More

    ಆಚಂದ್ರಾರ್ಕ ಪರ್ಯಂತ ಸಾಕ್ಷಿಯಿರುವ ಔಷಧಗಳು!

    ಆಚಂದ್ರಾರ್ಕ ಪರ್ಯಂತ ಸಾಕ್ಷಿಯಿರುವ ಔಷಧಗಳು!ಆಯುರ್ವೇದ ಪ್ರಸ್ತುತ ಪಡಿಸಿದ ಔಷಧಿಗಳ ಹಿನ್ನೆಲೆಯನ್ನು ಹಾಗೂ ಅವು ಸಾಗಿಬಂದ ದಾರಿಯನ್ನು ನೋಡುತ್ತಾ ಹೋದಂತೆ ಅನೇಕ ವಿಸ್ಮಯಗಳು ಎದುರಾಗುತ್ತವೆ. ಸಹಸ್ರಾಧಿಕ ವರ್ಷಗಳಿಂದ ಆಯುರ್ವೆದದಲ್ಲಿ ಬಳಸಲ್ಪಡುತ್ತಿರುವ ಔಷಧಗಳಲ್ಲಿ ಚಂದ್ರಪ್ರಭಾ ವಟಿಯೂ ಒಂದು. ಆಯುರ್ವೆದದ ಶಾಸ್ತ್ರೀಯ ಔಷಧವಿದು. ಇಂದಿನ ದಿನಮಾನಗಳಲ್ಲೂ ಕೇವಲ ಎರಡು ರೂಪಾಯಿಗಳಿಗೆ ಲಭ್ಯವಿರುವ ದಿವ್ಯೌಷಧ. ಮೂತ್ರಪಿಂಡದ, ಮೂತ್ರನಾಳದ, ಮೂತ್ರಾಶಯದ ಬಹುಬಗೆಯ ರೋಗಕಾರಕ ಸೂಕ್ಷ್ಮ ಕ್ರಿಮಿಗಳಿಂದಾಗುವ ಸೋಂಕಿನಲ್ಲಿ ಆದ್ಯತೆಯಿಂದ ಬಳಸಲ್ಪಡುವ ಔಷಧ. ಮೂತ್ರಕ್ಕೆ ಸಂಬಂಧಿಸಿದ ಅನೇಕ ರೋಗಗಳಲ್ಲಿ, ಸ್ತ್ರೀಯರಲ್ಲಿ ಗರ್ಭಾಶಯ ಹಾಗೂ ಯೋನಿಯ ವ್ಯಾಧಿಗಳಲ್ಲಿ, ಪುರುಷರಲ್ಲಿ ಪುರುಷಗ್ರಂಥಿಯ, ವೀರ್ಯದ, ವೃಷಣಗಳ ತೊಂದರೆಗಳಲ್ಲಿ ವೈದ್ಯರು ವಿವೇಚಿಸಿ ಉಪಯೋಗಿಸಬೇಕಾದ ಬಹು ಉಪಯೋಗಿ ಔಷಧ. ಇವುಗಳಲ್ಲಿದೆ ಹಲವಾರು ರೋಗಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ಪ್ರಸಿದ್ಧವಾದ ಔಷಧ. ಇದರಲ್ಲೇನಿದೆ ವಿಶೇಷ?

    ಇಷ್ಟು ವಿಶಾಲ ಶ್ರೇಣಿಯ ತೊಂದರೆಗಳಲ್ಲಿ ಕಾರ್ಯ ನಿರ್ವಹಿಸುವ ಗುಣ ಒಂದೇ ಔಷಧಕ್ಕಿರುವುದು ಮೊದಲನೆಯ ವಿಶೇಷತೆ. ಆಧುನಿಕ ವೈದ್ಯವಿಜ್ಞಾನದಲ್ಲಿ ಇಂತಹ ಸಂದರ್ಭಗಳಲ್ಲಿ ಆಂಟಿ ಬಯೋಟಿಕ್ ಉಪಯೋಗಿಸಿದರೆ ಆಯುರ್ವೆದ ತಜ್ಞರು ಚಂದ್ರಪ್ರಭಾ ವಟಿಯನ್ನು ನೀಡುತ್ತಾರೆ. ನಮ್ಮ ಕಣ್ಣೆದುರಲ್ಲೇ ಮೂರ್ನಾಲ್ಕು ಪೀಳಿಗೆಯ ಆಂಟಿಬಯೋಟಿಕ್​ಗಳು ಇದಕ್ಕಾಗಿಯೇ ಮಾರುಕಟ್ಟೆಗೆ ಬಂದವು. ಮೊದಲ ಪೀಳಿಗೆಯದ್ದು ಕೆಲಸ ಮಾಡುತ್ತಿಲ್ಲವೆಂದಾಗ ಎರಡನೆಯದು, ಮೂರನೆಯದು ಹೀಗೆ. ಹಾಗೆ ನೋಡಿದರೆ ಮೊದಲನೆಯದರ ರಂಗಪ್ರವೇಶವೂ ಸಾಕ್ಷಿ ಆಧಾರಿತ ಔಷಧ ಎಂಬ ನೆಲೆಯಲ್ಲೇ ಆಗಿತ್ತು. ಅದು ಕೆಲಸ ಮಾಡುತ್ತಿಲ್ಲವೆಂಬ ತದ್ವಿರುದ್ಧ ಸಾಕ್ಷಿ ದೊರೆತಾಗಲಷ್ಟೇ ಹಿಂದೆ ಸರಿಯಿತು! ಅವುಗಳ ಸಾಕ್ಷಿಯ ಆಧಾರದ ಅವಧಿ ಒಂದು ದಶಕವನ್ನೂ ದಾಟುವುದಿಲ್ಲ! ಪರಿಸ್ಥಿತಿ ಹೀಗಿರುವಾಗ ಈ ಚಂದ್ರಪ್ರಭಾ ವಟಿ ನೂರಾರು ಮನುಷ್ಯ ಪೀಳಿಗೆಯನ್ನು ದಾಟಿಬಂದರೂ ಇನ್ನೂ ಕೆಲಸ ಮಾಡುತ್ತಲೇ ಇದೆ! ರಾಸಾಯನಿಕ ಔಷಧಗಳನ್ನು ಒಬ್ಬ ವ್ಯಕ್ತಿಗೆ ಮೂತ್ರದ ಸೋಂಕಿದ್ದಾಗ ನೀಡಲಾಗುತ್ತದೆ. ಅದೇ ವ್ಯಕ್ತಿಗೆ ಎರಡು ಮೂರು ತಿಂಗಳ ಅವಧಿಯಲ್ಲಿ ಪದೇಪದೇ ಸೋಂಕು ಕಾಣಿಸಿಕೊಳ್ಳುತ್ತದೆ. ಔಷಧ ಕೊಟ್ಟಾಗ ಒಂದೆರಡು ಬಾರಿ ಕೆಲಸ ಮಾಡಿದರೂ ಮೂರನೆಯ ಬಾರಿಗೆ ಅದೇ ವ್ಯಕ್ತಿಯಲ್ಲಿ ಕೆಲಸ ಮಾಡುವುದಿಲ್ಲ! ಔಷಧ ಪ್ರತಿರೋಧ ಬಂದಿದೆ ಎಂದು ಅರ್ಥೈಸಿಕೊಂಡು ಆ ಔಷಧ ಬಿಟ್ಟು ಇನ್ನೊಂದು ಔಷಧದ ಮೊರೆಹೋಗಬೇಕಾಗುತ್ತದೆ. ಸಾಕ್ಷಿ ಆಧಾರಿತ ಔಷಧವಾಗಿ ತಿಂಗಳ ಹಿಂದೆ ಕೆಲಸ ಮಾಡಿದ ಔಷಧ ಈಗ ಏನೇನೂ ಕಾರ್ಯಮಾಡದ ಪರಿಸ್ಥಿತಿ! ವಿಷಯ ಹೀಗಿರುವಾಗ ಈ ಚಂದ್ರ

    ಪ್ರಭಾವಟಿ ಪ್ರಯೋಗಿಸಿದಾಗ ಸಾಮಾನ್ಯವಾಗಿ ಔಷಧ ಪ್ರತಿರೋಧ ಕಂಡುಬರದಿರುವುದು ಮತ್ತೊಂದು ವಿಶೇಷತೆ. ಸಾವಿರಾರು ವರ್ಷಗಳ ಹಿಂದೆ ಪರಿಣಾಮಕಾರಿಯಾಗಿದ್ದ ಔಷಧ ಇಂದಿನ ಅತ್ಯಾಧುನಿಕ ಯುಗದಲ್ಲೂ ಅಷ್ಟೇ ಪ್ರಭಾವಶಾಲಿಯಾಗಿ ಫಲಿತಾಂಶ ನೀಡುತ್ತಿರುವುದು ಮಗದೊಂದು ಅಚ್ಚರಿ. ಸುದೀರ್ಘವಾದ ಅವಧಿಯಲ್ಲೂ ಅಡ್ಡಪರಿಣಾಮಗಳು ಗೋಚರಿಸದೆ ಅಕಳಂಕ ಚರಿತ್ರೆಯನ್ನು, ಅವಿಚ್ಛಿನ್ನ ಪ್ರಯೋಗ ಪರಂಪರೆಯನ್ನು ಹೊಂದಿರುವುದೆಂದರೆ ಅದು ಇನ್ನೊಂದು ಅಚ್ಚರಿಯಲ್ಲವೇ? ಇವೆಲ್ಲವಕ್ಕೂ ಮುಕುಟ ಪ್ರಾಯವಾಗಿ ಮತ್ತೊಂದು ವಿಚಾರವಿದೆ. 1993ರಲ್ಲಿ ಮಣಿಪಾಲದಲ್ಲಿ ಏಷ್ಯನ್ ಮೆಡಿಕಲ್ ಸ್ಟೂಡೆಂಟ್ಸ್ ಅಸೋಸಿಯೇಶನ್ ವತಿಯಿಂದ ನಡೆದ ಎಲ್ಲ ವೈದ್ಯಪದ್ಧತಿಗಳೂ ಭಾಗವಹಿಸಿದ್ದ ರಾಷ್ಟ್ರೀಯ ವೈದ್ಯಕೀಯ ಸಮ್ಮೇಳನದಲ್ಲಿ ಯುರಾಲಜಿ ವಿಭಾಗದ ಮುಖ್ಯಸ್ಥರಾಗಿದ್ದ ಹಿರಿಯ ವೈದ್ಯರಾದ ಡಾ. ನಾರಾಯಣನ್ ಉಣ್ಣಿ ಅವರು ಹೇಳಿದ ಮಾತು ಎಲ್ಲರ ಕಣ್ಣು ತೆರೆಸುವಂತಿದೆ.

    ‘‘ಮೂತ್ರನಾಳದ ಸೋಂಕು ಯಾವುದೇ ಆಧುನಿಕ ಔಷಧಗಳಿಂದ ನಿಯಂತ್ರಣಕ್ಕೆ ಬರದೆ ಇರುವ ಸಂದರ್ಭಗಳಲ್ಲಿ ಅಥವಾ ಬಹು ಔಷಧಗಳಿಗೆ ಪ್ರತಿರೋಧ ಕಂಡುಬಂದ ಸಮಯದಲ್ಲಿ ಚಂದ್ರಪ್ರಭಾ ವಟಿಯನ್ನು ಆಯ್ಕೆಯ ಔಷಧವಾಗಿ ಬಳಸುತ್ತೇವೆ!’’. ಎಷ್ಟು ಸಾವಿರ ವರ್ಷಗಳ ಹಿಂದಿನ ಆಯುರ್ವೆದ, ಅದೆಷ್ಟು ತಲೆಮಾರು ಹಳೆಯ ಔಷಧ, ಇಂದಿನ ಆಧುನಿಕ ಯುಗದಲ್ಲಿ ಸುಪ್ರಸಿದ್ಧ ವೈಜ್ಞಾನಿಕ ಹಿನ್ನೆಲೆಯ ಆಸ್ಪತ್ರೆಯಲ್ಲಿ ಬಳಸಲ್ಪಡುತ್ತದೆ ಎಂದರೆ ಏನರ್ಥ? ಪ್ರಾಚೀನ ಭಾರತದಲ್ಲಿ ಕಂಡುಬರುತ್ತಿದ್ದ ಚಂದ್ರಪ್ರಭಾ ವಟಿಯ ಕಾರ್ಯದಕ್ಷತೆ ಇಂದಿಗೂ ಅದೇ ಮಟ್ಟದಲ್ಲಿದೆ ಎಂಬುದು ಸ್ಪಟಿಕಸ್ಪಷ್ಟ ಸತ್ಯವಾಗಿದೆ. ಇದಕ್ಕಿಂತ ಮಿಗಿಲಾದ ಸಾಕ್ಷಿ ಆಧಾರಿತ ಔಷಧ ಎಂದು ಇನ್ನೊಂದನ್ನು ಹೇಳಲು ಸಾಧ್ಯವೇ? ಯಾರೂ ಈ ವಿಷಯದಲ್ಲಿ ಭಿನ್ನರಾಗ ತಳೆಯಬೇಕಿಲ್ಲ, ಮತ್ಸರ ಪಡಬೇಕಾದುದೂ ಇಲ್ಲ. ಏಕೆಂದರೆ ಇದನ್ನು ಆವಿಷ್ಕರಿಸಿದ್ದು ಇಂದಿನ ವೈದ್ಯರಲ್ಲ. ಪುರಾತನ ಭಾರತದ ಶ್ರೇಷ್ಠ ವಿಜ್ಞಾನಿ ಆಚಾರ್ಯ ಸಾಹಿತಿ ಋಷಿಗಳೆಲ್ಲವೂ ಆಗಿದ್ದ ವೈದ್ಯರು. ಇದು ಕೇವಲ ಚಂದ್ರಪ್ರಭಾ ವಟಿಯೊಂದರ ಕಥೆಯಲ್ಲ. ಆಯುರ್ವೆದದಲ್ಲಿ ಹೇಳಲಾದ ಸಾವಿರಾರು ಶಾಸ್ತ್ರೀಯ ಸಾರ್ವಕಾಲಿಕ ಸಾಕ್ಷಿ ಆಧಾರಿತ ಔಷಧಗಳ ಸದೃಢ ಚರಿತೆ.

    ಪತ್ನಿಯನ್ನು ಎತ್ತಿಕೊಂಡು ಬಂದು ಹಾಸನಾಂಬೆ ದರ್ಶನ ಪಡೆದ ಪತಿ; ಕಾರಣವಿದು…

    ‘ಕಾಂತಾರ’ ಭರ್ಜರಿ ಯಶಸ್ಸು; ಕುತೂಹಲ ಕೆರಳಿಸಿದೆ ಇವರಿಬ್ಬರ ಮೌನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts