More

    ಗಬ್ಬೂರಿನಲ್ಲಿ ಬಿಜೆಪಿಯ ‘ಅಮಿತೋತ್ಸಹ’

    ದೇವದುರ್ಗ: ಕೇಂದ್ರ ಗೃಹಸಚಿವರೊಬ್ಬರು ತಾಲೂಕಿಗೆ ಮೊದಲ ಸಲ ಆಗಮಿಸುತ್ತಿದ್ದು, ಈ ಕುರಿತ ಕಾರ್ಯಕ್ರಮವನ್ನು ಐತಿಹಾಸಿಕವಾಗಿಸಲು ಬಿಜೆಪಿ ನಾಯಕರು ಭರ್ಜರಿ ಸಿದ್ಧತೆ ಕೈಗೊಂಡಿದ್ದಾರೆ. ಅಮಿತ್ ಷಾ ಮಧ್ಯಾಹ್ನ 1.30ಕ್ಕೆ ಗಬ್ಬೂರಿಗೆ ಆಗಮಿಸುವ ನಿರೀಕ್ಷೆ ಇದೆ.

    ಸುಮಾರು 6500 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಪೂರ್ಣಗೊಂಡ ಕಾಮಗಾರಿಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಉದ್ಘಾಟಿಸಲಿದ್ದಾರೆ. ಇದು ಸರ್ಕಾರಿ ಕಾರ್ಯಕ್ರಮವಾದರೂ ಬಿಜೆಪಿ ಸಮಾವೇಶ ಎಂದೇ ಬಿಂಬಿತವಾಗುತ್ತಿದೆ. ಇದಕ್ಕಾಗಿ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ.

    ಕಲ್ಯಾಣ ಕರ್ನಾಟಕ ಭಾಗದಿಂದ ಸುಮಾರು 2 ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ. ಈ ಮೂಲಕ ಚುನಾವಣೆ ದಿನಾಂಕ ಪ್ರಕಟವಾಗುವ ಮುನ್ನ ದೊಡ್ಡ ಮಟ್ಟದ ಸಮಾವೇಶ ಆಯೋಜಿಸಲಾಗಿದೆ. ಗಬ್ಬೂರು ಗ್ರಾಮ ಕೇಸರಿಮಯವಾಗಿದ್ದು, ಸುಮಾರು ಒಂದೂವರೆ ಕಿಮೀವರೆಗೆ ಬಿಜೆಪಿ ಧ್ವಜಗಳು, ಬ್ಯಾನರ್‌ಗಳು, ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.

    ಬೃಹತ್ ಸ್ವಾಗತ ಕಮಾನುಗಳನ್ನು ಹಾಕಲಾಗಿದ್ದು, 20 ಎಕರೆ ಪ್ರದೇಶದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. 20 ಎಕರೆ ಪ್ರದೇಶದಲ್ಲಿ ಊಟದ ವ್ಯವಸ್ಥೆ, 10 ಎಕರೆಯಲ್ಲಿ ಪಾರ್ಕಿಂಗ್, 20 ಎಕರೆ ಜಾಗದಲ್ಲಿ 4 ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಗೃಹಸಚಿವ ಅಮಿತ್ ಷಾ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಯಡಿಯೂರಪ್ಪ ಆಗಮನ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ.

    ದೇವದುರ್ಗ, ರಾಯಚೂರು ನಗರ, ರಾಯಚೂರು ಗ್ರಾಮೀಣ, ಮಾನ್ವಿ ವಿಧಾನಸಭಾ ಕ್ಷೇತ್ರ ಗುರಿಯಾಗಿಸಿಕೊಂಡು ಸಮಾವೇಶ ಏರ್ಪಡಿಸಿದ್ದರೂ ಜಿಲ್ಲೆಯ ಎಲ್ಲ 7 ವಿಧಾನಸಭಾ ಕ್ಷೇತ್ರ ಹಾಗೂ ನೆರೆಯ ಕೊಪ್ಪಳ ಮತ್ತು ಯಾದಗಿರಿಯಿಂದಲೂ ಜನರನ್ನು ಕರೆಯಿಸಲಾಗುತ್ತಿದೆ.

    ಊಟಕ್ಕಾಗಿ ನಾಲ್ಕು ಕೌಂಟರ್: ಸಮಾವೇಶ ಆಗಮಿಸುವ ಜನರಿಗೆ ಊಟ ಬಡಿಸಲು ನಾಲ್ಕು ಕೌಂಟರ್ ತೆರೆಯಲಾಗಿದೆ. ಎರಡು ಲಕ್ಷ ಲಡ್ಡು ತಯಾರಿಸಲಾಗಿದೆ. 100 ಕ್ವಿಂಟಾಲ್ ಅಕ್ಕಿಯ ಅನ್ನ, ಸಾಂಬರ್, ಬದನೆಕಾಯಿ ಪಲ್ಯ ಸೇರಿ ಇತರ ಖಾದ್ಯ ತಯಾರಿಸಲಾಗುತ್ತಿದೆ. 1200 ಬಾಣಸಿಗರು, ಸಹಾಯಕರು, 2 ಸಾವಿರ ಸ್ವಯಂ ಸೇವಕರು ಕೆಲಸ ಮಾಡುತ್ತಿದ್ದಾರೆ. ಬಲದಂಡೆ ನಾಲೆ ಸಮೀಪ ಊಟದ ವ್ಯವಸ್ಥೆ ಮಾಡಲಾಗಿದೆ. ದೇವದುರ್ಗ ಹಾಗೂ ಕಲ್ಮಲಾ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

    ಹೆದ್ದಾರಿ ಬಂದ್, ಪರ್ಯಾಯ ವ್ಯವಸ್ಥೆ: ಅಮಿತ್ ಷಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕಲ್ಮಲಾ-ದೇವದುರ್ಗ ರಾಜ್ಯ ಹೆದ್ದಾರಿಯಲ್ಲಿ ಮಾ.26ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ವಾಹನಗಳ ಸಂಚಾರ ರದ್ದುಗೊಳಿಸಲಾಗಿದೆ. ರಾಯಚೂರಿನಿಂದ ಕಲಬುರಗಿಗೆ ಕಲ್ಮಲಾ, ಸಿರವಾರ, ಅರಕೇರಾ, ದೇವದುರ್ಗ ಮಾರ್ಗದಲ್ಲಿ ಹೋಗಿ ಬರಬೇಕಿದೆ.

    ಹೆಚ್ಚಿನ ಪೊಲೀಸ್ ಭದ್ರತೆ: ಭದ್ರತೆಗಾಗಿ ರಾಯಚೂರು ಎಸ್ಸಿ ಬಿ.ನಿಖಿಲ್, ಬಳ್ಳಾರಿ ಎಸ್ಪಿ ರಂಜಿತ್ ಕುಮಾರ ಬಂಡಾರು ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಇಬ್ಬರು ಎಎಸ್ಪಿ, 8 ಜನ ಡಿವೈಎಸ್ಪಿ, 36 ಸಿಪಿಐ, 72 ಪಿಎಸ್‌ಐ, 148 ಎಎಸ್‌ಐ, 921 ಪೇದೆಗಳು, 136 ಮಹಿಳಾ ಪೇದೆಗಳು ಹಾಗೂ 8 ಕೆಎಸ್‌ಆರ್‌ಪಿ ತುಕಡಿ, 5 ಜಿಲ್ಲಾ ಸಶಸ್ತ್ರ ಮೀಸಲು ತುಕಡಿ, 4 ಎಎಸ್‌ಸಿ ತಂಡಗಳನ್ನು ನಿಯೋಜನೆ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts