More

    ದೇವನಹಳ್ಳಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಶುರು


    • ಶಾಂತಮೂರ್ತಿ ದೇವನಹಳ್ಳಿ
      ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಆತ್ಯಾಧುನಿಕ 4 ಡಯಾಲಿಸಿಸ್ ಯಂತ್ರಗಳು ಕಾರ್ಯಾರಂಭ ಮಾಡಿದ್ದು, ತಾಲೂಕು ಸೇರಿ ನೆರೆಯ ತಾಲೂಕಿನ ರೋಗಿಗಳು ನಿಟ್ಟುಸಿರು ಬಿಡುವಂತಾಗಿದೆ.
      ಈ ಹಿಂದೆ ಇದೇ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ಯಂತ್ರಗಳಿದ್ದರೂ ಆಗಾಗ ರಿಪೇರಿಗೆ ಬರುತ್ತಿದ್ದು ರೋಗಿಗಳು ಸೇವೆಯಿಂದ ವಂಚಿತವಾಗಿದ್ದರು. ಈ ಬಗ್ಗೆ ಸಾಕಷ್ಟು ಬಾರಿ ಸಾರ್ವಜನಿಕರು ಜಿಲ್ಲಾಧಿಕಾರಿ ಸೇರಿ ಸರ್ಕಾರದ ಗಮನಕ್ಕೆ ತಂದು ಅಳಲು ತೋಡಿಕೊಂಡಿದ್ದರು.
      ಸರ್ಕಾರಿ ತಾಲೂಕು ಆಸ್ಪತ್ರೆಗೆ ಹೊಸ ಕಟ್ಟಡಗಳು, ಉತ್ತಮ ವೈದ್ಯಕೀಯ ಸಿಬ್ಬಂದಿ ಸೇರಿ ಇನ್ನಿತರ ವೈದ್ಯಕೀಯ ಸೇವೆ ಉತ್ತಮವಾಗಿದ್ದರೂ ಪ್ರಮುಖವಾಗಿ ಡಯಾಲಿಸಿಸ್ ಸೇವೆ ಇಲ್ಲದೆ ರೋಗಿಗಳು ಹೆಚ್ಚು ಹಣ ನೀಡಿ ಖಾಸಗಿಯಾಗಿ ಚಿಕಿತ್ಸೆ ಪಡೆಯುವಂತಾಗಿತ್ತು. ಈ ಎಲ್ಲ ಪರದಾಟಕ್ಕೆ ತೆರೆ ಬಿದ್ದಿದ್ದು, ಆತ್ಯಾಧುನಿಕ ಯಂತ್ರಗಳೊಂದಿಗೆ ಡಯಾಲಿಸಿಸ್ ರೋಗಿಗಳಿಗೆ ಸೇವೆ ನೀಡಲು ಸರ್ಕಾರಿ ಆಸ್ಪತ್ರೆಯಲ್ಲಿ ನೂತನ ಯಂತ್ರಗಳು ಕಾರ್ಯಾರಂಭ ಮಾಡಿವೆ.

    ನಿರ್ವಹಣೆ ಕೊರತೆ
    ಪ್ರಮುಖವಾಗಿ ಮೂತ್ರಪಿಂಡ ರೋಗಿಗಳಿಗೆ ಡಯಾಲಿಸಿಸ್ ಚಿಕಿತ್ಸೆಗೆ ಸ್ಥಾಪಿಸಿದ್ದ ಎರಡು ಯಂತ್ರಗಳ ಪೈಕಿ ನಿರ್ವಹಣಾ ಕೊರತೆಯಿಂದ ಒಂದು ಕೆಟ್ಟಿತ್ತು. ಇದೇ ಯಂತ್ರದಲ್ಲಿ ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗುತ್ತಿತ್ತು. ಕೆಲವು ದಿನಗಳ ಬಳಿಕ ಆ ಯಂತ್ರವೂ ರಿಪೇರಿಯಾಗಿದ್ದರಿಂದ ಸಮಸ್ಯೆ ಉಲ್ಭಣಗೊಂಡಿತ್ತು. ಸಾರ್ವಜನಿಕರ ತೀವ್ರ ಆಕ್ರೋಶದಿಂದ ಎಚ್ಚೆತ್ತ ಆರೋಗ್ಯ ಇಲಾಖೆ ನಂತರದಲ್ಲಿ ಒಂದು ಯಂತ್ರವನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿ, ಬಳಸಲಾಗುತ್ತಿದ್ದರೂ ಒಂದೇ ದಿನ ಹಲವು ರೋಗಿಗಳಿಗೆ ಸೇವೆ ನೀಡುವುದು ಕಷ್ಟಸಾಧ್ಯವಾಗಿತ್ತು. ಇದರಿಂದ ಹತಾಶರಾದ ರೋಗಿಗಳು ತಾಲೂಕಿನ ಆಕಾಶ್ ಅಥವಾ ಬೆಂಗಳೂರಿನ ಆಸ್ಪತ್ರೆಗಳಿಗೆ ಹೋಗುವಂತಾಗಿತ್ತು.

    ಬಡ ರೋಗಿಗಳಿಗೆ ವರದಾನ

    ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಚಿಕಿತ್ಸೆ ದುಬಾರಿಯಾಗಿದ್ದು, ಬಡವರು ಸೇವೆ ಪಡೆಯುವುದು ಕಷ್ಟಸಾಧ್ಯವಾಗಿದೆ. ಈಗ ಆಸ್ಪತ್ರೆಯಲ್ಲಿ ನಾಲ್ಕು ಯಂತ್ರಗಳು ಕಾರ್ಯನಿರ್ವಹಿಸುವುದರಿಂದ ಬಡವರು ಉಚಿತವಾಗಿ ಸೇವೆ ಪಡೆದುಕೊಳ್ಳಬಹುದು. ಜಯನಗರ ಸೌತ್ ರೋಟರಿ ಪರೆಡ್ ಸಂಸ್ಥೆ ಎರಡು ಯಂತ್ರಗಳನ್ನು ಉಚಿತವಾಗಿ ನೀಡಿದೆ. ಈ ಹಿಂದೆ ಸಂಜೀವಿನಿ ಏಜೆನ್ಸಿ ಯಂತ್ರಗಳ ನಿರ್ವಹಣೆ ಹೊಣೆ ಹೊತ್ತಿತ್ತು. ಈಗ ನೆಪ್ರೊಪ್ಲಸ್ ಎಂಬ ಏಜನ್ಸಿ ಜವಾಬ್ದಾರಿ ವಹಿಸಿಕೊಂಡಿದೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.


    ನಮ್ಮ ಆಸ್ಪತ್ರೆಯಲ್ಲಿ ನಾಲ್ಕು ಹೊಸ ಡಯಾಲಿಸಿಸ್ ಯಂತ್ರಗಳು ರೋಗಿಗಳ ಸೇವೆಗೆ ಲಭ್ಯವಿದೆ. ಈಗಿರುವ ಯಂತ್ರಗಳಲ್ಲಿ ಒಮ್ಮೆ ನಾಲ್ವರಂತೆ ಬೆಳಗ್ಗೆ ಮತ್ತು ಸಂಜೆ 8 ಮಂದಿಗೆ ಡಯಾಲಿಸಿಸ್ ಮಾಡಬಹುದು. ಈ ಉಚಿತ ಸೌಲಭ್ಯ ಸೇವೆ ಪಡೆದುಕೊಳ್ಳಲು ಡಯಾಲಿಸಿಸ್ ಅಗತ್ಯವಿರುವ ಸುತ್ತಮುತ್ತಲಿನ ಗ್ರಾಮಗಳ ಯಾರೂ ಬೇಕಾದರೂ ಬರಬಹುದು. ನುರಿತ ಸಿಬ್ಬಂದಿಯೊಂದಿಗೆ ಆಧುನಿಕ ಹೊಸ ಯಂತ್ರಗಳು ಚಿಕಿತ್ಸೆಗೆ ಸಿದ್ಧವಾಗಿವೆ.

    ಡಾ. ಆನಂದ ಹಲಗೇರಿ, ಆಡಳಿತ ವೈದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts