More

    ಗ್ರಾಪಂ ಸದಸ್ಯರ ಅಧಿಕಾರ ಮೊಟಕು ಮಾಡಲ್ಲ

    ಎಚ್.ಡಿ.ಕೋಟೆ: ಗ್ರಾಮ ಪಂಚಾಯಿತಿ ಚುನಾಯಿತ ಜನಪ್ರತಿನಿಧಿಗಳ ಅಧಿಕಾರವನ್ನು ಮೊಟಕುಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ ತಿಳಿಸಿದರು.
    ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕಿನ 39 ಗ್ರಾಮ ಪಂಚಾಯಿತಿಗಳ ಚುನಾಯಿತ ಜನಪ್ರತಿನಿಧಿಗಳ ವಿಶೇಷ ಸಭೆಯಲ್ಲಿ ಮಾತನಾಡಿದರು.
    ಕೆಲವೊಂದು ಯೋಜನೆಗಳಲ್ಲಿ ಗ್ರಾಪಂ ಚುನಾಯಿತ ಜನಪ್ರತಿನಿಧಿಗಳ ಅಧಿಕಾರ ಮೊಟಕುಗೊಳಿಸಲಾಗುತ್ತದೆ ಎಂಬ ಕೆಲವರ ಹೇಳಿಕೆಗಳಿಗೆ ಗ್ರಾಮ ಪಂಚಾಯಿತಿ ಸದಸ್ಯರು ಆತಂಕಪಡಬೇಕಿಲ್ಲ. ರಾಜ್ಯದಲ್ಲಿ ಪಕ್ಷಾತೀತವಾಗಿ, ಜಾತ್ಯತೀತವಾಗಿ 25 ಜನ ವಿಧಾನ ಪರಿಷತ್ ಸದಸ್ಯರು ನಿಮ್ಮ ಪರ ಇದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ ಹಿತ ಕಾಯಲು ಸಮಿತಿ ರಚಿಸಿಕೊಂಡು ಕೆಲಸ ನಿರ್ವಹಿಸುತ್ತಿದ್ದೇವೆ ಎಂದರು.
    ಮಾಜಿ ಸಂಸದ ಆರ್.ಧ್ರುವನಾರಾಯಣ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನ 39 ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ವಿಶೇಷ ಸಭೆ ನಡೆಸಿ ತಮ್ಮ ಹಕ್ಕುಗಳಿಗೆ ಹೋರಾಟ ನಡೆಸುತ್ತಿರುವುದು ರಾಜ್ಯದಲ್ಲಿಯೇ ಪ್ರಥಮವಾಗಿದೆ. ಚುನಾಯಿತ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಿದಾಗ ಮಾತ್ರ ಗ್ರಾಮ ಪಂಚಾಯಿತಿಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
    ಗ್ರಾಪಂಗಳಲ್ಲಿ ಸಮಸ್ಯೆಗಳನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿ ಸದನದಲ್ಲಿ ಚರ್ಚಿಸುವಂತೆ ಮನವಿ ಮಾಡಲಾಗುವುದು. ಸಚಿವ ವಿ.ಸೋಮಣ್ಣ ಅವರು ಮನೆಗಳ ಆಯ್ಕೆ ವಿಚಾರವಾಗಿ ಗ್ರಾಪಂ ಸದಸ್ಯರ ಬಗ್ಗೆ ನೀಡಿರುವ ಹೇಳಿಕೆಯನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಮನವಿ ಮಾಡಿಲಾಗುವುದು ಎಂದರು.
    ಗ್ರಾಪಂ ಸದಸ್ಯ ಮಲ್ಲೇಶ್ ಮಾತನಾಡಿ, 2017ನೇ ಸಾಲಿನಲ್ಲಿ ತಾಲೂಕು ವ್ಯಾಪ್ತಿಗೆ ಬಿಡುಗಡೆಗೊಂಡಿರುವ ಅಂಬೇಡ್ಕರ್ ಬಸವ ವಸತಿ ಯೋಜನೆ ಮನೆಗಳ ನಿರ್ಮಾಣಕ್ಕೆ ಅನುದಾನ ಬಂದಿಲ್ಲ. 14ನೇ ಹಣಕಾಸು ಯೋಜನೆಯಲ್ಲಿ ತುರ್ತು ಕೆಲಸ ನಡೆಸಲು ಅವಕಾಶ ಇತ್ತು. ಅದನ್ನು ಕೂಡ ಟೆಂಡರ್ ಮಾಡಲು ಸರ್ಕಾರ ಮುಂದಾಗಿದೆ ಎಂದು ದೂರಿದರು. ಜಿಪಂ ಕೈಗಾರಿಕೆ ಮತ್ತು ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟಸ್ವಾಮಿ, ತಾಪಂ ಅಧ್ಯಕ್ಷೆ ಮಂಜುಳಾ ದೇವಣ್ಣ, ಉಪಾಧ್ಯಕ್ಷೆ ಮಂಜುಳಾ ಚಂದ್ರೇಗೌಡ, ಹೈರಿಗೆ ಗ್ರಾಪಂ ಅಧ್ಯಕ್ಷೆ ಗಾಯತ್ರಿ, ಸದಸ್ಯರಾದ ಹಿರೇಹಳ್ಳಿ ಸೋಮೇಶ್, ಜಯಪ್ರಕಾಶ್, ಮಂಜುಳಾ ಬಸವಣ್ಣ, ಕಾಳಸ್ವಾಮಿ, ಚಿನ್ನಯ್ಯ, ಪುಟ್ಟಸ್ವಾಮಿ, ನಾಗರಾಜು, ಬೆಟ್ಟ ನಾಯಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts