More

    ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ವಾಸ್ತವ್ಯ

    ದೇವದುರ್ಗ: ಗ್ರಾಮೀಣ ಜನರ ಸಮಸ್ಯೆ ಆಲಿಸಲು ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಜೆಡಿಎಸ್ ಪಕ್ಷದಿಂದ ನ.27ರಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ನಾಯಕಿ ಕರೆಮ್ಮ ಜಿ.ನಾಯಕ ತಿಳಿಸಿದರು.

    ಪ್ರತಿದಿನ ಒಂದು ಗ್ರಾಪಂ ವ್ಯಾಪ್ತಿಯ ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಹೂಡಲಾಗುವುದು. ರಾತ್ರಿಯಿಡಿ ಅಲ್ಲಿಯೇ ಇದ್ದು, ಜನರ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸಲು ಶ್ರಮಿಸಲಾಗುವುದು. ತಾಲೂಕಿನ ಪಶ್ಚಿಮದಿಂದ ಗ್ರಾಮ ವಾಸ್ತವ್ಯ ಆರಂಭಿಸಿ ಎಲ್ಲ 33ಗ್ರಾಪಂ ವ್ಯಾಪ್ತಿಯಲ್ಲಿ ಒಂದೂವರೆ ತಿಂಗಳವರೆಗೆ ಕಾರ್ಯಕ್ರಮ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

    ಜೆಡಿಎಸ್ ವರಿಷ್ಠರು ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಜನರ ಸಮಸ್ಯೆ ಆಲಿಸಲು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪಂಚರತ್ನ ಕಾರ್ಯಕ್ರಮ ಮೂಲಕ ರಾಜ್ಯಾದ್ಯಂತ ಸಂಚಾರ ಮಾಡುತ್ತಿದ್ದಾರೆ. ರೈತರು, ಕೂಲಿಕಾರರು, ಬಡವರು, ದಲಿತರು ಹೀಗೆ ಎಲ್ಲ ಸಮುದಾಯದವರ ಸಮಸ್ಯೆ ಆಲಿಸುತ್ತಿದ್ದು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆ ಅನುಷ್ಠಾನಗೊಳಿಸುವ ಭರವಸೆ ನೀಡಿದ್ದಾರೆ. ಅದರಂತೆ ನಾವೂ ತಾಲೂಕಿನಲ್ಲಿ ಗ್ರಾಪಂ ವಾಸ್ತವ್ಯ ಮಾಡಿ ಜನರ ಸಮಸ್ಯೆ ಆಲಿಸಿ ಅಧಿಕಾರಕ್ಕೆ ಬಂದರೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು. ತಿಂಥಣಿ ಬ್ರಿಡ್ಜ್‌ನಿಂದ ಆರಂಭಮಾಡಿ ಗೂಗಲ್‌ವರೆಗೆ ಗ್ರಾಮ ವಾಸ್ತವ್ಯ ನಡೆಸಲು ಯೋಜನೆ ಮಾಡಲಾಗಿದೆ. ಇದರಲ್ಲಿ ರೈತರ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

    ಜೆಡಿಎಸ್ ತಾಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ್ ಜಾಗಟಗಲ್ ಮಾತನಾಡಿ, ನಾರಾಯಣಪುರ ಬಲದಂಡೆ ನಾಲೆಗೆ 10ದಿನ ವಾರಬಂಧಿ ಪದ್ಧತಿ ಜಾರಿಗೊಳಿಸಿರುವುದು ಸರಿಯಲ್ಲ. ಬಹುತೇಕ ಬೆಳೆಗಳು ಅತಿವೃಷ್ಟಿಯಿಂದ ಹಾಳಾಗಿವೆ. ಭತ್ತ ಬೆಳೆದರೂ ಸೂಕ್ತ ಬೆಲೆಯಿಲ್ಲ. ಹತ್ತಿ ಹಾಗೂ ಮೆಣಸಿನಕಾಯಿಗೆ ಉತ್ತಮ ಬೆಲೆಯಿದೆ. ಈ ಹಂತದಲ್ಲಿ ವಾರಬಂಧಿ ಹಾಕಿ ರೈತರಿಗೆ ಅನ್ಯಾಯ ಮಾಡಲಾಗಿದೆ. ಕೂಡಲೇ ನೀರಾವರಿ ಇಲಾಖೆ ಅಧಿಕಾರಿಗಳು ತಮ್ಮ ನಿರ್ಧಾರ ಕೈಬಿಡಬೇಕು ಎಂದು ಒತ್ತಾಯಿಸಿದರು.

    ಮುಖಂಡರಾದ ಅಮರೇಶ ಪಾಟೀಲ್, ಮುದಕಪ್ಪ ಮಾಸ್ತರ್ ಅರಕೇರಾ, ತಬಸುಮ್ ಉದ್ದಾರ್, ಮುನ್ನಾಬಾಯಿ, ಹನುಮಂತ್ರಾಯ ವಕೀಲ ಚಿಂತಲಕುಂಟಿ ಇತರರಿದ್ದರು.

    ನಾರಾಯಣಪುರ ಬಲದಂಡೆ ನಾಲೆಗೆ ವಾರಬಂಧಿ ಪದ್ಧತಿ ಹಾಕಿರುವುದು ಸರಿಯಲ್ಲ. ಜಲಾಶಯದಲ್ಲಿ ಸಾಕಷ್ಟು ನೀರಿದ್ದು, ನಿರಂತರವಾಗಿ ಹರಿಸಬೇಕು. ನ.23ರಿಂದ ಡಿ.12ರವರೆಗೆ ನೀರು ಬಂದ್ ಮಾಡಿದರೆ 19ದಿನ ಕಡಿತವಾಗಲಿವೆ. ಕೊನೇಭಾಗಕ್ಕೆ ನೀರು ತಲುಪಲು 22ಕ್ಕೂ ಹೆಚ್ಚುದಿನಬೇಕು. ಇದರಿಂದ ಮೆಣಸಿನಕಾಯಿ, ಹತ್ತಿ, ತೊಗರಿ ಬೆಳೆ ಸಂಪೂರ್ಣ ಹಾಳಾಗಲಿವೆ.
    | ಕರೆಮ್ಮ ಜಿ.ನಾಯಕ, ಜೆಡಿಎಸ್ ನಾಯಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts