More

    ಬಾದಾಮಿ ಪುರಸಭೆ ಎದುರು ಧರಣಿ

    ಬಾದಾಮಿ: ಬಾದಾಮಿ ಪಟ್ಟಣದಲ್ಲಿ ಮೂಲ ಸೌಲಭ್ಯ ಒದಗಿಸಲು ಒತ್ತಾಯಿಸಿ ಹಾಗೂ ಸರ್ವೇ ನಂಬರ್ 118ರ ನಿವೇಶನ ಉತಾರ ನೀಡದೆ ಕರ್ತವ್ಯ ಲೋಪವೆಸಗಿದ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಪುರಸಭೆ ಕಚೇರಿ ಎದುರು ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ ನರೇಗಲ್ ನೇತೃತ್ವದಲ್ಲಿ ಧರಣಿ ಆರಂಭಿಸಲಾಗಿದೆ.

    ಇಮ್ಮಡಿ ಪುಲಿಕೇಶಿ ಹಾಗೂ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹಲವು ಬಾರಿ ಮುಖ್ಯಾಧಿಕಾರಿ ಡಾಂಗೆ ಅವರಿಗೆ ಮನವಿ ಮೂಲಕ ಮನವಿ ಮಾಡಿದರೂ ಸ್ಪಂದಿಸದ ಅಧಿಕಾರಿ ವಿರುದ್ಧ ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.

    ನಗರದ ಬನಶಂಕರಿ ರಸ್ತೆಯ ಸರ್ವೇ ನಂಬರ್ 118 ರ 81 ಉತಾರ ನೀಡದ ಕಾರಣ ಹಾಗೂ ಸಂಬಂಧಿಸಿದ ಪ್ಲಾಟ್‌ಗಳಿಗೆ ಪುರಸಭೆಗೆ ಕಟ್ಟಿದ ಹಣದ ರಸೀದಿಯೊಂದಿಗೆ ಮೌಖಿಕ ಮತ್ತು ಲಿಖಿತವಾಗಿ ಕೇಳಿದರೂ ಉತಾರ (ಪಹಣಿ)ಪೂರೈಸಿಲ್ಲ. ನಿವೇಶನ ಖರೀದಿ ಮಾಡಬೇಕೆಂದರೆ ಪುರಸಭೆಯಲ್ಲಿ ಪಹಣಿ ಸಿಗುತ್ತಿಲ್ಲ. ಇಲ್ಲಿನ ನಿವಾಸಿಗಳು ಬಹಳ ತೊಂದರೆ ಅನುಭವಿಸುವಂತಾಗಿದೆ. ಇದರಿಂದ ಬೇಸತ್ತು ಧರಣಿ ಆರಂಭಿಸಲಾಗಿದೆ ಎಂದು ಇಷ್ಟಲಿಂಗ ನರೇಗಲ್ ಹೇಳಿದರು.

    ರಾಮದುರ್ಗ ಕ್ರಾಸ್‌ನಲ್ಲಿ ಇಮ್ಮಡಿ ಪುಲಿಕೇಶಿ ಮೂರ್ತಿ ಪ್ರತಿಷ್ಠಾಪನೆ, ಕಬ್ಬಲಗೇರಿ ಕ್ರಾಸ್‌ನಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ, ತರಕಾರಿ ಮಾರುಕಟ್ಟೆ ಸ್ಥಳಾಂತರಿಸಿ ಪ್ರವಾಸಿಗರು, ರೈತರು, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದು, ನಗರವನ್ನು ಧೂಳು, ಕಸ ಮುಕ್ತ ಮಾಡಲು, ಪುರಸಭೆ ಮಳಿಗೆಗಳನ್ನು ಅಗತ್ಯ ಬಿದ್ದಲ್ಲಿ ಮರು ಟೆಂಡರ್ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದು, ನಗರದಲ್ಲಿ ಪ್ರತಿ 200 ಮೀಟರ್‌ಗೆ ಒಂದರಂತೆ ಪುರುಷ, ಮಹಿಳಾ ಶೌಚಗೃಹ ನಿರ್ಮಾಣ, ಮಂಜುನಾಥ ನಗರದ ಸರ್ವೇ ನಂಬರ್ 118ರಲ್ಲಿ ಶುದ್ಧ ಕುಡಿವ ನೀರಿನ ಘಟಕ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿ ಕಳೆದ ಡಿಸೆಂಬರ್ ತಿಂಗಳಲ್ಲಿ ಅಧಿಕಾರಿಗಳಿಗೆ ಲಿಖಿತವಾಗಿ ಮನವಿ ಸಲ್ಲಿಸಲಾಗಿದೆ. ಆದರೆ ಅವರು ಮನವಿ ಸ್ಪಂದಿಸದಿದ್ದರಿಂದ ಧರಣಿ ಆರಂಭಿಸಲಾಗಿದೆ ಎಂದರು.

    ಧರಣಿ ನಿರತ ಸ್ಥಳಕ್ಕೆ ತಹಸೀಲ್ದಾರ್ ಜೆ.ಬಿ.ಮಜ್ಜಗಿ ಭೇಟಿ ನೀಡಿ ಮನವಿ ಆಲಿಸಿದರು. ಕೆಲ ಬೇಡಿಕೆಗಳ ಹಾಗೂ ಮನವಿಗಳಿಗೆ ಕಾನೂನು ರೀತಿಯಲ್ಲಿ ಮಾಡಬೇಕಾಗುತ್ತದೆ. ಸ್ವಲ್ಪ ಸಮಯವೂ ಬೇಕಾಗುತ್ತದೆ ಎಂದರು. ವಿವಿಧ ಸಂಘಟನೆಗಳ ಹುಲಗೆಪ್ಪ ಭೋವಿ, ಸುರೇಶ ಚಲವಾದಿ, ರುದ್ರೇಶ ಹುಣಸಿಗಿಡದ, ಶಹಾಜಿ ಪವಾರ್, ರವಿ ಪೂಜಾರಿ, ಮಹಾಂತೇಶ, ರವಿ ಅಬ್ಬಿಗೇರಿ, ಕುಮಾರ ಗಾಣಿಗೇರ, ಮಹೇಶ ವಡ್ಡರ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.

    ಬನಶಂಕರಿ ರಸ್ತೆಯ ಮಂಜುನಾಥ ನಗರದ ಸರ್ವೇ ನಂಬರ್ 118ರ 17 ಎಕರೆ 17 ಗುಂಟೆ ಜಮೀನು 1992ರಲ್ಲಿ ಭೂಪರಿವರ್ತನೆ ಆಗಿದೆ. ಕೃಷ್ಣಾಜಿ ಗಣಪಯ್ಯ ಪಾಲನಕರ ಅವರ 11 ಎಕರೆ 17 ಗುಂಟೆ ಜಮೀನಿನಲ್ಲಿ 216 ನಿವೇಶನ ಇದ್ದು, ಇದರಲ್ಲಿ ರಸ್ತೆ, ಉದ್ಯಾನವನ ಅಭಿವೃದ್ಧಿ ಮಾಡಿಲ್ಲ. ಈಗಾಗಲೇ 135 ನಿವೇಶನಗಳನ್ನು ಅಭಿವೃದ್ಧಿಪಡಿಸದೆ ಮಾರಾಟ ಮಾಡಲಾಗಿದೆ. ಉಳಿದ 81 ಖುಲ್ಲಾ ನಿವೇಶನಗಳು ಪಾಲನಕರ ಅವರ ಹೆಸರಲ್ಲಿದ್ದು, ನಿವೇಶನ ಪಡೆದು ಮನೆ ನಿರ್ಮಿಸಿಕೊಂಡ ನಿವಾಸಿಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸದೆ ಇರುವುದರಿಂದ ಅವರಿಗೆ ತೊಂದರೆಯಾದ ಕಾರಣ 81 ನಿವೇಶನಗಳ ಉತಾರ ತಡೆ ಹಿಡಿಯಲಾಗಿದೆ. ಇದೇ ಜಮೀನಿನ ಮಂಜುನಾಥ ನಗರದಲ್ಲಿ ಮನೆ ನಿರ್ಮಿಸಿದ ನಿವಾಸಿಗಳೆ ಅಭಿವೃದ್ಧಿ ಮಾಡಿದ್ದರಿಂದ ಮಾರಾಟಕ್ಕೆ ಅನುಮತಿಸಬಾರದು (ಉತಾರ ಕೊಡಬಾರದು) ಎಂದು ಮನವಿಯನ್ನೂ ಪುರಸಭೆಗೆ ನೀಡಿದ್ದಾರೆ. ಈ ಕುರಿತು ಸಂಬಂಧಿಸಿದ ಮಾಲೀಕರಿಗೆ 2 ಬಾರಿ ಅಭಿವೃದ್ಧಿ ಪಡಿಸಲು ನೋಟಿಸ್ ಕಳಿಸಲಾಗಿದ್ದು, ಈ ವಿಷಯ ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಗಮನದಲ್ಲೂ ಇದೆ.
    ಬಂದೇನವಾಜ ಡಾಂಗೆ , ಮುಖ್ಯಾಧಿಕಾರಿ ಪುರಸಭೆ ಬಾದಾಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts