More

    ಅಕ್ಕಮಹಾದೇವಿ ಜನ್ಮಸ್ಥಳ ದೃಢೀಕರಿಸುವ ಶಾಸನ ಪತ್ತೆ

    ಶಿಕಾರಿಪುರ: ವೀರವಿರಾಗಿನ ಅಕ್ಕಮಹಾದೇವಿ ಹುಟ್ಟೂರು ಉಡá-ತಡಿಯ ಅಭಿವೃದ್ಧಿ ಕಾಮಗಾರಿ ವೇಳೆ ಮಹತ್ವದ ಶಾಸನವೊಂದು ದೊರೆತಿದ್ದು ಇದರಿಂದ ಅಕ್ಕನ ಜನ್ಮಸ್ಥಳ ಮತ್ತು ರಾಜ ಕೌಶಿಕನ ಬಗ್ಗೆ ಇತಿಹಾಸಗಳು ಪುಷ್ಟೀಕರಿಸಿದಂತಾಗಿದೆ.

    ಮೊದಲಿನಿಂದಲೂ ಇಲ್ಲಿ ಕೋಟೆಯ ಮಾದರಿ, ಕಂದಕಗಳು ಇದ್ದರೂ ಅವು ಜೀರ್ಣಾವಸ್ಥೆಯಲ್ಲಿದ್ದವು. ಈ ಕೋಟೆಯ ಪೂರ್ವ ಭಾಗದ ಬಲ ಬುರುಜಿನ ಹತ್ತಿರ ಬಿಜ್ಜಳ ಅರಸನ ದಂಡನಾಯಕ ಕಸಪಯ್ಯ ನಾಯಕನ ತೃಟಿತವಾದ ಶಾಸನ ಪತ್ತೆಯಾಗಿದ್ದು ಈ ಶಾಸನ 114 ಸೆಂಮೀ ಉದ್ದ ಹಾಗೂ 30 ಸೆಂಮೀ ಆಗಲವಾಗಿದ್ದು ಮೇಲ್ಭಾಗದಲ್ಲಿ ಸ್ವಲ್ಪ ಭಾಗ ತುಂಡಾಗಿದೆ. ಕೆಳ ಭಾಗ ಹಾಗೂ ಎಡ ಭಾಗದಲ್ಲಿ ಅಕ್ಷರಗಳು ತೃಟಿತವಾಗಿರುವುದು ಕಂಡುಬರುತ್ತದೆ .

    ಶಾಸನದ ಮಹತ್ವ: ಶಾಸನದಲ್ಲಿ 17 ಸಾಲುಗಳು ಮಾತ್ರ ಕಂಡುಬರುತ್ತಿದ್ದು ಇದರಲ್ಲಿ ಕಲಚೂರಿ ಬಿಜ್ಜಳ ಅರಸನ ಮಹಾದಂಡನಾಯಕ ಕಸಪಯ್ಯ ನಾಯಕನು ಬಲ್ಲೇಶ್ವರ ದೇವರ ಆರಾಧಕನಾಗಿದ್ದು ಬ್ರಹ್ಮಪುರಿಗೆ ಅಂದರೆ ಬ್ರಾಹ್ಮಣರ ಅಗ್ರಹಾರಕ್ಕೆ 8 ಗದ್ಯಾಣ ನಾಣ್ಯಗಳನ್ನು ದಾನ ನೀಡಿರುವುದು ತಿಳಿದುಬರುತ್ತದೆ.

    ಈ ಶಾಸನ ಕ್ರಿಶ 1150-68ರ ಅವಧಿಯ ಕಲಚೂರಿ ಬಿಜ್ಜಳ ಅರಸನ ಕಾಲದ್ದಾಗಿದ್ದು ಇದರಲ್ಲಿ ದಂಡನಾಯಕ ಕಸಪಯ್ಯ ನಾಯಕನ ಉಲ್ಲೇಖವಿದೆ. ಇವನು ಕ್ರಿಶ 1150-68ರ ಅವಧಿಯಲ್ಲಿ ಬಿಜ್ಜಳ ಅರಸನ ದಂಡನಾಯಕನಾಗಿ, ಬನವಾಸಿ 12000 ನಾಡಿನ ಮಹಾದಂಡನಾಯಕನಾಗಿ ಬಳ್ಳಿಗಾವಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ಮಾಡಿರುವುದು ಆನೇಕ ಶಾಸನಗಳಲ್ಲಿ ಉಲ್ಲೇಖವಿದೆ. ಹಿಂದೆ ಕಸಪಯ್ಯ ನಾಯಕನನ್ನು ಅಕ್ಕಮಹಾದೇವಿಯ ಮಹಾರಾಜ ಇರಬಹುದೆಂದು ಚಿದಾನಂದಮೂರ್ತಿ ಅವರು ಅಭಿಪ್ರಾಯಪಟ್ಟಿದ್ದರು.

    ಅಕ್ಕಮಹಾದೇವಿಯ ಜನ್ಮಸ್ಥಳವಾದ ಉಡುತಡಿಯ ಕೋಟೆಯಲ್ಲಿಯೇ ಕಸಪಯ್ಯ ನಾಯಕನ ಶಾಸನ ದೊರೆತಿರುವುದರಿಂದ ಇವರೇ ಕೌಶಿಕ ಮಹಾರಾಜ ಎಂಬುದಕ್ಕೆ ಹೆಚ್ಚಿನ ಸಾಕ್ಷ್ಯ ಈ ಶಾಸನದಿಂದ ದೊರೆತಿದ್ದು ಇದರಿಂದ ಅಕ್ಕಮಹಾದೇವಿ ಜನ್ಮಸ್ಥಳಕ್ಕೆ ಐತಿಹಾಸಿಕ ಮಹತ್ವ ದೊರೆತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts