More

    ಬೈರಂಬಾಡ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶ್ರದ್ಧಾಭಕ್ತಿಯ ಷಷ್ಠಿ ಪೂಜೆ

    ಸಿದ್ದಾಪುರ: ಅಮ್ಮತ್ತಿ ಒಂಟಿಯಂಗಡಿ ಸಮೀಪದ ಬೈರಂಬಾಡ ಸೇರಿದಂತೆ ಜಿಲ್ಲೆಯ ಹಲವೆಡೆ ಸಂಭ್ರಮದಿಂದ ಸುಬ್ರಹ್ಮಣ್ಯ ಷಷ್ಠಿ ಆಚರಿಸಲಾಯಿತು.

    ತಳಿರು-ತೋರಣಗಳಿಂದ ಶೃಂಗರಿಸಿದ ದೇಗುಲಗಳಿಗೆ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿದರು. ಕೊಡಗಿನ ಸುಬ್ರಹ್ಮಣ್ಯ ದೇವರ ನೆಲೆಯೆಂದೇ ಹೆಸರುವಾಸಿಯಾಗಿರುವ ಅಮ್ಮತ್ತಿ ಒಂಟಿಯಂಗಡಿ ಬಳಿಯ ಬೈರಂಬಾಡ ಗ್ರಾಮದ ಸುಬ್ರಹ್ಮಣ್ಯ ದೇಗುಲದಲ್ಲಿ ಷಷ್ಠಿ ಪ್ರಯುಕ್ತ ನಡೆದ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಮುಂಜಾನೆಯಿಂದಲೇ ಭಕ್ತರು ಬೈರಂಬಾಡದ ಸುಬ್ರಹ್ಮಣ್ಯನ ಸನ್ನಿಧಿಗೆ ಆಗಮಿಸಿ ಹಣ್ಣು-ಕಾಯಿ, ಹರಕೆಯನ್ನು ಸಮರ್ಪಿಸಿದರು.

    ದೇವರ ಸನ್ನಿಧಿಗೆ ಬೆಳಗ್ಗೆಯಿಂದಲೇ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರಳಿದ ಪರಿಣಾಮವಾಗಿ ಟ್ರಾಫಿಕ್ ಜಾಮ್ ಉಂಟಾಗಿ ಪೊಲೀಸರು ವಾಹನ ಸಂಚಾರ ನಿಯಂತ್ರಿಸಲು ಹರಸಾಹಸಪಡುತ್ತಿದ್ದ ದೃಶ್ಯ ಕಂಡುಬಂತು.

    ದೇವಾಲಯದಲ್ಲಿ ಬೆಳಗ್ಗೆ 4ರಿಂದಲೇ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ಆರಂಭಗೊಂಡವು. ದೇವರಿಗೆ ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಕ್ಷೀರಾಭಿಷೇಕ, ರುದ್ರಾಭಿಷೇಕಗಳು ನಡೆದವು. ಉತ್ಸವದ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಹಾಗೂ ಹೂವುಗಳಿಂದ ಅಲಂಕರಿಸಲಾಗಿತ್ತು.

    ಜಿಲ್ಲೆಯ ನಾನಾ ಭಾಗಗಳಿಂದ ಅಧಿಕ ಭಕ್ತಾದಿಗಳು ದೇವರ ದರ್ಶನಕ್ಕೆ ತಂಡೋಪತಂಡವಾಗಿ ಬಂದು ದರ್ಶನ ಪಡೆದರು. ಭಕ್ತಾದಿಗಳೊಂದಿಗೆ ಅಯ್ಯಪ್ಪಸ್ವಾಮಿ ಮಾಲಧಾರಿಗಳು ಪೂಜೆ ಸಲ್ಲಿಸಿದರು. ಜಾತ್ರಾ ಮಹೋತ್ಸವಕ್ಕಾಗಿ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಾಗೂ ಕೂರಲು ಪೆಂಡಾಲ್ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ದೇವರಿಗೆ ಮಹಾಮಂಗಳಾರತಿ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾದರು. ದೇವಾಲಯದ ಹೊರಭಾಗದಲ್ಲಿ ಭಕ್ತಾದಿಗಳು ಕೇಶಮುಂಡನ ಮಾಡಿಸಿಕೊಂಡು ಹರಕೆ ಒಪ್ಪಿಸಿದರು.

    ಜಾತ್ರೆ ಅಂಗವಾಗಿ ಬೆಳಗ್ಗೆಯಿಂದ ಸಂಜೆವರೆಗೆ ಮಡಿಕೇರಿ, ಮೂರ್ನಾಡು, ಸಿದ್ದಾಪುರ, ವಿರಾಜಪೇಟೆ ಕಡೆಗಳಿಂದ ವಿಶೇಷ ಖಾಸಗಿ ಬಸ್‌ಗಳು, ಬಾಡಿಗೆ ಜೀಪ್, ವ್ಯಾನ್ ಇನ್ನಿತರ ವಾಹನಗಳ ಸಂಚಾರವಿತ್ತು. ದೇವಾಲಯದ ರಸ್ತೆ ಬದಿಗಳಲ್ಲಿ ವ್ಯಾಪಾರಿಗಳು ಮಳಿಗೆಗಳನ್ನು ಹಾಕಿಕೊಂಡು ಮಾರಾಟದಲ್ಲಿ ತೊಡಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts