More

    ಅಮೆರಿಕದಲ್ಲಿ ಕಮಲ ಅರಳೀತೆ…

    ಅಮೆರಿಕ ಏನೆಲ್ಲ ಹೆಗ್ಗಳಿಕೆ ಹೊಂದಿದ್ದರೂ ಸ್ವಾತಂತ್ರ್ಯ ನಂತರದ ಸುಮಾರು 150 ವರ್ಷಗಳಲ್ಲಿ ಅಲ್ಲಿ ಇನ್ನೂ ಒಬ್ಬ ಮಹಿಳೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವೇರಲು ಆಗಿಲ್ಲ. 2016ರ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಅವರು ಡೊನಾಲ್ಡ್ ಟ್ರಂಪ್ ವಿರುದ್ಧ ಅಧ್ಯಕ್ಷ ಹುದ್ದೆಗೆ ಸೆಣಸಿದ್ದರಾದರೂ ಯಶಸ್ಸು ಕೈಹಿಡಿಯಲಿಲ್ಲ.

    ಅಮೆರಿಕದಲ್ಲಿ ಕಮಲ ಅರಳೀತೆ...ವಿಶ್ವದಲ್ಲಿ ಈಗ ಅತಿ ಹೆಚ್ಚು ಕರೊನಾಪೀಡಿತ ದೇಶವೆಂದರೆ ಅದು ಅಮೆರಿಕ. ಅಲ್ಲಿ ಕರೊನಾದಿಂದಾಗಿ ಒಂದೂಮುಕ್ಕಾಲು ಲಕ್ಷಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸೋಂಕಿತರ ಸಂಖ್ಯೆ 60 ಲಕ್ಷ ಮೀರಿದೆ. ಅತ್ಯಾಧುನಿಕ ವೈದ್ಯಕೀಯ ವ್ಯವಸ್ಥೆಗಳನ್ನು ಹೊಂದಿದ್ದು, ಜಗತ್ತಿನ ಅತ್ಯುತ್ತಮ ವೈದ್ಯಕೀಯ ತಜ್ಞರನ್ನು ಹೊಂದಿದ ದೇಶ ಎಂಬ ಹೆಗ್ಗಳಿಕೆ ನಡುವೆಯೂ ಆ ದೇಶಕ್ಕೆ ಇಂಥ ಗತಿ ಯಾಕೆ ಬಂತು? ಆರಂಭದಲ್ಲಿ ನಿರ್ಲಕ್ಷ್ಯ ತೋರಿದ್ದು ಕಾರಣ ಎಂದು ಕೆಲವರು ಹೇಳುತ್ತಾರೆ. ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿದ್ದು, ಹೊಸ ವರ್ಷಕ್ಕೆಂದು ಸ್ವದೇಶಕ್ಕೆ ಹೋಗಿದ್ದ ಚೀನಿಯರು ಜನವರಿಯಲ್ಲಿ ಅಮೆರಿಕಕ್ಕೆ ಮರಳುವಾಗ ಸೋಂಕು ತಂದರೆಂಬುದು ಮತ್ತೊಂದು ವಾದ. ಇನ್ನು ಕೆಲವರು ನಾಯಕತ್ವದ ವೈಫಲ್ಯ ಎಂದು ಬೊಟ್ಟುಮಾಡುತ್ತಾರೆ. ಅಂದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರಿಯಾದ ಕಾಲಕ್ಕೆ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳಲಿಲ್ಲ ಎಂಬುದು ಇವರ ಆಕ್ಷೇಪ. ಇನ್ನು, ಟ್ರಂಪ್ ಅವರೋ, ಚೀನಾದತ್ತ ಕೆಂಗಣ್ಣು ಬೀರುತ್ತಿದ್ದಾರೆ.

    ಈ ನಡುವೆಯೇ ಅಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯ ಕಾವೇರುತ್ತಿದೆ. ನಿಗದಿಯಾದಂತೆ. ನವೆಂಬರ್​ನಲ್ಲಿ ಚುನಾವಣೆ ನಡೆಯಬೇಕು. ಕರೊನಾ ಕಾರಣಕ್ಕೆ ಚುನಾವಣೆ ಮುಂದೂಡುವುದು ಲೇಸು ಎಂದು ಖುದ್ದು ಟ್ರಂಪ್ ಸೇರಿ ಅನೇಕರು ಹೇಳುತ್ತಿದ್ದಾರಾದರೂ ಅಖಾಡ ನಿಧಾನಕ್ಕೆ ರಂಗೇರುತ್ತಿದೆ.

    ಜಾಗತಿಕವಾಗಿ ನೋಡಿದಲ್ಲಿ ಹೆಚ್ಚಿನ ಭಾರತೀಯರು ನೆಲೆಸಿರುವ ದೇಶದಲ್ಲಿ ಅಮೆರಿಕ ಮುಂಚೂಣಿಯಲ್ಲಿದೆ. ಅಲ್ಲಿ ಸುಮಾರು 30 ಲಕ್ಷ ಭಾರತೀಯರು ಇದ್ದಾರೆ. ಈ ಪೈಕಿ ಸರಿಸುಮಾರು 20 ಲಕ್ಷ ಮಂದಿ ಮತ ಚಲಾಯಿಸಬಹುದು ಎಂದು ವಿಶ್ಲೇಷಕರು ಅಂದಾಜಿಸುತ್ತ್ತಾರೆ. ಹೀಗಾಗಿ ಇವರನ್ನು ಓಲೈಸಲು ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಎರಡೂ ಪಕ್ಷಗಳವರು ಪೈಪೋಟಿ ನಡೆಸಿದ್ದಾರೆ. ಅಧ್ಯಕ್ಷೀಯ ಅಭ್ಯರ್ಥಿಗಳಾದ ಡೊನಾಲ್ಡ್ ಟ್ರಂಪ್ ಹಾಗೂ ಜೊ ಬಿಡೆನ್ ಹಾಗೂ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಹುರಿಯಾಳು ಕಮಲಾ ಹ್ಯಾರಿಸ್, ಟ್ರಂಪ್ ಪ್ರಚಾರಾಂದೋಲನದ ಮುಂಚೂಣಿಯಲ್ಲಿರುವ ನಿಕ್ಕಿ ಹ್ಯಾಲೆ ಹೀಗೆ ಎಲ್ಲ ಪ್ರಮುಖರೂ ಭಾರತೀಯರ ಬಗ್ಗೆ ಗಮನಹರಿಸಿದ್ದಾರೆ.

    ಅದರಲ್ಲೂ ಕಮಲಾ ಹ್ಯಾರಿಸ್ ಅವರಂತೂ ತಮ್ಮ ಭಾರತೀಯ ಕನೆಕ್ಷನ್ ಬಗ್ಗೆ ಎಲ್ಲ ವೇದಿಕೆಗಳಲ್ಲಿ ಬಾಯ್ತುಂಬ ಮಾತಾಡುತ್ತಿದ್ದಾರೆ; ಭಾರತದೊಂದಿಗಿನ ನಂಟನ್ನು ಕಟ್ಟಿಕೊಡುತ್ತಿದ್ದಾರೆ. ಅಮೆರಿಕ ಇತಿಹಾಸದಲ್ಲಿ ಉಪಾಧ್ಯಕ್ಷ ಸ್ಥಾನದ ಸ್ಪರ್ಧೆಗೆ ಪ್ರಮುಖ ರಾಜಕೀಯ ಮನ್ನಣೆ ಪಡೆದ ಪ್ರಥಮ ಕಪು್ಪವರ್ಣೀಯ ಮತ್ತು ಭಾರತೀಯ ಮೂಲದವರು ಎಂಬ ಹೆಗ್ಗಳಿಕೆ ಕಮಲಾ ಅವರದು. ಅವರ ತಾಯಿ ಶ್ಯಾಮಲಾ ಗೋಪಾಲನ್ ಚೆನ್ನೈ ಮೂಲದವರು. ಕ್ಯಾನ್ಸರ್ ಸಂಶೋಧಕಿಯಾಗಿದ್ದ ಅವರು ಉನ್ನತ ಶಿಕ್ಷಣಕ್ಕೆಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ತೆರಳಿದರು. ಜಮೈಕಾ ಮೂಲದ ಡೊನಾಲ್ಡ್ ಹ್ಯಾರಿಸ್ ಅವರೂ ಅಲ್ಲಿಗೆ ಬಂದಿದ್ದರು. ಆ ವಿಶ್ವವಿದ್ಯಾಲಯ ಸಾಮಾಜಿಕ ವಿಷಯಗಳ ಹೋರಾಟಕ್ಕೆ ಹೆಸರುವಾಸಿಯಾಗಿತ್ತು. ಈ ಇಬ್ಬರೂ ನಾಗರಿಕ ಹಕ್ಕುಗಳ ಆಂದೋಲನದಲ್ಲಿ ಭಾಗಿಯಾಗಿದ್ದರು. ಈ ಪರಿಚಯ ವಿವಾಹದವರೆಗೆ ಒಯ್ದಿತು. ಕಮಲಾ ಚಿಕ್ಕವರಿರುವಾಗಲೇ ತಂದೆ-ತಾಯಿ ವಿಚ್ಛೇದನ ಪಡೆದುಕೊಂಡರು. ಹೀಗಾಗಿ ಕಮಲಾ ಮತ್ತು ಸೋದರಿ ಮಾಯಾ ಇಬ್ಬರೂ ತಾಯಿಯ ಆಶ್ರಯದಲ್ಲೇ ಬೆಳೆದರು. ಅಜ್ಜ ಪಿ.ವಿ.ಗೋಪಾಲನ್ ಹಾಗೂ ಅಜ್ಜಿ ರಾಜನಮ್ ಅವರು ತಮ್ಮ ಜೀವನದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದಾರೆ ಎಂದು ಕಮಲಾ ಹೇಳಿಕೊಳ್ಳುತ್ತಾರೆ. ಚೆನ್ನೈ ಸಮುದ್ರ ಬೀಚಿನಲ್ಲಿ ಅಜ್ಜನ ಜತೆ ಸುತ್ತಾಡಿದ ನೆನಪುಗಳನ್ನೂ ಹಂಚಿಕೊಂಡಿದ್ದಾರೆ. ಅಲ್ಲದೆ, ಚೆನ್ನೈನ ಇಡ್ಲಿ ರುಚಿಯನ್ನೂ ಸ್ಮರಣೆಗೆ ತಂದುಕೊಂಡಿದ್ದಾರೆ. ಅಂದಹಾಗೆ, ಕಮಲಾ ಹಲವು ಪ್ರಥಮಗಳ ಒಡತಿ ಕೂಡ ಹೌದು. 2004ರಲ್ಲಿ ಅವರು ಸ್ಯಾನ್​ಫ್ರಾನ್ಸಿಸ್ಕೋದ ಡಿಸ್ಟ್ರಿಕ್ಟ್ ಅಟಾರ್ನಿ ಆದರು. ಈ ಹುದ್ದೆಗೇರಿದ ಮೊದಲ ಕಪು್ಪವರ್ಣೀಯ ಆಕೆ. 2011ರಲ್ಲಿ ಕ್ಯಾಲಿಫೋರ್ನಿಯಾದ ಮೊದಲ ಮಹಿಳಾ ಅಟಾರ್ನಿ ಜನರಲ್ ಎಂಬ ಮತ್ತೊಂದು ಗರಿ ಅವರ ಮುಡಿಗೇರಿತು. 2016ರಲ್ಲಿ ಅವರು ಅದೇ ರಾಜ್ಯದಿಂದ ಸೆನೆಟ್​ಗೆ ಆಯ್ಕೆಯಾದರು. ಈಗ ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದಾರೆ. ಮತ್ತೊಂದು ದಾಖಲೆ ಅವರ ಹೆಸರಿಗೆ ಬಂದೀತಾ? ಕಾದುನೋಡೋಣ. ತಾಯಿ ತಮ್ಮನ್ನು ಭಾರತೀಯ ಸಂಸ್ಕೃತಿ ಮತ್ತು ದಕ್ಷಿಣ ಏಷ್ಯಾ ಮೂಲದ ಬಗ್ಗೆ ಹೆಮ್ಮೆಯಿಟ್ಟುಕೊಂಡು ಬೆಳೆಸಿದ್ದಾರೆ ಎಂದು ಕಮಲಾ ಹ್ಯಾರಿಸ್ ಖಜಛಿ ಖ್ಟ್ಠಜ ಗಛಿ ಏಟ್ಝಛ ಎಂಬ ತಮ್ಮ ಕೃತಿಯಲ್ಲಿ ಹೇಳಿದ್ದಾರೆ.

    ಅಮೆರಿಕ ಏನೆಲ್ಲ ಹೆಗ್ಗಳಿಕೆ ಹೊಂದಿದ್ದರೂ, ವ್ಯಕ್ತಿಸ್ವಾತಂತ್ರ್ಯದ ತವರು ತಾನು ಎಂದೆಲ್ಲ ಹೇಳಿಕೊಂಡರೂ, ಸ್ವಾತಂತ್ರ್ಯ ನಂತರದ ಸುಮಾರು 150 ವರ್ಷಗಳಲ್ಲಿ ಅಲ್ಲಿ ಇನ್ನೂ ಒಬ್ಬ ಮಹಿಳೆ ಅಧ್ಯಕ್ಷ ಸ್ಥಾನವೇರಲು ಆಗಿಲ್ಲ. 2016ರ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಅವರು ಡೊನಾಲ್ಡ್ ಟ್ರಂಪ್ ವಿರುದ್ಧ ಅಧ್ಯಕ್ಷ ಹುದ್ದೆಗೆ ಸೆಣಸಿದ್ದರಾದರೂ ಯಶಸ್ಸು ಅವರ ಕೈಹಿಡಿಯಲಿಲ್ಲ. ಅಷ್ಟೇ ಅಲ್ಲ, ಉಪಾಧ್ಯಕ್ಷ ಸ್ಥಾನಕ್ಕೂ ಇನ್ನೂ ಅಲ್ಲಿ ಮಹಿಳೆಯರು ಆಯ್ಕೆಯಾಗಿಲ್ಲ. ಪ್ರಮುಖ ರಾಜಕೀಯ ಪಕ್ಷದಿಂದ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ ಮೊದಲ ಮಹಿಳಾ ಅಭ್ಯರ್ಥಿ ಹಿಲರಿ ಕ್ಲಿಂಟನ್. ಮಹಿಳೆಯರಿಗೂ ರಾಜಕೀಯ ಅವಕಾಶ ಮತ್ತು ಮತದಾನ ಹಕ್ಕುಕೊಡಬೇಕೆಂದು ಆಗ್ರಹಿಸಿ ಅಮೆರಿಕದಲ್ಲಿ (ಠ್ಠf್ಟಜಛಿ) ಆಂದೋಲನ ನಡೆದಿತ್ತು. ಈ ಹಿನ್ನೆಲೆಯಲ್ಲಿ 1872ರಲ್ಲಿ ವಿಕ್ಟೋರಿಯಾ ವುಡ್​ಹಾಲ್ ಅವರು ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದರು. ಅಮೆರಿಕ ಮಾತ್ರವಲ್ಲ, ಭಾರತ ಸೇರಿ ಇತರ ಅನೇಕ ದೇಶಗಳಲ್ಲೂ ಇಂಥ ಚಳವಳಿ ನಡೆದಿತ್ತು. ಅಮೆರಿಕದಲ್ಲಿ 1920ರ ಹೊತ್ತಿಗೆ ಮಹಿಳೆಯರಿಗೆ ಮತದಾನದ ಹಕ್ಕು ದೊರೆತರೆ, ಭಾರತದಲ್ಲಿ ಸ್ವಾತಂತ್ರ್ಯ ಸಿಕ್ಕ ತಕ್ಷಣದಿಂದಲೇ ಸಾರ್ವತ್ರಿಕ ಮತದಾನ ಪದ್ಧತಿ ಜಾರಿಗೆ ಬಂದಿತ್ತು. ಭಾರತದಲ್ಲಿ 1919-29ರ ಅವಧಿಯಲ್ಲಿ ಬ್ರಿಟಿಷ್ ಪ್ರಾಂತ್ಯಗಳಲ್ಲಿ ಮತ್ತು ರಾಜಾಡಳಿತ ಪ್ರದೇಶಗಳಲ್ಲಿ ಮಹಿಳೆಯರಿಗೆ ಮತದಾನ ಹಕ್ಕನ್ನು ನೀಡಲಾಗಿತ್ತು. ಮತ್ತು ಕೆಲವೆಡೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಿಲ್ಲಲೂ ಅವಕಾಶ ನೀಡಲಾಗಿತ್ತು. 1946ರಲ್ಲಿ ಸಂವಿಧಾನ ರಚನಾ ಸಮಿತಿ ಅಸ್ತಿತ್ವಕ್ಕೆ ಬಂದಾಗ ಅದರಲ್ಲಿ 15 ಮಹಿಳೆಯರಿಗೂ ಅವಕಾಶ ಕಲ್ಪಿಸಲಾಗಿತ್ತು. ನೂತನ ಸಂವಿಧಾನ ರಚನೆಯಲ್ಲಿ ಇವರೂ ಸಹಕರಿಸಿದರು ಮತ್ತು 1947ರ ಏಪ್ರಿಲ್​ನಲ್ಲಿ ಸಂವಿಧಾನ ರಚನಾ ಸಮಿತಿಯು ಸಾರ್ವತ್ರಿಕ ಮತದಾನ ಪದ್ಧತಿಗೆ ತನ್ನ ಒಪ್ಪಿಗೆ ನಿಡಿತು. 1948ರ ಆರಂಭದಲ್ಲಿ ಸ್ವತಂತ್ರ ಭಾರತದ ಮತದಾರರ ಪಟ್ಟಿ ಸಿದ್ಧತೆಗೆ ತೊಡಗಲಾಯಿತು. 1949ರ ಜೂನ್​ನಲ್ಲಿ ಮತದಾನ ಮತ್ತು ಚುನಾವಣೆಗೆ ಸಂಬಂಧಿಸಿದ ಅಂತಿಮ ನಿಯಮಗಳನ್ನು ಸಂವಿಧಾನದ ಕರಡಿಯಲ್ಲಿ ಅಳವಡಿಸಲಾಯಿತು. ನಂತರ 1950ರಲ್ಲಿ ಸಂವಿಧಾನ ಜಾರಿಗೆ ಬಂದಿದ್ದು ಗೊತ್ತೇ ಇದೆ.

    ಭಾರತ, ಶ್ರೀಲಂಕಾ, ಯುನೈಟೆಡ್ ಕಿಂಗ್​ಡಂ, ಪಾಕಿಸ್ತಾನ, ಬಾಂಗ್ಲಾದೇಶ ಮುಂತಾದ ದೇಶಗಳಲ್ಲಿ ಮಹಿಳೆಯರು ದೇಶದ ಉನ್ನತ ಆಡಳಿತ ಸೂತ್ರ ಹಿಡಿಯುವ ಅವಕಾಶ ದಕ್ಕಿರುವಾಗ ಅಮೆರಿಕದಲ್ಲಿ ಯಾಕೆ ಆಗಿಲ್ಲ ಎಂಬುದು ಕುತೂಹಲದ ವಿಚಾರವೇ ಸರಿ. ‘ಲಿಂಗ ಸಮಾನತೆ, ಮಹಿಳಾ ಪ್ರಾತಿನಿಧ್ಯ ಇವೆಲ್ಲ ಕಾನೂನಿನಲ್ಲಿ ಇರಬಹುದು. ಆದರೆ ವಾಸ್ತವದಲ್ಲಿ ಅದೆಲ್ಲ ಅಕ್ಷರಶಃ ಜಾರಿಗೆ ಬರಬೇಕಲ್ಲ? ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬೇರೆ ಬೇರೆ ಲಾಬಿಗಳು, ರಾಜಕೀಯ ವಾತಾವರಣ, ಮಿಶ್ರ ಸಂಸ್ಕೃತಿಯ ಜನರ ಮನೋಭಾವ ಮುಂತಾದ ಅಂಶಗಳು ಕೂಡ ಸಹಜವಾಗಿಯೇ ಕೆಲಸ ಮಾಡುತ್ತವೆ. ಅಂತಿಮವಾಗಿ ಮಹಿಳೆ ಅಧ್ಯಕ್ಷರಾಗಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವವರು ಜನರು’ ಎಂದು ಮಾಜಿ ರಾಯಭಾರಿ, ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕ ಎನ್.ಪಾರ್ಥಸಾರಥಿ ಹೇಳುತ್ತಾರೆ.

    ಭಾರತೀಯ ಮೂಲದವರು ಎಂದಾಕ್ಷಣ ಅವರು ಆರಿಸಿಬಂದಲ್ಲಿ ಭಾರತ ಪರವಾಗಿ ಅವರಿಂದ ನೀತಿನಿಲುವುಗಳು ಹೊಮ್ಮಬಹುದು ಎಂದು ಜನರು ಸಾಮಾನ್ಯವಾಗಿ ನಿರೀಕ್ಷೆ ಮಾಡುತ್ತಾರೆ. ಆದರೆ ಇಂಥ ನಿರೀಕ್ಷೆ ಈಡೇರುವುದು ಸುಲಭವಲ್ಲ ಎಂದು ಪಾರ್ಥಸಾರಥಿ ಅವರು ವಿಷಯದ ಮತ್ತೊಂದು ಮಗ್ಗುಲನ್ನು ತೆರೆದಿಡುತ್ತಾರೆ. ‘ನಾವು ಭಾರತೀಯರು ಭಾವನಾಜೀವಿಗಳು. ನಮ್ಮ ದೇಶದ ಮೂಲದವರು ಬೇರೆ ದೇಶಗಳಲ್ಲಿ ಉನ್ನತ ಹುದ್ದೆಗಳಿಗೆ ಹೋಗುತ್ತಾರೆ ಎಂದಾಗ ನಾವು ಸಹಜವಾಗಿ ಖುಷಿಯಾಗುತ್ತೇವೆ, ಹೆಮ್ಮೆಪಡುತ್ತೇವೆ. ಆದರೆ ವಾಸ್ತವ ಬೇರೆಯದೇ ಇರುತ್ತದೆ. ಒಂದೊಮ್ಮೆ ಆರಿಸಿಹೋದಲ್ಲಿ ಅಮೆರಿಕ ನೀತಿನಿಲುವಿಗೆ ಅನುಗುಣವಾಗಿ ಕೆಲಸ ಮಾಡಬೇಕಾಗುತ್ತದೆ ವಿನಾ ‘ಭಾರತದ ಪರವಾಗಿ’ ಎಂದು ನಿರ್ಣಯ ತೆಗೆದುಕೊಳ್ಳುವುದು ಕಷ್ಟ’ ಎಂದು ಅವರು ವಾಸ್ತವ ಪರಿಸ್ಥಿತಿಯನ್ನು ವಿವರಿಸುತ್ತಾರೆ. ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳ ಚುಕ್ಕಾಣಿ ಹಿಡಿದವರ ವಿಷಯದಲ್ಲೂ ಇದು ಸತ್ಯ. ಏಕೆಂದರೆ ಅಧಿಕಾರಸ್ಥಾನದ ಒತ್ತಡಗಳು ಮತ್ತು ಅನಿವಾರ್ಯತೆಗಳು, ನಿರ್ಬಂಧಗಳು ಹಾಗಿರುತ್ತವೆ.

    ಆಡಳಿತದ ಉನ್ನತ ಹುದ್ದೆಗೇರಿದವರ ವಿಷಯ ಬಂದಾಗ ಸಹಜವಾಗಿಯೇ ಇಂದಿರಾ ಗಾಂಧಿ ನೆನಪಾಗುತ್ತಾರೆ. ಅವರ ಆಡಳಿತಶೈಲಿ ಬಗ್ಗೆ ಭಿನ್ನ ಭಿನ್ನ ಅಭಿಪ್ರಾಯಗಳಿರಬಹುದು. ಆದರೆ ಅವರು ಪಕ್ಷದಲ್ಲಿ ಬಲಿಷ್ಠ ನಾಯಕಿಯಾಗಿದ್ದರು ಮತ್ತು ಬಾಂಗ್ಲಾ ವಿಮೋಚನಾ ಯುದ್ಧದಂಥ ಪ್ರಸಂಗಗಳಲ್ಲಿ ಅವರು ತೆಗೆದುಕೊಂಡ ನಿರ್ಣಯ ವ್ಯಾಪಕ ಪ್ರಶಂಸೆಯನ್ನೂ ತಂದಿತು ಎಂಬುದನ್ನು ಮರೆಯಲಾಗದು. ಒಂದೊಮ್ಮೆ ಅವರು ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನೇನಾದರೂ ಹೇರದೆ ಇದ್ದಿದ್ದರೆ ಬಹುಶಃ ಇತಿಹಾಸ ಅವರನ್ನು ನೋಡುವ ದೃಷ್ಟಿಕೋನವೇ ಬೇರೆ ರೀತಿಯಾಗಿರುತ್ತಿತ್ತು. ಮತ್ತು ಕಾಂಗ್ರೆಸ್ಸೇತರ ಪಕ್ಷಗಳಿಗೆ ಟೀಕಿಸಲಿಕ್ಕೆ ಬಹುದೊಡ್ಡ ಆಯುಧವೇ ಇರುತ್ತಿರಲಿಲ್ಲ. ಹಾಗೇ, ನೆಹರು ಮಗಳಾಗದಿದ್ದರೆ ಅಂಥ ಅವಕಾಶ ಅವರಿಗೆ ಸಿಗುತ್ತಿತ್ತೇ ಎಂಬ ಪ್ರಶ್ನೆಯೂ ಇದ್ದೇ ಇದೆ.

    ಮಹಿಳಾ ಪ್ರಾತಿನಿಧ್ಯದ ವಿಚಾರದಲ್ಲಿ ಭಾರತದ ಪರಿಸ್ಥಿತಿ ಪರಿಶೀಲನಾರ್ಹ. ನಮ್ಮಲ್ಲಿ, ಪಂಚಾಯಿತಿ ವ್ಯವಸ್ಥೆಯ ಮೂರೂ ಹಂತಗಳಲ್ಲಿ- ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ-ಶೇ.50 ಮಹಿಳಾ ಮೀಸಲಾತಿ ಇದೆ. ಕೆಲ ರಾಜ್ಯಗಳಲ್ಲಿ ಇದನ್ನೂ ಮೀರಿ ಮೀಸಲಾತಿ ಕಲ್ಪಿಸಲಾಗಿದೆ. ಭಾರತದಲ್ಲಿ ಸುಮಾರು 2.50 ಲಕ್ಷ ಗ್ರಾಮ ಪಂಚಾಯಿತಿಗಳಿವೆ ಎಂದರೆ ಮಹಿಳಾ ಪ್ರಾತಿನಿಧ್ಯ ಊಹಿಸಬಹುದು. ಶಾಸನಸಭೆಗಳಲ್ಲಿ ಅಂದರೆ, ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಕುರಿತ ವಿಷಯ ಮಾತ್ರ ಇನ್ನೂ ನನೆಗುದಿಯಲ್ಲಿದೆ. ಈ ವಿಷಯ ರಾಜಕೀಯ ಜಂಜಡದಲ್ಲಿ ಸಿಲುಕಿರುವುದರಿಂದ, ಬಹುತೇಕ ರಾಜಕೀಯ ಪಕ್ಷಗಳಿಗೆ ಸಮ್ಮತಿ ಇದ್ದರೂ ಕಾನೂನಾಗಿ ಬರಲು ಆಗುತ್ತಿಲ್ಲ. ಇನ್ನು, ಮತ್ತೊಂದೆಡೆ, ರಾಜ್ಯಗಳ ಆಡಳಿತಸೂತ್ರ ಹಿಡಿದ ನಾಯಕಿಯರೂ ಸಾಕಷ್ಟು ಮಂದಿ ಇದ್ದಾರೆ. ಉತ್ತರ ಪ್ರದೇಶದಲ್ಲಿ 1963-67ರವರೆಗೆ ಸಿಎಂ ಆಗಿದ್ದ ಸುಚೇತನಾ ಕೃಪಲಾನಿ ಈ ಯಾದಿಯಲ್ಲಿ ಮೊದಲಿಗರಾಗಿ ನಿಲ್ಲುತ್ತಾರೆ. ರಾಜಿಂದರ್ ಕೌರ್ ಭಟ್ಟಲ್, ಶಶಿಕಲಾ ಕಾಕೋಡ್ಕರ್, ನಂದಿನಿ ಸತ್ಪತಿ… ಹೀಗೆ ಸಿಎಂ ಆದವರ ಯಾದಿ ಸಾಗುತ್ತದೆ. ಮಮತಾ ಬ್ಯಾನರ್ಜಿಯಂಥವರು ಮುಖ್ಯಮಂತ್ರಿಯಾಗಿ ಈಗ ಆಡಳಿತ ನಡೆಸುತ್ತಿದ್ದಾರೆ. ಈಚಿನ ವರ್ಷಗಳಲ್ಲಿ ವಸುಂಧರಾ ರಾಜೆ, ಜಯಲಲಿತಾ, ಮಾಯಾವತಿ, ಮೆಹಬೂಬಾ ಮುಫ್ತಿ, ಆನಂದಿಬೆನ್ ಪಟೇಲ್, ಉಮಾ ಭಾರತಿ ಮುಂತಾದವರು ಸಿಎಂ ಆಗಿದ್ದನ್ನು ನೋಡಿದ್ದೇವೆ. ರಾಬ್ರಿ ದೇವಿ, ಜಾನಕಿ ರಾಮಚಂದ್ರನ್ ಮುಂತಾದವರು ರಾಜಕೀಯ ಸನ್ನಿವೇಶ, ಅನಿವಾರ್ಯತೆ ಕಾರಣಕ್ಕಾಗಿ ಅಲ್ಪಾವಧಿಗೆ ಮುಖ್ಯಮಂತ್ರಿಗಳಾಗಿದ್ದರು. ಅಧಿಕಾರಸೂತ್ರ ಹಿಡಿವ ಜತೆಗೆ ಆಡಳಿತದಲ್ಲೂ ಸಾಧನೆಯ ಛಾಪೊತ್ತುವ ಕೆಲಸ ಇನ್ನಷ್ಟು ಆದಲ್ಲಿ, ‘ಮಹಿಳೆಯರ ಹೆಸರಲ್ಲಿ ಪುರುಷರು ಆಡಳಿತ ನಡೆಸುತ್ತಾರೆ’ ಎಂಬ ಆಪಾದನೆಯಿಂದ ಮುಕ್ತರಾಗಬಹುದು.

    ಕೊನೇ ಮಾತು: ಕಮಲಾ ಹ್ಯಾರಿಸ್ ಅವರೇನಾದರೂ ಉಪಾಧ್ಯಕ್ಷ ಚುನಾವಣೆಯಲ್ಲಿ ಗೆದ್ದರೆ ‘ಅಮೆರಿಕದಲ್ಲಿ ಅರಳಿದ ಕಮಲ’ ಎಂದು ಹೇಳಬಹುದೇನೋ… ಅಲ್ಲಿ ಈಗ ಈ ಹೆಸರಿನಲ್ಲಿ ಪ್ರಚಾರಾಂದೋಲನ ಕೂಡ ಶುರುವಾಗಿದೆಯಂತೆ…

    (ಲೇಖಕರು ವಿಜಯವಾಣಿ ಡೆಪ್ಯೂಟಿ ಎಡಿಟರ್)

    ಕೆ.ಜೆ ಜಾರ್ಜ್‌ಗೆ ಮತ್ತೆ ಸಂಕಷ್ಟ: CBI ಸಲ್ಲಿಸಿದ್ದ ಬಿ ರಿಪೋರ್ಟ್ ತಿರಸ್ಕರಿಸಿದ ಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts