More

    ಅನುದಾನವಿದ್ದರೂ ರಸ್ತೆ ಅಭಿವೃದ್ಧಿ ಇಲ್ಲ

    ದೇವದುರ್ಗ: ಗಬ್ಬೂರಿನಿಂದ ಹೊನ್ನಟಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಿಪರೀತ ಧೂಳಿನಿಂದಾಗಿ ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಈ ರಸ್ತೆ ಗಬ್ಬೂರಿನಿಂದ ಗೂಗಲ್ ಮಾರ್ಗವಾಗಿ ಯಾದಗಿರಿಗೆ ಸಂಪರ್ಕ ಹೊಂದಿದ್ದು, ಹತ್ತಾರು ಹಳ್ಳಿಗಳ ಜನರಿಗೆ ಅನುಕೂಲವಾಗಿದೆ. ಗಬ್ಬೂರಿನಿಂದ ಖಾನಾಪುರ ಕ್ರಾಸ್‌ವರೆಗೆ 1 ಕಿಮೀ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಖಾನಾಪುರ ಕ್ರಾಸ್‌ನಿಂದ ಹೊನ್ನಟಗಿವರೆಗೆ 3 ಕಿಮೀ ರಸ್ತೆ ಡಾಂಬರೀಕರಣಕ್ಕೆ 4.95ಕೋಟಿ ರೂ. ಬಂದಿದೆ.

    ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ಮೂರ‌್ನಾಲ್ಕು ತಿಂಗಳಿನಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ. ಈ ಹಿಂದೆ ಇದ್ದ ಡಾಂಬರ್ ಕಿತ್ತು ಹಾಕಿ ಅಲ್ಲಲ್ಲಿ ಮರಂ ಹಾಕಲಾಗಿದೆ. ಕಂಕರ್ ಹಾಕಿ ಡಾಂಬರ್ ರಸ್ತೆ ಮಾಡಬೇಕಿದೆ. ಕಿರಿಯ ಇಂಜಿನಿಯರ್ ವರ್ಗಾವಣೆಯಾದ ನಂತರ ರಸ್ತೆಯನ್ನು ಕೇಳುವವರೇ ಇಲ್ಲದಂತಾಗಿದೆ.

    ಈ ರಸ್ತೆ ಮೂಲಕ ಬೊಮ್ಮನಾಳ, ಮದರಕಲ್, ರಾಯಕುಂಪಿ, ಗೂಗಲ್, ಬಸವಂತಪುರ, ಅಂಪ್ರಾಳ, ಯಾದಗಿರಿಗೆ ಸಂಪರ್ಕವಿದೆ. ರಸ್ತೆ ಕಾಮಗಾರಿ ಅರೆಬರೆಯಿಂದಾಗಿ ಧೂಳು ಏಳುತ್ತಿದ್ದು, ಹಗಲಿನಲ್ಲಿ ವಾಹನಗಳ ಲೈಟ್‌ಹಾಕಿ ಓಡಾಡುವ ಸ್ಥಿತಿಯಿದೆ. ಮೂಗು ಮುಚ್ಚಿಕೊಂಡು ಸಂಚರಿಸುವ ಸ್ಥಿತಿಯಿದ್ದು, ಧೂಳಿನಿಂದಾಗಿ ಅಪಘಾತಗಳು ಕೂಡ ಸಂಭವಿಸಿವೆ.

    ರಸ್ತೆಯಲ್ಲಿ ಕಂಕರ್ ತೆಲಿದ್ದು, ಎಲ್ಲೆಂದರಲ್ಲಿ ತಗ್ಗು ಬಿದ್ದಿವೆ. ವಿಪರೀತ ಧೂಳಿನಿಂದ ಬೆಳೆಗಳು ಹಾನಿ ಆಗುತ್ತಿದ್ದು, ಹತ್ತಿ ಬೆಳೆಯ ತೊಳೆ ಬಿಡಿಸಿಕೊಳ್ಳಲಾಗದಷ್ಟು ಧೂಳು ಆವರಿಸಿದೆ. ಗ್ರಾಮಸ್ಥರು ಅಧಿಕಾರಿಗಳಿಗೆ ಹಲವು ಸಲ ಮನವಿ ಮಾಡಿದರೂ ಸ್ಪಂದನೆ ಇಲ್ಲದಂತಾಗಿದೆ.

    ಅವಘಡಗಳಿಗೆ ಹೊಣೆ ಯಾರು ?: ಮೂರು ಕಿಮೀ ರಸ್ತೆ ಡಾಂಬರೀಕರಣಕ್ಕೆ 4.95 ಕೋಟಿ ರೂ. ಬಂದಿದ್ದರೂ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ. 15 ಕ್ಕೂ ಹೆಚ್ಚು ಹಳ್ಳಿಗಳ ಜನರು ಈ ರಸ್ತೆ ಅವಲಂಬಿಸಿದ್ದಾರೆ. ಫೆಬ್ರುವರಿ ಮೊದಲ ವಾರದಲ್ಲಿ ಗಬ್ಬೂರಿನ ಬೂದಿಬಸವೇಶ್ವರ ಜಾತ್ರೆಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಇದೆ. ಜಾತ್ರೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಬರುತ್ತಾರೆ. ಅಷ್ಟರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಈ ಮೂಲಕ ಅವಘಡಗಳು ನಡೆಯದಂತೆ ನೋಡಿಕೊಳ್ಳಬೇಕಿದೆ. ಶುಭ ಸಂದರ್ಭದಲ್ಲಿ ಅವಘಡಗಳು ನಡೆದರೆ ಹೊಣೆ ಯಾರು ಎಂಬ ಪ್ರಶ್ನೆ ಎದುರಾಗಿದೆ.

    ಹೊನ್ನಟಗಿಯಿಂದ ಗಬ್ಬೂರುವರೆಗೆ ಕೇವಲ 3 ಕಿಮೀ ರಸ್ತೆ ನಿರ್ಮಾಣ ಆರು ತಿಂಗಳಾದರೂ ಮುಗಿದಿಲ್ಲ. ಈ ರಸ್ತೆಯಲ್ಲಿ ಧೂಳಿನಿಂದಾಗಿ ವಾಹನಗಳೇ ಕಾಣುವುದಿಲ್ಲ. ನಾನಾರೋಗಗಳು ಬರುವಂತಾಗಿದೆ.
    > ಶಾಂತಕುಮಾರ
    ಗ್ರಾಮಸ್ಥ, ಹೊನ್ನಟಗಿ

    ಗಬ್ಬೂರು-ಹೊನ್ನಟಗಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ತಾಂತ್ರಿಕ ಕಾರಣದಿಂದ ವಿಳಂಬವಾಗಿದ್ದು, ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರಗೆ ಸೂಚಿಸುವೆ.
    > ನುಸ್ರತ್‌ಅಲಿ
    ಪಿಡಬ್ಲ್ಯುಡಿ ಎಇಇ, ದೇವದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts