More

    ರಾಜಕೀಯದಲ್ಲಿ ಅಧ್ಯಾತ್ಮದ ಪ್ರಭೆ ಪಸರಿಸಿದರೆ…

    ರಾಜಕೀಯದಲ್ಲಿ ಅಧ್ಯಾತ್ಮದ ಪ್ರಭೆ ಪಸರಿಸಿದರೆ...

    ಭಾರತೀಯ ಪರಂಪರೆ ವ್ಯಕ್ತಿಯ ಆತ್ಮಶಕ್ತಿಗೆ ಎಷ್ಟು ಮಹತ್ವ ನೀಡಿದೆಯೆಂದರೆ, ‘ನಿನ್ನನ್ನು ನೀನು ಅರಿತರೆ ವಿಶ್ವವನ್ನೇ ಅರಿತಂತೆ’ ಎಂದು ಒಂದೇ ಸಾಲಿನಲ್ಲಿ ಹೇಳಿಬಿಟ್ಟಿದೆ. ಆತ್ಮಬಲವಿರುವವನು ಏನನ್ನೂ ಸಾಧಿಸಿಯಾನು ಎಂಬುದನ್ನು ನಮ್ಮ ಪರಂಪರೆ ಸಶಕ್ತವಾಗಿ ನಿರೂಪಿಸಿದೆ.

    ‘ನಾವು ಪ್ರಾಮಾಣಿಕ, ಪಾರದರ್ಶಕ, ಭ್ರಷ್ಟಾಚಾರಮುಕ್ತ, ಆಧ್ಯಾತ್ಮಿಕ, ಜಾತ್ಯತೀತ ಆಡಳಿತ ನೀಡುತ್ತೇವೆ. ಒಂದು ಪವಾಡ ಹಾಗೂ ಚಮತ್ಕಾರ ಖಂಡಿತ ಸಂಭವಿಸಲಿದೆ’ -ಬೆಂಗಳೂರಿನಿಂದ ಪಯಣ ಆರಂಭಿಸಿ ನಂತರದಲ್ಲಿ ತಮಿಳು ಸೇರಿ ಹಲವು ಭಾಷೆಗಳಲ್ಲಿ ತಮ್ಮದೇ ಛಾಪೊತ್ತಿ ಸೂಪರ್​ಸ್ಟಾರ್ ಎಂದು ಬಿರುದಾಂಕಿತರಾದ ರಜನಿಕಾಂತ್ ಕೆಲವು ದಿನಗಳ ಹಿಂದೆ ಮಾಡಿದ ಈ ಸಂಕ್ಷಿಪ್ತ ಟ್ವೀಟ್ ದೇಶಾದ್ಯಂತ ರಾಜಕೀಯ ವಲಯದಲ್ಲಿ ಒಂದುಮಟ್ಟಿನ ಸಂಚಲನವನ್ನೇ ಮೂಡಿಸಿದೆ ಎಂದರೆ ಅತಿಶಯೋಕ್ತಿಯಲ್ಲ. ‘ಈಗಲ್ಲದಿದ್ದರೆ ಮುಂದೆಂದೂ ಅಲ್ಲ’, ‘ನಾವು ಎಲ್ಲವನ್ನೂ ಬದಲಿಸುತ್ತೇವೆ’ ಎಂಬಂತಹ ಮಾತನ್ನೂ ಅವರು ಆಡಿದ್ದಾರೆ. ಅಂದಹಾಗೆ ಅವರ ಈ ಘೋಷಣೆ ಹೊರಬಿದ್ದಿರುವುದು ಇನ್ನು ಐದು ತಿಂಗಳಲ್ಲಿ ಎದುರಾಗಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು. ಈ ಮಾಸಾಂತ್ಯಕ್ಕೆ ಅಂದರೆ ಡಿ.31ರಂದು ತಮ್ಮ ಪಕ್ಷವನ್ನು ಘೋಷಿಸುವುದಾಗಿ ಅವರು ಮುಹೂರ್ತವನ್ನೂ ನಿಶ್ಚಯಿಸಿದ್ದಾರೆ. ಸಿನಿರಂಗದಲ್ಲಿ ಅಗಾಧ ಜನಪ್ರಿಯತೆ ಸಂಪಾದಿಸಿರುವ ರಜನಿಕಾಂತ್ ಸಕ್ರಿಯ ರಾಜಕೀಯ ಪ್ರವೇಶ ಕುರಿತ ಕುತೂಹಲ ಅನೇಕ ವರ್ಷಗಳಿಂದ ಇತ್ತು. ಅವರು ಈ ಬಗ್ಗೆ ನೇರವಾಗಿ ಏನನ್ನೂ ಹೇಳುತ್ತಿರಲಿಲ್ಲವಾದರೂ ಕೆಲವೊಮ್ಮೆ ಸ್ವಲ್ಪ ಮುಗುಮ್ಮಾಗಿ, ಹಲವೊಮ್ಮೆ ಸ್ವಲ್ವ ನೇರವಾಗಿ ರಾಜಕೀಯದ ಕುರಿತು ಮಾತನಾಡುತ್ತಿದ್ದರು. ಹೀಗಾಗಿ ಕುತೂಹಲ ಬೆಳೆಯುತ್ತಿತ್ತೇ ವಿನಾ ಶಮನವಾಗಿರಲಿಲ್ಲ. ಮತ್ತೊಂದೆಡೆ, ಅವರ ಸ್ನೇಹಿತರೂ ಆಗಿರುವ ಜನಪ್ರಿಯ ನಟ ಕಮಲ್ ಹಾಸನ್ ಅವರು ಮಕ್ಕಳ್ ನಿದಿ ಮೈಯಂ (ಎಂಎನ್​ಎಂ) ಎಂಬ ಪಕ್ಷ ಸ್ಥಾಪಿಸಿಕೊಂಡು ಸಾರ್ವಜನಿಕವಾಗಿ ಕ್ರಿಯಾಶೀಲರಾಗಿದ್ದರು. ಕಮಲ್ ಹಾಸನ್ ಸದ್ಯದಲ್ಲೇ ಚುನಾವಣಾ ಪ್ರಚಾರವನ್ನೂ ಆರಂಭಿಸಲಿದ್ದಾರೆ. ರಜನಿಕಾಂತ್​ಗೆ ಅಭಿಮಾನಿಗಳ ಸಂಘದ ಅಪಾರ ಬೆಂಬಲವಿದೆ. ಈ ಅಭಿಮಾನ ಚುನಾವಣಾ ಕಣದಲ್ಲಿ ಮತವಾಗಿ ಪರಿವರ್ತನೆಯಾಗುತ್ತದೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಈ ಪ್ರಶ್ನೆಗೆ ಸಿಗುವ ಉತ್ತರದ ಮೇಲೆ ಅವರ ರಾಜಕೀಯ ಭವಿಷ್ಯ ನಿಂತಿದೆ.

    ತಮಿಳುನಾಡು ರಾಜಕೀಯ ಈಗ ಒಂಥರಾ ವಿಚಿತ್ರ ಸ್ಥಿತಿಯಲ್ಲಿದೆ. ಡಿಎಂಕೆಯ ಎಂ. ಕರುಣಾನಿಧಿ ಹಾಗೂ ಎಐಎಡಿಎಂಕೆಯ ಜೆ. ಜಯ ಲಲಿತಾರಂತಹ ಘಟಾನುಘಟಿಗಳು ಈಗಿಲ್ಲ. ಸದ್ಯ ಆಡಳಿತ ನಡೆಸುತ್ತಿರುವ ಎಐಎಡಿಎಂಕೆಯಲ್ಲಿಯೂ ಬಣ ರಾಜಕೀಯದ ಘಾಟು ಇದೆ. ಇನ್ನು, ಹಣಕಾಸು ಅಕ್ರಮ ಪ್ರಕರಣದಲ್ಲಿ ಜೈಲುವಾಸದಲ್ಲಿದ್ದ ಶಶಿಕಲಾ (ಜೆ. ಜಯಲಿತಾರ ಪರಮಾಪ್ತೆ) ಇನ್ನೇನು ಕೆಲ ದಿನಗಳಲ್ಲಿ ಶಿಕ್ಷೆ ಮುಗಿಸಿ ಹೊರಬರಲಿದ್ದು, ನಂತರದಲ್ಲಿ ಅವರ ರಾಜಕೀಯ ಒಲವುನಿಲುವು ಏನಿರಲಿದೆ ಎಂಬುದು ಕೂಡ ಎಐಎಡಿಎಂಕೆ ವಿದ್ಯಮಾನದ ಮೇಲೆ ಪರಿಣಾಮ ಬೀರಲಿದೆ. ಇನ್ನೊಂದೆಡೆ, ಬಿಜೆಪಿ ದ್ರಾವಿಡ ನಾಡಲ್ಲಿ ಹೆಜ್ಜೆಯೂರುವ ತವಕದಲ್ಲಿದೆ. ಈ ಎಲ್ಲ ಸನ್ನಿವೇಶಗಳನ್ನು ಗಮನಿಸಿ, ‘ರಾಜಕೀಯ ನಿರ್ವಾತ’ ತುಂಬುವ ಉದ್ದೇಶದಿಂದಲೇ ರಜನಿಕಾಂತ್ ದಾಳ ಉರುಳಿಸಿದರಾ? ಅದಕ್ಕೇ ‘ಈಗಲ್ಲದಿದ್ದರೆ ಮುಂದೆಂದೂ ಅಲ್ಲ’ ಎಂಬ ಮಾತನ್ನಾಡಿದರಾ? ತಮಿಳುನಾಡು ರಾಜಕಾರಣಕ್ಕೂ ಸಿನಿರಂಗಕ್ಕೂ ನಿಕಟ ನಂಟು ಹೊಸದೇನಲ್ಲ. ಮುಖ್ಯಮಂತ್ರಿಯಾಗಿದ್ದ ಸಿಎನ್ ಅಣ್ಣಾದೊರೈ ನಟನೆಯ ಹಿನ್ನೆಲೆ ಹೊಂದಿದ್ದವರು. ಐದು ಬಾರಿ ಸಿಎಂ ಆಗಿದ್ದ ಎಂ. ಕರುಣಾನಿಧಿ ಸಿನಿಮಾ ಕ್ಷೇತ್ರದಲ್ಲಿ ಬರವಣಿಗೆಯಲ್ಲಿ ದೊಡ್ಡ ಹೆಸರು ಮಾಡಿದವರು. ಎಂ.ಜಿ. ರಾಮಚಂದ್ರನ್(ಎಂಜಿಆರ್) ಅವರಂತೂ ತಮಿಳಿಗರ ಹೃದಯದಲ್ಲಿ ನೆಲೆಯೂರಿದ್ದರು. ಕರ್ನಾಟಕ ಮೂಲದ ಜಯಲಲಿತಾ ಸಿನಿಮಾಕ್ಕೆಂದು ಮದ್ರಾಸಿಗೆ ತೆರಳಿ, ಕ್ರಮೇಣ ಅಲ್ಲಿನ ರಾಜಕೀಯದಲ್ಲಿ ಮೇಲೇರಿದ ಬಗೆ ಗೊತ್ತೇ ಇದೆ. ಅವರ ಆಡಳಿತಶೈಲಿ, ರಾಜಕೀಯ ನಡೆಗಳ ಬಗ್ಗೆ ಆಕ್ಷೇಪ, ಭಿನ್ನ ಅಭಿಪ್ರಾಯಗಳು ಇರಬಹುದು. ಆದರೆ ಅವರ ರಾಜಕೀಯ ಸಾಹಸವನ್ನು ಅವಗಣಿಸಲಾಗದು.

    ಇದೆಲ್ಲ ಏನೇ ಇರಲಿ, ರಜನಿಕಾಂತ್ ಬಳಸಿದ ಒಂದು ಪದ ವ್ಯಾಪಕ ಚರ್ಚೆಯನ್ನಂತೂ ಹುಟ್ಟುಹಾಕಿದೆ ಮತ್ತು ಕುತೂಹಲವನ್ನೂ ಮೂಡಿಸುವಂತಿದೆ. ‘ನಾವು ಪ್ರಾಮಾಣಿಕ, ಪಾರದರ್ಶಕ, ಭ್ರಷ್ಟಾಚಾರಮುಕ್ತ, ಆಧ್ಯಾತ್ಮಿಕ, ಜಾತ್ಯತೀತ ಆಡಳಿತ ನೀಡುತ್ತೇವೆ’ ಎಂದು ಅವರು ಉಲ್ಲೇಖಿಸಿದ್ದಾರೆ. ಇಲ್ಲಿ ಉಳಿದೆಲ್ಲ ಪದಗಳು ಸಮಕಾಲೀನ ರಾಜಕಾರಣದಲ್ಲಿ ಬಳಕೆಯಲ್ಲಿ ಇರುವಂತಹವೇ ಆದರೂ ‘ಆಧ್ಯಾತ್ಮಿಕ’ ಪದ ಈ ಜಾಯಮಾನಕ್ಕೆ ಹೊಸದು. ಅಂದಹಾಗೆ, ರಜನಿಕಾಂತ್​ಗೆ ಅಧ್ಯಾತ್ಮದಲ್ಲಿ ಅಪಾರ ಆಸಕ್ತಿ ಇದೆ. ಅವರು ಆಗೀಗ ಬಿಡುವು ಸಿಕ್ಕಾಗ ಹಿಮಾಲಯಕ್ಕೆ ತೆರಳಿ ಧ್ಯಾನ ಮಾಡುವುದೂ ಇದೆ. ಅಧ್ಯಾತ್ಮದಲ್ಲಿ ಒಲವಿದ್ದ ತನ್ನ ಅಣ್ಣ ಸತ್ಯನಾರಾಯಣ ತನ್ನನ್ನೂ ರಾಮಕೃಷ್ಣ ಆಶ್ರಮಕ್ಕೆ ಸೇರಿಸಿದ್ದರು. ಅಲ್ಲಿಂದ ವೇದ, ಉಪನಿಷತ್ತುಗಳನ್ನು ತಿಳಿಯಲು ಆರಂಭಿಸಿದೆ ಎಂದು ಅವರು ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಹೀಗಾಗಿ ರಾಜಕೀಯದಲ್ಲಿ ಈ ಅಂಶದ ಅಳವಡಿಕೆ ಬಗ್ಗೆ ಅವರಿಗೆ ಸ್ಪಷ್ಟಕಲ್ಪನೆ ಏನಾದರೂ ಇದೆಯಾ? ಗೊತ್ತಿಲ್ಲ. ಆದರೆ, ನಾಸ್ತಿಕ್ಯವನ್ನೂ ರಾಜಕೀಯದ ಒಂದು ಭಾಗವೇ ಆಗಿಸಿಕೊಂಡಿರುವ ತಮಿಳುನಾಡಿನ ಸಂದರ್ಭದಲ್ಲಿ ಈ ಪದಬಳಕೆ ಮಾಡಿರುವುದು ವಿಶೇಷ.

    ರಾಜಕೀಯದಲ್ಲಿ ಅಧ್ಯಾತ್ಮದ ಪ್ರಭೆ ಪಸರಿಸಿದರೆ...
    ರಮಣ ಮಹರ್ಷಿ

    ಸರಿಯಾಗಿ ನೋಡಿದರೆ, ಅಧ್ಯಾತ್ಮ ಶಬ್ದ ಎಲ್ಲವನ್ನೂ ಅಡಗಿಸಿಕೊಂಡಿದೆ. ಅಧಿ+ಆತ್ಮ ಎಂಬುದರಿಂದ ಅಧ್ಯಾತ್ಮ ಪದ ವ್ಯುತ್ಪತ್ತಿಯಾಗಿದೆ. ಇದು ಸಂಸ್ಕೃತ ಪದ. ಸರಳವಾಗಿ ಹೇಳುವುದಾದರೆ, ಆತ್ಮದ ಕುರಿತಾದ ವಿಷಯ ಎನ್ನಬಹುದು. ಹಾಗೆಯೇ ಪರಮಶಕ್ತಿಯಾದ ಪರಮಾತ್ಮನನ್ನು ಅರಿಯುವುದು ಎಂದೂ ಆಗಬಹುದು. ತನ್ನನ್ನು ತಾನು ಅರಿಯುವುದು ಎಂದೂ ವ್ಯಾಖ್ಯಾನಿಸಬಹುದು. ಭಾರತೀಯ ಪರಂಪರೆ ವ್ಯಕ್ತಿಯ ಆತ್ಮಶಕ್ತಿಗೆ ಎಷ್ಟು ಮಹತ್ವ ನೀಡಿದೆಯೆಂದರೆ, ‘ನಿನ್ನನ್ನು ನೀನು ಅರಿತರೆ ವಿಶ್ವವನ್ನೇ ಅರಿತಂತೆ’ ಎಂದು ಒಂದೇ ಸಾಲಿನಲ್ಲಿ ಹೇಳಿಬಿಟ್ಟಿದೆ. ಆತ್ಮಬಲವಿರುವವನು ಏನನ್ನೂ ಸಾಧಿಸಿಯಾನು ಎಂಬುದನ್ನು ನಮ್ಮ ಪರಂಪರೆ ಸಶಕ್ತವಾಗಿ ನಿರೂಪಿಸಿದೆ. ‘ನೀನು ಅಂತರಂಗದಿಂದ ಬೆಳೆಯಬೇಕು. ನಿನಗೆ ಇದನ್ನು ಯಾರೂ ಕಲಿಸಲಾರರು, ಯಾರೂ ನಿನ್ನನ್ನು ಆಧ್ಯಾತ್ಮಿಕ ವ್ಯಕ್ತಿಯನ್ನಾಗಿ ಮಾಡಲಾರರು. ನಿನ್ನ ಆತ್ಮೋದ್ಧಾರ ನಿನ್ನಿಂದಲೇ’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ‘ನಮ್ಮ ಸ್ವಭಾವ, ಆಧ್ಯಾತ್ಮಿಕತೆಯನ್ನು ನಾವೇ ಅನ್ವೇಷಿಸಬೇಕು. ಅದು ನಮಗೆ ಸಹಜವಾಗಿ ಅಂತರ್ಗತವಾಗಿರುತ್ತದೆ’ ಎನ್ನುತ್ತಾನೆ, ಜರ್ಮನ್ ತತ್ತ್ವಶಾಸ್ತ್ರಜ್ಞ, ಕಲಾಕೋವಿದ ಫೆಡ್ರಿಕ್ ನೀಷೆ. ‘ಆತ್ಮಾನುಭವ ಎಂದರೆ, ಯಾವುದನ್ನೋ ವಶಪಡಿಸಿಕೊಳ್ಳುವುದು ಅಥವಾ ಹೊಸದೇನೋ ಅಲ್ಲ. ಅದು ಮನದ ಮರೆ-ಪೊರೆಯನ್ನು ತೆಗೆದುಹಾಕುವುದಷ್ಟೇ’ ಎನ್ನುವ ಮೂಲಕ ಆತ್ಮದ ಅರಿಯುವಿಕೆಯ ಸರಳ ದಾರಿಯನ್ನು ಅರುಹುತ್ತಾರೆ ರಮಣ ಮಹರ್ಷಿಗಳು. ‘ಆತ್ಮ ಎಂದರೆ ಕಚ್ಚಾ ವಜ್ರ ಇದ್ದಂತೆ. ವಜ್ರವನ್ನು ಸಾಣೆ ಹಿಡಿದು ಹೊಳಪುಗೊಳಿಸಿದಂತೆ ಆತ್ಮಕ್ಕೂ ಹೊಳಪು ತರಬೇಕು’ ಎನ್ನುವ ಮೂಲಕ, ಆತ್ಮಾನುಭವದ ದಾರಿಯನ್ನು ತೆರೆದಿಡುತ್ತಾನೆ, ಇಂಗ್ಲಿಷ್ ಬರಹಗಾರ ಡೇನಿಯಲ್ ಡೆಫೊ. ‘ಜೀವನದ ಬೆಳಕಿನ ದಾರಿ ಆಗಸದಲ್ಲಿಲ್ಲ. ಅದು ಹೃದಯದಲ್ಲಿದೆ’ ಎನ್ನುವ ಮೂಲಕ ಆತ್ಮದ ಮಹತ್ವ ತಿಳಿಸುತ್ತಾನೆ ಭಗವಾನ್ ಬುದ್ಧ. ಇಷ್ಟಿದ್ದರೂ, ಆತ್ಮದ ಅನುಭವ ಪಡೆಯುವುದು ಸುಲಭವೇನಲ್ಲ. ಈ ಯತ್ನದಲ್ಲಿ ಜೀವನವನ್ನೇ ಸವೆಸಿದವರಿದ್ದಾರೆ ಅಂದಮೇಲೆ ಜನಸಾಮಾನ್ಯರ ಪಾಡೇನು!

    ಧರ್ಮ, ಮತ ಮತ್ತು ಅಧ್ಯಾತ್ಮ ಇವೆಲ್ಲ ನಮ್ಮಲ್ಲಿ ಹೆಚ್ಚಾಗಿ ಬಳಕೆಯಾಗುವ ಪದಗಳು. ಕೆಲವೊಮ್ಮೆ ಇವುಗಳ ಸರಿಯಾದ ಅರ್ಥ ವಿವೇಚಿಸದೆ ಯಾರು ಬೇಕಾದರೂ ಧಾರಾಳವಾಗಿ ಬಳಸಲ್ಪಡುವಂಥ ಸನ್ನಿವೇಶವೂ ನಿರ್ವಣವಾಗಿದೆ. ಸಾಮಾನ್ಯವಾಗಿ ಧರ್ಮ ಮತ್ತು ಮತವನ್ನು ಒಂದೇ ಅರ್ಥದಲ್ಲಿ ಬಳಸಲಾಗುತ್ತದೆ. ಇಂಗ್ಲಿಷಿನ ‘Religion’ಗೆ ಸಂವಾದಿಯಾಗಿ ನಮ್ಮಲ್ಲಿ ‘ಮತ’ ಪದ ಬಳಕೆಯಲ್ಲಿದೆ. ‘ಧರ್ಮ’ ಎಂಬುದರ ಸರಿಯಾದ ಅರ್ಥ ನೋಡಿದರೆ, ಜೀವನಾದರ್ಶಗಳ ಮೊತ್ತ ಎಂದಾಗುತ್ತದೆ. ಅಂದರೆ, ಆದರ್ಶ ಜೀವನವನ್ನು ನಡೆಸಲು ಬೇಕಾದ ಅಂಶಗಳು. ಮನು ಮಹರ್ಷಿಯು ಇಂಥ ಹತ್ತು ಗುಣಗಳನ್ನು ಹೇಳುತ್ತಾನೆ-

    ಧೃತಿಃ ಕ್ಷಮಾ ದಮೊà—ಸ್ತೇಯಂ ಶೌಚಮಿಂದ್ರಿಯನಿಗ್ರಹಃ |

    ಧೀರ್ವಿದ್ಯಾ ಸತ್ಯಮಕ್ರೋಧೋ ದಶಕಂ ಧರ್ಮಲಕ್ಷಣಮ್ ||

    1-ಧೃತಿ ಎಂದರೆ ದೃಢತೆ ಅಥವಾ ಧೈರ್ಯ. 2-ಕ್ಷಮಾ ಎಂದರೆ ಮಾನಾಪಮಾನ, ಲಾಭನಷ್ಟ ಪರಿಸ್ಥಿತಿಗಳಲ್ಲಿ ಇರಬೇಕಾಗುವ ಸಹನೆ. 3-ಅಧರ್ಮದ ಭಾವನೆಗಳನ್ನು ಅದುಮಿ ಉದಾತ್ತ ಸಂಗತಿಗಳಲ್ಲಿ ಮಗ್ನವಾಗುವುದೇ ದಮ. 4-ಅಸ್ತೇಯ ಎಂದರೆ ಕಳವು ಮಾಡದಿರುವುದು; ಜತೆಗೆ, ಲೋಭದಿಂದ ಅವಶ್ಯಕ್ಕಿಂತ ಅಧಿಕ ಸಂಪತ್ತನ್ನು ಕೂಡಿಡುವುದು ಸಲ್ಲದು. 5-ಶೌಚ ಎಂದರೆ ಅಂತರಂಗ-ಬಹಿರಂಗ ಶುಚಿತ್ವ. 6-ಇಂದ್ರಿಯನಿಗ್ರಹ. 7-ಧೀಃ ಅಂದರೆ ರ್ತಸಿ, ಯೋಚಿಸಿ, ಕೌಶಲದಿಂದ ಕಾರ್ಯಗೈಯುವುದು. 8-ವಿದ್ಯೆ. 9- ಸತ್ಯ ಎಂದರೆ ತ್ರಿಕರಣಶುದ್ಧ ಸದ್ವರ್ತನೆ. 10-ಅಕ್ರೋಧ -ಕೋಪಿಸದಿರುವುದು.

    ‘ಕಳಬೇಡ ಕೊಲಬೇಡ, ಹುಸಿಯ ನುಡಿಯಲುಬೇಡ/ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ/ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ/ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ/ಇದೇ ನಮ್ಮ ಕೂಡಲ ಸಂಗಮದೇವರನೊಲಿಸುವ ಪರಿ’ ಎಂದು ಬಸವಣ್ಣನವರು ಆದರ್ಶ ಜೀವನದ ಬಗೆಯನ್ನು ಕೆಲವೇ ಪದಗಳಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಈ ಕೆಲ ಗುಣಗಳನ್ನು ಅಳವಡಿಸಿಕೊಂಡರೆ ಅದು ಆದರ್ಶ ಜೀವನದ ಹಾದಿಯೇ ಸೈ. ಹೀಗಾಗಿ ಇಂಥ ಗುಣಗಳು ಸಾರ್ವತ್ರಿಕ, ಸಾರ್ವಕಾಲಿಕ. ಇದರಲ್ಲಿ ಮತಭೇದದ ಪ್ರಶ್ನೆ ಬರುವುದಿಲ್ಲ. ಹೀಗೆಂದೆ, ಎಂತಹುದೇ ಕಷ್ಟ ಬರಲಿ, ಜೀವನದುದ್ದಕ್ಕೂ ಆದರ್ಶಗಳನ್ನು ಪರಿಪಾಲನೆ ಮಾಡಿಕೊಂಡು ಬಂದ ಶ್ರೀರಾಮ ಧರ್ಮಮೂರ್ತಿಯಾಗಿ, ವ್ಯಕ್ತಿಜೀವನದ ಪರಮೋಚ್ಚ ಆದರ್ಶವಾಗಿ ನಮ್ಮ ಹೃದಯದಲ್ಲಿ ಪ್ರತಿಷ್ಠಾಪಿತನಾಗಿದ್ದಾನೆ. ಪ್ರವಾದಿ, ದೇವಾಂಶಸಂಭೂತರಿಂದ ಸ್ಥಾಪನೆಯಾದುದು ಮತವಾಗುತ್ತದೆ (ಹೀಗಾಗಿಯೇ ಕ್ರಿಶ್ಚಿಯನ್, ಇಸ್ಲಾಮ್ ಮುಂತಾದವನ್ನು ಸೆಮೆಟಿಕ್ ಮತಗಳು ಎಂದು ಹೇಳುತ್ತಾರೆ). ಆದರೆ ಹಿಂದೂ ಧರ್ಮವನ್ನು ಯಾವುದೇ ವ್ಯಕ್ತಿ ಅಥವಾ ದೇವಾಂಶಸಂಭೂತರು ಸ್ಥಾಪಿಸಿದ್ದಲ್ಲ. ಹೀಗಾಗಿ ‘ಮತ’ ಬಳಕೆ ಇದಕ್ಕೆ ಒಪು್ಪವುದಿಲ್ಲ್ಲ ಎಂಬುದು ಹಲವರ ವಾದ.

    ಮತ್ತೆ, ರಜನಿಕಾಂತ್ ಉಲ್ಲೇಖಿಸಿದ ‘ರಾಜಕೀಯದಲ್ಲಿ ಅಧ್ಯಾತ್ಮ’ ಪರಿಕಲ್ಪನೆಗೆ ಬರುವುದಾದರೆ, ಇದರ ಅಳವಡಿಕೆ ಸಾಧ್ಯವೇ? ಇದರಿಂದಾಗುವ ಪ್ರಯೋಜನ ಅಥವಾ ಅನುಕೂಲ ಏನೆಂಬ ಪ್ರಶ್ನೆ ಏಳುತ್ತದೆ. ‘ಆತ್ಮವನ್ನು ಅರಿತವರು’ ಎಂಬ ಪದಪುಂಜ ಸದ್ಯದ ರಾಜಕಾರಣಕ್ಕೆ ದೂರದ ಮಾತಾಗಿ ಕಂಡರೂ, ಕನಿಷ್ಠಪಕ್ಷ ಆ ಆಸಕ್ತಿ ಇರುವವರಾದರೆ, ಅದರಿಂದ ಸಮಾಜಕ್ಕೆ ದೊಡ್ಡ ಉಪಕಾರವೇ ಆಗುತ್ತದೆ. ಏಕೆಂದರೆ, ಅಂಥ ಮನೋಭಾವದವರು ಅಕ್ರಮ ಅವ್ಯವಹಾರದತ್ತ ಮನಸ್ಸು ಮಾಡುವುದಿಲ್ಲ; ಜಾತಿ-ಸಿದ್ಧಾಂತದ ಭಿನ್ನತೆ ಹೆಸರಿನಲ್ಲಿ ಸಹಜೀವಿಗಳಲ್ಲಿ ಭೇದವೆಣಿಸುವುದಿಲ್ಲ; ಹಣ-ತೋಳ್ಬಲ ಪ್ರದರ್ಶನದಿಂದ ಅಧಿಕಾರ ಹಿಡಿಯಬೇಕು ಎಂದು ಹಪಹಪಿಸುವುದಿಲ್ಲ. ಅಂಥವರು ಅಧಿಕಾರವು ಸೇವೆಯ ಒಂದು ಅವಕಾಶ ಎಂದು ಭಾವಿಸುತ್ತಾರೆಯೇ ವಿನಾ ತಾನು ಮೆರೆಯುವ ಸಿಂಹಾಸನವಲ್ಲ ಎಂಬ ವಿನಮ್ರತೆಯನ್ನು ಉಳಿಸಿಕೊಂಡಿರುತ್ತಾರೆ. ಇಂದಿನ ರಾಜಕೀಯ ವಾತಾವರಣದಲ್ಲಿ ಇಂಥ ಗುಣಗಳಲ್ಲಿ ಕೆಲವು ಅಂಶವಾದರೂ ಅಂತರ್ಗತವಾದರೆ, ಅದು ನಮ್ಮ ಭಾಗ್ಯವಿಶೇಷವೇ ಸರಿ. ಇಂದಿನ ಸ್ಥಿತಿಗತಿ ಕಂಡು ‘ರಾಜಕೀಯದ ಅಪರಾಧೀಕರಣ’ ಎಂಬ ಪದವೇ ಠಂಕಿಸಲ್ಪಟ್ಟಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರೆಫಾಮ್್ಸರ್ (ಎಡಿಆರ್) ಎಂಬ ಸಂಸ್ಥೆ ಈ ವಿಷಯವಾಗಿ ಅಧ್ಯಯನ ನಡೆಸಿ ಕಾಲಕಾಲಕ್ಕೆ ವರದಿಗಳನ್ನು ಬಿಡುಗಡೆ ಮಾಡುತ್ತದೆ. ಎಡಿಆರ್ ವರದಿ ಪ್ರಕಾರ, 2009ರ ಲೋಕಸಭಾ ಚುನಾವಣೆಯಲ್ಲಿ ಅಪರಾಧ ಪ್ರಕರಣ ಹಿನ್ನೆಲೆಯ ಅಭ್ಯರ್ಥಿಗಳ ಪ್ರಮಾಣ ಶೇ.15 ಇದ್ದರೆ, 2014ರಲ್ಲಿ ಶೇ.17ಕ್ಕೇರಿತ್ತು ಮತ್ತು 2019ರಲ್ಲಿ ಶೇ.19ಕ್ಕೆ ಏರಿತ್ತು. ಇಲ್ಲಿ ಒಂದಂಶವನ್ನು ನಾವು ಗಮನಿಸಬೇಕು. ಕೇಸು ಇದ್ದ ಮಾತ್ರಕ್ಕೆ ಎಲ್ಲರೂ ಅಪರಾಧ ಹಿನ್ನೆಲೆಯವರು ಎಂದುಕೊಳ್ಳಬೇಕಿಲ್ಲ. ಕೆಲವೊಮ್ಮೆ ಜನಪರವಾಗಿ ಪ್ರತಿಭಟಿಸುವಾಗಲೂ ಕೇಸುಗಳು ಬೀಳುವುದಿದೆ. ಹೀಗಾಗಿ, ಕೊಲೆ, ಕೊಲೆ ಯತ್ನ, ಬಲಾತ್ಕಾರ ಮುಂತಾದ ಗಂಭೀರ ಪ್ರಕರಣಗಳನ್ನು ಗಮನಿಸಬೇಕಾಗುತ್ತದೆ. ಇದೇನೇ ಇದ್ದರೂ ರಾಜಕೀಯದ ಅಪರಾಧೀಕರಣ ಕಡೆಗಣಿಸುವಂತಹ ಸಂಗತಿಯಲ್ಲ.

    ಕೊನೇ ಮಾತು: ರಾಜಕೀಯದಲ್ಲಿ ಧರ್ಮ ಮತ್ತು ಧರ್ಮದಲ್ಲಿ ರಾಜಕೀಯ ಎಂಬ ಜಿಜ್ಞಾಸೆ ಬಹುದಿನಗಳಿಂದ ಇದೆ. ‘ಧರ್ಮರಾಜಕೀಯ’ ಇದ್ದರೆ ಒಳಿತು!

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts