More

    ಕರ್ನಾಟಕವನ್ನು ಕಡೆಗಣಿಸಿಲ್ಲ: ನಿರ್ಮಲಾ ಸಮರ್ಥನೆ, 5 ವರ್ಷಗಳಲ್ಲಿ 2 ಲಕ್ಷ ಕೋಟಿ ರೂ. ನೀಡಿಕೆ

    ಬೆಂಗಳೂರು: ತೆರಿಗೆ ಬಾಬ್ತು, ವಿವಿಧ ಯೋಜನೆಗಳಡಿ ನೆರವು, ಪ್ರಕೃತಿ ವಿಕೋಪ ಪರಿಹಾರ ನೀಡುವ ವಿಷಯದಲ್ಲಿ ಕರ್ನಾಟಕವನ್ನು ಕೇಂದ್ರ ಸರ್ಕಾರ ಕಡೆಗಣಿಸಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಂಡಿದ್ದಾರೆ.

    ‘ಜನಪರ ಮುಂಗಡಪತ್ರ’ ಕುರಿತು ಉದ್ಯಮಿಗಳು ಹಾಗೂ ಆಯ್ದ ಗಣ್ಯರ ಜತೆ ಖಾಸಗಿ ಹೋಟೆಲ್​ವೊಂದರಲ್ಲಿ ಸೋಮವಾರ ಸಂವಾದ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕರ್ನಾಟಕ ಮಾತ್ರವಲ್ಲ ಎಲ್ಲ ರಾಜ್ಯಗಳಿಗೂ ಜಿಎಸ್​ಟಿ ಪರಿಹಾರ ಪಾವತಿ ಬಾಕಿಯಿತ್ತು. ತೆರಿಗೆ ಸಂಗ್ರಹಣೆಯಲ್ಲಿ ಕುಸಿತದಿಂದ ಈ ಸಮಸ್ಯೆ ಉಂಟಾಗಿದ್ದು, ಕಳೆದ ಆರ್ಥಿಕ ವರ್ಷದ ಅಂತ್ಯಕ್ಕೆ 2 ಕಂತುಗಳ ತೆರಿಗೆ ಪರಿಹಾರ ಬಾಕಿಯಿತ್ತು. ಕಳೆದ ಡಿಸೆಂಬರ್​ನಲ್ಲಿ ಈ ತೆರಿಗೆ ಪರಿಹಾರ ಬಾಬ್ತು ಪಾವತಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಪರಿಹಾರ ಬಾಕಿ ಶೀಘ್ರ ಪಾವತಿಸಲಾಗುವುದು ಎಂದರು.

    14ನೇ ಹಣಕಾಸು ಆಯೋಗದಡಿ 73,209 ಕೋಟಿ ರೂ., ತೆರಿಗೆ ಬಾಬ್ತು, ಪ್ರಕೃತಿ ವಿಕೋಪ ಪರಿಹಾರ, ವಿವಿಧ ಯೋಜನೆಗಳಡಿ ಅನುದಾನ ಸೇರಿ ಕಳೆದ 5 ವರ್ಷಗಳಲ್ಲಿ ಕರ್ನಾಟಕಕ್ಕೆ 2.03 ಲಕ್ಷ ಕೋಟಿ ರೂ. ನೆರವು ಕೇಂದ್ರ ಸರ್ಕಾರ ಕೊಡಮಾಡಿದೆ ಎಂಬ ಮಾಹಿತಿಯನ್ನು ಸಚಿವರ ಪರವಾಗಿ ಇಲಾಖೆ ಉನ್ನತಾಧಿಕಾರಿ ನೀಡಿದರು.

    ವಾಸ್ತವಿಕ ನೆಲೆಯ ಬಜೆಟ್: ವಿತ್ತೀಯ ಕೊರತೆ ನಿಯಂತ್ರಣ, ಆರ್ಥಿಕ ಶಿಸ್ತು ಕಾಪಾಡುವುದರ ಜತೆಗೆ ವಾಸ್ತವಿಕ ನೆಲೆಯ ಬಜೆಟ್ ನೀಡಲಾಗಿದೆ ಎಂಬ ಸಕಾರಾತ್ಮಕ ಸ್ಪಂದನೆ ಸಂವಾದ ನಡೆಸಿದಲ್ಲೆಲ್ಲ ವ್ಯಕ್ತವಾಗಿದೆ. ಎಲ್ಲ ಕ್ಷೇತ್ರಗಳಿಗೆ ಸೂಕ್ತ ಆದ್ಯತೆ ನೀಡಿ ಆದಾಯ ಸಂಗ್ರಹ, ಸುಸ್ಥಿರ ಅಭಿವೃದ್ಧಿ ಹಾಗೂ ಜನ ಕಲ್ಯಾಣ ಕಾರ್ಯಕ್ರಮಗಳ ಸಮತೋಲನ ಕಾಪಾಡಿಕೊಳ್ಳಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಬಜೆಟ್​ನ ಧ್ಯೇಯೋದ್ದೇಶಗಳನ್ನು ಉದ್ಯಮಿಗಳು, ಆಯ್ದ ಗಣ್ಯರು ಹಾಗೂ ಪ್ರಮುಖರಿಗೆ ಮನವರಿಕೆ ಮಾಡಿಕೊಡಲೆಂದು ದೇಶವ್ಯಾಪಿ ಆಯ್ದ ನಗರಗಳಲ್ಲಿ ಸಂವಾದ ನಡೆಸಲಾಗುತ್ತಿದೆ ಎಂದರು.

    ಸಹಕಾರ ಕ್ಷೇತ್ರಕ್ಕೂ ಕಾಯ್ದೆ: ವಾಣಿಜ್ಯ ಬ್ಯಾಂಕ್​ಗಳ ರೀತಿಯಲ್ಲಿ ಸಹಕಾರ ಕ್ಷೇತ್ರದ ನಿಯಂತ್ರಣ ಕಾಯ್ದೆ ಜಾರಿಗೊಳಿಸುವ ಉದ್ದೇಶವಿದ್ದು, ಸಹಕಾರಿಗಳು ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ಉತ್ತಮ ಹಾಗೂ ವೃತ್ತಿಪರ ನಿರ್ವಹಣೆ ಮುಖ್ಯವಾಗಿದೆ. ನಿಯಂತ್ರಣ ಪ್ರಾಧಿಕಾರವಾಗಿ ಆರ್​ಬಿಐ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

    ಉಪನಗರ ರೈಲ್ವೆಗೆ ನೆರವು ನೀಡಲು ಬದ್ಧ: ಬೆಂಗಳೂರು ಉಪನಗರ (ಸಬರ್ಬನ್) ರೈಲ್ವೆ ಯೋಜನೆಗೆ ಬಜೆಟ್​ನಲ್ಲಿ ಘೋಷಿಸಿದಂತೆ ಕೇಂದ್ರ ನೆರವು ನೀಡಲು ಬದ್ಧವಾಗಿದೆ. ತಾಂತ್ರಿಕ ಕಾರಣಗಳಿಗಾಗಿ ಬಜೆಟ್​ನಲ್ಲಿ ಸಾಂಕೇತಿಕವಾಗಿ 1 ಕೋಟಿ ರೂ. ಕಾದಿಟ್ಟಿದ್ದು, ತಪ್ಪಾಗಿ ಅರ್ಥೈಸಿಕೊಳ್ಳಬೇಕಿಲ್ಲ. ಸಚಿವ ಸಂಪುಟದ ಉಪ ಸಮಿತಿ ಒಪ್ಪಿಗೆ ನೀಡಿದ್ದು, 2020-21ರ ಬಜೆಟ್​ಗೆ ಮಾ.31ರಂದು ಲೋಕಸಭೆಯಲ್ಲಿ ಅನುಮೋದನೆ ಲಭಿಸಿದ ಬಳಿಕ ಹಂತಹಂತವಾಗಿ ಹಣ ಬಿಡುಗಡೆಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು. ಒಟ್ಟು 148 ಕಿ.ಮೀ. ಉದ್ದದ ಸಬರ್ಬನ್ ರೈಲ್ವೆ ಮಾರ್ಗಕ್ಕೆ 18,600 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ.20 ಪಾಲು ಸೇರಿದ್ದು, ಬಾಕಿ ಶೇ.60 ಮೊತ್ತ ಹೊರ ಸಾಲದಿಂದ ತುಂಬಿಸಿಕೊಳ್ಳಲಾಗುವುದು. ಎಡಿಬಿ, ಜೈಕಾ ಇನ್ನಿತರ ಹಣಕಾಸು ಸಂಸ್ಥೆಗಳಿಂದ ಎತ್ತುವಳಿ ಮಾಡಲಿರುವ ಸಾಲಕ್ಕೂ ಕೇಂದ್ರ ಸರ್ಕಾರವೇ ಖಾತರಿ ನೀಡುತ್ತದೆ ಎಂದರು.

    ಹಿಂದಿನ ಬಜೆಟ್​ಗಳಲ್ಲಿ ಈ ಯೋಜನೆ ಬಗ್ಗೆ ಯಾವ ಭರವಸೆ ನೀಡಲಾಗಿತ್ತೋ ನನಗೆ ಗೊತ್ತಿಲ್ಲ. ಆದರೆ, ನನ್ನ ಬಜೆಟ್​ನಲ್ಲಿ ಘೋಷಿತವಾಗಿರುವ ಯೋಜನೆ ಜಾರಿಗೊಳಿಸುವುದು ನನ್ನ ಜವಾಬ್ದಾರಿಯಾಗಿದೆ ಎಂದರು.

    ಬಿಎಸ್ಸೆನ್ನೆಲ್ ಖಾಸಗೀಕರಣ ನಿರ್ಧರಿಸಿಲ್ಲ: ಸಾರ್ವಜನಿಕ ಸ್ವಾಮ್ಯದ ಬಿಎಸ್ಸೆನ್ನೆಲ್ ಖಾಸಗೀಕರಣದ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಟೆಲಿಕಾಂ ಸಂಸ್ಥೆಗಳ ದರ ಸಮರ ವಿಷಯವಾಗಿ ಸಂಬಂಧಿಸಿದ ಟೆಲಿಕಾಂ ಸಂಸ್ಥೆಗಳ ಪ್ರತಿಕ್ರಿಯೆ, ಪ್ರಸ್ತಾವನೆ ನಿರೀಕ್ಷೆಯಲ್ಲಿದ್ದೇವೆ. ಈ ಪ್ರಸ್ತಾವನೆ ಸಲ್ಲಿಸಿದ ನಂತರ ನಾವು ಮಧ್ಯಸ್ಥಿಕೆ ವಹಿಸಲು ಸಾಧ್ಯವಿದೆ. ಅಲ್ಲದೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ಟೆಲಿಕಾಂ ಸಂಸ್ಥೆಗಳ ಬಾಕಿ ವಸೂಲಿಗೆ ಇಲಾಖೆ ಕ್ರಮ ವಹಿಸಿದೆ ಎಂದು ಕೇಂದ್ರ ಹಣಕಾಸು ಸಚಿವರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts