗವನ್ನು ತುಂಡುಮಾಡಿಕೊಂಡು ಹೋಗಲಾಗುವುದಿಲ್ಲ ಎಂದು. ಆದ್ದರಿದ ತಪ್ಪಿಸಿಕೊಳ್ಳುವ ಯತ್ನ ಮಾಡದೆ ಇಲ್ಲೇ ಸುತ್ತುತ್ತಿರುತ್ತವೆ.’

    ಆನೆ ಮನಸ್ಸು ಮಾಡಿದರೆ ಮರವನ್ನೇ ಕಿತ್ತೆಸೆಯಬಲ್ಲದು. ಅಂಥ ಶಕ್ತಿಶಾಲಿ ದೈತ್ಯ ಪ್ರಾಣಿ. ಆದರೆ ಕಾಲಿಗೆ ಕಟ್ಟಿದ ಚಿಕ್ಕ ಹಗ್ಗ ತನ್ನನ್ನು ನಿಯಂತ್ರಿಸುತ್ತಿದೆ, ತಾನು ಅದನ್ನು ಹರಿದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಅದರ ಮನಸ್ಸಿನಲ್ಲಿ ಛಾಪೊತ್ತಿಬಿಟ್ಟಿದೆ. ಹೀಗಾಗಿ ಆ ಯತ್ನವನ್ನು ಸಹ ಮಾಡದೆ ಒಂದು ಪರಿಧಿಯಲ್ಲಿ ತಿರುಗುತ್ತ ಉಳಿಯಬೇಕಿದೆ. ಆ ಹಗ್ಗದ ಬಂಧನದಿಂದ ಬಿಡಿಸಿಕೊಂಡು ಹೋಗದಿದ್ದರೆ ಹೊಸ ಜಾಗ, ಅವಕಾಶ ಅದರ ಭಾಗ್ಯಕ್ಕೆ ದಕ್ಕುವುದೇ ಇಲ್ಲ. ಆದರೆ ಅದರ ಮನಸ್ಸೇ ಹಗ್ಗಕ್ಕೆ ಬಿಗಿದುಕೊಂಡು ಬಿಟ್ಟಿದೆ. ಇನ್ನು ತುಂಡರಿಸುವ ಮಾತೆಲ್ಲಿ?

    ಈ ಕರೊನಾ ಎಂಬುದು ಸಹ ಇಡೀ ವಿಶ್ವದ ಆರ್ಥಿಕತೆಗೆ ಹಗ್ಗ ಬಿಗಿದುಬಿಟ್ಟಿದೆ. ಚೀನಾವನ್ನು ಹೊರತುಪಡಿಸಿ ಬಹುತೇಕ ಎಲ್ಲ ದೇಶಗಳ ಜಿಡಿಪಿ ಮೈನಸ್ ಆಗಿದೆ. ಕೋಟ್ಯಂತರ ಉದ್ಯೋಗನಷ್ಟವಾಗಿದೆ. ಹೇಗಾದರೂ ಸರಿ ಈ ಹಗ್ಗವನ್ನು ತುಂಡು ಮಾಡಿಕೊಳ್ಳದಿದ್ದರೆ ಒಂದು ಹೆಜ್ಜೆಯನ್ನೂ ಮುಂದಿಡಲಾಗದು. ಮಿತಿಯನ್ನು ಮೀರುವ ಅಗತ್ಯ ಇಲ್ಲಿದೆ. ಇಂತಹ ಸಂದರ್ಭದಲ್ಲಿಯೇ, ಮಾಮೂಲಿ ಜಾಡನ್ನು ಬಿಟ್ಟು ಭಿನ್ನವಾಗಿ ಆಲೋಚಿಸುವವರು ಮುಖ್ಯವಾಗುತ್ತಾರೆ. ಅಂದರೆ- out of the box thinking. ಈ ನಿಟ್ಟಿನಲ್ಲಿಯೂ ಭಾರತ ಒಂದು ಹೆಜ್ಜೆ ಮುಂದಿಡುವ ಲಕ್ಷಣಗಳು ಗೋಚರವಾಗಿವೆ. ಪ್ರಧಾನಿ ನರೇಂದ್ರ ಮೋದಿ ‘ಆತ್ಮನಿರ್ಭರ’ ಪರಿಕಲ್ಪನೆಯನ್ನು ಮುಂದಿಟ್ಟಿದ್ದು, ದೇಶಿಯ ಉತ್ಪಾದನೆ ಮತ್ತು ಮಾರಾಟಕ್ಕೆ ಉತ್ತೇಜನ ಸಿಗುವ ಆಶಾವಾದ ವ್ಯಕ್ತವಾಗಿದೆ. ನಮ್ಮ ಕರ್ನಾಟಕದ ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್ ಸ್ಥಾಪನೆಯಾಗುತ್ತಿರುವುದು ಇದಕ್ಕೆ ಒಂದು ಉದಾಹರಣೆ. ಜಾಗತಿಕ ಆಟಿಕೆ ಮಾರುಕಟ್ಟೆಯಲ್ಲಿ ಚೀನಾ ಪಾರಮ್ಯ ಹೊಂದಿದ್ದು, ಈ ವಲಯದಲ್ಲಿ ಹೇರಳ ಅವಕಾಶಗಳಿವೆ ಎಂಬುದು ತಜ್ಞರ ಅಂಬೋಣ. ಕರೊನಾ ಕಾರಣದಿಂದಾಗಿ ಹೊಸ ಹೊಸ ಅವಕಾಶಗಳು ತೆರೆದುಕೊಂಡಿದ್ದು, ಭಾರತದ ಯುವಶಕ್ತಿ ಈ ವೇದಿಕೆಯನ್ನು ಬಳಸಿಕೊಂಡಲ್ಲಿ ದೇಶವನ್ನು ಮೆರೆಸಬಹುದು. ಕೆಲ ವರ್ಷಗಳ ಹಿಂದೆ, ಫುಡ್ ಡೆಲಿವರಿ ಎಂಬ ಪರಿಕಲ್ಪನೆ ಹೊಸದಾಗಿದ್ದಾಗ, ಈ ಉದ್ಯಮ ಇಷ್ಟು ಬೆಳೆಯುತ್ತದೆ ಎಂದು ಯಾರು ಭಾವಿಸಿದ್ದರು? ಇವತ್ತು ಜೊಮ್ಯಾಟೊ, ಸ್ವಿಗ್ಗಿಯಂತಹ ಸಂಸ್ಥೆಗಳು ಸಾವಿರ ಕೋಟಿ ರೂ.ಗಳಷ್ಟು ವ್ಯವಹಾರ ಮಾಡುವ ಮಟ್ಟಿಗೆ ಬೆಳೆದಿವೆ. ಇಂಥ ಅನ್ವೇಷಣಾ ಮನೋಭಾವ ಹೆಚ್ಚಿದಷ್ಟು ಉದ್ಯಮ ಸಾಧ್ಯತೆ ಹಿಗ್ಗುತ್ತದೆ.

    ‘ಬಂಧವು ಯಾವತ್ತೂ ದುಃಖರೂಪವಾಗಿರುತ್ತದೆ. ಹಗ್ಗದಿಂದ ಅಥವಾ ಸಂಕೋಲೆಯಿಂದ ಕಟ್ಟಿಹಾಕಿದರೆ ಅದು ದುಃಖವೇ ಅಲ್ಲವೆ? ಆ ಬಂಧದಿಂದ ಬಿಡುಗಡೆ ಆಗುವುದೇ ಮೋಕ್ಷ’-ಇದು ಮಾನವರ ಕುರಿತು ಶ್ರೀ ಶ್ರೀಧರ ಸ್ವಾಮಿಗಳು ಹೇಳಿದ ಮಾತು.

    ಕೊನೇ ಮಾತು: ಕರೊನಾ ಸಂಕಟದ ನಡುವೆಯೇ ನಾವು ನಮ್ಮ ಹಿರಿಯರನ್ನು, ಮಾರ್ಗದರ್ಶಕರನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ವೇದೋಪನಿಷತ್ತುಗಳು, ಭಗವದ್ಗೀತೆ ಇತ್ಯಾದಿ ಗ್ರಂಥಗಳು, ಮಹಾಭಾರತ-ರಾಮಾಯಣ ಮಹಾಕಾವ್ಯ ಗಳು, ಹಿಂದೂ ಧರ್ಮದ ಸಾರಸರ್ವಸ್ವ ಇವನ್ನೆಲ್ಲ ಜೀರ್ಣಿಸಿಕೊಂಡು ಪ್ರವಚನ, ಬರಹಗಳ ಮೂಲಕ ಜನರ ನಡುವೆ ಪಸರಿಸುತ್ತಿದ್ದ ಬನ್ನಂಜೆ ಗೋವಿಂದಾಚಾರ್ಯ, ಬೆಂಗಳೂರಿನ ರಾಮಕೃಷ್ಣ ಮಠದ ಮುಖ್ಯಸ್ಥರಾಗಿದ್ದ ಸ್ವಾಮಿ ಹರ್ಷಾನಂದ ಮುಂತಾದವರು ನಮ್ಮನ್ನು ಅಗಲಿದ್ದಾರೆ. ಅಂಥ ಬಹುಶ್ರುತ ವಿದ್ವಾಂಸರ ಪರಂಪರೆ ಯನ್ನು ಸಮರ್ಥವಾಗಿ ಮುನ್ನಡೆಸಬಲ್ಲಂತಹ ಪೀಳಿಗೆ ತಯಾರಾಗಲಿ ಎಂಬುದಷ್ಟೆ ಈ ಹೊತ್ತಿನ ಹಾರೈಕೆ.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts