More

    ಅವಳಿ ನಗರದಲ್ಲಿ ಅಭಿವೃದ್ಧಿಯ ನಾಗಾಲೋಟ

    ಹುಬ್ಬಳ್ಳಿ: ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಿಸುವ ಮೂಲಕ ಅವು ಉಸಿರಾಡುವ ಹಾಗೆ ಮಾಡಿದೆ. ಬೆಂಗಳೂರಿನಂತೆಯೇ ಹುಬ್ಬಳ್ಳಿ- ಧಾರವಾಡದಲ್ಲಿ ಸಹ ಅಭಿವೃದ್ಧಿಯ ನಾಗಾಲೋಟ ಸಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

    ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ(ಕೆಸಿಸಿಐ)ಯಲ್ಲಿ ಸೋಮವಾರ ಆಯೋಜಿಸಿದ್ದ ವಾಣಿಜ್ಯೋದ್ಯಮಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಕೆಸಿಸಿಐ ರಾಜ್ಯದ ದೊಡ್ಡ ಸಂಸ್ಥೆ ಮತ್ತು ಸಂಪತ್ತು ಇದ್ದಂತೆ. ಮತ್ತೊಂದು ಸಂಸ್ಥೆ ಹುಟ್ಟಲು ಅವಕಾಶ ನೀಡಬೇಡಿ, ಇದು ಎಲ್ಲರ ಬದುಕು ಅಂದಗೊಳಿಸಲು ಕಾರ್ಯನಿರ್ವಹಿಸುತ್ತಿದೆ. ಸಮಸ್ಯೆಗಳಿದ್ದರೂ ಅವುಗಳ ನಡುವೆ ಕಾರ್ಯ ನಿರ್ವಹಿಸಿ ಕೈಗಾರಿಕೆ- ವಾಣಿಜ್ಯ ಚಟುವಟಿಕೆ ಬೆಳೆಯಲು ನೆರವಾಗಿದೆ. ಸಂಸ್ಥೆಯ ಚಟುವಟಿಕೆಯಿಂದ ಅವಳಿ ನಗರವನ್ನು ಇನ್ನಷ್ಟು ಮೇಲ್ಪಂಕ್ತಿಗೆ ಕೊಂಡೊಯ್ಯಬಹುದು ಎಂದರು.

    ಪ್ರತಿಯೊಬ್ಬರಿಗೂ ಸೂರು ಒದಗಿಸಬೇಕೆಂಬುದು ಪ್ರಧಾನಿ ಮೋದಿಯವರ ಆಶಯ. ಅದಕ್ಕಾಗಿ ರಾಜ್ಯಾದ್ಯಂತ 3500 ಎಕರೆ ಜಮೀನು ಗುರುತಿಸಲಾಗಿದೆ. ಅಲ್ಲದೆ, ಕೇಂದ್ರ ಸರ್ಕಾರ ಪ್ರತಿ ಪಂಚಾಯಿತಿಗೆ ಕೋಟಿ ರೂ. ಅನುದಾನ ನೀಡಲಿದ್ದು, ಸರಿಯಾಗಿ ವಿನಿಯೋಗವಾದರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳು ಅಭಿವೃದ್ಧಿಯಾಗಲಿವೆ. ಹಳ್ಳಿಗಳ ಜನರ ಜೀವನ ಮಟ್ಟ ಸುಧಾರಿಸಲಿದೆ. ಸರ್ಕಾರ ನಿರ್ವಿುಸಿ ಕೊಡುವ ಮನೆಗಳ ಗುಣಮಟ್ಟದ ಬಗ್ಗೆ ಸಂಶಯ ಇದ್ದರೆ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಪಾವತಿಸಲು ಸರ್ಕಾರ ಸಿದ್ಧವಿದೆ. ಅವರು ತಮಗೆ ಬೇಕಾದಂತೆ ಕಟ್ಟಿಸಿಕೊಳ್ಳಬಹುದು ಎಂದರು.

    ಬ್ರಿಟಿಷರ ಕಾಲದ ಎಪಿಎಂಸಿ ಕಾಯ್ದೆಗೆ ಈಗ ತಿದ್ದುಪಡಿ ತರಲಾಗಿದೆ. ಅದರಿಂದ ರೈತರಿಗೆ ಅನುಕೂಲವಾಗಲಿದೆ ಎಂದ ಸೋಮಣ್ಣ, ಮೇಕ್ ಇನ್ ಇಂಡಿಯಾ ಕೈಗಾರಿಕೋದ್ಯಮಿಗಳಿಂದಲೇ ಕಾರ್ಯರೂಪಕ್ಕೆ ಬರಬೇಕು ಎಂದು ಪ್ರತಿಪಾದಿಸಿದರು.

    ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲದ್ದಡ, ಮಾಜಿ ಅಧ್ಯಕ್ಷರಾದ ಶಂಕರಣ್ಣ ಮುನವಳ್ಳಿ, ರಮೇಶ ಪಾಟೀಲ, ಉಪಾಧ್ಯಕ್ಷ ವಿನಯ ಜವಳಿ, ಗೌರವ ಕಾರ್ಯದರ್ಶಿ ಅಶೋಕ ಗಡಾದ, ಬಾಳು ಮಗಜಿಕೊಂಡಿ, ಚನ್ನಬಸಪ್ಪ ಧಾರವಾಡಶೆಟ್ರ, ಇತರರು ಇದ್ದರು.

    ಕೆಸಿಸಿಐನಿಂದ ಮನವಿ

    ಹೂಡಿಕೆದಾರರು ಕೆಐಎಡಿಬಿಯಿಂದ ನಿವೇಶನ ಪಡೆದು ಉದ್ದಿಮೆ ಸ್ಥಾಪಿಸಿ ಉತ್ಪಾದನೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದ್ದಾರೆ. ಸಣ್ಣ ಹಾಗೂ ಸೂಕ್ಷ ್ಮ ಉದ್ದಿಮೆದಾರರಿಗೆ ಕೂಡ ರಿಯಾಯಿತಿ ದರದಲ್ಲಿ ವಸತಿ ನಿವೇಶನ ಕಲ್ಪಿಸುವ ಯೋಜನೆ ಜಾರಿ ಮಾಡಬೇಕು. ಈ ಮಹತ್ವಾಕಾಂಕ್ಷಿ ಯೋಜನೆಗೆ ಬಜೆಟ್​ನಲ್ಲಿ ಹಣಕಾಸು ಒದಗಿಸಬೇಕು ಎಂದು ಕೆಸಿಸಿಐ ವತಿಯಿಂದ ವಿನಂತಿಸಲಾಯಿತು.

    ಕೈಗಾರಿಕಾ ವಸಹಾತುಗಳಲ್ಲಿ ಉದ್ಯೋಗದಾತರಿಗೆ ಒಂದಿಷ್ಟು ನಿವೇಶನ ಮೀಸಲಿಡುವ ವ್ಯವಸ್ಥೆಯಾಗಬೇಕು. ಮೀಸಲಿಟ್ಟ ನಿವೇಶನಗಳನ್ನು ಕರ್ನಾಟಕ ಗೃಹ ಮಂಡಳಿಗೆ ಹಸ್ತಾಂತರಿಸಿ ಅವುಗಳನ್ನು ಅಭಿವೃದ್ಧಿಪಡಿಸಿ ಹಂಚಿಕೆ ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಮನವಿಯನ್ನು ಸಚಿವರಿಗೆ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts