More

    ಧನ್ವಂತರಿ| ಅಸಿಡಿಟಿಗೆ ಸರಳ ಪರಿಹಾರಗಳು

    ಧನ್ವಂತರಿ| ಅಸಿಡಿಟಿಗೆ ಸರಳ ಪರಿಹಾರಗಳುಎಲ್ಲಿಯಾದರೂ ಜನ ಸೇರಿದಾಗ ಯಾರಿಗಾದರೂ ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಇದ್ದರೆ ಕೈಯೆತ್ತಿ ಎನ್ನುವ ಬದಲು ಯಾರಿಗೆ ಅಸಿಡಿಟಿ ಇಲ್ಲವೋ ಅವರು ಕೈ ಎತ್ತಿ ಎಂದು ಹೇಳಿದರೆ ಬಹುಶಃ ಸುಲಭವಾಗಬಹುದು. ಏಕೆಂದರೆ ಇಂದು ಶೇ. 99 ಜನ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದಕ್ಕೆ ಕಾರಣಗಳು ಹಲವಾರು. ನೋವು ನಿವಾರಕ ಮಾತ್ರೆಗಳು, ಮಸಾಲೆಯುಕ್ತ ಪದಾರ್ಥಗಳು, ಆಲ್ಕೋಹಾಲ್ ಸೇವನೆ, ಅವ್ಯವಸ್ಥಿತ ಆಹಾರಪದ್ಧತಿ, ಮಾನಸಿಕ ಒತ್ತಡ ಇತ್ಯಾದಿ ಕಾರಣಗಳು ಜಠರದಲ್ಲಿರುವ ಲೋಳೆಯ ಪದರವನ್ನು ಹಾನಿಗೊಳಿಸುತ್ತವೆ.

    ಈ ಕಾರಣದಿಂದ ಇಂದಿನ ದಿನಗಳಲ್ಲಿ ಹೊಟ್ಟೆಯುಬ್ಬರ, ಹೊಟ್ಟೆ ಉರಿ, ಹುಳಿತೇಗು, ತಲೆನೋವು, ಮಲವಿಸರ್ಜನೆಯ ಸಮಸ್ಯೆಗಳು ಕಂಡುಬರುತ್ತವೆ. ಇವುಗಳಿಂದಾಗಿ ಮಾನಸಿಕ ಕಿರಿಕಿರಿಯೂ ಹೆಚ್ಚುತ್ತಿದೆ. ಇದನ್ನು ನಿರ್ಲಕ್ಷಿಸಿದರೆ ಅಥವಾ ಅಸಿಡಿಟಿ ಮಾತ್ರೆಗಳನ್ನು ತೆಗೆದುಕೊಂಡು ತಾತ್ಕಾಲಿಕವಾಗಿ ಪರಿಹಾರ ಮಾಡಿಕೊಂಡರೆ ಮುಂದೊಂದು ದಿನ ಈ ಸಮಸ್ಯೆ ಬೇರೆ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ತೊಂದರೆಗೆ ಪರಿಹಾರಗಳೇನು?

    ಸರಿಯಾದ ಸಮಯದಲ್ಲಿ ಆಹಾರ ಸೇವಿಸುವುದು ಅತ್ಯಂತ ಉಪಯುಕ್ತ. ಇಲ್ಲಿ ಸರಿಯಾದ ಸಮಯ ಎಂದರೆ ಹಸಿವೆಯಾದಾಗ ಆಹಾರ ಸೇವಿಸುವುದು ಎಂದರ್ಥ. ಆಹಾರ ಸೇವಿಸುವಾಗ ನಾಲಿಗೆಗೆ ಅಷ್ಟೇ ಅಲ್ಲ, ಹೊಟ್ಟೆಗೆ ಎಷ್ಟು ಹಿತಕರ ಎಂಬುದನ್ನೂ ಯೋಚಿಸಬೇಕು. ಅತಿಯಾಗಿ ಖಾರ ಅಥವಾ ಹುಳಿಯಿರುವ ಮತ್ತು ಅತ್ಯಂತ ಮಸಾಲೆಯುಕ್ತ ಆಹಾರ ಸೇವನೆಯನ್ನು ಕಡಿಮೆ ಮಾಡಬೇಕು. ಸೇವಿಸಲೇಬೇಕು ಎಂದಾದರೆ ಅದಕ್ಕೂ ಮೊದಲು ಸಿಹಿ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ಮನೆಯಲ್ಲಿ ತಯಾರಿಸಿದ್ದರ ಹೊರತಾಗಿ ಹೊರಗಿನ ಯಾವುದೇ ಆಹಾರವನ್ನು ಆದಷ್ಟೂ ಕಡಿಮೆ ಸೇವಿಸುವುದು ಒಳಿತು. ಆಲ್ಕೋಹಾಲ್ ಸೇವನೆ ಬಿಟ್ಟರೆ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಒಂದುವೇಳೆ ಸಾಧ್ಯವಿಲ್ಲವಾದರೆ ಆಹಾರ ಸೇವಿಸಿದ ನಂತರ ಅತಿ ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ಗ್ಯಾಸ್ಟ್ರೆ ೖಟಿಸ್ ತೀವ್ರವಾಗುವುದನ್ನು ತಡೆಯಬಹುದು.

    ಮನೆಯಲ್ಲಿ ಮಾಡಿಬಹುದಾದ ಕೆಲವು ಮದ್ದುಗಳು ಹೀಗಿವೆ. ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೂದುಗುಂಬಳಕಾಯಿ ಮತ್ತು ಶುಂಠಿಯ ರಸ ಸೇವಿಸುವುದು ಗ್ಯಾಸ್ಟ್ರೈಟಿಸ್ ನಿವಾರಣೆಗೆ ಉತ್ತಮ ಆಹಾರೌಷಧ. ಜ್ಯೇಷ್ಠಮಧು ಐದು ಗ್ರಾಂ, ಹಾಲು ಒಂದು ಲೋಟ ಮತ್ತು ನೀರು ಮೂರು ಲೋಟ ಇವನ್ನು ಸ್ಟೀಲ್ ಪಾತ್ರೆಯಲ್ಲಿ ಹಾಕಿ ಸಣ್ಣ ಬೆಂಕಿಯಲ್ಲಿ ಕುದಿಸಿ ಒಂದು ಲೋಟ ಹಾಲು ಇರುವವರೆಗೆ ಬತ್ತಿಸಿ ಹೊಟ್ಟೆ ಹಸಿದಿರುವಾಗ ಅಥವಾ ವಿಶೇಷವಾಗಿ ಹೊಟ್ಟೆ ಹಸಿದು ಸಂಕಟವಾದಂತೆನಿಸಿದಾಗ ಕುಡಿಯುವುದರಿಂದ ತುಂಬ ಲಾಭವಿದೆ. ಕೆಲವು ದಿನಗಳ ಕಾಲ ಊಟದಲ್ಲಿ ಖಾರ, ಹುಳಿ ರುಚಿಯ ಮತ್ತು ಉಷ್ಣ ಗುಣದ ಪದಾರ್ಥಗಳನ್ನು ಕಡಿಮೆ ಮಾಡಿ ಬಸಳೆಸೊಪ್ಪು, ಗೋಳಿಸೊಪ್ಪು, ಬಾಳೆದಿಂಡು, ಪಡವಲಕಾಯಿ, ಬೂದುಗುಂಬಳ ಕಾಯಿ, ಹೀರೆಕಾಯಿ, ಹಾಲುಸೋರೆಕಾಯಿಗಳಂತಹ ಸೊಪ್ಪು, ತರಕಾರಿಗಳನ್ನು ಬಳಸುವುದು ಒಳಿತು. ಸೀತಾಫಲ, ಸಪೋಟಾದಂಥ ಹಣ್ಣುಗಳು ಹೆಚ್ಚು ಉತ್ತಮ. ಚಹಾ ಸೇವನೆ ಬಿಟ್ಟು ಕೊತ್ತಂಬರಿ, ಜೀರಿಗೆ, ಮೆಂತ್ಯ, ಶುಂಠಿ ಹಾಕಿ ಮಾಡಿದ ಕಷಾಯ ಸೇವಿಸುವುದು ಎಲ್ಲ ರೀತಿಯಲ್ಲೂ ಆರೋಗ್ಯಕರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts