More

    ರೈತರು ಹೋರಾಟ ಮನೋಭಾವ ಬೆಳೆಸಿಕೊಳ್ಳಲು ಸಲಹೆ

    ದೇವದುರ್ಗ: ಕೃಷಿ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುವ ಮನೋಭಾವವನ್ನು ರೈತರು ಬೆಳೆಸಿಕೊಳ್ಳಬೇಕು. ಹೋರಾಟದಿಂದ ಮಾತ್ರ ಪರಿಹಾರ ಹಾಗೂ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯ ಎಂದು ರೈತ ಕೃಷಿ ಕಾರ್ಮಿಕರ (ಆರ್‌ಕೆಎಸ್) ಸಂಘಟನೆ ರಾಜ್ಯ ಸಮಿತಿ ಸದಸ್ಯ ಗೋವಿಂದ ಹೇಳಿದರು.

    ತಾಲೂಕಿನ ಅಡಕಲಗುಡ್ಡದಲ್ಲಿ ರೈತ ಕೃಷಿ ಕಾರ್ಮಿಕ ಸಂಘಟನೆಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಥಮ ರೈತ ಸಮ್ಮೇಳನದಲ್ಲಿ ಶುಕ್ರವಾರ ಮಾತನಾಡಿದರು. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಸಂಘಟಿಸಿದ ಹೋರಾಟ ಕೃಷಿಕರಿಗೆ ಮಾದರಿಯಾಗಿದೆ. ನಮ್ಮ ಭಾಗದ ರೈತರು ಕೂಡ ತಮ್ಮ ಸಮಸ್ಯೆಗಳ ವಿರುದ್ಧ ಅಂಥ ಹೋರಾಟ ಮಾಡಬೇಕಿದೆ ಎಂದರು.

    ಹೆಸರು, ಕಡಲೆ, ತೊಗರಿ, ಹತ್ತಿ, ಜೋಳ, ಶೇಂಗಾ, ಮೆಣಸಿನಕಾಯಿ, ಭತ್ತ ಇತ್ಯಾದಿ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು. ಸಮಯಕ್ಕೆ ಸರಿಯಾಗಿ ಖರೀದಿ ಕೇಂದ್ರವನ್ನು ತೆಗೆದು ಹೋಬಳಿ ಮಟ್ಟದವರೆಗೂ ವಿಸ್ತರಿಸಬೇಕು. ನರೇಗಾ ಯೋಜನೆಯಡಿ ನಿತ್ಯ 600 ರೂ. ಕೂಲಿ ನೀಡುವುದರ ಜತೆಗೆ ವರ್ಷಕ್ಕೆ 200 ದಿನ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.

    ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯ ಮಹೇಶ ಚೀಕಲಪರ್ವಿ ಮಾತನಾಡಿ, ಜೆಜೆಎಂ ಯೋಜನೆ ಕೈಬಿಡಬೇಕು. ಶುದ್ಧ ಕುಡಿವ ನೀರನ್ನು ಉಚಿತವಾಗಿ ಎಲ್ಲ ಗ್ರಾಮಗಳಿಗೆ ಒದಗಿಸಬೇಕು. ಏತ ನೀರಾವರಿ ಯೋಜನೆ ಮೂಲಕ ಅಡಕಲಗುಡ್ಡ, ಭೂಮನಗುಂಡ, ಮಲ್ಲಾಪುರ ಸೇರಿದಂತೆ ವಿವಿಧ ಗ್ರಾಮಗಳಿಗೆ ನೀರಾವರಿ ಸೌಕರ್ಯ ಕಲ್ಪಿಸಬೇಕು. ತಾಲೂಕಿನ ಎಲ್ಲ ಗ್ರಾಮಗಳಿಗೆ ಸಾರ್ವಜನಿಕ ಆರೋಗ್ಯ ಸೌಲಭ್ಯಗಳು ಒದಗಿಸಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts