ದೇವೇಗೌಡರ ಎದುರಿಗೆ ಅಭಿವೃದ್ಧಿ ಮಾಡಿ ತೋರಿಸ್ತಿನಿ, ಇವರು ಏನೂ ಮಾಡಬೇಕಿಲ್ಲ ಎಂದು ಹಾಸನ ಎಂಎಲ್‌ಎಗೆ ಟಾಂಗ್ ಕೊಟ್ರು ರೇವಣ್ಣ!

H.D. REVANNA-press meet
Published on

ಹಾಸನ: ಆಕಸ್ಮಿಕವಾಗಿ ಬಂದಿರುವ ಈ ಕೂಸನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ, ನಮ್ಮಿಂದ ಚಿನ್ನದ ಲೇಪನ ಮಾಡಲು ಆಗಲಿಲ್ಲ ಹೇಗೂ ಅಧಿಕಾರ ಇದೆಯಲ್ಲವೇ ಮಾಡಲಿ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಶಾಸಕ ಪ್ರೀತಂ ಜೆ. ಗೌಡ ಅವರಿಗೆ ತಿರುಗೇಟು ನೀಡಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು 1962 ರಿಂದ ರಾಜಕಾರಣದಲ್ಲಿದ್ದಾರೆ. ಜಿಲ್ಲೆಯ ಜನರ ಋಣ ನಮ್ಮ ಮೇಲಿದ್ದು ಅದನ್ನು ತೀರಿಸುತ್ತೇವೆ. ಇವರ ಬಗ್ಗೆ ಹೇಳಲು ಹೋದರೆ ನಾನು ಪೊಳ್ಳೆದ್ದು ಹೋಗುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಟಾಂಗ್ ನೀಡಿದರು.

ಸಮ್ಮಿಶ್ರ ಸರ್ಕಾರದ ಆಯವ್ಯಯವನ್ನು ಹಾಸನ - ಮಂಡ್ಯ ಬಜೆಟ್ ಎಂದು ಜರಿದರು. ಅಧಿಕಾರ ವಹಿಸಿಕೊಂಡ ದಿನವೇ ಸಿಎಂ ಯಡಿಯೂರಪ್ಪ ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದಿದ್ದರು. ಆದರೆ ನಮ್ಮ ಸರ್ಕಾರದಲ್ಲಿ ಮಂಜೂರಾಗಿದ್ದ ಎಲ್ಲ ಕಾಮಗಾರಿಗೆ ತಡೆ ನೀಡಿದರು. ಸಚಿವ ಸಂಪುಟ ಒಪ್ಪಿಗೆಯಾಗಿ ಹಣ ಬಿಡುಗಡೆಯಾದ ಬಳಿಕ ಕಾಮಗಾರಿಗೆ ತಡೆಯೊಡ್ಡಬಾರದು.

ಆದರೆ ಇವರು ಮೊದಲು ಮಾಡಿದ್ದೇ ಹಾಸನ ಜಿಲ್ಲೆಯ ಕಡೆಗಣನೆ. ಕಾಲ ಬಂದಾಗ ಎಲ್ಲದಕ್ಕೂ ಉತ್ತರ ಹೇಳುತ್ತೇನೆ. ಸದನದಲ್ಲಿ ಕುಳಿತು ಎಲ್ಲದಕ್ಕೂ ಚಪ್ಪಾಳೆ ಹೊಡೆಯುತ್ತಾರಲ್ಲ ಆ ಶಾಸಕರ ಗುಂಪಿಗೆ ಈ ವ್ಯಕ್ತಿ ಸೇರುತ್ತಾರೆ ಎಂದು ಪ್ರೀತಂ ವಿರುದ್ಧ ಹರಿಹಾಯ್ದರು.

ರಾಜಕೀಯದಲ್ಲಿ ಇನ್ನೂ ಬದುಕಿರುತ್ತೇನೆ. ಎಚ್.ಡಿ. ದೇವೇಗೌಡರ ಮುಂದೆಯೇ ಎಲ್ಲವನ್ನು ಮಾಡಿ ತೋರಿಸುತ್ತೇನೆ. ಬಿಜೆಪಿ ಸರ್ಕಾರ ಜಿಲ್ಲೆಗೆ ಹೊಸ ಕೊಡುಗೆ ನೀಡುವುದು ಬೇಕಿಲ್ಲ. ನಾನು ಕಟ್ಟಿಸಿರುವ ಕಟ್ಟಡಗಳಿಗೆ ಸುಣ್ಣ ಬಳಿದರೆ ಸಾಕು ಎಂದು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net