More

    ಕಾಫಿ ಕೃಷಿಯಲ್ಲಿ ಧರ್ಮರಾಜ್ ಖುಷಿ; ಒಂದು ಎಕರೆ ಜಮೀನಿನಲ್ಲಿ 1 ಟನ್ ಕಾಫಿ ಕೊಯ್ಲು..

    | ಮಲ್ಲಿಕಾರ್ಜುನ ಕೊಚ್ಚರಗಿ ಹಾಸನ

    ಸಕಲೇಶಪುರ ತಾಲೂಕು ಹೊಂಕರವಳ್ಳಿ ಗ್ರಾಮದ ರೈತ ಧರ್ಮರಾಜ್, ಒಂದು ಎಕರೆ ಜಮೀನಿನಲ್ಲಿ 1 ಟನ್ ಕಾಫಿ ಕೊಯ್ಲು ಮಾಡುತ್ತಿದ್ದು ಯಶಸ್ವಿ ರೈತ ಎನಿಸಿಕೊಂಡಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಯಂಥ ಪ್ರಾಕೃತಿಕ ವಿಕೋಪಗಳ ನಡುವೆಯೂ ಧರ್ಮರಾಜ್ ಯಶಸ್ಸು ಸಾಧಿಸಿದ್ದು, ವೈಜ್ಞಾನಿಕ ಕೃಷಿ ಪದ್ಧತಿ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಮಿಶ್ರ ಬೆಳೆ ಮಾಡಿದರೆ ಲಾಭ: 1 ಎಕರೆ ಜಮೀನಿನಲ್ಲಿ 1 ಟನ್​ನಷ್ಟು ಕಾಫಿ ಕೊಯ್ಲು ಮಾಡುತ್ತಿರುವ ಧರ್ಮರಾಜ್, ಶೇ.80 ಅರೇಬಿಕಾ ಮತ್ತು ಶೇ.20 ರೊಬೊಸ್ಟಾ ಕಾಫಿ ಬೆಳೆಯುತ್ತಿದ್ದಾರೆ. ವೈಜ್ಞಾನಿಕ ರೀತಿಯಲ್ಲಿ ತೋಟವನ್ನು ನಿರ್ವಹಣೆ ಮಾಡುವ ಮೂಲಕ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಕಾಫಿ ತೋಟವೊಂದರಲ್ಲೇ ಏನೆಲ್ಲ ಮಿಶ್ರಬೆಳೆ ಬೆಳೆಯಬಹುದೋ ಅದನ್ನು ಅಚ್ಚುಕಟ್ಟಾಗಿ ಮಾಡಿ ಸೈ ಎನಿಸಿಕೊಂಡಿದ್ದಾರೆ.

    ಸವಾಲಾದರೂ ಸರಾಗ: ಕಾರ್ವಿುಕರ ಬರ ಎದುರಾಗಿರುವುದರಿಂದ ಕಾಫಿ ತೋಟದ ನಿರ್ವಹಣೆ ಇತ್ತೀಚಿನ ವರ್ಷಗಳಲ್ಲಿ ನಿಜಕ್ಕೂ ಸವಾಲಿನ ಕೆಲಸವಾಗಿದೆ. ಇದರ ನಡುವೆಯೂ ಶ್ರದ್ಧೆ ಮತ್ತು ಪ್ರೀತಿಯಿಂದ ಕೆಲಸ ನಿರ್ವಹಿಸಿದಲ್ಲಿ ಅಡೆತಡೆ ಗಳನ್ನು ಮೀರಿ ಕಾಫಿ ಬೆಳೆ ಕೈಹಿಡಿಯುತ್ತದೆ ಎಂಬ ಅಚಲ ವಿಶ್ವಾಸ ಧರ್ಮರಾಜ್ ಅವರದ್ದಾಗಿದೆ. ಮುಖ್ಯವಾಗಿ ತನ್ನ ಕೆಲಸವನ್ನು ಪ್ರೀತಿಸುವವನು ಯಾವುದೇ ಕ್ಷೇತ್ರದಲ್ಲಿದ್ದರೂ ಯಶಸ್ಸು ಕಾಣುತ್ತಾನೆ. ಜತೆಗೆ, ಯುವಕರು ಕೃಷಿಯೆಡೆಗೆ ಹೆಜ್ಜೆ ಇಡುತ್ತಿದ್ದಾರೆ. ಆದರೆ ಸರ್ಕಾರದ ಹಲವು ಸೌಲಭ್ಯ ಬೆಳೆಗಾರರನ್ನು ತಲುಪುತ್ತಿಲ್ಲ. ಅನವಶ್ಯಕ ಮಾನದಂಡ ವಿಧಿಸಿ ಸರ್ಕಾರ ಜಾರಿಗೆ ತಂದಿರುವ ಯೋಜನೆಯಿಂದ ಪ್ರಯೋಜನ ವಾಗುವುದು ಕಡಿಮೆ ಎಂಬುದು ಅವರ ಅನುಭವದ ಮಾತು.

    ಮಿಶ್ರ ಬೆಳೆ ಉಪಯೋಗಕಾರಿ: ಹಲವು ವರ್ಷಗಳಿಂದ ಕಾಫಿ ದರದಲ್ಲಿ ಯಾವುದೇ ಮಹತ್ವದ ಬದಲಾವಣೆ ಕಂಡುಬಂದಿಲ್ಲ. ಆದರೆ ಕಾಫಿ ತೋಟ ಉಳ್ಳವರು ಏಲಕ್ಕಿ, ಕಾಳುಮೆಣಸನ್ನು ಕಾಫಿ ಜತೆಗೆ ಉತ್ತಮವಾಗಿ ನಿರ್ವಹಣೆ ಮಾಡಿದಲ್ಲಿ ಹೆಚ್ಚಿನ ಲಾಭ ಗಳಿಸಲು ಸಾಧ್ಯ ಎಂಬುದು ಧರ್ಮರಾಜ್ ನುಡಿಯಾಗಿದೆ. ತಮ್ಮ ತೋಟದಲ್ಲಿ ಏಲಕ್ಕಿ ಬೆಳೆಯುತ್ತಿರುವ ಅವರು, ಕಾಳುಮೆಣಸಿನಿಂದಲೂ ಲಾಭ ಪಡೆಯುತ್ತಿದ್ದಾರೆ. ಮಲೆನಾಡು ಭಾಗದಲ್ಲಿ 4 ರಿಂದ 5 ಬಗೆಯ ಬೆಳೆ ಬೆಳೆಯಬಹುದಾಗಿದ್ದು, ಈ ಬಗ್ಗೆ ರೈತರು ತಿಳಿದಿರಬೇಕು. ಕಾಫಿ ಇತರ ಬೆಳೆಗಳ ಜತೆಗೆ, ಅಡಕೆ ಕೃಷಿಯನ್ನೂ ಅಳವಡಿಸಿಕೊಂಡರೆ ಮತ್ತಷ್ಟು ಲಾಭ ಪಡೆಯಬಹುದಾಗಿದೆ ಎಂಬುದು ಅವರ ಸಲಹೆ. ಕಾಫಿ ಬೆಳೆ ಬೆಳೆಯುವುದು ಸುಲಭದ ಸಂಗತಿಯಲ್ಲ. ಜ್ಞಾನದೊಂದಿಗೆ ಕೃಷಿ ಮಾಡಿದಾಗ ಮಾತ್ರವೇ ಅದರಲ್ಲಿ ಯಶಸ್ಸು ಗಳಿಸಲು ಸಾಧ್ಯ. ಮೊದಲಿಗೆ ತಮ್ಮ ಭೂಮಿಯ ಮಣ್ಣಿನ ಗುಣಮಟ್ಟ ಪರೀಕ್ಷೆಯನ್ನು ಪ್ರತಿಯೊಬ್ಬ ಕೃಷಿಕನೂ ಮಾಡಿಸಬೇಕು ಎನ್ನುವ ಅವರು, ವಿಪರೀತವಾಗಿ ರಾಸಾಯನಿಕ ಗೊಬ್ಬರ ಬಳಕೆ ಮಾಡದೆ, ಹವಾಮಾನ ಗಮನದಲ್ಲಿಟ್ಟುಕೊಂಡು ಬೆಳೆಗೆ ಮುಂದಾಗಬೇಕು. ಮಣ್ಣಿನ ಗುಣಮಟ್ಟ ಹೆಚ್ಚಿಸಲು ಕಾಂಪೋಸ್ಟ್ ಗೊಬ್ಬರ ಅತ್ಯಂತ ಸೂಕ್ತ ಎನ್ನುತ್ತಾರೆ. ಇದಕ್ಕೆ ಪೂರಕವಾಗಿ ಪ್ರತಿ ಗಿಡಕ್ಕೂ ವಿವಿಧ ರೀತಿಯಲ್ಲಿ ಗೊಬ್ಬರ ಬಳಕೆ ಮಾಡುವ ಕೃಷಿ ಜ್ಞಾನ ಇದ್ದರೆ, ಲಾಭ ತಂತಾನೆ ಅಧಿಕವಾಗಲಿದೆ ಎನ್ನುತ್ತಾರೆ. ಕೃಷಿ ಸಂಬಂಧಿಸಿದಂತೆ 33 ತರಗತಿ ಮುಗಿಸಿರುವ ಧರ್ಮರಾಜ್, ಕೃಷಿಯೊಂದಿಗೆ ಕಾಫಿ ಟ್ರೇಡಿಂಗ್ ಮೂಲಕ ದಲ್ಲಾಳಿಗಳಿಂದ ದೂರವಿದ್ದಾರೆ. ಅಲ್ಲದೆ, ತೋಟಗಳಿಗೆ ಉಚಿತ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಕೃಷಿ ಸೇರಿ ಎಲ್ಲ ರಂಗದಲ್ಲಿಯೂ ಸವಾಲುಗಳಿವೆ. ಆದರೆ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದರೆ ಯಶಸ್ಸು ಸಿಗುತ್ತದೆ. ನಮ್ಮ ತೋಟ ವೀಕ್ಷಣೆಗೆ ಬರುವ ರೈತರಿಗೆ ಬೆಳೆಗೆ ನೀರು ಪೂರೈಕೆ, ತೋಟ ನಿರ್ವಹಣೆ ಬಗ್ಗೆ ಉಚಿತ ತರಬೇತಿ ನೀಡುತ್ತೇನೆ.

    | ಧರ್ಮರಾಜ್ ಪ್ರಗತಿಪರ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts